Advertisement

14 ವರ್ಷ ಚಿತ್ರೀಕರಣ…”ಪಕೀಜಾ”ತೆರೆಗೆ ಬರೋ ಮುನ್ನ ಅದೆಷ್ಟು ದುರಂತ ನಡೆದು ಹೋದವು!

09:57 AM Jan 26, 2020 | Nagendra Trasi |

ಮನುಷ್ಯನ ಸಾವು ಮತ್ತು ಬದುಕಿಗೆ ಅದೆಷ್ಟು ಅವಿನಾಭಾವ ಸಂಬಂಧ ಇದೆ ಎಂಬುದಕ್ಕೆ ಬಾಲಿವುಡ್ ನ ಪಕೀಜಾ ಸಿನಿಮಾ ಉತ್ತಮ ಉದಾಹರಣೆಯಾಗಬಲ್ಲದು. ಜೀವನ ಚಕ್ರದಲ್ಲಿ ಅದೆಷ್ಟು ಬದಲಾವಣೆ, ಅದೆಷ್ಟು ಏರಿಳಿತವಾಗುತ್ತಲೇ ಒಂದು ಹಂತದಲ್ಲಿ ಕಾಲಘಟ್ಟ ಮುಗಿದು ಹೋಗಿರುತ್ತದೆ! ಯಾಕೆಂದರೆ ಪಕೀಜಾ ಸಿನಿಮಾ ಕೂಡಾ ಹಾಗೆ ಅದು ಆರು ತಿಂಗಳು, ಒಂದು ವರ್ಷದಲ್ಲಿ ಚಿತ್ರೀಕರಣ ಪೂರ್ಣಗೊಂಡ ಸಿನಿಮಾವಲ್ಲ. ಪಕೀಜಾ ಸಿನಿಮಾ ಬಿಡುಗಡೆಗೆ ವನವಾಸ ಶಿಕ್ಷೆ ಅನುಭವಿಸಿದಂತೆ ವಿಳಂಬವಾಗಿತ್ತು..ಬರೋಬ್ಬರಿ ಹದಿನಾಲ್ಕು ವರ್ಷಗಳ ನಂತರ ಬಿಡುಗಡೆ ಭಾಗ್ಯ ದೊರಕಿದ್ದು ಪಕೀಜಾ ಸಿನಿಮಾಕ್ಕೆ!

Advertisement

ಬಾಲಿವುಡ್ ಬೆಳ್ಳಿ ಪರದೆಯ ದುರಂತ ನಾಯಕಿಯಾಗಿ ಬದುಕಿದ್ದ ಮೀನಾ ಕುಮಾರಿ ಈ ಸಿನಿಮಾದ ನಾಯಕಿ ನಟಿಯಾಗಿದ್ದರು. ಮೀನಾ ಕುಮಾರಿಯನ್ನು ಹೊರತುಪಡಿಸಿ ಪಕೀಜಾ ಸಿನಿಮಾ ಊಹಿಸಿಕೊಳ್ಳಲು ಸಾಧ್ಯವಿಲ್ಲ. ಸೌಂದರ್ಯ ದೇವತೆಯಂತಿದ್ದ ಮೀನಾ ಕುಮಾರಿ ತನ್ನ ಸಾವು-ಬದುಕಿನ ನಡುವೆಯೂ ಪಕೀಜಾ ಸಿನಿಮಾದಲ್ಲಿ ನಟಿಸಿದ್ದರು!

