ಮಹಿಳಾ ದೌರ್ಜನ್ಯದ ಕೇಸು ಹೊತ್ತುಕೊಂಡಿರುವ 48 ಮಂದಿ ರಾಜಕಾರಣಿಗಳು ನಮ್ಮ ಶಾಸನಸಭೆಗಳಲ್ಲಿದ್ದಾರೆ ಎಂದಿದೆ ಅಸೋಸಿಯೇಶನ್ ಆಫ್ ಡೆಮಾಕ್ರಟಿಕ್ ರಿಫಾಮ್ಸ್ (ಎಡಿಆರ್) ಎಂಬ ಸಂಸ್ಥೆಯ ವರದಿ. ಕಠುವಾ ಮತ್ತು ಉನ್ನಾವ್ ಅತ್ಯಾಚಾರ ಪ್ರಕರಣಗಳು ತೀವ್ರ ಚರ್ಚೆಯಲ್ಲಿರುವ ಸಂದರ್ಭದಲ್ಲಿಯೇ ಎಡಿಆರ್ ಈ ವರದಿಯನ್ನು ಬಹಿರಂಗಪಡಿಸಿ ಜನಪ್ರತಿನಿಧಿಗಳ ಕೇಸುಗಳತ್ತ ಗಮನ ಸೆಳೆದಿದೆ. ಉನ್ನಾವ್ ಪ್ರಕರಣದಲ್ಲಿ ಓರ್ವ ಶಾಸಕರೇ ಆರೋಪಿ ಸ್ಥಾನದಲ್ಲಿದ್ದಾರೆ. ಕಠುವಾದಲ್ಲಿ ಬಾಲಕಿಯ ಮೇಲೆ ನಡೆದ ಬರ್ಬರ ಅತ್ಯಾಚಾರವನ್ನು ಇಬ್ಬರು ಶಾಸಕರು ಬಹಿರಂಗವಾಗಿ ಬೆಂಬಲಿಸಿ ವಿವಾದಕ್ಕೀಡಾಗಿದ್ದಾರೆ.
45 ಶಾಸಕರು ಮತ್ತು 3 ಸಂಸದರ ವಿರುದ್ಧ ಮಹಿಳೆಯರ ಮೇಲೆ ದೌರ್ಜನ್ಯವೆಸಗಿದ ಕೇಸ್ ದಾಖಲಾಗಿದೆ. ಇದರಲ್ಲಿ ಅತ್ಯಾಚಾರ ಆರೋಪ ಹೊತ್ತುಕೊಂಡಿರುವವರೂ ಇದ್ದಾರೆ ಎನ್ನುವುದು ಕಳವಳಕಾರಿಯಾದ ವಿಚಾರ. ಎಡಿಆರ್ ಸಂಸದರು ಮತ್ತು ಶಾಸಕರು ನಾಮಪತ್ರ ಸಲ್ಲಿಸುವಾಗ ನೀಡಿದ ಅಫಿಡವಿತ್‌ಗಳನ್ನು ಪರಿಶೀಲಿಸಿ ಈ ಅಂಕಿಅಂಶಗಳನ್ನು ಕಲೆಹಾಕಿದೆ. ಆದರೆ ಇದು ನೀರಿನ ಮೇಲೆ ಕಾಣಿಸುವ ಮಂಜುಪರ್ವತದ ತುದಿ ಮಾತ್ರ. ಇನ್ನಷ್ಟು ಆಳವಾಗಿ ಅಧ್ಯಯನ ನಡೆಸಿದರೆ ಬೆಚ್ಚಿಬೀಳಿಸುವ ಮಾಹಿತಿಗಳು ಲಭ್ಯವಾಗಲೂಬಹುದು. ಎಷ್ಟೋ ಪ್ರಕರಣಗಳನ್ನು ಆಮಿಷವೊಡ್ಡಿಯೋ ಅಥವಾ ಬೆದರಿಸಿಯೋ ಮುಚ್ಚಿ ಹಾಕಲಾಗುತ್ತದೆ. ಕೆಲವೊಮ್ಮೆ ದೌರ್ಜನ್ಯಕ್ಕೊಳಗಾದವರೇ ಭವಿಷ್ಯದ ಪರಿಣಾಮಕ್ಕೆ ಅಂಜಿ ದೂರು ದಾಖಲಿಸದಿರುವ ಸಾಧ್ಯತೆಯೂ ಇರುತ್ತದೆ.
