ಕುಂಬಳೆ: ಹೆದ್ದಾರಿಯಲ್ಲಿ ವಾಹನಗಳ ಸಂಚಾರ ಒತ್ತಡ ನಿಯಂತ್ರಣಕ್ಕೆ ಮಂಜೇಶ್ವರ ವಿಧಾನಸಭಾ ಕ್ಷೇತ್ರದ ವರ್ಕಾಡಿಯ ನಂದಾರಪದವಿನಿಂದ ತಿರುವನಂತಪುರದ ರಾಜಧಾನಿಗೆ ನಿಕಟ ಸಂಪರ್ಕ ಕಲ್ಪಿಸುವ ಮಲೆನಾಡ ಹೆದ್ದಾರಿ ಕಾಮಗಾರಿಯನ್ನು ಕಳೆದ ಬೇಸಗೆಯಲ್ಲಿ ಸರಕಾರದ ವತಿಯಿಂದ ಕೈಗೆತ್ತಿಕೊಳ್ಳಲಾಗಿದೆ.
ಇದರ ಕಾಮಗಾರಿಯ ಶಿಲಾನ್ಯಾಸವನ್ನು ಪೈವಳಿಕೆಯಲ್ಲಿ ಕಳೆದ ಡಿಸೆಂಬರ್ ತಿಂಗಳಲ್ಲಿ ರಾಜ್ಯಲೋಕೋಪಯೋಗಿ ಇಲಾಖೆಯ ಸಚಿವ ಜಿ. ಸುಧಾಕರನ್ ರವರು ಗಣ್ಯರ ಸಮ್ಮುಖದಲ್ಲಿ ನೆರವೇರಿಸಿದ್ದರು.
ಇದರ ಬಳಿಕ ನಂದಾರಪದವಿನಿಂದ ಪೈವಳಿಕೆ ಬಾಯಿಕಟ್ಟೆ ತನಕ ರಸ್ತೆ ಕಾಮಗಾರಿ ಪೂರ್ಣಗೊಂಡಿದೆ. ಆದರೆ ಇದರ ಮುಂದಿನ ಹಂತವಾದ ಪೈವಳಿಕೆ ಚೇವಾರು ರಸ್ತೆಯ 3 ಕಿ.ಮೀ. ರಸ್ತೆ ಅಭಿವೃದ್ಧಿ ಕಾಮಗಾರಿ ಆರಂಭಗೊಂಡರೂ ಈ ತನಕ ಪೂರ್ಣಗೊಂಡಿಲ್ಲ. ನಂದಾರಪದವಿನಿಂದ ಚೇವಾರು ತನಕದ ಕಾಮಗಾರಿಗೆ 45 ಕೋಟಿ ಯೋಜನೆಯ ಕಾಮಗಾರಿ ಕಣ್ಣೂರಿನ ಗುತ್ತಿಗೆದಾರರ ನಿಧಾನವೇ ಪ್ರಧಾನ ನಿಲುವಿನ ನಿರ್ಲಕ್ಷದಿಂದ ಪ್ರಕೃತ ಈ ರಸ್ತೆಯಲ್ಲಿ ವಾಹನ ಸಂಚಾರ ಪೂರ್ಣ ಮೊಟಕುಗೊಂಡಿದೆ.ಕಾಮಗಾರಿ ಶಿಲಾನ್ಯಾಸದ ಬಳಿಕ ರಸ್ತೆ ಅಗಲಗೊಳಿಸುವ ನೆಪದಲ್ಲಿ ಕೆಲಕಡೆಗಳಲ್ಲಿ ರಸ್ತೆ ಬದಿಯನ್ನು ಆಗೆಯಲಾಗಿದೆ.