ಪಕೀಜಾ ಚಿತ್ರ ಮೀನಾ ಮತ್ತು ಅಮ್ರೋಹಿ ಕನಸಿನ ಕೂಸು:

ಸ್ಫುರದ್ರೂಪಿ ಮೀನಾ ಕುಮಾರಿಗೆ ಅದೊಂದು ದಿನ ಅಪಘಾತವಾಗಿತ್ತು. ಆಸ್ಪತ್ರೆಯ ಬೆಡ್ ಮೇಲೆ ಮಲಗಿದ್ದಾಕೆಗೆ ಸಮಾಧಾನ ಹೇಳಿ, ಪದೇ, ಪದೇ ಆರೋಗ್ಯ ವಿಚಾರಿಸುತ್ತಿದ್ದ ವ್ಯಕ್ತಿ ಖ್ಯಾತ ನಿರ್ದೇಶಕ ಕಮಲ್ ಅಮ್ರೋಹಿ! ಈ ಗೆಳೆತನ ಇಬ್ಬರನ್ನೂ ಮತ್ತಷ್ಟು ಬೆಸೆದು ಬಿಟ್ಟಿತ್ತು. ಆಸ್ಪತ್ರೆಯಿಂದ ಡಿಸ್ ಚಾರ್ಜ್ ಆದ ಮೇಲೂ ನಿರಂತರ ದೂರವಾಣಿ ಸಂಪರ್ಕದಲ್ಲಿರುತ್ತಿದ್ದರು. ಕೊನೆಗೆ ಇಬ್ಬರೂ ಗುಟ್ಟಾಗಿ ವಿವಾಹವಾಗಿಬಿಟ್ಟಿದ್ದರು. ಆಗ ಮೀನಾ ಕುಮಾರಿ ವಯಸ್ಸು 19, ಅಮ್ರೋಹಿಗೆ 34!

ಕಮಲ್ ಅಮ್ರೋಹಿಗೆ ಅದಾಗಲೇ ಮದುವೆಯಾಗಿ ಮೂವರ ಮಕ್ಕಳ ತಂದೆಯಾಗಿದ್ದ. 1952ರಲ್ಲಿ ಅಮ್ರೋಹಿ ಮೂರು ಷರತ್ತುಗಳನ್ನು ವಿಧಿಸಿ ಮೀನಾ ಕುಮಾರಿಯನ್ನು ವಿವಾಹವಾಗಿದ್ದರು. ಈಗ ಒಪ್ಪಿಕೊಂಡಿರುವ ಸಿನಿಮಾದ ಚಿತ್ರೀಕರಣದ ನಂತರ ಬೇರೆ ಯಾವುದೇ ಸಿನಿಮಾದಲ್ಲೂ ನಟಿಸಬಾರದು, 6 ಗಂಟೆ ನಂತರ ಕೆಲಸ(ಸಿನಿಮಾ ಶೂಟಿಂಗ್) ಮಾಡಬಾರದು, ಚೋಟಿ ಅಮ್ಮಿ(ಮೀನಾ)ಯ ಮೇಕ್ ಅಪ್ ಕೋಣೆಯೊಳಗೆ ಯಾರನ್ನೂ ಬಿಡಬಾರದು! ಷರತ್ತನ್ನು ಒಪ್ಪಿ ಮೀನಾ ಗುಟ್ಟಾಗಿ ವಿವಾಹವಾಗಿದ್ದರೂ ಕೆಲವು ತಿಂಗಳ ಬಳಿಕ ತಂದೆಗೆ ವಿಷಯ ತಲುಪಿಬಿಟ್ಟಿತ್ತು. ಅಮ್ರೋಹಿಗೆ ವಿಚ್ಚೇದನ ನೀಡುವಂತೆ ಒತ್ತಡ ಹೇರಿದ್ದರು. ಅದು ಸಾಧ್ಯವಿಲ್ಲ ಎಂದು ಹೇಳಿದ್ದ ಮೀನಾಗೆ ನನ್ನ ಮನೆ ಬಾಗಿಲು ನಿನಗೆ ಶಾಶ್ವತವಾಗಿ ಮುಚ್ಚಿ ಹೋಗಲಿದೆ ಎಂದು ತಂದೆ ಕಟು ನಿಲುವು ತಳೆದು ಬಿಟ್ಟಿದ್ದರು. ಆಗಿದ್ದು ಆಗಲಿ ಎಂದು ಮೀನಾ ಕುಮಾರಿ ತಂದೆ ಮಾತನ್ನು ಧಿಕ್ಕರಿಸಿ ಅಮ್ರೋಹಿ ಬಳಿ ಬಂದು ಬಿಟ್ಟಿದ್ದರು!

