Advertisement

Karnataka poll;47 ವರ್ಷ ಒಂದೇ ಕುಟುಂಬಕ್ಕೆ ಅಧಿಕಾರ; ಗದಗ ಕ್ಷೇತ್ರದಲ್ಲಿ ಪಾಟೀಲರ ಕಾರುಬಾರು

05:32 PM Apr 07, 2023 | Team Udayavani |

ಗದಗ: ವಿಧಾನಸಭೆ ಚುನಾವಣೆಯ ಮತದಾನಕ್ಕೆ ದಿನಗಳು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಗದಗ ಮತಕ್ಷೇತ್ರವು ರಣಕಣವಾಗಿ ಸಿದ್ಧಗೊಂಡಿದೆ. ಕ್ಷೇತ್ರದ ಹಾಲಿ ಶಾಸಕ ಎಚ್‌.ಕೆ. ಪಾಟೀಲ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದು, ಈಗಾಗಲೇ ಕ್ಷೇತ್ರಾದ್ಯಂತ ಸಂಚಾರ ಮಾಡುತ್ತಿದ್ದಾರೆ. ಇನ್ನು ಬಿಜೆಪಿಯಲ್ಲಿ ಅಭ್ಯರ್ಥಿ ವಿಷಯಕ್ಕೆ ಸಂಬಂಧಿಸಿದಂತೆ ಗೊಂದಲ ಮುಂದುವರಿದೆ.

Advertisement

ಕಳೆದ ಸಲ ಬಿಜೆಪಿಯಿಂದ ಸ್ಪರ್ಧಿಸಿ ಕೆಲವೇ ಕೆಲವು ಮತಗಳಿಂದ ಪರಾಭವಗೊಂಡಿದ್ದ ಅನಿಲ ಮೆಣಸಿನಕಾಯಿ ಅವರ ಜೊತೆಗೆ ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಮೋಹನ ಮಾಳಶೆಟ್ಟಿ, ರಾಜು ಕುರಡಗಿ, ಶರಣ ಪಾಟೀಲ ಸೇರಿ ಮತ್ತಿತರರು ಟಿಕೆಟ್‌ಗೆ ಕಸರತ್ತು ನಡೆಸಿದ್ದಾರೆ. ಇನ್ನು ಜೆಡಿಎಸ್‌ನಿಂದ ವೆಂಕನಗೌಡ ಗೋವಿಂದಗೌಡ್ರ, ಎಂ.ಆರ್‌. ಸೋಂಪುರ, ಕವಿತಾ ಬಡಿಗೇರ ಆಕಾಂಕ್ಷಿಗಳಾಗಿದ್ದಾರೆ. ಆಪ್‌ನಿಂದ ಪೀರಸಾಬ್‌ ಶೇಖ್‌ ಅಭ್ಯರ್ಥಿಯಾಗಿದ್ದಾರೆ.

ಕ್ಷೇತ್ರದ ಇತಿಹಾಸ ಮೆಲುಕು ಹಾಕಿದರೆ ಹಲವಾರು ಕುತೂಹಲದ ಅಂಶಗಳು ಕಾಣಸಿಗುತ್ತವೆ. ಮುಖ್ಯವಾಗಿ ಕೆ.ಎಚ್‌. ಪಾಟೀಲರು 1967ರ ತಮ್ಮ ಮೊದಲ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಗೆಲುವು ಸಾಧಿ ಸಿದ್ದು, ನಂತರ 1972ರಲ್ಲಿ ಕಾಂಗ್ರೆಸ್‌ನಿಂದ ಶಾಸಕರಾಗಿ, 1978ರಲ್ಲಿ ಕಾಂಗ್ರೆಸ್‌ ಪಕ್ಷದಿಂದ ಮುನಿಸಿಕೊಂಡು ರೆಡ್ಡಿ ಕಾಂಗ್ರೆಸ್‌ ಪಕ್ಷ ಸ್ಥಾಪಿಸಿದರು. ಕೆ.ಎಚ್‌. ಪಾಟೀಲರನ್ನು ಎರಡು ಬಾರಿ ಸೋಲಿಸಿದ ಸಿ.ಎಸ್‌. ಮುತ್ತಿನಪೆಂಡಿಮಠ ಗೆಲುವು ಸಾಧಿಸಿದರು.
ಕ್ಷೇತ್ರದವರೇ ಅಲ್ಲದ ಶ್ರೀಶೈಲಪ್ಪ ಬಿದರೂರ ಪ್ರಭಾವಿ ಮುಖಂಡ ಎಚ್‌.ಕೆ. ಪಾಟೀಲರನ್ನು ಪರಾಭವಗೊಳಿಸಿದ್ದು, ಹೀಗೆ ಅನೇಕ ಘಟನಾವಳಿಗಳು ಮರೆಯದ ವಿಷಯಗಳಾಗಿವೆ.

