Advertisement
ಒಟ್ಟು 48, 69,000 ರೂ.ಗಳಲ್ಲಿ ಈ ಕಟ್ಟಡ ನಿರ್ಮಾಣವಾಗುತ್ತಿದ್ದು, ಮುಂದಿನ ನಾಲ್ಕು ತಿಂಗಳುಗಳಲ್ಲಿ ಹೊಸ ಕಟ್ಟಡದಲ್ಲಿ ಈ ಸಖೀ ಕೇಂದ್ರವು ಕಾರ್ಯಾರಂಭಿಸಲಿದೆ. ಕೌಟುಂಬಿಕ ದೌರ್ಜನ್ಯ, ಅತ್ಯಾಚಾರ, ಲೈಂಗಿಕ ಕಿರುಕುಳ, ಆಸಿಡ್ ದಾಳಿ, ಲೈಂಗಿಕ ದುರುಪಯೋಗಕ್ಕೊಳಗಾದ, ಕಾಣೆಯಾದ, ಬಾಲ್ಯವಿವಾಹಕ್ಕೊಳಗಾದ ಸಹಿತ ವಿವಿಧ ಸಮಸ್ಯೆಗಳಿಂದ ನರಳುವ ಮಹಿಳೆಯರಿಗೆ ಪೊಲೀಸ್ ನೆರವು, ಕಾನೂನು ನೆರವು, ಸಮಾಲೋಚನೆ, ವೈದ್ಯಕೀಯ ನೆರವು, ತಾತ್ಕಾಲಿಕ ವಸತಿ ನೀಡುವುದಕ್ಕಾಗಿ ಕೇಂದ್ರ ಸರಕಾರ ಜಾರಿಗೆ ತಂದ ಸಖೀ ಒನ್ ಸ್ಟಾಪ್ ಸೆಂಟರ್ 2019ರ ಜ. 26ರಿಂದ ಲೇಡಿಗೋಷನ್ ಆಸ್ಪತ್ರೆಯ ವಾರ್ಡ್‌ವೊಂದರಲ್ಲಿ ತಾತ್ಕಾಲಿಕ ನೆಲೆಯಲ್ಲಿ ಕಾರ್ಯಾರಂಭ ಮಾಡಿತ್ತು. ಇದೀಗ ಸುಸಜ್ಜಿತವಾದ ಪೂರ್ಣಕಾಲಿಕ ಕಟ್ಟಡ ನಿರ್ಮಾಣವಾಗುತ್ತಿದ್ದು, ಎಪ್ರಿಲ್-ಮೇ ವೇಳೆಗೆ ಅಂತಿಮಗೊಳ್ಳುವ ಸಾಧ್ಯತೆ ಇದೆ.
ನೂತನ ಕಟ್ಟಡವು 2,314 ಚದರ ಅಡಿ ವಿಸ್ತೀರ್ಣವನ್ನು ಹೊಂದಿದೆ. ತಾತ್ಕಾಲಿಕ ನೆಲೆಯಲ್ಲಿರುವ ಕೇಂದ್ರದಲ್ಲಿ ಮೂರು ಹಾಸಿಗೆಗಳಿದ್ದು, ಸೌಲಭ್ಯಗಳೇನಿರಬೇಕೆಂಬುದು ಅಂತಿಮವಾಗಿಲ್ಲ. 2 ವಾರ್ಡ್, ಸಿಸಿ ಕೆಮರಾ, ಶೌಚಾಲಯ ಸಹಿತ ಅಗತ್ಯ ಮೂಲಸೌಕರ್ಯಗಳು ಕೇಂದ್ರದಲ್ಲಿರಲಿವೆ. 2019ರ ನ. 21ರಂದು ಕಾರ್ಯಾರಂಭ ಸ್ಥಗಿತಗೊಳಿಸಿದ್ದ “ಗೆಳತಿ ವಿಶೇಷ ಚಿಕಿತ್ಸಾ ಘಟಕ’ದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಓರ್ವ ಆಪ್ತ ಸಮಾಲೋಚಕ ಹಾಗೂ ಇಬ್ಬರು ಸಾಮಾಜಿಕ ಕಾರ್ಯಕರ್ತರು ಸಖೀ ಕೇಂದ್ರದಲ್ಲಿ ತಾತ್ಕಾಲಿಕ ನೆಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
Related Articles
Advertisement
