ಮುಂಬಯಿ, ಜೂ. 15: ಕಳೆದ ಮೂರು ತಿಂಗಳಿನಿಂದ ಕೋವಿಡ್ ಸೋಂಕು ತಡೆಗಟ್ಟಲು ಮುಂಬಯಿ ಮಹಾನಗರ ಪಾಲಿಕೆಯು ಸುಮಾರು 480 ಕೋ. ರೂ. ಗಳನ್ನು ವ್ಯಯಿಸಿದೆ ಎಂದು ಮೂಲಗಳು ತಿಳಿಸಿವೆ.
ಮಾರ್ಚ್ 11ರಿಂದ ಜೂನ್ 1ರ ವರೆಗೆ ನಗರದಲ್ಲಿ ಮೊದಲ ಪ್ರಕರಣ ವರದಿಯಾದ ದಿನದಿಂದ ಮುಂಬಯಿ ಮಹಾನಗರ ಪಾಲಿಕೆಯು ವೈದ್ಯಕೀಯ ಉಪಕರಣಗಳನ್ನು ಸಂಗ್ರಹಿಸುವುದು, ಆರೋಗ್ಯ ಮತ್ತು ಆಹಾರ ವಿತರಣೆ, ಕೊರೊನಾ ಕಿಟ್‌ಗಳ ಖರೀದಿ ಇನ್ನಿತರ ಮೂಲ ಸೌಕರ್ಯಗಳಿಗೆ 480 ಕೋ. ರೂ. ಗಳನ್ನು ಖರ್ಚು ಮಾಡಿದೆ ಎಂದು ಹೆಚ್ಚುವರಿ ಪುರಸಭೆ ಆಯುಕ್ತ ಪಿ. ವೆಲ್ರಾಸು ತಿಳಿಸಿದ್ದಾರೆ.
ನಾವು ಈಗಾಗಲೇ ಸುಮಾರು 480 ಕೋ. ರೂ. ಗಳನ್ನು ಖರ್ಚು ಮಾಡಿದ್ದೇವೆ. ಕಳೆದ ಕೆಲವು ದಿನಗಳಲ್ಲಿ, ಎಚ್ಚರಿಕೆಯಿಂದ ಕಾರ್ಯನಿರ್ವಹಿಸಲಾಗುತ್ತಿದೆ. ಈ ಸಂದರ್ಭದಲ್ಲಿ ವೈದ್ಯಕೀಯ ಉಪಕರಣಗಳನ್ನು ಸಂಗ್ರಹಿಸುವುದು ಮತ್ತು ಆರೋಗ್ಯ ಮೂಲಸೌಕರ್ಯಗಳನ್ನು ನವೀಕರಿಸುವುದು ನಿರ್ಣಾಯಕವಾಗಿದೆ ಎಂದು ತಿಳಿಸಿದ್ದಾರೆ.
ವೈದ್ಯಕೀಯ ಸಲಕರಣೆಗಳ ವಿಷಯದಲ್ಲಿ, ವೈಯಕ್ತಿಕ ರಕ್ಷಣಾ ಸಾಧನಗಳು (ಪಿಪಿಇ) ಕಿಟ್ ಗಳು, ಎನ್ -95 ಮುಖಗವಸುಗಳು, ಮೂರು ಪ್ಲೈ ಮುಖಗವಸುಗಳು, ಕೈಗವಸುಗಳು, ಹೈಡ್ರಾಕ್ಸಿಕ್ಲೋರೋಕ್ವಿನ್ ಇತ್ಯಾದಿ ಪ್ರಮುಖ ವೈದ್ಯಕೀಯ ಸೌಲಭ್ಯಗಳಿಗಾಗಿ ಪ್ರಮುಖ ಆಧ್ಯತೆಯನ್ನು ನೀಡಲಾಗುತ್ತಿದೆ. ಕಳೆದ ಒಂದು ತಿಂಗಳಲ್ಲಿ, ಜಂಬೋ ಬೆಡ್ ಸೌಲಭ್ಯಗಳ ರೂಪದಲ್ಲಿ ಆರೋಗ್ಯ ರಕ್ಷಣೆಯನ್ನು ಹೆಚ್ಚಿಸುವುದು, ಹೊಸ ಕೋವಿಡ್-19 ಆರೈಕೆ ಕೇಂದ್ರಗಳನ್ನು ಸ್ಥಾಪಿಸುವುದು, ಮುಂಚೂಣಿ ಸಿಬಂದಿಯ ವಸತಿಗಾಗಿ ಹೊಟೇಲ್ ಬಿಲ್, ಹೊಸ ಸಿಬಂದಿಗಳ ನೇಮಕಾತಿಯೊಂದಿಗೆ ಬಿಎಂಸಿ ವಿವಿಧ ಉಪಕ್ರಮಗಳಿಗಾಗಿ ಕೋಟ್ಯಾಂತರ ರೂ. ಗಳನ್ನು ಖರ್ಚು ಮಾಡಿದೆ ಎಂದು ಅವರು ತಿಳಿಸಿದ್ದಾರೆ.