ಕಾಂಗ್ರೆಸ್‌ ಭದ್ರಕೋಟೆ: 1957ರಿಂದ 2018ರವರೆಗೆ ಜರುಗಿದ 15 ವಿಧಾನಸಭೆ ಚುನಾವಣೆಗಳ ಪೈಕಿ ಮೂರು ಚುನಾವಣೆಯಲ್ಲಿ ಕಾಂಗ್ರೆಸ್ಸೇತರರು ಜಯಭೇರಿ ಬಾರಿಸಿದ್ದು, ಉಳಿದ 12 ಚುನಾವಣೆಯಲ್ಲಿ ಕಾಂಗ್ರೆಸ್‌ ಪಾರಮ್ಯ ಮೆರೆದಿದೆ. ಮೊದಲೆರಡು ಚುನಾವಣೆಯಲ್ಲಿ ಕಾಂಗ್ರೆಸ್‌ನ ಕೆ.ಪಿ. ಗದಗ ಶಾಸಕರಾಗಿದ್ದರು. ನಂತರ ಹುಲಕೋಟಿಯ ಕೆ.ಎಚ್‌. ಪಾಟೀಲರು ನಾಲ್ಕು ಅವಧಿ (20 ವರ್ಷ) ಶಾಸಕರಾಗಿದ್ದರು. 1992ರಲ್ಲಿ ಕೆ.ಎಚ್‌. ಪಾಟೀಲ ನಿಧನದಿಂದ ತೆರವಾಗಿದ್ದ ಸ್ಥಾನಕ್ಕಾಗಿ ನಡೆದ ಉಪಚುನಾವಣೆಯಲ್ಲಿ ಡಿ.ಆರ್‌. ಪಾಟೀಲ ಸ್ಪರ್ಧಿಸಿ ಜಯ ಗಳಿಸಿದರು. ಆದರೆ ಎರಡು ವರ್ಷಕ್ಕೆ ಶಾಸಕ ಸ್ಥಾನದ ಅವಧಿ ಪೂರ್ಣಗೊಂಡಿತು. ನಂತರ 1994, 1999, 2004ರಲ್ಲಿ ಡಿ.ಆರ್‌. ಪಾಟೀಲ ಗೆಲುವು ಸಾಧಿಸಿದರಲ್ಲದೇ, ಒಟ್ಟು 17 ವರ್ಷ ಗದಗ ಕ್ಷೇತ್ರದ ಶಾಸಕರಾಗಿದ್ದರು.

ಸತತ 20 ವರ್ಷಗಳ ಕಾಲ ವಿಧಾನಪರಿಷತ್‌ ಸದಸ್ಯರಾಗಿದ್ದ ಎಚ್‌.ಕೆ. ಪಾಟೀಲ ಅವರು ಪ್ರಥಮ ಬಾರಿಗೆ 2008ರಲ್ಲಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿ ಸೋಲನುಭವಿಸಿದರು. 2013ರ ಚುನಾವಣೆಯಲ್ಲಿ ಭರ್ಜರಿ ಮತಗಳ ಅಂತರದಿಂದ ಗೆಲುವು ಸಾಧಿಸಿ ವಿಧಾನಸಭೆ ಪ್ರವೇಶಿಸಿದ ಎಚ್‌.ಕೆ. ಪಾಟೀಲರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ನತರ 2018ರ ಚುನಾವಣೆಯಲ್ಲೂ ಗೆಲುವು ಸಾಧಿಸುವ ಮೂಲಕ
ಸತತ ಎರಡನೇ ಬಾರಿ ಗೆಲುವು ಸಾಧಿ ಸಿದರು. 2023ರ ಚುನಾವಣೆಯಲ್ಲೂ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದು, ಹ್ಯಾಟ್ರಿಕ್‌ ಜಯದ ತವಕದಲ್ಲಿದ್ದಾರೆ.

Advertisement

ಅಚ್ಚರಿಯ ಗೆಲುವು: ದೇಶದಲ್ಲಿ ತುರ್ತು ಪರಿಸ್ಥಿತಿ ಬಳಿಕ (1978) ಜರುಗಿದ ಚುನಾವಣೆಯಲ್ಲಿ ಜೆಎನ್‌ಪಿ ಪಾರ್ಟಿಯಿಂದ ಕಣಕ್ಕಿಳಿದಿದ್ದ ಸಿ.ಎಸ್‌. ಮುತ್ತಿನಪೆಂಡಿಮಠ ಅವರು ಕೆ.ಎಚ್‌. ಪಾಟೀಲರ ವಿರುದ್ಧ ಗೆಲುವು ಸಾಧಿಸಿದ್ದು ಅಚ್ಚರಿ ಮೂಡಿಸಿತು. ನಂತರ 1983ರಲ್ಲಿ ಕಾಂಗ್ರೆಸ್‌ನಿಂದ ಸ್ಪ ರ್ಧಿಸಿದ್ದ ಸಿ.ಎಸ್‌. ಮುತ್ತಿನಪೆಂಡಿಮಠ ಅವರು ಮತ್ತೆ ಶಾಸಕರಾಗಿ ಪುನರಾಯ್ಕೆಗೊಂಡರು. ನಂತರ ಶ್ರೀಶೈಲಪ್ಪ ಬಿದರೂರ 2008ರ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಕಾಂಗ್ರೆಸ್‌ ಅಭ್ಯರ್ಥಿ ಎಚ್‌. ಕೆ. ಪಾಟೀಲ ಅವರ ವಿರುದ್ಧ ಗೆಲುವು ಸಾಧಿಸಿ ಶಾಸಕರಾಗಿದ್ದರು.