Advertisement

1954ರಲ್ಲಿ ದಕ್ಷಿಣ ಭಾರತದಲ್ಲಿ ಆಝಾದ್ ಸಿನಿಮಾ ಚಿತ್ರೀಕರಣ ನಡೆಯುತ್ತಿದ್ದ ವೇಳೆ ಮೀನಾ ಕುಮಾರಿ ಹಾಗೂ ಅಮ್ರೋಹಿ ತಮ್ಮ ಮುಂದಿನ ಸಿನಿಮಾದ ಬಗ್ಗೆ ಸಿದ್ಧತೆ ನಡೆಸಿ ಅದಕ್ಕೆ ಪಕೀಜಾ ಅಂತ ಹೆಸರಿಟ್ಟು, ಪತ್ನಿ ಮೀನಾ ಹೀರೋಯಿನ್ ಎಂದು ನಿರ್ಧರಿಸಿದ್ದರು.

ಪಕೀಜಾ ಸಿನಿಮಾದ ಕಥೆ ಕೂಡ ಸಿದ್ದಪಡಿಸಿ ಕಪ್ಪು-ಬಿಳುಪಿನ ಚಿತ್ರ ನಿರ್ಮಾಣ ಮಾಡುವ ಕನಸು ಕಂಡಿದ್ದು, 1958ರಲ್ಲಿ ಕಮಲ್ ಫಿಕ್ಚರ್ಸ್ ಬ್ಯಾನರ್ ಅಡಿ ಪಕೀಜಾ ಸಿನಿಮಾಕ್ಕೆ ಮುಹೂರ್ತ ನಡೆಸಿ ಚಿತ್ರೀಕರಣ ಆರಂಭಿಸಿದ್ದರು.

ಪಕೀಜಾ ಚಿತ್ರ ಪೂರ್ಣಗೊಳ್ಳುವ ಮೊದಲೇ ಅದೆಷ್ಟು ಘಟನೆಗಳು ನಡೆದು ಹೋದವು ಗೊತ್ತಾ?

ಪಕೀಜಾ ಸಿನಿಮಾ ಆರಂಭವಾಗಿದ್ದು 1958ರಲ್ಲಿ ಅದು ಬಿಡುಗಡೆ ಭಾಗ್ಯ ಕಂಡಿದ್ದು 1972ರ ಫೆಬ್ರುವರಿ 4ರಂದು! ಹದಿನಾಲ್ಕು ವರ್ಷಗಳ ಸುದೀರ್ಘ ಸಿನಿ ಚಿತ್ರೀಕರಣದ ಪಯಣದ ನಡುವೆ ಪತಿ, ಪತ್ನಿ ನಡುವೆ ವಿಚ್ಛೇದನ, ಸಿನಿಮಾದ ಮರು ಚಿತ್ರೀಕರಣ, ಬ್ರೇಕ್ ಅಪ್ಸ್ ಗಳು, ಸಾವುಗಳಿಗೆ ಸಾಕ್ಷಿಯಾಗಿರುವ ಘಟನೆ ಸೇರಿದಂತೆ ಹಲವಾರು ನಿಗೂಢತೆಗಳು ಇಂದಿಗೂ ಸಿನಿ ಪ್ರಿಯರಿಗೆ ತಿಳಿದಿಲ್ಲವಾಗಿದೆ!

