Advertisement

ಇಂಜಿನಿಯರಿಂಗ್‌ ಕೋರ್ಸ್‌ಗೆ 46 ಸಾವಿರ ಸೀಟು

06:00 AM Jul 11, 2018 | |

ಬೆಂಗಳೂರು: ವೃತ್ತಿಪರ ಕೋರ್ಸ್‌ಗಳ ಸೀಟ್‌ ಮ್ಯಾಟ್ರಿಕ್ಸ್‌ ಈಗಾಗಲೇ ಪ್ರಕಟಿಸಿದ್ದರೂ ಇಂಜಿನಿಯರಿಂಗ್‌ ಮತ್ತು ಆರ್ಕಿಟೆಕ್ಚರ್‌ ಕೋರ್ಸ್‌ಗಳ ಸೀಟುಗಳ ವಿವರವನ್ನು ಪ್ರಕಟಿಸದಿದ್ದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಇದೀಗ ಸರ್ಕಾರಿ ಕೋಟಾ, ಹೈದರಾಬಾದ್‌ ಕರ್ನಾಟಕ ಕೋಟಾ ಹಾಗೂ ವಿಶೇಷ ಕೋಟಾದ ಸೀಟುಗಳ ಕಾಲೇಜುವಾರು ಪಟ್ಟಿಯನ್ನು ಪ್ರಕಟಿಸಿದೆ.

Advertisement

ಪ್ರಾಧಿಕಾರದ ವೆಬ್‌ಸೈಟ್‌ //kea.kar.nic.in ನಲ್ಲಿ ಸೀಟ್‌ಮ್ಯಾಟ್ರಿಕ್ಸ್‌ ಪ್ರಕಟಿಸಲಾಗಿದ್ದು,ಅನುದಾನಿತ ಹಾಗೂ ಅನುದಾನ ರಹಿತ ವೃತ್ತಿಪರ ಕಾಲೇಜುಗಳ ಸೀಟುಗಳು ಇದರಲ್ಲಿ ಸೇರಿಕೊಂಡಿವೆ. ಪ್ರಸಕ್ತ ಸಾಲಿನ ಇಂಜಿನಿಯರಿಂಗ್‌ ಕೋರ್ಸ್‌ಗೆ ಸರ್ಕಾರಿ ಕೋಟಾದಡಿ 46,768 ಸೀಟು, ಹೈದರಾಬಾದ್‌ ಕರ್ನಾಟಕ ಕೋಟಾದಡಿ 6,293 ಸೀಟು ಹಾಗೂ ವಿಶೇಷ ಕೋಟಾದಡಿ 2,155 ಸೀಟು ಸೇರಿ ಒಟ್ಟು 55,216 ಸೀಟು ಲಭ್ಯವಾಗಿದೆ.
ಅದೇರೀತಿ ಆರ್ಕಿಟೆಕ್ಚರ್‌ ಕೋರ್ಸ್‌ಗೆ ಸರ್ಕಾರಿ ಕೋಟಾದಡಿ 745, ಹೈ.ಕ. ಕೋಟಾದಡಿ 97 ಹಾಗೂ ವಿಶೇಷ ವರ್ಗ ಕೋಟಾದಡಿ 42 ಸೇರಿ 884 ಸೀಟುಗಳು ವಿದ್ಯಾರ್ಥಿಗಳಿಗೆ ದೊರೆಯಲಿದೆ.

ಕೃಷಿ ವಿಜ್ಞಾನ ಮತ್ತು ಪಶುವೈದ್ಯಕೀಯ ವಿಜ್ಞಾನ ಕೋರ್ಸ್‌ಗಳಿಗೆ ಸರ್ಕಾರಿ ಕೋಟಾದಡಿ 1,443, ಕೃಷಿ ಕೋಟಾದಡಿ 1,021 ಹಾಗೂ ವಿಶೇಷ
ಕೋಟಾದಡಿ 383 ಸೀಟುಗಳ ಪಟ್ಟಿಯನ್ನು ಪ್ರಾಧಿಕಾರ ಈಗಾಗಲೇ ಪ್ರಕಟಿಸಿತ್ತು. 2017ರಲ್ಲಿ ಇಂಜಿನಿಯರಿಂಗ್‌ ಕೋರ್ಸ್‌ಗೆ ಸರ್ಕಾರಿ ಕೋಟಾದಡಿ 47,605, ಹೈ.ಕ. ಕೋಟಾದಡಿ 6300 ಹಾಗೂ ವಿಶೇಷ ಕೋಟಾದಡಿ 1,978 ಸೀಟು ಸೇರಿ 55,883 ಸೀಟು ಲಭ್ಯವಾಗಿತ್ತು. ಈ ವರ್ಷ
ಒಟ್ಟು ಸೀಟುಗಳಲ್ಲಿ 667 ಸೀಟು ಕಡಿಮೆಯಾಗಿದೆ. ಆರ್ಕಿಟೆಕ್ಚರ್‌ ಕೋರ್ಸ್‌ಗಳಲ್ಲಿ 1,004 ಸೀಟು ಕಳೆದ ಬಾರಿ ವಿದ್ಯಾರ್ಥಿಗಳಿಗೆ ಲಭ್ಯವಾಗಿದ್ದರೆ, ಈ ಬಾರಿ 120 ಸೀಟುಗಳು ಕಡಿಮೆಯಾಗಿವೆ.  ವೈದ್ಯಕೀಯ ಮತ್ತು ದಂತವೈದ್ಯಕೀಯ ಕೋರ್ಸ್‌ ಗೆ ಪ್ರಸಕ್ತ ಸಾಲಿನಲ್ಲಿ ವಿವಿಧ ಕೋಟಾದಡಿ ಲಭ್ಯವಿರುವ
ಸೀಟುಗಳ ವಿವರ ಈಗಾಗಲೇ ಪ್ರಕಟಿಸಿ, ವಿದ್ಯಾರ್ಥಿಗಳು ಆಪ್ಷನ್‌ ಎಂಟ್ರಿ ಕೂಡ ಮಾಡುತ್ತಿದ್ದಾರೆ. ಆದರೆ, ಇಂಜಿನಿಯರಿಂಗ್‌ ಕೋಸ್‌ìಗೆ ಇನ್ನೂ ಆಪ್ಷನ್‌ ಎಂಟ್ರಿಗೆ ಅವಕಾಶ ನೀಡಿಲ್ಲ. ಬುಧವಾರ ಸಂಜೆಯೊಳಗೆ ಇಂಜಿನಿಯರಿಂಗ್‌, ಆರ್ಕಿಟೆಕ್ಚರ್‌ ಸೇರಿ ವಿವಿಧ ವೃತ್ತಿಪರ ಕೋರ್ಸ್‌ಗಳ ಆಪ್ಷನ್‌ ಎಂಟ್ರಿ ಆರಂಭವಾಗಲಿದೆ ಎಂದು ಪ್ರಾಧಿಕಾರದ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. 