ರಾಜಕೀಯದ ಅಪರಾಧೀಕರಣವನ್ನು ತಡೆಯಬೇಕೆಂಬ ಕೂಗು ಇಂದು ನಿನ್ನೆಯದಲ್ಲ. ಚುನಾವಣಾ ಆಯೋಗ ಮತ್ತು ನ್ಯಾಯಾಲಯ ಈ ನಿಟ್ಟಿನಲ್ಲಿ ಕೆಲವು ಕಟ್ಟುನಿಟ್ಟಿನ ಕ್ರಮಗಳು ಕೈಗೊಂಡಿದ್ದರೂ ಅಪರಾಧಿ ಹಿನ್ನೆಲೆಯುಳ್ಳವರು ರಾಜಕೀಯಕ್ಕೆ ಪ್ರವೇಶಿಸುವುದು ಕಡಿಮೆಯಾಗುವ ಬದಲು ಹೆಚ್ಚಾಗುತ್ತಿದೆ. ಪ್ರಸ್ತುತ ಕರ್ನಾಟಕದ ಚುನಾವಣೆಯನ್ನೇ ತೆಗೆದುಕೊಂಡರೂ ಕ್ರಿಮಿನಲ್ ಕೇಸ್ ದಾಖಲಾಗಿರುವ ಹಾಗೂ ಮಹಿಳಾ ದೌರ್ಜನ್ಯ ಎಸಗಿದ ಹಲವು ಮಂದಿಗೆ ಟಿಕೆಟ್ ಹಂಚಿಕೆಯಾಗಿದೆ.
ರಾಜಕೀಯ ಪಕ್ಷಗಳಿಗೆ ಈಗ ಅಭ್ಯರ್ಥಿಯ ಸಚ್ಚಾರಿತ್ರ್ಯವಾಗಲಿ, ನೈತಿಕತೆಯಾಗಲಿ ಮುಖ್ಯವಲ್ಲ. ಗೆಲ್ಲುವ ಸಾಮರ್ಥ್ಯ ಮತ್ತು ಸಂಪನ್ಮೂಲವೇ ಚುನಾವಣೆಗೆ ಸ್ಪರ್ಧಿಸುವ ಮಾನದಂಡವಾಗಿರುವುದರಿಂದ ಕಳಂಕಿತರು, ಅಪರಾಧಿಗಳು ಯಾವುದೇ ಮುಜುಗರವಿಲ್ಲದೆ ಆಯ್ಕೆಯಾಗಿ ಶಾಸನಸಭೆಗಳಿಗೆ ಹೋಗುತ್ತಾರೆ. ಗಂಭೀರ ಸ್ವರೂಪದ ಆರೋಪಗಳನ್ನು ಹೊತ್ತಿರುವವರು ಚುನಾವಣೆಗೆ ಸ್ಪರ್ಧಿಸುವುದನ್ನು ನಿಷೇಧಿಸಬೇಕೆಂಬ ಬೇಡಿಕೆಯಿದ್ದರೂ ಯಾರೂ ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಐದು ವರ್ಷಗಳಲ್ಲಿ ಮಾನ್ಯತೆ ಹೊಂದಿರುವ ಪಕ್ಷಗಳೇ ಅತ್ಯಾಚಾರದ ಆರೋಪವಿದ್ದ 26 ಮಂದಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನೀಡಿವೆ. ಅತ್ಯಾಚಾರ ಆರೋಪ ಹೊತ್ತಿದ್ದ 14 ಮಂದಿ ಪಕ್ಷೇತರರಾಗಿ ಲೋಕಸಭೆಗೆ ಸ್ಪರ್ಧಿಸಿದ್ದಾರೆ ಎನ್ನುವುದು ಪ್ರಜಾತಂತ್ರದ ದುರಂತ.
