ಬೆಂಗಳೂರು: ಲಾಕ್‌ಡೌನ್ ಸಡಿಲಿಕೆಯಾದ ಮೊದಲ ದಿನವೇ ರಾಜ್ಯದಲ್ಲಿ ಮದ್ಯದ ಹೊಳೆ ಹರಿದಿದ್ದು, ಸೋಮವಾರವು ಪಾನಪ್ರಿಯರು ಮತ್ತು ಅಬಕಾರಿ ಇಲಾಖೆ ಪಾಲಿಗೆ ಅಕ್ಷರಶಃ ಹೊಸ ವರ್ಷದ “ಕಿಕ್’ ಕೊಟ್ಟಿದೆ.
ಬೆಳಗ್ಗೆಯಿಂದ ಸಂಜೆಯ ವರೆಗೆ ರಾಜ್ಯದಲ್ಲಿ ಒಟ್ಟಾರೆ 8.5 ಲಕ್ಷ ಲೀ. ಭಾರತೀಯ ತಯಾರಿ ಮದ್ಯ (ಐಎಂಎಲ್) ಮತ್ತು 3.9 ಲಕ್ಷ ಲೀ. ಬಿಯರ್ ಮಾರಾಟವಾಗಿದ್ದು, ಇದರ ಒಟ್ಟಾರೆ ಮೌಲ್ಯ 45 ಕೋ.ರೂ.. ಇದರಿಂದ ಕೇವಲ 12 ತಾಸುಗಳಲ್ಲಿ ಸರಕಾರಕ್ಕೆ 31.5 ಕೋ.ರೂ. ಹರಿದುಬಂದಿದೆ. 2019ರ ಡಿ.30ರಂದು (24 ತಾಸುಗಳಲ್ಲಿ) ಸರಿಸುಮಾರು 70 ಕೋ. ರೂ. ಮೌಲ್ಯದ ಮದ್ಯ ಮಾರಾಟ ಆಗಿತ್ತು ಎಂದು ಅಂದಾಜಿಸಲಾಗಿದೆ.
ಸಾಮಾನ್ಯವಾಗಿ ಹೊಸ ವರ್ಷಾಚರಣೆ ಅಥವಾ ಕ್ರಿಸ್ಮಸ್ ಸಂದರ್ಭ ಕೊನೆಯ ಹತ್ತು ದಿನಗಳಲ್ಲಿ ಈ ರೀತಿಯ ಮದ್ಯ ಮಾರಾಟ ಆಗುತ್ತದೆ. ಸುದೀರ್ಘ 40 ದಿನಗಳ ಲಾಕ್‌ಡೌನ್ ಅನಂತರ ಪುನರಾರಂಭ ಗೊಂಡಿದ್ದರಿಂದ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದೆ. ಸಾಮಾನ್ಯ ದಿನಗಳಿಗೆ ಹೋಲಿಸಿದರೆ ಇದು ಎರಡು-ಮೂರು ಪಟ್ಟು. ಮೂಲಗಳ ಪ್ರಕಾರ ಇನ್ನಷ್ಟು ಬೇಡಿಕೆ ಇದ್ದರೂ ಕೆಲವೆಡೆ ಪೂರೈಕೆ ಕೊರತೆ ಮತ್ತೆ ಹಲವೆಡೆ ಸಮಯದ ಅಭಾವದಿಂದ ಪೂರೈಕೆ ಸಾಧ್ಯವಾಗಿಲ್ಲ.
ರಾಜ್ಯಾದ್ಯಂತ 3,500 ಸಿಎಲ್- 2 ಮತ್ತು 700 ಸಿಎಲ್- 11ಸಿ ಸನ್ನದುಗಳು ಸೋಮವಾರದಿಂದ ಪುನರಾರಂಭವಾಗಿದ್ದು, ಬೆಳಗ್ಗೆ 9ರಿಂದ ಸಂಜೆ 7ರ ವರೆಗೆ ತೆರೆದಿರಲಿವೆ. ಮದ್ಯವನ್ನು ಎಂಆರ್‌ಪಿ ದರದಲ್ಲೇ ಮಾರಾಟ ಮಾಡಬೇಕು. ಕೇವಲ ಐದು ಮಂದಿ ಗ್ರಾಹಕರು ಇರುವಂತೆ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಕ್ರಮ ವಹಿಸಬೇಕು. ಸನ್ನದಿನ ನೌಕರರು ಕೈಗವಸು ಧರಿಸಬೇಕು ಎಂದು ಅಬಕಾರಿ ಆಯುಕ್ತರು ಸೂಚನೆ ನೀಡಿದ್ದಾರೆ.
ಕರಾವಳಿ: ಸುಮಾರು 8.5 ಕೋ.ರೂ. ಮೌಲ್ಯದ ಮದ್ಯ ಮಾರಾಟ
ದ.ಕ. ಮತ್ತು ಉಡುಪಿ ಜಿಲ್ಲೆಯಾದ್ಯಂತ ಸೋಮವಾರದಿಂದ ಮದ್ಯದಂಗಡಿ ತೆರೆಯಲು ಜಿಲ್ಲಾಡಳಿತ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಭಾರೀ ವ್ಯಾಪಾರ ನಡೆದಿದೆ. ದ.ಕ. ಜಿಲ್ಲೆಯಲ್ಲಿ ಅಬಕಾರಿ ಇಲಾಖೆಯ ಮಾಹಿತಿ ಪ್ರಕಾರ 65,751 ಲೀಟರ್ ಮದ್ಯ ಮತ್ತು 43,583 ಲೀಟರ್ ಬಿಯರ್ ಮಾರಾಟವಾಗಿ ಸುಮಾರು 7 ಕೋ. ರೂ. ಸಂಗ್ರಹವಾಗಿದೆ. ಉಡುಪಿ ಜಿಲ್ಲೆಯಲ್ಲಿ 41,927 ಲೀ. ಮದ್ಯ ಮತ್ತು 15,872 ಲೀ. ಬಿಯರ್ ಮಾರಾಟವಾಗಿ ಮಧ್ಯಾಹ್ನದ ತನಕದ ನಾಲ್ಕು ತಾಸುಗಳ ಅವಧಿಯಲ್ಲಿ ಸುಮಾರು 1.5 ಕೋ.ರೂ. ಸಂಗ್ರಹವಾಗಿದೆ.