ಕಟ್ಟಡ ನಿರ್ಮಾಣಕ್ಕಾಗಿ ಒಟ್ಟು 48,69,000 ರೂ. ಅನುದಾನ ಮೀಸಲಿರಿಸಲಾಗಿದ್ದು, ಮೊದಲನೇ ಹಂತದಲ್ಲಿ 24,34,686 ರೂ. ಬಿಡುಗಡೆಯಾಗಿದೆ. ಸದ್ಯ ಕಟ್ಟಡ ನಿರ್ಮಾಣ ಕಾರ್ಯ ಶೇ. 50ರಷ್ಟು ಪೂರ್ಣವಾಗಿದ್ದು, ವೇಗದಿಂದ ಕೆಲಸ ನಡೆಯುತ್ತಿದೆ. ಮುಂದಿನ ಮೂರ್‍ನಾಲ್ಕು ತಿಂಗಳುಗಳಲ್ಲಿ ಕಟ್ಟಡ ನಿರ್ಮಾಣ ಕಾರ್ಯ ಅಂತಿಮಗೊಂಡು ಕಟ್ಟಡ ಸೇವೆಗೆ ತೆರೆದುಕೊಳ್ಳಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಒಂದು ವರ್ಷ; 128 ಪ್ರಕರಣಸಖೀ ಕೇಂದ್ರದಲ್ಲಿ 2019ರ ಫೆಬ್ರವರಿಯಿಂದ ಡಿಸೆಂಬರ್‌ವರೆಗೆ ಒಟ್ಟು 128 ಪ್ರಕರಣಗಳು ದಾಖಲಾಗಿವೆ. 4 ಕೌಟುಂಬಿಕ ದೌರ್ಜನ್ಯ, 48 ಅತ್ಯಾಚಾರ, 39 ಲೈಂಗಿಕ ಅಪರಾಧ/ಲೈಂಗಿಕ ಕಿರುಕುಳ, 1 ಮಹಿಳೆಯರ ಸಾಗಾಣಿಕೆ, 7 ಲೈಂಗಿಕ ದುರುಪಯೋಗಕ್ಕೆ ಒಳಗಾದ ಮಕ್ಕಳು, 2 ಬಾಲ್ಯ ವಿವಾಹ, 17 ಕಾಣೆಯಾದ/ಅಪಹರಣ, 10 ಇತರೆ ಪ್ರಕರಣಗಳು ಸೇರಿವೆ. ಈ ಪೈಕಿ ಕೆಲವರನ್ನು ಹೆತ್ತವರಿಗೆ ಹಸ್ತಾಂತರಿಸಲಾಗಿದ್ದರೆ, ಕೆಲವು ಮಹಿಳೆಯರು ಸ್ವಾಧಾರ ಗೃಹದಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ಅಲ್ಲದೆ ಸ್ವಂತ ಉದ್ದಿಮೆಗಳಲ್ಲಿ ತೊಡಗಿಸಿಕೊಂಡವರೂ ಇದ್ದಾರೆ. ಸುಸಜ್ಜಿತ ಕಟ್ಟಡ
ಕಳೆದ ಜನವರಿಯಲ್ಲಿ ಲೇಡಿಗೋಷನ್ ಆಸ್ಪತ್ರೆಯಲ್ಲಿ ಸಖೀ ಕೇಂದ್ರ ಕಾರ್ಯಾರಂಭ ಮಾಡಿತ್ತು. ಪ್ರಸ್ತುತ ಲೇಡಿಗೋಷನ್ ಆಸ್ಪತ್ರೆಯ ಎರಡನೇ ಮಹಡಿಯಲ್ಲಿ ಸಖೀಯ ಹೊಸ ಕಟ್ಟಡ ನಿರ್ಮಾಣವಾಗುತ್ತಿದ್ದು, ಮುಂದಿನ ಮೂರ್‍ನಾಲ್ಕು ತಿಂಗಳುಗಳಲ್ಲಿ ಪೂರ್ಣಗೊಂಡು, ತಾತ್ಕಾಲಿಕ ಕೇಂದ್ರದಿಂದ ಈ ಕಟ್ಟಡಕ್ಕೆ ಕೇಂದ್ರ ಸ್ಥಳಾಂತರಗೊಳ್ಳಲಿದೆ. ಸುಸಜ್ಜಿತವಾದ, ಎಲ್ಲ ಸೌಕರ್ಯಗಳನ್ನು ಒಳಗೊಂಡ ಕಟ್ಟಡ ಇದಾಗಲಿದೆ.
- ಉಸ್ಮಾನ್, ಉಪ ನಿರ್ದೇಶಕರು-ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ದ.ಕ. ಕಟ್ಟಡ ನಿರ್ಮಾಣ
ಸಖೀ ಕೇಂದ್ರದ ಹೊಸ ಕಟ್ಟಡ ನಿರ್ಮಾಣ ಕಾಮಗಾರಿ ಈಗಾಗಲೇ ಶೇ. 50ರಷ್ಟು ಪೂರ್ಣಗೊಂಡಿದೆ. ಆಸ್ಪತ್ರೆಯ ವೈದ್ಯರು, ದಾದಿಯರು ಸಖೀ ಕೇಂದ್ರಕ್ಕೂ ಸೇವೆ ಸಲ್ಲಿಸುತ್ತಿದ್ದಾರೆ.
- ಡಾ| ಸವಿತಾ, ವೈದ್ಯಕೀಯ ಅಧೀಕ್ಷಕರು, ಸರಕಾರಿ ಲೇಡಿಗೋಷನ್ ಆಸ್ಪತ್ರೆ, ಮಂಗಳೂರು ಧನ್ಯಾ ಬಾಳೆಕಜೆ