ಪಕೀಜಾ ಸಿನಿಮಾ ಶುರುವಾದಾಗ ಕಪ್ಪು-ಬಿಳುಪಿನ ಜಮಾನ ಇತ್ತು. ನಂತರ ಕಲರ್ ತಂತ್ರಜ್ಞಾನ ಬಂದ ಮೇಲೆ ಕಮಲ್ ಅಮ್ರೋಹಿ ಮತ್ತೆ ನೂತನ ಕಲರ್(ಈಸ್ಟ್ ಮನ್ ಕಲರ್) ತಂತ್ರಜ್ಞಾನದಲ್ಲಿ ಸಿನಿಮಾ ಚಿತ್ರೀಕರಣ ಆರಂಭಿಸಿದ್ದರು. ಏತನ್ಮಧ್ಯೆ ಸಿನಿಮಾಸ್ಕೋಪ್ ತಂತ್ರಜ್ಞಾನ ಪರಿಚಯವಾಗಿತ್ತು. ಆಗ ಅಮ್ರೋಹಿ ಸಿನಿಮಾವನ್ನು ಸಿನಿಮಾಸ್ಕೋಪ್ ನಲ್ಲಿ ಚಿತ್ರೀಕರಣ ಮಾಡಲು ಮುಂದಾಗಿಬಿಟ್ಟಿದ್ದರು. ಅದಕ್ಕಾಗಿ ಎಂಜಿಎಂ(ಮೆಟ್ರೋ ಗೋಲ್ಡ್ ವಿನ್ ಮೇಯರ್ ಸ್ಟುಡಿಯೋ)ನಿಂದ ಬೇಕಾಗಿದ್ದ ಲೆನ್ಸ್ ಅನ್ನು ರಾಯಲ್ಟಿ ನೀಡುವ ಮೂಲಕ ತಂದು ಚಿತ್ರೀಕರಣ ಆರಂಭಿಸಿದ್ದರು. ಅದೂ ಕೂಡಾ ಶೂಟಿಂಗ್ ಮುಗಿದ ಮೇಲೆ ಹೊಸ ಲೆನ್ಸ್ ನಲ್ಲಿ ದೋಷ ಕಾಣಿಸಿಕೊಂಡುಬಿಟ್ಟಿತ್ತು.

ಈ ಸಮಸ್ಯೆ ಬಗ್ಗೆ ಅಮ್ರೋಹಿ ಎಂಜಿಎಂ ಸ್ಟುಡಿಯೋಗೆ ಮಾಹಿತಿ ನೀಡಿದ್ದರು. ಸಮಸ್ಯೆ ಬಗ್ಗೆ ಎಂಜಿಎಂ ಸ್ಟುಡಿಯೋ ಪರಿಣತರು ಅಧ್ಯಯನ ನಡೆಸಿದ್ದರು. ನಂತರ ಬಾಕಿ ಕೊಡಬೇಕಾಗಿದ್ದ ರಾಯಲ್ಟಿಯನ್ನು ತೆಗೆದುಕೊಳ್ಳದೇ ದೋಷ ಪತ್ತೆ ಹಚ್ಚಿದ್ದಕ್ಕೆ ಲೆನ್ಸ್ ಅನ್ನು ಉಡುಗೊರೆಯಾಗಿ ಕೊಟ್ಟು ಬಿಟ್ಟಿದ್ದರು.!

ಕಾಲಚಕ್ರ ಉರುಳುತ್ತಲೇ ಪಕೀಜಾ ಚಿತ್ರೀಕರಣ ಕುಂಟುತ್ತಾ ಸಾಗಿತ್ತು. ಮತ್ತೊಂದೆಡೆ ಅತಿಯಾಗಿ ಪ್ರೀತಿಸಿ ಮದುವೆಯಾಗಿದ್ದ ಮೀನಾ ಕುಮಾರಿ ಮೇಲೆ ಅಮ್ರೋಹಿ ಹದ್ದಿನ ಕಣ್ಣು ನೆಟ್ಟು ಬಿಟ್ಟಿದ್ದರು. ಎಲ್ಲಿಗೆ ಹೋಗುತ್ತಾಳೆ, ಯಾರೊಂದಿಗೆ ಮಾತನಾಡುತ್ತಾಳೆ ಹೀಗೆ ಪ್ರತಿಯೊಂದು ವಿಷಯಕ್ಕೂ ತಗಾದೆ ತೆಗೆಯುತ್ತಿದ್ದ ಅಮ್ರೋಹಿ ಮನೆಯಲ್ಲಿ ಪತ್ನಿ ಮೇಲೆ ಹಲ್ಲೆ ನಡೆಸುತ್ತಿರುವುದಾಗಿ ಹಿರಿಯ ನಟಿ ನರ್ಗಿಸ್ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದರು!