1765 ಸಂಸದರು ಮತ್ತು ಶಾಸಕರ ವಿರುದ್ಧ 3816 ಕ್ರಿಮಿನಲ್ ಕೇಸ್‌ಗಳಿವೆ ಎಂದು ಕೆಲ ದಿನಗಳ ಹಿಂದೆಯಷ್ಟೇ ಕೇಂದ್ರ ಸರಕಾರ ಸುಪ್ರೀಂ ಕೋರ್ಟಿಗೆ ಸಲ್ಲಿಸಿದ ಅಫಿಡವಿತ್‌ನಲ್ಲಿ ತಿಳಿಸಿತ್ತು. ಸಂಸತ್ತನ್ನು ಪ್ರಜಾತಂತ್ರದ ದೇಗುಲ ಎನ್ನುತ್ತಾರೆ. ಆದರೆ ಈ ದೇಗುಲದಲ್ಲಿ ಇಷ್ಟೊಂದು ಸಂಖ್ಯೆಯ ಕಳಂಕಿತರಿರುವುದು ಆರೋಗ್ಯಕರ ಬೆಳವಣಿಗೆಯಂತೂ ಅಲ್ಲ. ಸಂಸತ್ತು ಈ ರೀತಿ ಅಪವಿತ್ರಗೊಳ್ಳಲು ಒಂದು ರೀತಿಯಲ್ಲಿ ನಾವೂ ಕಾರಣರಾಗುತ್ತೇವೆ. ಕ್ರಿಮಿನಲ್ ಕೇಸ್ ಇದೆ ಎಂದು ಗೊತ್ತಿದ್ದರೂ ಅಂತಹ ಅಭ್ಯರ್ಥಿಗಳಿಗೆ ಮತ ಹಾಕುವ ಮೂಲಕ ಬೆಂಬಲಿಸುವ ನಮ್ಮ ಹೊಣೆಗೇಡಿತನವೂ ಇದಕ್ಕೆ ಸಮಾನ ಹೊಣೆ.
ಜನಪ್ರತಿನಿಧಿಗಳ ವಿರುದ್ಧ ಇರುವ ಕ್ರಿಮಿನಲ್ ಕೇಸುಗಳು ಒಂದು ವರ್ಷದೊಳಗೆ ಇತ್ಯರ್ಥವಾಗಬೇಕೆಂದು ಸರ್ವೋಚ್ಚ ನ್ಯಾಯಾಲಯವೇ ಹೇಳಿದೆ. ಇದಕ್ಕಾಗಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಸರಕಾರಕ್ಕೆ ಸೂಚಿಸಿದೆ. ತ್ವರಿತ ವಿಚಾರಣೆಗಾಗಿ 12 ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸುವುದಾಗಿ ಸರಕಾರ ಭರವಸೆ ನೀಡಿದ್ದರೂ ಈ ನಿಟ್ಟಿನಲ್ಲಿ ಮುಂದಡಿಯಿಟ್ಟಿರುವುದು ಕಾಣಿಸದು. ವ್ಯವಸ್ಥೆಯಲ್ಲಿರುವ ಈ ಚಲ್ತಾ ಹೈ ಧೋರಣೆಯೇ ರಾಜಕೀಯ ಪಕ್ಷಗಳಿಗೆ ಶ್ರೀರಕ್ಷೆಯಾಗುತ್ತಿರುವುದು ಸತ್ಯ. ಹೀಗಾಗಿ ಕಳಂಕಿತರು, ಮಹಿಳೆಯ ಮೇಲೆ ದೌರ್ಜನ್ಯ ಎಸಗಿದವರು ಶಾಸನಸಭೆಗಳಿಗೆ ಹೋಗಬಾರದೆಂದಿದ್ದರೆ ಅಂಥವರಿಗೆ ಮತ ಹಾಕಬಾರದೆನ್ನುವ ಪ್ರಜ್ಞಾವಂತಿಕೆ ನಮ್ಮಲ್ಲಿ ಮೂಡಬೇಕು.