ತುಮಕೂರು: ಕಳೆದ ಒಂದೂವರೆ ವರ್ಷದಲ್ಲಿ ಕ್ಷೇತ್ರದ ಅಭಿವೃದ್ಧಿಗೆ 450 ಕೋಟಿ ರೂ.ಗೂ ಹೆಚ್ಚು ಅನುದಾನ ತರಲಾಗಿದೆ ಎಂದು ಗ್ರಾಮಾಂತರ ಶಾಸಕ ಡಿ. ಸಿ. ಗೌರಿಶಂಕರ್ ತಿಳಿಸಿದರು.
ಗಳಿಗೇನಹಳ್ಳಿ ಮತ್ತು ಸಿರಿವರದಲ್ಲಿ ಗ್ರಾಮಾಂತರ ಕ್ಷೇತ್ರಕ್ಕೆ ಲೋಕೋಪಯೋಗಿ ಇಲಾಖೆಯಿಂದ ಮಂಜೂರಾಗಿರುವ 91 ಕೋಟಿ ರೂ. ವೆಚ್ಚದ ರಸ್ತೆ ಕಾಮಗಾರಿಗಳಿಗೆ ಶನಿವಾರ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಹೇಮಾವತಿ ಮತ್ತು ಎತ್ತಿನಹೊಳೆ ಯೋಜನೆ ಹೊರತುಪಡಿಸಿ ಲೋಕೋಪಯೋಗಿ ಇಲಾಖೆ ಯಿಂದಲೇ ಹೆಚ್ಚಿನ ಅನುದಾನ ಎಚ್.ಡಿ. ರೇವಣ್ಣ ಮಂತ್ರಿಯಾಗಿದ್ದಾಗ ಕ್ಷೇತ್ರದ ಸಮಸ್ಯೆ ಹೇಳಿದಾಗ ಒಂದೇ ಕಂತಿನಲ್ಲಿ 91 ಕೋಟಿ ರೂ. ನೀಡಿದ್ದಾರೆ. ಸರ್ಕಾರ ಬದಲಾದರೂ ಚಿಂತೆಯಿಲ್ಲ. ನಮ್ಮ ಪಾಲಿನ ಅನುದಾನ ಹೋರಾಡಿ ಬಿಡುಗಡೆ ಮಾಡಿಸುತ್ತೇನೆ ಎಂದು ಸ್ಪಷ್ಟಪಡಿಸಿದರು.
ಸುಸಜ್ಜಿತ ರಸ್ತೆ ನಿರ್ಮಿಸುವ ಗುರಿ: ಸಣ್ಣ ಸಣ್ಣ ಹಳ್ಳಿಗಳಿಗೂ ಮುಖ್ಯರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿಪಡಿಸಿದರೆ ಕ್ಷೇತ್ರದ ಜನರಿಗೆ ಹೆಚ್ಚಿನ ಅನುಕೂಲವಾಗುತ್ತದೆ. ಇದನ್ನರಿತು ಕ್ಷೇತ್ರದ ಎಲ್ಲಾ ಗ್ರಾಮ ಗಳಿಗೂ ಸುಸಜ್ಜಿತ ರಸ್ತೆ ನಿರ್ಮಿಸುವ ಗುರಿ ಹೊಂದಿದ್ದೇನೆ. ಭೂಮಿ ಪೂಜೆ ನಡೆಸಿರುವ ಒಂದು ರಸ್ತೆಯಿಂದ ಐದಾರು ಹಳ್ಳಿಗಳ ಸಾವಿರಾರು ಜನರು ರಸ್ತೆ ಸಂಪರ್ಕ ಪಡೆಯುವಂತಾಗುತ್ತದೆ ಎಂದು ಹೇಳಿದರು.