ಇಬ್ಬರ ನಡುವಿನ ವೈಮನಸ್ಸು ಹೆಚ್ಚುತ್ತಾ ಹೋದ ಪರಿಣಾಮ 1964ರಲ್ಲಿ ಇಬ್ಬರು ನಾನೊಂದು ತೀರ, ನೀನೊಂದು ತೀರ ಎಂಬಂತಾಗಿಬಿಟ್ಟಿದ್ದರು. ಮೀನಾ ಕುಮಾರಿ ತನ್ನ ಸಹೋದರಿ ಮಧು ಮನೆಗೆ ಬಂದು ಬಿಟ್ಟಿದ್ದರು. ಹೇಗಾದರೂ ಮನವೊಲಿಸಿ ಪತ್ನಿಯನ್ನು ವಾಪಸ್ ಕರೆದೊಯ್ಯಬೇಕೆಂದು ಬಂದಿದ್ದ ಅಮ್ರೋಹಿಗೆ ನಿರಾಸೆಯಾಗಿತ್ತು. ಯಾಕೆಂದರೆ ಮೀನಾ ಕೋಣೆಯ ಬಾಗಿಲನ್ನು ತೆರೆಯಲೇ ಇಲ್ಲ. ಆಗ ಬಾಗಿಲು ಬಳಿ ಬಂದ ಅಮ್ರೋಹಿ, ಮಂಜು(ಅಮ್ರೋಹಿ ಪ್ರೀತಿಯಿಂದ ಕರೆಯುತ್ತಿದ್ದ ಹೆಸರು) ನಾನೀಗ ಹೊರಡುತ್ತಿದ್ದೇನೆ. ಮತ್ತೊಮ್ಮೆ ನಾ ಇಲ್ಲಿಗೆ ಬರಲಾರೆ. ಆದರೆ ನನ್ನ ಮನೆ ಬಾಗಿಲು ನಿನಗಾಗಿ ಸದಾ ತೆರೆದೇ ಇರುತ್ತದೆ ಎಂದು ಒಂದೇ ಉಸಿರಿನಲ್ಲಿ ಹೇಳಿ ಹೊರಟು ಬಿಟ್ಟಿದ್ದರು!

ಇದರಿಂದಾಗಿ ಪಕೀಜಾ ಸಿನಿಮಾ ಚಿತ್ರೀಕರಣ ಮತ್ತೆ ನಿಂತು ಹೋಗಿತ್ತು. 1968ರಲ್ಲಿ ಸುನಿಲ್ ದತ್ ಮತ್ತು ನರ್ಗಿಸ್ ದಂಪತಿ ಮಧ್ಯಪ್ರವೇಶಿಸಿ ಚಿತ್ರೀಕರಣದಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿಕೊಂಡಿದ್ದರು. ದತ್, ನರ್ಗಿಸ್ ಮನವೊಲಿಕೆ ಯಶಸ್ವಿಯಾದ ನಂತರ ಸಿನಿಮಾ ಚಿತ್ರೀಕರಣ ಪುನರಾರಂಭವಾಗಿತ್ತು.

ಎಲ್ಲಾ ಸುಗಮವಾಗಲಿದೆ ಎಂದುಕೊಂಡಾಗಲೇ 1968ರ ಮಾರ್ಚ್ 17ರಂದು ಸಿನಿಮಾದ ಮ್ಯೂಸಿಕ್ ಕಂಪೋಸರ್ ಗುಲಾಂ ಮೊಹಮ್ಮದ್ ಸಾವನ್ನಪ್ಪಿದ್ದರು. ರಾಷ್ಟ್ರ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ಗುಲಾಂ ಅದೆಷ್ಟು ಅದ್ಭುತ ಹಾಡನ್ನು ನೀಡಿದ್ದಾರೆಂಬುದಕ್ಕೆ ಪಕೀಜಾ ಚಿತ್ರ ವೀಕ್ಷಿಸಬೇಕು. ಆ ಹಾಡಿನ ಮೂಲಕ ಗುಲಾಂ ಇಂದಿಗೂ ಜೀವಂತವಾಗಿದ್ದಾರೆ ಎಂಬುದು ಅತಿಶಯೋಕ್ತಿಯಲ್ಲ.

