ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರದ ದಮನಕಾರಿ ಕಾರ್ಮಿಕ ನೀತಿಗಳನ್ನು ಪ್ರತಿಭಟಿಸಿ ಕಾರ್ಮಿಕ ಸಂಘಟನೆಗಳು ನಡೆಸುತ್ತಿರುವ 48 ತಾಸುಗಳ ಸುದೀರ್ಘ ಭಾರತ್ ಬಂದ್ ನಿಂದಾಗಿ ಅನೇಕ ರಾಜ್ಯಗಳಲ್ಲಿ ಜನಜೀವನ ಬಹುತೇಕ ಸ್ತಬ್ಧವಾಗಿದೆ. ಸಾರ್ವಜನಿಕ ಸಾರಿಗೆ ವ್ಯವಸ್ಥೆ ನಿಂತಿರುವುದರಿಂದ ಜನರು ಎಲ್ಲೆಡೆ ಪರದಾಡುತ್ತಿರುವುದು ಕಂಡು ಬಂದಿದೆ.
ಎಡ ಪಕ್ಷಗಳ ಪಾರಮ್ಯವಿರುವ ಕೇರಳ ಮತ್ತು ಪಶ್ಚಿಮ ಬಂಗಾಲದಲ್ಲಿ ಅಲ್ಲಲ್ಲಿ ಹಿಂಸೆ ಭುಗಿಲೆದ್ದಿದ್ದು ಜನಜೀವನ ತೀವ್ರವಾಗಿ ಬಾಧಿತವಾಗಿದೆ.
ಅಸ್ಸಾಂ, ಮೇಘಾಲಯ, ಕರ್ನಾಟಕ, ಮಣಿಪುರ, ಬಿಹಾರ, ರಾಜಸ್ತಾನ, ಗೋವಾ, ಪಂಜಾಬ್, ಜಾರ್ಖಂಡ್, ಛತ್ತೀಸ್‌ಗಢ ಮತ್ತು ಹರಿಯಾಣದಲ್ಲಿ ಭಾರತ್ ಬಂದ್ ನಿಚ್ಚಳವಾಗಿ ಕಂಡು ಬಂದಿದೆ.
ನರೇಂದ್ರ ಮೋದಿ ಸರಕಾರ ಕೈಗೊಂಡಿರುವ ಕಾರ್ಮಿಕ ವಿರೋಧಿ ನೀತಿಗಳು, ಏಕಪಕ್ಷೀಯ ಕಾರ್ಮಿಕ ಕಾನೂನು ಸುಧಾರಣೆಯನ್ನು ಪ್ರತಿಭಟಿಸಿ ಸುಮಾರು ಹತ್ತು ಪ್ರಮುಖ ಕಾರ್ಮಿಕ ಸಂಘಟನೆಗಳು 48 ತಾಸುಗಳ ಭಾರತ ಬಂದ್‌ಗೆ ಕರೆ ನೀಡಿವೆ.
ಆ ಪ್ರಕಾರ ಇಂದು ಹಲವು ರಾಜ್ಯಗಳಲ್ಲಿ ಸಾರಿಗೆ ಸೇವೆ ನಿಂತು ಹೋಗಿದೆ. ಖಾಸಗಿ ವಾಹನಗಳ ಓಡಾಟ ಕಂಡು ಬಂದಿದೆ. ಪ್ರತಿಭಟನಕಾರರು ಪೆಟ್ರೋಲ್ ಸ್ಟೇಶನ್ ಸಹಿತ ಅಂಗಡಿ ಮುಂಗಟ್ಟುಗಳನ್ನು ಬಲವಂತದಿಂದ ಮುಚ್ಚಿಸುತ್ತಿರುವ ದೃಶ್ಯಗಳು ಕಂಡು ಬಂದಿವೆ.
ಬಂದ್ ಗೆ ಕರೆನೀಡಿರುವ ಕಾರ್ಮಿಕ ಸಂಘಟನೆಗಳಲ್ಲಿ ಎಐಟಿಯುಸಿ, ಸಿಐಟಿಯು, ಎಚ್‌ಎಂಎಸ್, ಎಐಯುಟಿಯುಸಿ, ಟಿಯುಸಿಸಿ, ಎಐಸಿಸಿಟಿಯು ಮುಖ್ಯವಾಗಿವೆ. ಇವುಗಳ ಜತೆಗೆ ಬ್ಯಾಂಕಿಂಗ್ ಮತು ವಿಮಾ ರಂಗದ ನೌಕರರು ಕೂಡ ಸೇರಿಕೊಂಡಿದ್ದಾರೆ.
ಕೇರಳದಲ್ಲಿ ರಾಜ್ಯ ಸಾರಿಗೆ ಬಸ್ ಸೇವೆ ಸ್ಥಗಿತಗೊಂಡಿದೆ. ರೈಲು ಓಟಾಡಗಳು ವಿಳಂಬಗೊಂಡಿವೆ.