ಮನೆ ಮಗನಾಗಿರುತ್ತೇನೆ: ಕ್ಷೇತ್ರದ ಎಲ್ಲಾ ತಾಯಂದಿ ರಿಗೆ ಗೌರಿ ಹಬ್ಬದ ಬಾಗಿನ ಅರ್ಪಿಸುವ ಮೂಲಕ ಮನೆ ಮಗನಾಗಿ ನಡೆದುಕೊಳ್ಳುತ್ತೇನೆ ಎಂದು ಹೇಳಿದ್ದೆ. ಅದರಂತೆ ಕಾರ್ಯಕ್ರಮಕ್ಕೆ ಆಗಮಿಸುವ ಎಲ್ಲಾ ಮಹಿಳೆಯರಿಗೆ ಸೀರೆ ವಿತರಿಸುವ ಮೂಲಕ ನುಡಿದಂತೆ ನಡೆದಿದ್ದೇನೆ. ಮುಂದಿನ ದಿನಗಳಲ್ಲಿ ಎಸ್‌ಸಿಪಿ ಮತ್ತು ಟಿಎಸ್‌ಪಿ ಅನುದಾನದಡಿ ಕ್ಷೇತ್ರದ ಎಲ್ಲಾ ಗ್ರಾಮಗಳಿಗೂ ಸಿ.ಸಿ. ರಸ್ತೆ ನಿರ್ಮಿಸುವ ಮೂಲಕ ಗ್ರಾಮಗಳಲ್ಲಿಯೂ ಉತ್ತಮ ರಸ್ತೆ ನಿರ್ಮಾಣಕ್ಕೆ ಮುಂದಾಗುವುದಾಗಿ ಶಾಸಕ ಗೌರಿಶಂಕರ್ ಭರವಸೆ ನೀಡಿದರು.
ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಇನ್ನು ಮುಂದೆ ಸರ್ಕಾರಿ ಸವಲತ್ತುಗಳಿಗೆ ಜನರು ಸರ್ಕಾರಿ ಕಚೇರಿ, ಅಧಿಕಾರಿಗಳ ಮನೆ ಬಾಗಿಲಿಗೆ ಅಲೆಯುವ ಅವಶ್ಯಕತೆ ಇಲ್ಲ ಎಂದು ಹೇಳಿದರು.
ಸಂಧ್ಯಾ ಸುರಕ್ಷೆ ಹಾಗೂ ಇನ್ನಿತರ ಸರಕಾರದ ಸವಲತ್ತುಗಳ ಜನರ ಮನೆ ಬಾಗಿಲಿಗೆ ತಲುಪಿಸುವ ಕೆಲಸವನ್ನು ಜೆಡಿಎಸ್ ಕಾರ್ಯಕರ್ತರು ಮಾಡ ಲಿದ್ದಾರೆ. ಪ್ರತಿಕಾರ್ಯಕರ್ತರು ಸ್ವಯಂ ಸೇವಕರಂತೆ ಪ್ರತಿ ಗ್ರಾಮ, ಮನೆ ಮನೆಗೆ ಭೇಟಿ ನೀಡಿ ಸವಲತ್ತು ಕೊಡಿಸಲಿದ್ದಾರೆ ಎಂದು ನುಡಿದರು.
ಜೆಡಿಎಸ್ ಗ್ರಾಮಾಂತರ ಅಧ್ಯಕ್ಷ ಹಾಲೇನೂರು ಅನಂತಕುಮಾರ್, ಚಿಕ್ಕಸಾರಂಗಿ ರವಿ, ಗಳಿಗೇನಹಳ್ಳಿ ಲೋಕೇಶ್, ಹೊಸೂರು ಲಿಂಗರಾಜು, ಸತ್ಯವತಿ ಸುರೇಶ್, ಮಹಿಳಾ ಘಟಕದ ಅಧ್ಯಕ್ಷೆ ಗೌರಕ್ಕ, ಬೊಮ್ಮನಹಳ್ಳಿ ಬೋರೇಗೌಡ, ಕೋಡಿ ಮುದ್ದನಹಳ್ಳಿ ಪ್ರಕಾಶ್, ರಂಗಸ್ವಾಮಿ, ತಾಪಂ ಸದಸ್ಯ ನರುಗನಹಳ್ಳಿ ವಿಜಯಕುಮಾರ್, ರಾಜಾಪುರದ ತಿಮ್ಮಪ್ಪಣ್ಣ, ಸಿರಿವರ ಪ್ರಕಾಶ್, ಲಾಟರಿ ನಾರಾಯಣಪ್ಪ, ಕೆ.ಬಿ. ರಾಜಣ್ಣ, ಕಂಬಾಳಪುರ ಪಾಂಡು, ಬೆಳಗುಂಬ ವೆಂಕಟೇಶ್, ನಾಗವಲ್ಲಿ ಶೇಠು, ಚಿಕ್ಕಹೊನ್ನಹಳ್ಳಿ ರಾಜೇಶ್, ಹಾಲೆನೂರು ಜಮುನ ಮತ್ತಿತರರಿದ್ದರು.