ಉಡುಪಿ: ದೇಶವು ತುರ್ತು ಪರಿಸ್ಥಿತಿಯನ್ನು ಕಂಡು 48 ವರ್ಷವಾಗುತ್ತಿದ್ದು ಇದರಲ್ಲಿ ಹೋರಾಟ ಮಾಡಿದವರು ಪಿಂಚಣಿ ನಿರೀಕ್ಷೆಯಲ್ಲಿದ್ದು ಒಬ್ಬೊಬ್ಬರೇ ಇಹಲೋಕ ತ್ಯಜಿಸುತ್ತಿದ್ದಾರೆ.
1975ರ ಜೂನ್ 25ರಂದು ಆರಂಭಗೊಂಡ ತುರ್ತು ಪರಿಸ್ಥಿತಿ 1977ರ ಮಾರ್ಚ್ 21ರ ವರೆಗೆ ಜಾರಿ ಯಲ್ಲಿತ್ತು. ಇದರ ವಿರುದ್ಧ ಸಾವಿ ರಾರು ಮಂದಿ ಹೋರಾಟ ನಡೆಸಿ ಜೈಲುವಾಸ ಅನುಭವಿಸಿದ್ದರು. ಆಗ ಅವರಿಗೆ ಯವ್ವನದ ಹುರುಪಿದ್ದರೆ ಈಗ ಬಹುತೇಕರು ಇಹಲೋಕ ತ್ಯಜಿಸಿದ್ದು, ಕೆಲವರು ಮಾತ್ರ ಇಳಿವಯಸ್ಸಿನಲ್ಲಿದ್ದಾರೆ. ಬಹು ಮಂದಿ ಬಡತನದ ಬೇಗೆಯಲ್ಲಿ ಜೀವನ ನಿರ್ವಹಣೆ ಮಾಡುತ್ತಿದ್ದಾರೆ.
ಕೆಲವು ರಾಜ್ಯಗಳಲ್ಲಿ ತುರ್ತು ಪರಿಸ್ಥಿತಿ ಹೋರಾಟಗಾರರಿಗೆ ಪಿಂಚಣಿ ಯೋಜನೆ ಜಾರಿಗೊಂಡಿದ್ದು ಕರ್ನಾಟಕ ದಲ್ಲಿಯೂ ಈ ಪ್ರಸ್ತಾವ 2018ರಲ್ಲಿ ಚಾಲ್ತಿಗೆ ಬಂತು. 2 ವರ್ಷ ಗಳ ಹಿಂದೆ ಇದರ ಅಂದಾಜು ಪಟ್ಟಿಯೂ ಸಿದ್ಧಗೊಂಡಿತು. ರಾಜ್ಯದಲ್ಲಿ ಸುಮಾರು 4,500 ಮಂದಿ, ದಕ್ಷಿಣ ಕನ್ನಡದಲ್ಲಿ 206 ಮಂದಿ ಮತ್ತು ಉಡುಪಿ ಯಲ್ಲಿ 28 ಮಂದಿಯ ಹೆಸರುಗಳು ಶಿಫಾರಸು ಆದವು. ಲೋಕತಂತ್ರ ಸೇನಾನಿ ಸಂಘದವರು ಮಾಹಿತಿ ಕಲೆ ಹಾಕಿ ಜಿಲ್ಲಾಧಿಕಾರಿ ಕಚೇರಿಗೆ ನೀಡಿ ಜಿಲ್ಲಾಧಿಕಾರಿಯವರು ಅಧೀನ ಅಧಿಕಾರಿಗಳಿಂದ ಪರಿಶೀಲನೆ ನಡೆಸಿದ್ದರು. ಆದರೆ ಕಾಲ ಉರುಳಿತು, ಆಸೆ ತೋರಿಸಿದ್ದ ಬಿಜೆಪಿ ಸರಕಾರವೂ ಉರುಳಿ ಈಗ ಕಾಂಗ್ರೆಸ್ ಸರಕಾರ ಬಂದಿದೆ. ಈ ಪ್ರಸ್ತಾವವೂ ನನೆಗುದಿಗೆ ಬಿದ್ದಂತಾಗಿದೆ.
ವರ್ಷಕ್ಕೆ ಒಮ್ಮೆ ಅಥವಾ ಸಂದ ರ್ಭಾನುಸಾರ ತುರ್ತು ಪರಿಸ್ಥಿತಿ ಹೋರಾಟಗಾರರನ್ನು ವೇದಿಕೆಗೆ ಕರೆದು ಸಮ್ಮಾನ ಮಾಡುವಷ್ಟರ ಮಟ್ಟಿಗೆ ಈ ಸ್ಮರಣೆ ನಡೆಯುತ್ತಿದೆ. ಇನ್ನು ಕೆಲವು ವರ್ಷ ಉರುಳಿದರೆ ಈಗ ಸ್ವಾತಂತ್ರ್ಯ ಹೋರಾಟಗಾರರು ಹೇಗೆ ಸಿಗುವುದಿಲ್ಲವೋ ಹಾಗೆ ತುರ್ತು ಪರಿಸ್ಥಿತಿ ಹೋರಾಟಗಾರರೂ ಇಲ್ಲ ಎಂದಾಗುತ್ತದೆ. ಏತನ್ಮಧ್ಯೆ 2025ಕ್ಕೆ ತುರ್ತು ಪರಿಸ್ಥಿತಿಗೆ 50 ವರ್ಷ ತುಂಬುತ್ತದೆ.
ತುರ್ತು ಪರಿಸ್ಥಿತಿ ಹೋರಾಟ ಗಾರರು ಪಿಂಚಣಿಯನ್ನು ಕೇಳಲಿಲ್ಲ. ಬಿಜೆಪಿಯಿಂದಲೇ ಇದರ ಬಗ್ಗೆ ಪ್ರಸ್ತಾವ ಬಂದು ನಾವೆಲ್ಲರೂ ಹೋರಾಟ ಗಾರರ ಮಾಹಿತಿಗಳನ್ನು ಕಲೆ ಹಾಕಿ ದೆವು. ಅದಕ್ಕಾಗಿ ಸಾಕಷ್ಟು ಪರಿಶ್ರಮ ವನ್ನೂ ಪಟ್ಟೆವು. ಆದರೆ ಸಫಲವಾಗ ಲಿಲ್ಲ. ಆದರೂ ನಮ್ಮ ನಿರಂತರ ಪ್ರಯತ್ನ ಇದ್ದೇ ಇದೆ.
– ನಾರಾಯಣ ಗಟ್ಟಿ ಪಾಂಡೇಶ್ವರ, ಮಂಗಳೂರು, ರಾಜ್ಯ ಉಪಾಧ್ಯಕ್ಷರು, ದ.ಕ., ಉಡುಪಿ ಜಿಲ್ಲೆಯ ಪ್ರಭಾರಿ, ಲೋಕತಂತ್ರ ಸೇನಾನಿ ಸಂಘ