ಬಜೆಟ್ ಮರುನಿರ್ಮಾಣದ ಅಗತ್ಯವಿದೆ : ಬಿಎಂಸಿ ತನ್ನ ಆಕಸ್ಮಿಕ ನಿಧಿಯಿಂದ ಹಣವನ್ನು ಬಳಸಿಕೊಳ್ಳುತ್ತಿದೆ. 2020-21ರ ಬಜೆಟ್‌ನಲ್ಲಿ, ಬಿಎಂಸಿ ತನ್ನ ಆಕಸ್ಮಿಕ ನಿಧಿಗೆ 850 ಕೋ. ರೂ. ಗಳನ್ನು ನಿಗದಿಪಡಿಸಿತ್ತು. ಭವಿಷ್ಯದ ಅನಿರೀಕ್ಷಿತ ವೆಚ್ಚಗಳನ್ನು ಭರಿಸಲು ಮುಂದಿನ ದಿನಗಳಲ್ಲಿ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕಾಗಿದೆ. 2020-21ರ ಬಜೆಟ್ ಅನ್ನು ಮರುನಿರ್ಮಾಣ ಮಾಡುವ ಮೂಲಕ ಹಣಕಾಸು ನಿರ್ವಹಣೆಗೆ ಕೆಲಸ ಮಾಡಬೇಕಾಗುತ್ತದೆ ಎಂದು ಬಿಎಂಸಿ ಹೇಳಿಕೊಂಡಿದೆ.
ನಾವು ಪ್ರಸ್ತುತ ನಮ್ಮ ಆಕಸ್ಮಿಕ ನಿಧಿಯಿಂದ 850 ಕೋ. ರೂ. ಖರ್ಚು ಮಾಡುತ್ತಿದ್ದೇವೆ. ಕೋವಿಡ್ ವೈರಸ್‌ಗಾಗಿ ವಿಶೇಷ ನಿಬಂಧನೆ ಮಾಡಲು ಬಜೆಟ್ ಅನ್ನು ಮರುಸೃಷ್ಟಿಸಿಲ್ಲ. ಮುಂಬರುವ ಒಂದು ತಿಂಗಳಲ್ಲಿ, ನಾವು ಅದನ್ನು ಕಾರ್ಯಗತಗೊಳಿಸಬೇಕಾಗಬಹುದು ಎಂದು ಹೆಚ್ಚುವರಿ ಪುರಸಭೆ ಆಯುಕ್ತ ಪಿ. ವೆಲಾÅಸು ತಿಳಿಸಿದ್ದಾರೆ. ಭಾರತದ ಶ್ರೀಮಂತ ನಾಗರಿಕ ಸಂಸ್ಥೆಯಾದ ಬಿಎಂಸಿ 2020-21ರಲ್ಲಿ 33,441ಕೋಟಿ ಬಜೆಟ್ ಮಂಡಿಸಿತ್ತು. ನಾಗರಿಕ ಸಂಸ್ಥೆ, ಬಜೆಟ್ ನಲ್ಲಿ, ಕಸ್ತೂರ್ಬಾ ಆಸ್ಪತ್ರೆಯಲ್ಲಿ ವೈದ್ಯಕೀಯ ಸೌಲಭ್ಯಗಳನ್ನು ನವೀಕರಿಸಲು 2 ಕೋ. ರೂ. ಗಳ ವಿಶೇಷ ನಿಧಿಯನ್ನು ನಿಗದಿಪಡಿಸಿತ್ತು, ಇದು ಆಗ ಕೋವಿಡ್ -19 ರೋಗಿಗಳಿಗೆ ಚಿಕಿತ್ಸೆ ನೀಡುವ ಏಕೈಕ ಆಸ್ಪತ್ರೆಯಾಗಿದ.