ಕೋಲಾರ: ಕೆ.ಸಿ.ವ್ಯಾಲಿ ನೀರಿನಿಂದ ಇನ್ನೂ 250 ಕೆರೆಗಳನ್ನು ತುಂಬಿಸಲು ಸಿಎಂ 450 ಕೋಟಿ ರೂ. ಹೆಚ್ಚುವರಿ ಅನುದಾನವನ್ನು ಮಂಜೂರು ಮಾಡಿದ್ದಾರೆ ಎಂದು ಸಣ್ಣ ನೀರಾವರಿ ಸಚಿವ ಪುಟ್ಟರಾಜುತಿಳಿಸಿದರು.
ಜಿಲ್ಲೆಗೆ ಭೇಟಿ ನೀಡಿ ಕೆ.ಸಿ.ವ್ಯಾಲಿ ನೀರು ಹರಿಯುವ ಕೆರೆಗಳ ಸ್ಥಳ ಪರಿಶೀಲನೆ ನಡೆಸಿ ನಂತರ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಟೊಮೆಟೋ, ಮಾವು ಹಾಗೂ ತರಕಾರಿ ಬೆಳೆದು ದೇಶ ವಿದೇಶಗಳಿಗೆ ರಫ್ತು ಮಾಡುತ್ತಿದ್ದಾರೆ. ಜಿಲ್ಲೆಯ ಅಂತರ್ಜಲ ಮಟ್ಟ ಕುಸಿದಿದ್ದು, ಅಭಿವೃದ್ಧಿ ಪಡಿಸಲು ಕೆ.ಸಿ. ವ್ಯಾಲಿ ನೀರನ್ನು ಜಿಲ್ಲೆಯ ಕೆರೆಗಳಿಗೆ ತುಂಬಿಸಲಾಗುತ್ತಿದೆ ಎಂದರು.
ಕೆ.ಸಿ. ವ್ಯಾಲಿ ನೀರಿನ ಹರಿವಿಗೆ ಸುಪ್ರಿಂಕೋರ್ಟ್ ನೀಡಿರುವ ಎಲ್ಲಾ ನಿರ್ದೇಶನಗಳನ್ನು ಪಾಲಿಸಲಾಗುತ್ತಿದೆ. ಕೆ.ಸಿ. ವ್ಯಾಲಿ ಯೋಜನೆ, ಎತ್ತಿನಹೊಳೆ ಯೋಜನೆ ಹಾಗೂ ಯರಗೋಳ್ ಡ್ಯಾಂ ಕಾಮಗಾರಿ ಇವು ಜಿಲ್ಲೆಯ ರೈತರಿಗೆ ವರದಾನವಾದ ಯೋಜ ನೆಗಳಾಗಿವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಣ್ಣ ನೀರಾವರಿ ಇಲಾಖೆಯ ಕಾರ್ಯದರ್ಶಿ ಸಿ.ಮೃತ್ಯುಂಜಯ ಸ್ವಾಮಿ, ಕಾರ್ಯಪಾಲಕ ಅಭಿಯಂತರ ತಿಮ್ಮೆಗೌಡ, ಸಹಾಯಕ ಕಾರ್ಯಪಾಲಕ ಅಭಿಯಂತರ ಕೃಷ್ಣ ಉಪಸ್ಥಿತರಿದ್ದರು.
ರಾಜಕಾಲುವೆ ವೀಕ್ಷಣೆ: ಕೆ.ಸಿ. ವ್ಯಾಲಿ ಯೋಜನೆಯಡಿ ನೀರು 19 ಕೆರೆಗಳು, 21 ಚೆಕ್ ಡ್ಯಾಂಗಳು ತುಂಬಿ ಮುಂದಕ್ಕೆ ಸಾಗುತ್ತಿದ್ದು, ಇದು ಜಿಲ್ಲೆಯ ಅಂತರ್ಜಲ ವೃದ್ಧಿಗೆ ಸಹಕಾರಿಯಾಲಿದೆ ಎಂದು ರಾಜ್ಯ ಸಣ್ಣನೀರಾವರಿ ಸಚಿವ ಪುಟ್ಟರಾಜು ತಿಳಿಸಿದರು. ತಾಲೂಕಿನ ವೀರಾಪುರದ ಸಮೀಪ ಸೋಮಾಂಬು ಅಗ್ರಹಾರ ಕೆರೆಗೆ ಹರಿಯುತ್ತಿರುವ ಕೆ.ಸಿ. ವ್ಯಾಲಿ ನೀರನ್ನು ವೀಕ್ಷಿಸಿದ ನಂತರ ಅವರು, ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ಜೆಡಿಎಸ್ ಮುಖಂಡರಾದ ಹರೀಶ್ ಗೌಡ, ನಾಗೇಶ್, ಸಣ್ಣನೀರಾವರಿ ಇಲಾಖೆ ಅಧಿಕಾರಿಗಳು ಹಾಜರಿದ್ದರು.