ಬಾಗಲಕೋಟೆ: ಬಿರು ಬೇಸಿಗೆಯಿಂದ ತತ್ತರಿಸಿದ ಜಿಲ್ಲೆಗೆ ಮಹಾರಾಷ್ಟ್ರ, ಕೊಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಬಿಡದ ಕಾರಣ, ಜಿಲ್ಲೆಯಲ್ಲಿ ಸುಮಾರು 470 ಕೋಟಿ ಬೆಳೆ ಹಾನಿಯಾಗಿದೆ ಎಂದು ಉತ್ತರ ಕರ್ನಾಟಕ ಸಮಗ್ರ ನೀರಾವರಿ ಹೋರಾಟ ಸಮಿತಿಯ ಸಂಚಾಲಕ, ಉದ್ಯಮಿ ಸಂಗಮೇಶ ನಿರಾಣಿ ತಿಳಿಸಿದ್ದಾರೆ.
ಬರದಿಂದ ಜಿಲ್ಲೆಯಲ್ಲಿ ಬೆಳೆ ಹಾನಿ ಕುರಿತು ನಿರಾಣಿ ಉದ್ಯಮ ಸಮೂಹದ ಕೃಷಿ ಅಧಿಕಾರಿಗಳೊಂದಿಗೆ ಅಧ್ಯಯನ ನಡೆಸಿದ್ದು, ಒಟ್ಟು 470 ಕೋಟಿ ಮೊತ್ತದ ಬೆಳೆ ಹಾನಿಯಾಗಿದೆ. ಕಳೆದ ಹಲವು ವರ್ಷಗಳಿಂದ ಸಂಕಷ್ಟದಲ್ಲಿರುವ ರೈತರು, ಈ ಬಾರಿ ಇಷ್ಟೊಂದು ಪ್ರಮಾಣದ ಬೆಳೆ ಹಾನಿಗೆ ಮಹಾರಾಷ್ಟ್ರವೇ ಕಾರಣ ಎಂದೂ ಆರೋಪಿಸಿದ್ದಾರೆ.
ಯಾರು ಎಷ್ಟೇ ಗೋಗರೆದರೂ ಮಹಾರಾಷ್ಟ್ರ ಸರಕಾರ ಕೃಷ್ಣಾ ನದಿಗೆ ಕೊಯ್ನಾ ಜಲಾಶಯದಿಂದ ನೀರು ಬಿಡಲಿಲ್ಲ. ರಾಜ್ಯದ ಬಿಜೆಪಿ ನಾಯಕರೂ ಮಹಾರಾಷ್ಟ್ರ ಸರಕಾರಕ್ಕೆ ಮನವಿ ಮಾಡಿದರು ಪ್ರಯೋಜನವಾಗಲಿಲ್ಲ. ನೀರಾವರಿ ಸಚಿವ ಡಿ. ಕೆ. ಶಿವಕುಮಾರ ಒಟ್ಟು 7 ಪತ್ರ ಬರೆದರು. ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಕೆಲದಿನಗಳ ಹಿಂದೆ ಬೆಳಗಾವಿಯ ಕೆಎಲ್ಇ ಸಂಸ್ಥೆಗೆ ಆಗಮಿಸಿದ್ದರು. ಈ ಅವಕಾಶ ಬಳಸಿಕೊಂಡು ಸಂಸದ ಪ್ರಭಾಕರ ಕೋರೆ ಅವರು ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರಿಗೆ ಫೋನ್ ಮಾಡಿ ನೀರು ಬಿಡಲು ಸೂಚಿಸಲು ವಿನಂತಿ ಮಾಡಿದರು. ಉಪರಾಷ್ಟ್ರಪತಿ ಬೆಳಗಾವಿಯಿಂದ ಮಹಾರಾಷ್ಟ್ರದ ಮುಖ್ಯಮಂತ್ರಿ ಅವರಿಗೆ ಫೋನ್ ಮಾಡಿ ನೀರು ಬಿಡಲು ಸೂಚಿಸಿದ್ದರು. ಉಪರಾಷ್ಟ್ರಪತಿ ಸೂಚನೆಗೂ ಮಹಾರಾಷ್ಟ್ರ ಸರಕಾರ ಕಿವಿಗೊಡಲಿಲ್ಲ ಎಂದರು.
ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ನೀರು ಬಿಡುವುದಾಗಿ ಹೇಳಲೇ ಇಲ್ಲ. ಪರಿಶೀಲಿಸುವೆ, ಅಧಿಕಾರಿಗಳೊಂದಿಗೆ ಚರ್ಚಿಸುವೆ ಎಂದು ಡಿಪ್ಲೋಮೇಟಿಕ್ ಉತ್ತರ ನೀಡುತ್ತ ದಿನ ದೂಡಿದರು ಎಂದು ತಿಳಿಸಿದ್ದಾರೆ. ಕರ್ನಾಟಕ ಸರಕಾರ ಸಿದ್ದಪಡಿಸಿದ ಈ ಒಪ್ಪಂದ ಪತ್ರ ಮಹಾರಾಷ್ಟ್ರ ಸರಕಾರಕ್ಕೆ ತಲುಪಲಿಲ್ಲ. ರಾಜ್ಯ ಸರಕಾರವೂ ಇಲ್ಲಿ ವಿಳಂಬ ನೀತಿ ಅನುಸರಿಸಿತ್ತು ಎಂದು ಹೇಳಿದ್ದಾರೆ.
ಮೂರು ತಿಂಗಳು ಕಳೆದರೂ ಮಹಾರಾಷ್ಟ್ರ ಸರಕಾರ ನೀರು ಬಿಡುತ್ತಿಲ್ಲ. ಜನ ಜಾನುವಾರು ಅಲ್ಲಿ ಇಲ್ಲಿ ನೀರು ಹುಡುಕಿ ಕುಡಿದು ಬದುಕುವಂತಾಗಿದೆ. ಟ್ಯಾಂಕರ್‌ಗಳ ಮೂಲಕ ಹೆಚ್ಚಿಗೆ ಬೆಲೆ ಕೊಟ್ಟು ನೀರು ಖರೀದಿಸುವ ತೊಂದರೆಯನ್ನು ಜನ ಅನುಭವಿಸುತ್ತಿದ್ದಾರೆ. ಹಣ ಕೊಟ್ಟರೂ ಒಳ್ಳೆಯ ಕುಡಿಯುವ ನೀರು ದೊರೆಯುತ್ತಿಲ್ಲ ಎಂದು ಅವರು ಹೇಳಿದ್ದಾರೆ.
ಅರಿಶಿಣ ಬೆಳೆಯುವುದನ್ನು ಬಹಳಷ್ಟು ರೈತರು ಈ ಬಾರಿ ಕೈ ಬಿಟ್ಟಿದ್ದಾರೆ. ಸಮೀಪದ ಅರಣ್ಯ ಪ್ರದೇಶಗಳಲ್ಲಿಯೂ ನೀರಿನ ಕೊರತೆಯಿಂದ ಮೇವು ಬೆಳೆದಿಲ್ಲ. ಇದರಿಂದ ಜಾನುವಾರುಗಳಿಗೆ ಬಹಳ ತೊಂದರೆಯಾಗಿದೆ ಎಂದು ಅವರು ವಿವರಿಸಿದ್ದಾರೆ.
ಬೆಳೆ ಹಾನಿ ವಿವರ: ನಿರಾಣಿ ಉದ್ಯಮ ಸಮೂಹದ ಕೃಷಿ ವಿಭಾಗದ ಸಿಬ್ಬಂದಿ ಹಾಗೂ ಕೆಲವು ಪರಿಣಿತರ ನೆರವು ಪಡೆದು ಹಾನಿಯನ್ನು ಸಮಗ್ರವಾಗಿ ಅಧ್ಯಯನ ಮಾಡಿ ವರದಿ ಸಿದ್ಧಪಡಿಸಲಾಗಿದೆ. ಅಥಣಿ, ಜಮಖಂಡಿ ಮತ್ತು ಬೀಳಗಿ ಭಾಗದ 103 ಹಳ್ಳಿಗಳ ರೈತರ ಬೆಳೆ ಒಣಗಿದ ಬಗ್ಗೆ ಅಂದಾಜು ಮಾಡಲಾಗಿದೆ ಈ ಭಾಗದಲ್ಲಿ ಶೇ. 22 ಕಬ್ಬು ಹಾನಿಯಾಗಿದೆ. ಒಟ್ಟು 32 ಸಾವಿರ ಎಕರೆ ಪ್ರದೇಶದ ಕಬ್ಬು ಒಣಗಿದೆ. ಈ ಹಾನಿಯಿಂದ ರೈತರು ಹೊರಬರಬೇಕಾದರೆ 3 ವರ್ಷ ಕಾಲಾವಕಾಶ ಬೇಕು. ರೈತರಿಗೆ ಆದ ಹಾನಿ ಯಾರು ತುಂಬಿ ಕೊಡುತ್ತಾರೆ ಎಂದು ಪ್ರಶ್ನಿಸಿದ್ದಾರೆ.