ಅದೇ ರೀತಿ ಭಾರತೀಯ ಸಿನಿಮಾರಂಗದ ಮೊದಲ ಸಿನಿಮಾಟೋಗ್ರಾಫರ್ ಆಗಿದ್ದ ಜೋಸೆಫ್ ವಿರ್ಸ್ಚಿಂಗ್ ಅಮ್ರೋಹಿಯ ಪಕೀಜಾ ಸಿನಿಮಾದಲ್ಲಿ ಕಾರ್ಯನಿರ್ವಹಿಸಲು ಆಯ್ಕೆ ಮಾಡಿದ್ದರು. ದುರಂತ ಎಂಬಂತೆ ಜೋಸೆಫ್ 1967ರ ಜೂನ್ 11ರಂದು ಹೃದಯಾಘಾತದಿಂದ ನಿಧನರಾಗಿದ್ದರು. ಬಳಿಕ ಅಮ್ರೋಹಿ ಪಕೀಜಾ ಸಿನಿಮಾಕ್ಕೆ ಗುರುದತ್ ಸಿನಿಮಾದ ಸಿನಿಮಾಟೋಗ್ರಾಫರ್ ಆಗಿದ್ದ ಕನ್ನಡಿಗ ವಿಕೆ ಮೂರ್ತಿ ಕೂಡಾ ಸಹಾಯ ಮಾಡಿದ್ದರು. ಗುಲಾಂ ಅವರ ನಿಧನದಿಂದ ಲೆಜೆಂಡರಿ ಕಂಪೋಸರ್ ನೌಶಾದ್ ಅವರನ್ನು ಕರೆತರಲಾಗಿತ್ತು.  ಆರಂಭದಲ್ಲಿ ಪಕೀಜಾ ಚಿತ್ರದಲ್ಲಿ ಸಲೀಂ ಪಾತ್ರವನ್ನು ನಟ ಅಶೋಕ್ ಕುಮಾರ್ ನಿರ್ವಹಿಸಿದ್ದರು. ನಂತರ ಚಿತ್ರೀಕರಣ ಪುನರಾರಂಭಗೊಂಡಾಗ ಆ ಪಾತ್ರಕ್ಕೆ ಧರ್ಮೇಂದ್ರ, ರಾಜೇಂದ್ರ ಕುಮಾರ್ ಮತ್ತು ಸುನಿಲ್ ದತ್ ಅವರ ಹೆಸರನ್ನು ಪರಿಗಣಿಸಲಾಗಿತ್ತು. ನಂತರ ರಾಜ್ ಕುಮಾರ್ ಸಲೀಂ ಪಾತ್ರದಲ್ಲಿ ನಟಿಸಲು ಒಪ್ಪಿದ್ದರು. ಅಷ್ಟೇ ಅಲ್ಲ (ಸಲೀಂ) ಉದ್ಯಮಿ ಪಾತ್ರವನ್ನು ಅರಣ್ಯಾಧಿಕಾರಿಯನ್ನಾಗಿ ಬದಲಾಯಿಸಲಾಗಿತ್ತು.

