ಹೊಸದಿಲ್ಲಿ: ನಿರ್ಭಯಾ ಅತ್ಯಾಚಾರಿಗಳನ್ನು ನೇಣುಗಂಬಕ್ಕೇರಿಸಲು ಇನ್ನು ಆರೇ ದಿನಗಳು ಬಾಕಿ ಉಳಿದಿದ್ದು, ಎಲ್ಲ ನಾಲ್ವರು ಅಪರಾಧಿಗಳ ಮೇಲೆಯೂ ತಿಹಾರ್ ಜೈಲಿನ ಅಧಿಕಾರಿಗಳು ಹದ್ದಿನ ಕಣ್ಣಿಟ್ಟಿದ್ದಾರೆ. ಗಲ್ಲುಶಿಕ್ಷೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಅತ್ಯಾಚಾರಿಗಳು ಆತ್ಮಹತ್ಯೆ ಮಾಡಿಕೊಳ್ಳುವ ಸಾಧ್ಯತೆಯಿರುವ ಕಾರಣ ದಿನದ 24 ಗಂಟೆಯೂ ಅವರ ಮೇಲೆ ಕಣ್ಣಿಡಲಾಗುತ್ತಿದೆ. ಈ ಪ್ರಕ್ರಿಯೆಯನ್ನು “ಸೂಸೈಡ್ ವಾಚ್’ ಎಂದು ಕರೆಯಲಾಗುತ್ತದೆ.
ಜ.16ರಂದೇ ಅಪರಾಧಿಗಳಾದ ಮುಕೇಶ್ ಸಿಂಗ್, ಪವನ್ ಕುಮಾರ್ ಗುಪ್ತಾ, ವಿನಯ್ ಶರ್ಮಾ ಮತ್ತು ಅಕ್ಷಯ್‌ನನ್ನು ಜೈಲು ಸಂಖ್ಯೆ 3ಕ್ಕೆ ವರ್ಗಾಯಿಸಲಾಗಿದೆ. ಹೈರಿಸ್ಕ್ ವಾರ್ಡ್‌ನ ಪ್ರತ್ಯೇಕ ಕೊಠಡಿಗಳಲ್ಲಿ ಇವರನ್ನು ಇಡಲಾಗಿದೆ.
ಗೋಡೆಗೆ ತಲೆ ಜಜ್ಜಿಕೊಳ್ಳುವ ಸಾಧ್ಯತೆ: ಈ ಕೊಠಡಿಗಳು 6×8 ಅಳತೆ ಹೊಂದಿದ್ದು, ಇಬ್ಬರು ಭದ್ರತಾ ಸಿಬ್ಬಂದಿ ಸದಾಕಾಲ ಕಾಯುತ್ತಿದ್ದಾರೆ. ಇಲ್ಲಿಗೆ ಅಪರಾಧಿಗಳನ್ನು ಶಿಫ್ಟ್ ಮಾಡುವ ಮೊದಲೇ, ಒಳಗೆ ಲೋಹದ ಚೂರು, ಮೊಳೆ ಇದೆಯೇ ಎಂಬುದನ್ನು ಪರಿಶೀಲಿಸಲಾಗಿದೆ. ಅಪರಾಧಿಗಳು ಸ್ವತಃ ನೋವು ಮಾಡಿಕೊಳ್ಳಲು ಇರುವ ಏಕೈಕ ಮಾರ್ಗ, ತಲೆಯನ್ನು ಗೋಡೆಗೆ ಚಚ್ಚಿಕೊಳ್ಳುವುದು. ಹಿಂದೆ ಅನೇಕ ಅಪರಾಧಿಗಳು ಗಲ್ಲುಶಿಕ್ಷೆ ಮುಂದೂಡಲು ಇಂಥ ಕೃತ್ಯ ಎಸಗಿದ್ದೂ ಇದೆ ಎನ್ನುತ್ತಾರೆ ಜೈಲಧಿಕಾರಿಗಳು. ಹೀಗಾಗಿ, ತೀವ್ರ ನಿಗಾ ವಹಿಸಲಾಗುತ್ತಿದೆ.
ಮತ್ತೆ ಮೇಲ್ಮನವಿ: ಪದೇ ಪದೆ ಅರ್ಜಿ ಸಲ್ಲಿಸಿ ಗಲ್ಲುಶಿಕ್ಷೆ ವಿಳಂಬವಾಗಿಸುವ ಪ್ರಯತ್ನವನ್ನು ಅತ್ಯಾಚಾರಿಗಳು ಮುಂದುವರಿಸಿದ್ದಾರೆ. ಅಪರಾಧಿ ಮುಕೇಶ್ ಸಿಂಗ್ ಶನಿವಾರ ಮತ್ತೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ತಮ್ಮ ಕ್ಷಮಾದಾನ ಅರ್ಜಿ ತಿರಸ್ಕಾರಗೊಂಡಿದ್ದನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದಾನೆ. ಜ.17ರಂದೇ ಈತನ ಕ್ಷಮಾದಾನ ಅರ್ಜಿಯನ್ನು ರಾಷ್ಟ್ರಪತಿ ತಿರಸ್ಕರಿಸಿದ್ದರು.