ಬಿ-ಫಾರ್ಮಾ ಸೀಟು ಬಂದಿಲ್ಲ: ಬಿ-ಫಾರ್ಮಾ ಮತ್ತು ಡಿ-ಫಾರ್ಮಾ ಕೋರ್ಸ್‌ಗಳ ಪ್ರಸಕ್ತ ಸಾಲಿನ ಸೀಟ್‌ ಮ್ಯಾಟ್ರಿಕ್ಸ್‌ ಇನ್ನೂ ಹೊರಬಿಟ್ಟಿಲ್ಲ.
ಸರ್ಕಾರದಿಂದ ಇಷ್ಟರೊಳಗೆ ಸೀಟ್‌ ಮ್ಯಾಟ್ರಿಕ್ಸ್‌ ಬರಬೇಕಿತ್ತು. ಜುಲೈ 31ರೊಳಗೆ ಎಲ್ಲ ಪ್ರವೇಶ ಪ್ರಕ್ರಿಯೆ ಪೂರ್ಣಗೊಳಿಸಬೇಕಿರುವುದರಿಂದ
ಪ್ರಾಧಿಕಾರದ ಅಧಿಕಾರಿಗಳೇ ಸೀಟ್‌ ಮ್ಯಾಟ್ರಿಕ್ಸ್‌ಗಾಗಿ ಸರ್ಕಾರದ ಮೇಲೆ ಒತ್ತಡ ತರುತ್ತಿದ್ದಾರೆ. 

ಇಂಜಿನಿಯರಿಂಗ್‌ ಶುಲ್ಕ ಶೇಕಡಾ 8 ಹೆಚ್ಚಳ ಖಾಸಗಿ ವೃತ್ತಿಪರ ಕಾಲೇಜುಗಳ ಆಡಳಿತ ಮಂಡಳಿ ಹಾಗೂ ಸರ್ಕಾರದ ನಡುವಿನ ಒಪ್ಪಂದಂತೆ ಪ್ರಸಕ್ತ ಸಾಲಿನಲ್ಲಿ ಶೇ. 10ರಷ್ಟು ಹೆಚ್ಚಳಕ್ಕೆ ಸರ್ಕಾರ ಒಪ್ಪಿಗೆ ಸೂಚಿಸಿತ್ತು. ಇದಕ್ಕೆ ಆಡಳಿತ ಮಂಡಳಿಯವರು ಕೂಡ ಸಂತಸ ಪಟ್ಟಿದ್ದರು. ಆದರೆ, ಈಗ ಸರ್ಕಾರ ತನ್ನ ನಿಲುವಿನಲ್ಲಿ ಬದಲಾವಣೆ ಮಾಡಿಕೊಂಡಿದೆ. ವೃತ್ತಿಪರ ಕಾಲೇಜುಗಳ ಶುಲ್ಕ ನಿಯಂತ್ರಣ ಸಮಿತಿ ವರದಿಯಂತೆ ಶೇ.8ರಷ್ಟು ಮಾತ್ರ ಹೆಚ್ಚಳ ಮಾಡಲು ಸಾಧ್ಯ ಎಂದು ಹೇಳಿದೆ.ಸರ್ಕಾರ ಶೇ.10ರಷ್ಟು ಶುಲ್ಕ ಹೆಚ್ಚಳ ಮಾಡಿದರೆ ನ್ಯಾಯಾಂಗ ನಿಂದನೆ ಆಗಬಹುದು ಎಂಬ ಉದ್ದೇಶದಿಂದ ತನ್ನ ನಿರ್ಧಾರದಲ್ಲಿ ಸ್ಪಲ್ಪ ಬದಲಾವಣೆ ಮಾಡಿಕೊಂಡಿದ್ದು, ಶೇ.8ರಷ್ಟು ಮಾತ್ರ ಶುಲ್ಕ ಹೆಚ್ಚಳ ಮಾಡುವಂತೆ ಖಾಸಗಿ ಆಡಳಿತ ಮಂಡಳಿಗಳಿಗೆ ನಿರ್ದೇಶಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next