ಚಿಕ್ಕಬಳ್ಳಾಪುರ: ಜಿಲ್ಲೆಯ ಪಾಲಿಗೆ ಇದುವರೆಗೂ ಸಮಾಧಾನ ತಂದಿದ್ದ ಕೋವಿಡ್ 19 ಇದೀಗ ಮಹಾರಾಷ್ಟ್ರ ವಲಸೆ ಕಾರ್ಮಿಕರ ಆಗಮನದ ಬಳಿಕ ತನ್ನ ಆರ್ಭಟ ಮುಂದುವರಿಸಿದ್ದು, ಜಿಲ್ಲೆಯಲ್ಲಿ ಒಂದೇ ದಿನ ಸೋಂಕಿತರ ಸಂಖ್ಯೆ ಎರಡಂಕಿ ದಾಟಿ ಬರೋಬ್ಬರಿ 47 ಮಂದಿಯಲ್ಲಿ ಮಹಾಮಾರಿ ಸೋಂಕು ಕಾಣಿಸಿಕೊಳ್ಳುವ ಮೂಲಕ ಜಿಲ್ಲೆಯ ಪಾಲಿಗೆ ಶುಕ್ರವಾರ ಕರಾಳ ದಿನವಾಗಿದೆ.
ಸೋಂಕಿತರು 73ಕ್ಕೆ ಏರಿಕೆ: ಕಳೆದ ಗುರುವಾರದವರೆಗೂ ಜಿಲ್ಲೆಯಲ್ಲಿ ಕೋವಿಡ್ 19 ಸೋಂಕಿತರ ಸಂಖ್ಯೆ ಕೇವಲ 26 ಮಾತ್ರ ಇತ್ತು. ಆದರೆ ಶುಕ್ರವಾರ ಮಹಾರಾಷ್ಟ್ರದಿಂದ ಕರೆ ತಂದಿರುವ ವಲಸೆ ಕಾರ್ಮಿಕರಲ್ಲಿ 47 ಮಂದಿಗೆ ಸೋಂಕು ಕಾಣಿಸಿಕೊಳ್ಳುವ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 73ಕ್ಕೆ ಏರಿಕೆ ಕಂಡಿದ್ದು, ಒಂದೆರೆಡು ದಿನಗಳಲ್ಲಿ ಸೋಂಕಿತರ ಸಂಖ್ಯೆ ಶತಕ ಬಾರಿಸುವ ಮುನ್ಸೂಚನೆ ದಟ್ಟವಾಗಿದೆ.
ಇದುವರೆಗೂ ಜಿಲ್ಲೆಯಲ್ಲಿ ಗೌರಿಬಿದನೂರು 12, ಚಿಕ್ಕಬಳ್ಳಾಪುರ 9 ಹಾಗೂ ಚಿಂತಾಮಣಿ 5 ಪ್ರಕರಣಗಳು ಸೇರಿ ಒಟ್ಟು 26 ಪ್ರಕರಣಗಳು ಇದ್ದು, ಈ ಪೈಕಿ ಚಿಕ್ಕಬಳ್ಳಾಪುರ ಹಾಗೂ ಗೌರಿ ಬಿದ ನೂರಲ್ಲಿ ತಲಾ ಒಬ್ಬರು ಬಲಿಯಾಗಿದ್ದರು. ಉಳಿದ 24 ಪ್ರಕರಣಗಳ ಪೈಕಿ 18 ಮಂದಿ ಸೋಂಕಿನಿಂದ ಸಂಪೂರ್ಣ ಚೇತರಿಕೆ ಕಂಡು ಕೋವಿಡ್-19 ಆಸ್ಪತ್ರೆಯಿಂದ ಡಿಸಾcರ್ಜ್ ಆಗಿದ್ದರು.
