ಚಿಕ್ಕಬಳ್ಳಾಪುರ: ಕೋವಿಡ್ 19 ಸೋಂಕಿನ ಹಿನ್ನೆಲೆಯಲ್ಲಿ ಮುಂದೂಡಲಾಗಿದ್ದ ದ್ವಿತೀಯ ಪಿಯುಸಿ ಆಂಗ್ಲ ಪರೀಕ್ಷೆ ಗುರುವಾರ ಜಿಲ್ಲಾದ್ಯಂತ ಶಾಂತಿಯುತವಾಗಿ ನಡೆಯಿತು.
442 ಮಂದಿ ಗೈರು: ಜಿಲ್ಲೆಯಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಗೆ ಜಿಲ್ಲೆ, ಅಂತರ ಜಿಲ್ಲೆ ಹಾಗೂ ಅಂತರ ರಾಜ್ಯದ ವಿದ್ಯಾರ್ಥಿಗಳು ಸೇರಿ ಒಟ್ಟು ನೋಂದಣಿಯಾಗಿದ್ದ 12,134 ವಿದ್ಯಾರ್ಥಿಗಳ ಪೈಕಿ 11,692 ವಿದ್ಯಾರ್ಥಿಗಳು ಮಾತ್ರ ಪರೀಕ್ಷೆ ಬರೆದು ಉಳಿದ 442 ವಿದ್ಯಾರ್ಥಿಗಳು ಗೈರಾಗಿದ್ದರು.
200 ಕೆಎಸ್‌ಆರ್‌ಟಿಸಿ ಬಸ್: ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರಗಳಿಗೆ ಬರಲು ಅನುಕೂಲವಾಗುವಂತೆ ಸರ್ಕಾರದ ನಿರ್ದೇಶನದ ಮೇರೆಗೆ ಜಿಲ್ಲೆಯಲ್ಲಿ ಒಟ್ಟು 200 ಕೆಎಸ್‌ಆರ್‌ಟಿಸ್ ಬಸ್ ಸೌಕರ್ಯ ಕಲ್ಪಿಸಲಾಗಿತ್ತು. ವಿದ್ಯಾರ್ಥಿಗಳು ಯಾವುದೇ ಅಡೆತಡೆ ಇಲ್ಲದೇ ಪರೀಕ್ಷಾ ಕೇಂದ್ರಗಳಿಗೆ ಆಗಮಿಸಿ ಪರೀಕ್ಷೆ ಬರೆಯುವಂತಾಯಿತು. ಇದರ ನಡುವೆಯು ಕೆಲ ವಿದ್ಯಾರ್ಥಿಗಳು ಅವರ ಪೋಷಕರ ಜೊತೆಗೆ ಸ್ವಂತ ವಾಹನಗಳಲ್ಲಿ ಆಗಮಿಸಿ ಪರೀಕ್ಷೆ ಬರೆದರು.
22 ಕೇಂದ್ರಗಳಲ್ಲಿ ಪರೀಕ್ಷೆ: ಜಿಲ್ಲೆಯಲ್ಲಿ ಚಿಕ್ಕಬಳ್ಳಾಪುರ 6, ಬಾಗೇಪಲ್ಲಿ 03, ಗೌರಿಬಿದನೂರು 04, ಶಿಡ್ಲಘಟ್ಟ 02, ಚಿಂತಾಮಣಿ 06 ಹಾಗೂ ಗುಡಿಬಂಡೆ 01 ಸೇರಿ ಒಟ್ಟು 22 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಿತು. ಪರೀಕ್ಷೆಗೆ ನೋಂದಣಿಯಾಗಿದ್ದ ಜಿಲ್ಲೆಯ ಒಟ್ಟು 11,807 ವಿದ್ಯಾರ್ಥಿಗಳ ಪೈಕಿ 11,368 ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಬರೆದು ಉಳಿದ 439 ಮಂದಿ ಗೈರಾದರೆ ಪಕ್ಕದ ಜಿಲ್ಲೆಗಳ ಒಟ್ಟು 324 ವಿದ್ಯಾರ್ಥಿಗಳ ಪೈಕಿ 321 ಮಂದಿ ಪರೀಕ್ಷೆ ಬರೆದು 03 ಮಂದಿ ಗೈರಾದರೆ ಅಂತರ ರಾಜ್ಯಗಳಿಂದ ನೋಂದಣಿ ಯಾಗಿದ್ದ 9 ವಿದ್ಯಾರ್ಥಿಗಳು ಪರೀಕ್ಷೆ ಬರೆದರು.
ಥರ್ಮಲ್ ಸ್ಕ್ರೀನಿಂಗ್ ಬಳಿಕ ಕೇಂದ್ರದೊಳಗೆ ವಿದ್ಯಾರ್ಥಿಗಳ ಪ್ರವೇಶ: ಬೆಳಗ್ಗೆ 8:30ಕ್ಕೆ ಎಲ್ಲಾ ವಿದ್ಯಾರ್ಥಿಗಳು ಪರೀಕ್ಷೆ ಬರೆಯುವ ಕಾಲೇಜುಗಳಿಗೆ ಆಗಮಿಸಿದ್ದರು. ಪರೀಕ್ಷಾ ಕೇಂದ್ರದೊಳಗೆ ಪ್ರವೇಶಕ್ಕೂ ಮೊದಲು ಆರೋಗ್ಯ ಇಲಾಖೆ ಮಾರ್ಗಸೂಚಿಯಂತೆ ಪ್ರತಿಯೊಬ್ಬರನ್ನು ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಥರ್ಮಲ್ ಸ್ಕ್ರೀನಿಂಗ್ ಪರೀಕ್ಷಿಸಿ ಕೈಗಳಿಗೆ ಸ್ಯಾನಿಟೈಸರ್ ಹಾಕಿ ಮಾಸ್ಕ್ ಕೊಟ್ಟು ಪರೀಕ್ಷಾ ಕೇಂದ್ರದೊಳಗೆ ಕಳುಹಿಸಿಕೊಟ್ಟ ದೃಶ್ಯಗಳು ಸಾಮಾನ್ಯವಾಗಿತ್ತು. ದೇಹದ ಉಷ್ಣಾಂಶ ಪರೀಕ್ಷೆಗಾಗಿ ನೂರಾರು ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರದ ಆವರಣದಲ್ಲಿ ಸಾಲುಗಟ್ಟಿ ನಿಂತಿದ್ದರು.