ಇದರ ಮಣ್ಣು ರಸ್ತೆ ಬದಿಯ ಕಣಿವೆಗೆ ಬಿದ್ದು ಪ್ರಕೃತ ರೋಡು ತೋಡಾಗಿದೆ.ಕೆಲವರ ಪಟ್ಟಾ ಸ್ಥಳವನ್ನು ಒಪ್ಪಿಗೆ ಪಡೆಯದೆ ಅಗೆದಾಗ ಒಂದಿಬ್ಬರು ನ್ಯಾಯಾಲಯದ ಮೊರೆ ಹೋದ ಕಾರಣ ಇದರಿಂದ ರಸ್ತೆ ಅಗಲಗೊಳಿಸುವ ಕಾಮಗಾರಿ ಸದ್ಯ ಸ್ಥಗಿತಗೊಂಡಿದೆ. ರಸ್ತೆಯಲ್ಲಿ 10 ಸಣ್ಣ ಸೇತುವೆಗಳನ್ನು ನಿರ್ಮಿಸಲಾಗಿದೆ. ಈ ಪ್ರದೇಶ ಕೆಸರು ಗದ್ದೆಯಾಗಿದೆ. ಇದ ರಿಂದಾಗಿ ಬಂದ್ಯೋಡು ಪೆರ್ಮುದೆ ಮತ್ತು ಉಪ್ಪಳ ಕೈಕಂಬ ಬಾಯಾರು ಲೋಕೋ ಪಯೋಗಿ ಇಲಾಖೆಯ ರಸ್ತೆಗಳ ಸಂಪರ್ಕ ಪರಸ್ಪರ ಕಡಿದು ಹೋಗಿದೆ.
ಪೆರ್ಮುದೆ ಚೇವಾರಿನಿಂದ ಪೈವಳಿಕೆ ಮತ್ತು ಪೈವಳಿಕೆ ನಗರ ವಿದ್ಯಾಲಯಗಳಿಗೆ, ಪೈವಳಿಕೆ ಗ್ರಾ.ಪಂ., ಕೃಷಿಭವನ, ಬ್ಯಾಂಕ್‌ಗಳಿಗೆ, ವಿಟ್ಲ ಪುತ್ತೂರಿಗೆ ತೆರಳುವವರು ಉಪ್ಪಳದ ಮೂಲಕ ದುಬಾರಿ ದ್ರಾವಿಡ ಪ್ರಯಾಣ ಮಾಡಬೇಕಾಗಿದೆ. ಈ ರಸ್ತೆಯಲ್ಲಿ ಬೆಳಗ್ಗೆ ಮತ್ತು ಸಂಜೆ ಮಾತ್ರ ಸಂಚರಿಸುತ್ತಿದ್ದ ಏಕೈಕ ಖಾಸಗಿ ಬಸ್ಸೊಂದು ಯಾನ ರದ್ದುಗೊಳಿಸಿ ಸಾರ್ವಜನಿಕರು ಪಾದಯಾತ್ರೆಯ ಮೂಲಕ ಪ್ರಯಾಣ ಬೆಳೆಸಬೇಕಾಗಿದೆ. ಆಟೋ ರಿಕ್ಷಾ ಈ ರಸ್ತೆಯಲ್ಲಿ ಸಂಚರಿಸಲು ಮುಂದಾಗುತ್ತಿಲ್ಲ. ಮಳೆಗಾಲದ ಮಧ್ಯೆ ಗುತ್ತಿಗೆದಾರರು ರಸ್ತೆ ಹೊಂಡಗಳಿಗೆ ಮಣ್ಣು ತುಂಬಿಸಿ ಮಳೆಯಿಂದ ಕಚ್ಚಾ ರಸ್ತೆಯಾಗಿದೆ.