ಆದರೆ ಕಳೆದ ಎರಡು ದಿನಗಳ ಹಿಂದೆ ಮಹಾರಾಷ್ಟ್ರಕ್ಕೆ ತೆರಳಿದ್ದ ಜಿಲ್ಲೆಯ 247 ಮಂದಿ ವಲಸೆ ಕಾರ್ಮಿಕರನ್ನು ಜಿಲ್ಲೆಗೆ ಕರೆ ತಂದು ಕ್ವಾರಂಟೈನ್ ಮಾಡಲಾಗಿದ್ದು, ಅವರ ಪೈಕಿ 47 ಮಂದಿಯಲ್ಲಿ ಪಾಸಿಟೀವ್ ಬಂದಿರುವುದು ಇಡೀ ಜಿಲ್ಲೆಯ ಜನರಲ್ಲಿ ಆತಂಕ ಮನೆ ಮಾಡಿದೆ.
ಗೌರಿಬಿದನೂರಿಗೆ ಮತ್ತೆ ಕಂಟಕ: ಹಲವು ದಿನಗಳಿಂದ ಯಾವುದೇ ಪಾಸಿಟೀವ್ ಪ್ರಕರಣಗಳು ಕಂಡು ಬರದೇ ನಿರಾಳವಾಗಿದ್ದ ಜಿಲ್ಲೆಯ ಜನರಲ್ಲಿ ಈಗ ಮಹಾರಾಷ್ಟ್ರದಿಂದ ಆಗಮಿಸಿರುವ 47 ವಲಸೆ ಕಾರ್ಮಿಕರಲ್ಲಿ ಸೋಂಕು ದೃಢಪಟ್ಟಿರುವುದು ಜಿಲ್ಲೆಯನ್ನು ಇನ್ನಷ್ಟು ಆತಂಕಕ್ಕೆ ಕಾರಣವಾಗಿದ್ದು, ಮುಂಬೈ ನಂಜು ಎಲ್ಲಿಗೆ ಮುಟ್ಟುತ್ತದೆಯೆಂಬ ಆತಂಕ ಸಾರ್ವಜನಿಕ ವಲಯದಲ್ಲಿ ಮನೆ ಮಾಡಿದೆ. ಸೋಂಕಿತರೆಲ್ಲಾ ಜಿಲ್ಲೆಯ ಗೌರಿಬಿದನೂರು ತಾಲೂಕಿನ ನಿವಾಸಿಗಳೆಂದು ತಿಳಿದು ಬಂದಿದೆ.
ಈ ಮೊದಲು ಗೌರಿಬಿದನೂರು ತಾಲೂಕಿ ನಲ್ಲಿ ಒಟ್ಟು 12 ಮಂದಿಗೆ ಸೋಂಕು ಕಾಣಿಸಿಕೊಂಡಿದ್ದು ಎಲ್ಲರೂ ಗುಣಮುಖ ರಾಗಿದ್ದರು. ಇದೀಗ ಮಹಾರಾಷ್ಟ್ರ ವಲಸಿಗರಿಂದ ಮತ್ತೆ ತಾಲೂಕಿನಲ್ಲಿ ಕೋವಿಡ್ 19 ಛಾಯೆ ತಲೆ ಎತ್ತಿ ಜನರಲ್ಲಿ ತಲ್ಲಣ ಮೂಡಿಸಿದೆ.
ಜಿಲ್ಲೆಗೆ ಮಹಾರಾಷ್ಟ್ರದಿಂದ ಆಗಮಿಸಿರುವ ವಲಸೆ ಕಾರ್ಮಿಕರ ಪೈಕಿ 47 ಮಂದಿಗೆ ಒಂದೇ ದಿನ ಕೋವಿಡ್ 19 ಪಾಸಿಟಿವ್ ಬಂದಿದ್ದು, ಸೋಂಕಿತರ ಸಂಖ್ಯೆ 73ಕ್ಕೆ ಏರಿಕೆ ಕಂಡಿದೆ. ಹೊರ ರಾಜ್ಯಗಳಿಂದ ಬಂದವರಲ್ಲಿ ಮಾತ್ರ ಸೋಂಕು ಪತ್ತೆಯಾಗಿದೆ.
-ಆರ್.ಲತಾ, ಜಿಲ್ಲಾಧಿಕಾರಿ