ಪಕೀಜಾ ಸಿನಿಮಾ ಚಿತ್ರೀಕರಣ ಮುಂದುವರಿಯುತ್ತಿದ್ದಂತೆಯೇ ಮೀನಾ ಕುಮಾರಿ ಮದ್ಯದ ದಾಸಳಾಗಿ ಬಿಟ್ಟಿದ್ದಳು. ವಿಪರೀತ ಕುಡಿತದಿಂದ ಅನಾರೋಗ್ಯಕ್ಕೆ ಈಡಾಗಿದ್ದು, ಸಿನಿಮಾ ಚಿತ್ರೀಕರಣ ಮತ್ತೆ ನಿಂತಿತ್ತು. ಆದರೂ ಲಂಡನ್ ನಲ್ಲಿ ಚಿಕಿತ್ಸೆ ಪಡೆದುಕೊಂಡು ಬಂದ ನಂತರ ಸಿನಿಮಾ ಪೂರ್ಣಗೊಳಿಸುವುದಾಗಿ ಮೀನಾ ಅಮ್ರೋಹಿಗೆ ಭರವಸೆ ನೀಡಿಬಿಟ್ಟಿದ್ದರು.

ಅನಾರೋಗ್ಯದ ನಡುವೆಯೂ ಮೀನಾ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಪಕೀಜಾ ಸಿನಿಮಾದ ಚಲೋ ದಿಲ್ದಾರ್ ಚಲೋ ಹಾಡನ್ನು ಸೂಕ್ಷ್ಮವಾಗಿ ಗಮನಿಸಿ ಎಲ್ಲಿಯೂ ಮೀನಾ ಕುಮಾರಿ ಮುಖವನ್ನು ತೋರಿಸಿಯೇ ಇಲ್ಲ. ಅನಾರೋಗ್ಯದಿಂದ ಕುಸಿದು ಬೀಳುತ್ತಿದ್ದ ಮೀನಾ ಕುಮಾರಿಗೆ ನೃತ್ಯ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಅದಕ್ಕಾಗಿ ಪದ್ಮ ಖನ್ನಾಳನ್ನು ಬಳಸಿಕೊಳ್ಳಲಾಗಿತ್ತು.

ಗಜಪ್ರಸವ ಎಂಬಂತೆ ಎಲ್ಲಾ ಅಡೆತಡೆಯನ್ನು ಎದುರಿಸಿ 1972ರಲ್ಲಿ ಪಕೀಜಾ ಸಿನಿಮಾ ತೆರೆ ಕಂಡಿತ್ತು. ಮೀನಾ ಕುಮಾರಿಯೂ ಪತಿ ಅಮ್ರೋಹಿ ಪಕ್ಕ ಕುಳಿತು ಸಿನಿಮಾ ನೋಡಿ ಕಣ್ಣೀರು ಹಾಕಿದ್ದರು. ಸಿನಿಮಾ ತೆರೆ ಕಂಡ ಎರಡು ತಿಂಗಳಲ್ಲಿಯೇ ಮೀನಾ ಕುಮಾರಿ ಇಹಲೋಕ(1972, ಮಾರ್ಚ್ 31) ತ್ಯಜಿಸಿದ್ದರು. ಮೀನಾ ಕುಮಾರಿ ಸಾವನ್ನಪ್ಪಿದ್ದಾರೆ ಎಂಬ ಸುದ್ದಿ ಹಬ್ಬುತ್ತಿದ್ದಂತೆಯೇ ಇತ್ತ ದಿನದಿಂದ ದಿನಕ್ಕೆ ಪಕೀಜಾ ಸಿನಿಮಾ ಬಾಕ್ಸಾಫೀಸ್ ನಲ್ಲಿ ಭರ್ಜರಿ ಹಣಗಳಿಕೆ ಮಾಡಿತ್ತು! ತನ್ನ ಕೊನೆಯ ಸಿನಿಮಾದ ಮೂಲಕ ಮೀನಾ ಕುಮಾರಿ ಭಾರತೀಯ ಚಿತ್ರರಂಗದಲ್ಲಿ ಮೈಲಿಗಲ್ಲೊಂದನ್ನು ನೆಟ್ಟಿದ್ದರು!

*ನಾಗೇಂದ್ರ ತ್ರಾಸಿ

Advertisement

Udayavani is now on Telegram. Click here to join our channel and stay updated with the latest news.

Next