ಈ ರಸ್ತೆ ಹೆಚ್ಚಾಗಿ ತಿರುವಿನಿಂದ ಕೂಡಿದ್ದು ಕೆಲವೇ ಕಡೆಗಳಲ್ಲಿ ಮಾತ್ರ ಇದನ್ನು ನೇರಗೊಳಿಸಲು ಯೋಜನೆಯಲ್ಲಿ ಒಳಪಡಿಸಲಾಗಿದೆ.ಆದುದರಿಂದ ಮಲೆನಾಡು ಯೋಜನೆಯ ರಸ್ತೆ ಗುಡ್ಡಗಾಡಿನಲ್ಲಿ ಸಾಗಿದಂತಾಗಲಿದೆ. ಅಲ್ಲದೆ ಬಾಯಿಕಟ್ಟೆಯಿಂದ ಪೈವಳಿಕೆ ಚೇವಾರು ಜಂಕ್ಷನ್ ತನಕದ ಹಳೆ ರಸ್ತೆಯ ಸುಮಾರು 2 ಕಿ.ಮೀ. ರಸ್ತೆಯನ್ನು ಅಭಿವೃದ್ಧಿ ಪಡಿಸಲು ಯೋಜನೆಯಲ್ಲಿ ಒಳಪಡಿಸಿಲ್ಲ. ಹಳೆ ರಸ್ತೆ ಅಗಲಗೊಳಿಸಿಲ್ಲ, ತಿರುವನ್ನು ಸರಿಪಡಿಸಿಲ್ಲ. ಅದೇ ರೀತಿ ಚೇವಾರಿನಿಂದ ಪೆರ್ಮುದೆ ಸೀತಾಂಗೋಳಿ ರಸ್ತೆಯನ್ನು ಅಭಿವೃದ್ಧಿಪಡಿಸದೆ ಹಳೆ ರಸ್ತೆಯನ್ನೇಮಲೆನಾಡು ರಸ್ತೆಗೆ ಒಳಪಡಿಸಲಾಗಿದೆ.
ದೂರವಾಣಿ ಕೇಬಲ್ ನೀರಿನ ಪೈಪ್‌ಗೆ ಹಾನಿ
ರಸ್ತೆ ಕಾಮಗಾರಿ ಸಂದರ್ಭದಲ್ಲಿ ಜೆಸಿಬಿ ಯಂತ್ರದ ಅಗೆತದಿಂದ ಚೇವಾರು ಪೈವಳಿಕೆ ದೂರವಾಣಿ ಕೇಬಲ್ ಅಲ್ಲಲ್ಲಿ ಕಡಿತವಾಗುತ್ತಲೇ ಇದೆ.ಇದನ್ನು ಗ್ರಾಹಕರು ನಿತ್ಯ ಅನುಭವಿಸಬೇಕಾಗಿದೆ. ಚೇವಾರಿನಲ್ಲಿ ಜಲನಿಧಿ ಹರಿಯುವ ನೀರಿನ ಪ್ರಧಾನ ಪೈಪ್ ಕಡಿದು ಹಾಕಲಾಗಿದೆ.ಆದರೆ ಇದನ್ನು ದುರಸ್ತಿಗೆ ಗುತ್ತಿಗೆದಾರರು ಮುಂದಾಗಿಲ್ಲ.ರಸ್ತೆ,ದೂರವಾಣಿ, ನೀರಿನ ಸಮಸ್ಯೆ ಅನುಭವಿಸಬೇಕಾಗಿದೆ. ಇದೀಗ ಗುತ್ತಿಗೆದಾರರು ಮಳೆಯ ನೆಪದಲ್ಲಿ ಕಂಬಳಿ ಹೊದ್ದು ಮಲಗಿದಂತಿದೆ.ಇದರಿಂದ ಸಾರ್ವಜನಿಕರು ಸಂಕಷ್ಟ ಅನುಭವಿಸುವಂತಾಗಿದೆ. ಶಾಸಕರ ನಿಧನದಿಂದ ಈ ಕ್ಷೇತ್ರ ಅನಾಥವಾಗಿದ್ದು ಈ ದುರವಸ್ಥೆಯತ್ತ ಅಧಿಕಾರಿಗಳು ಕಣ್ಣು ಹಾಯಿಸುವುದಿಲ್ಲವೆಂಬ ಆರೋಪ ಬಲವಾಗಿದೆ. ಇನ್ನಾದರೂ ಈ ರಸ್ತೆಯನ್ನು ಸಂಚಾರಕ್ಕೆ ಶಿಘ್ರ ದುರಸ್ತಿಗೊಳಿಸಬೇಕಾಗಿದೆ.