ಪಕ್ಷಕ್ಕೆ ಆದ್ಯತೆ: ಗದಗ ಮತಕ್ಷೇತ್ರ ಕಾಂಗ್ರೆಸ್‌ ಪಕ್ಷದ ಭದ್ರಕೋಟೆ ಎಂಬುದನ್ನು ಸಾಬೀತು ಮಾಡುತ್ತಲೇ ಬಂದಿದೆ. ಕೆ.ಎಚ್‌. ಪಾಟೀಲರು ಶಾಸಕರು, ಸಚಿವರಾಗಿದ್ದ ಅವ ಧಿಯಲ್ಲಂತೂ ಕಾಂಗ್ರೆಸ್‌ ಜನಪ್ರಿಯತೆ ಉತ್ತುಂಗದಲ್ಲಿತ್ತು. ಅವರ ನೇರ ನಡೆ, ನುಡಿ, ದಾಢಸಿತನ ಮತ್ತು ಕ್ಷೇತ್ರಕ್ಕೆ ನೀಡಿದ ಕೊಡುಗೆಯಿಂದ ಅವರು “ಹುಲಕೋಟಿ ಹುಲಿ’ ಎನಿಸಿಕೊಂಡರು. ಕೆ.ಎಚ್‌. ಪಾಟೀಲರ ನಂತರ ಡಿ.ಆರ್‌. ಪಾಟೀಲ, ಆನಂತರ ಎಚ್‌.ಕೆ. ಪಾಟೀಲ ಅವರು ತಮ್ಮ ಚುನಾವಣೆ
ರಣನೀತಿಗಳು, ತಂತ್ರಗಾರಿಕೆಯಿಂದ ರಾಜಕೀಯ ಅಸ್ತಿತ್ವ ಕಾಯ್ದುಕೊಂಡಿದ್ದಾರೆ. ಹೀಗಾಗಿ ಹುಲಕೋಟಿಯ ಪಾಟೀಲ ಮನೆತನ ಇಲ್ಲಿಯವರೆಗೆ 47 ವರ್ಷಗಳ ಕಾಲ ಇಲ್ಲಿ ಆಡಳಿತ ನಡೆಸಿದೆ.

2018ರ ಫಲಿತಾಂಶ: 2018ರ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಎಚ್‌.ಕೆ. ಪಾಟೀಲ 77,699 ಮತಗಳನ್ನು ಪಡೆದು 1,868 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದರು. ಬಿಜೆಪಿ ಅಭ್ಯರ್ಥಿ ಅನಿಲ ಮೆಣಸಿನಕಾಯಿ 75,831 ಮತಗಳನ್ನು ಪಡೆದು 2ನೇ ಸ್ಥಾನ ಗಳಿಸಿದರು.

ಪ್ರಸ್ತುತ ಮತದಾರರ ಸಂಖ್ಯೆ
ಗದಗ ಮತಕ್ಷೇತ್ರದ ಮತದಾರರ ಸಂಖ್ಯೆ ಕಳೆದ 60 ವರ್ಷಗಳಲ್ಲಿ ಹತ್ತು ಪಟ್ಟು ಹೆಚ್ಚಿದೆ. 1952ರಲ್ಲಿ ಜರುಗಿದ ಪ್ರಥಮ ವಿಧಾನಸಭೆ ಚುನಾವಣೆಯಲ್ಲಿ 21,877 ಮತದಾರ ಸಂಖ್ಯೆ ಇತ್ತು. 2023ರ ಚುನಾವಣೆಯಲ್ಲಿ 1,08,640 ಪುರುಷರು, 1,10,205 ಮಹಿಳೆಯರು ಹಾಗೂ 17 ಇತರೆ ಸೇರಿ ಒಟ್ಟು 2,18,862 ಮತದಾರರಿದ್ದಾರೆ.

*ಅರುಣಕುಮಾರ ಹಿರೇಮಠ

Advertisement

Udayavani is now on Telegram. Click here to join our channel and stay updated with the latest news.

Next