ಶಿರಸಿ: ಒಂಬತ್ತು ವಿಭಾಗಗಳನ್ನು ಒಳಗೊಂಡವಾಯವ್ಯ ರಸ್ತೆ ಸಾರಿಗೆ ಸಂಸ್ಥೆ ತಲಾ 45 ಹೊಸ ಬಸ್‌ಗಳನ್ನು ಮಾರ್ಚ್ ಒಳಗೆ ಒದಗಿಸಲಾಗುತ್ತದೆ ಎಂದು ಸಾರಿಗೆ ಸಂಸ್ಥೆ ಅಧ್ಯಕ್ಷ ವಿ.ಎಸ್. ಪಾಟೀಲ ತಿಳಿಸಿದರು. ಅವರು ನಗರದ ಹಳೆ ಬಸ್ ನಿಲ್ದಾಣದಲ್ಲಿ ಶನಿವಾರ ಶಿರಸಿಯಿಂದ ಹುಬ್ಬಳ್ಳಿಗೆ ಸಂಚರಿಸಲು ಎರಡು ಹೊಸ ಬಸ್ಸನ್ನು ಸೇವೆಗೆ ಒದಗಿಸಿ ಮಾತನಾಡಿದರು.
ಎಂಟು ಲಕ್ಷ ಕಿಮೀ ಓಡಿದ ಬಸ್‌ಗಳು ಸಾಕಷ್ಟಿವೆ. ಅವುಗಳೆಲ್ಲವನ್ನೂ ಏಕಕಾಲಕ್ಕೆ ಬದಲಿಸಲು ಆಗುತ್ತಿಲ್ಲ. ಆದರೂ ಹೊಸ ಬಸ್ ಗಳು ಹಾಗೂ ಹೊಸ ಹೊಸ ಮಾರ್ಗಗಳಲ್ಲಿ ಓಡಿಸುವುದು ನಮ್ಮ ಆಶಯವಾಗಿದೆ. ಹತ್ತು ಲಕ್ಷ ಕಿಮೀ ಓಡಿದ ಬಸ್‌ಗಳನ್ನು ಬದಲಿಸಲಾಗುತ್ತದೆ. 36 ಶಾಸಕರು ವಾಯವ್ಯ ಸಂಸ್ಥೆ ವ್ಯಾಪ್ತಿಯಲ್ಲಿದ್ದು, ಅವರೊಂದಿಗೆ ಸಹ ಬರುವ ಬಜೆಟ್‌ನಲ್ಲಿ ಸಂಸ್ಥೆಗೆ ಹೆಚ್ಚಿನ ಅನುದಾನ ಒದಗಿಸಲು ಮನವಿ ಮಾಡಿದ್ದೇವೆ. ಮುಖ್ಯಮಂತ್ರಿಗಳ ಬಳಿಯೂ ವಿನಂತಿಸಿಕೊಂಡಿದ್ದೇವೆ ಎಂದರು.
ಶಿರಸಿ ಹಳೆಯ ಬಸ್ ನಿಲ್ದಾಣದಲ್ಲಿ ಹೊಸ ಕಟ್ಟಡ ನಿರ್ಮಿಸಲಾಗುವುದು. ಆದರೆ, ಹಳೆ ನೀಲನಕ್ಷೆ ಈಗಿದ್ದ ಕಟ್ಟಡದಲ್ಲೇ ಇತ್ತು. ಆದರೆ, ಇದನ್ನು ಬದಲಿಸಿ ಹೆಚ್ಚಿನ ಬಸ್ ಸಂಚರಿಸಲು ಅನುಕೂಲ ಆಗುವಂತೆ ಎಲ್ ಆಕಾರದಲ್ಲಿ ಬಳಸಲಾಗುತ್ತದೆ.ಪಕ್ಕದ ಸ್ಥಳವನ್ನೂ ಪಡೆದುಕೊಳ್ಳಲು ಸರಕಾರದ ಮುಂದೆ ಪ್ರಸ್ತಾಪಿಸಲಾಗುತ್ತದೆ. ಶೀಘ್ರ ನೂತನ ಬಸ್ ನಿಲ್ದಾಣವನ್ನೂ ನಿರ್ಮಿಸಲಾಗುತ್ತದೆ ಎಂದ ಪಾಟೀಲ, ನೂತನ ಬಸ್ ನಿಲ್ದಾಣ ಕಟ್ಟಲು ಹಳೆ ಬಸ್ ನಿಲ್ದಾಣ ಕೆಡವಬೇಕಿತ್ತು. ಆದರೆ, ಟೆಂಡರ್ ಕರೆದರೂ ಬಂದಿಲ್ಲ. ಈಗ ಸಂಸ್ಥೆಯವರೇ ಅದನ್ನುಕೆಡವುತ್ತಿದ್ದಾರೆ. ಜಾತ್ರೆ ಬಳಿಕ ಈ ಕಾರ್ಯ ನಡೆಯಲಿದೆ ಎಂದರು.