ಸೇತುವೆ ಅಪಾಯದಂಚಿನಲ್ಲಿ
ಪೈವಳಿಕೆ ಚೇವಾರು ರಸ್ತೆಯ ಕಟ್ಟದಮನೆ ಎಂಬಲ್ಲಿ ಕಳೆದ 23ವರ್ಷಗಳ ಹಿಂದೆ ಸುವರ್ಣಗಿರಿ ತೋಡಿಗೆ ಸೇತುವೆಯನ್ನು ನಿರ್ಮಿಸಲಾಗಿದೆ.ಇದು ಶಿಥಿಲಾವಸ್ಥೆಯಲ್ಲಿದೆ .ಅಂದು ಇದನ್ನು ತಗ್ಗಿನಲ್ಲಿ ನಿರ್ಮಿಸಲಾಗಿದೆ.ಇದರ ಇಕ್ಕಡೆಯ ಎಪೋÅಚ್ ರಸ್ತೆ ಎತ್ತರದಲ್ಲಿದೆ. ಅಂದು ಸೇತುವೆಯನ್ನು ಎತ್ತರವಾಗಿ ನಿರ್ಮಿಸುತ್ತಿದ್ದಲ್ಲಿ ಘನವಾಹನಗಳ ಸಂಚಾರಕ್ಕೆ ಸುಗಮವಾಗುತ್ತಿತ್ತು. ಆದರೆ ಇಂದಿನ ಕೋಟಿಗಟ್ಟಲೆ ಯೋಜನೆಯಲ್ಲಿ ಹೊಸ ಸೇತುವೆಯನ್ನು ನಿರ್ಮಿಸಲು ಇಲಾಖೆ ಮುಂದಾಗಿಲ್ಲ.
ಅವೈಜ್ಞಾನಿಕ ಕಾಮಗಾರಿ
ಕೈಕಂಬ ಪೈವಳಿಕೆ ಬಾಯಾರು ಮುಳಿಗದ್ದೆ ರಸ್ತೆಯನ್ನು ಗುತ್ತಿಗೆದಾರರ ಅಣತಿಯಂತೆ ಯೋಜನೆ ಸಿದ್ಧ ಪಡಿಸಿ ಬಳಿಕ ಅವೈಜ್ಞಾನಿಕ ಕಾಮಗಾರಿಯ ಮೂಲಕ ಕೋಟಿಗಟ್ಟಲೆ ನಿಧಿ ದುರ್ವಿನಿಯೋಗಿಸಲಾಗಿದೆ.ಇದರ ವಿರುದ್ಧ ಸರ್ವಪಕ್ಷಗಳ ನಾಯಕರ ಹೋರಾಟ ಸಮಿತಿ ರಚಿಸಿ ಪ್ರತಿಭಟನೆ ನಡೆಸಿ ಶಾಸಕರ ಮತ್ತು ಇಲಾಖೆಯ ಗಮನ ಸೆಳೆದರೂ ಗುತ್ತಿಗೆದಾರರ ನಿಲುವಿಗೇ ಅಧಿಕಾರಿಗಳ ಬೆಂಬಲದಿಂದ ಕಾಮಗಾರಿ ಕಳಪೆಯಾಗಿ ನಡೆದಿದೆ.ಪೈವಳಿಕೆ ಚೇವಾರು ಮಲೆನಾಡು ರಸ್ತೆಯ ಕಾಮಗಾರಿಯೂ ಇದೇ ಹಾದಿಯಲ್ಲೇ ಸಾಗಲಿರುವ ಶಂಕೆ ಸಾರ್ವಜನಿಕರಲ್ಲಿ ಮೂಡಿದೆ.ರಸ್ತೆ ಫಲಾನುಭವಿಗಳು ಉತ್ತಮ ರಸ್ತೆಗಾಗಿ ಕೆಲವೊಂದು ಸಲಹೆಗಳನ್ನು ನೀಡಿದರೂ ಗುತ್ತಿಗೆದಾರರು ಆನೆ ನಡೆದದೇ ಹಾದಿ ಎಂಬಂತೆ ಸಾಗುತ್ತಿರುವ ಆರೋಪ ಕೇಳಿ ಬರುತ್ತಿದೆ.
- ಅಚ್ಯುತ ಚೇವಾರ್