24 ಗಂಟೆ ಬಸ್ ನಿಲ್ದಾಣದ ಕ್ಯಾಂಟೀನ್ ತೆರೆದಿಡುವಂತೆ ಕ್ರಮ ವಹಿಸಲಾಗುವುದು. ಮಾರಿಕಾಂಬಾ ದೇವಿ ಜಾತ್ರಾಗೆ ಲಕ್ಷಾಂತರ ಭಕ್ತರು ಬರುವ ಕಾರಣ ಅವರಿಗೆ ಅನುಕೂಲ ಆಗುವಂತೆ ಇನ್ನೊಮ್ಮೆ ಪರಿಶೀಲನೆ ಮಾಡುತ್ತೇವೆ. ಐದು ಕತ್ರಿಯ ಬಳಿ ಒತ್ತಡ ಕೂಡ ಕಡಿಮೆ ಆಗವಂತೆ ಕ್ರಮ ಕೈಗೊಳ್ಳಲಾಗುತ್ತದೆ ಎಂದ ಪಾಟೀಲ, ಬಸ್ ನಿಲ್ದಾಣದಲ್ಲಿ ಸಿಸಿಕ್ಯಾಮರಾ ಅಳವಡಿಸಲು ಗುತ್ತಿಗೆ ಕರೆದರೂ ಯಾರೂ ಬಂದಿಲ್ಲ. ನಿಯಮ ಸರಳೀಕರಿಸಿ ಗುತ್ತಿಗೆ ಕರೆಯುವಂತೆ ಸೂಚಿಸಲಾಗಿದೆ. ನಗರಸಭೆ, ತಾಪಂ, ಶಾಸಕರು ಕೂಡ ಸಿಸಿಟಿವಿ ಅಳವಡಿಸುವದಿದ್ದರೆ ಅವಕಾಶ ಕೊಡುವುದಾಗಿ ಹೇಳಿದರು. ವಿಭಾಗೀಯ ನಿಯಂತ್ರಣಾಧಿಕಾರಿ ವಿವೇಕ
ಹೆಗಡೆ, ಪ್ರವೀಣ, ರವಿ ಹಳದೋಟ, ವೀಣಾ ಶೆಟ್ಟಿ, ಆರ್.ವಿ. ಹೆಗಡೆ, ಶ್ರೀರಾಮ ನಾಯ್ಕ ಇತರರು ಇದ್ದರು.
ಗಮನ ಸೆಳೆದ ಚಾಲನೆ: ನೂತನ ಬಸ್‌ಗಳಿಗೆ ಪೂಜೆ ಸಲ್ಲಿಸಿದ ಸಂಸ್ಥೆ ಅಧ್ಯಕ್ಷ ವಿ.ಎಸ್. ಪಾಟೀಲ ಸ್ಪಲ್ವ ದೂರ ಓಡಿಸಿಯೂ ಗಮನ ಸೆಳೆದರು. ಬಿಎಸ್4 ವಾಹನ ಇದಾಗಿದ್ದು, ಮುಂದೆ ಬಿಎಸ್ 6 ಬಸ್‌ಗಳೂ ಬರಲಿವೆ. ಹಾಲಿ ಹುಬ್ಬಳ್ಳಿಗೆ ಇಲ್ಲಿಂದ ಈ ಹೊಸ ಬಸ್‌ಗಳು ಓಡಲಿವೆ ಎಂದೂ ಹೇಳಿದರು.