Advertisement

ಜಿಲ್ಲೆಯಲ್ಲಿ 44,000 ಹೆ.ಭತ್ತದ ಕೃಷಿ,2,500ಕ್ವಿ. ಬೀಜ ಒದಗಿಸುವ ಗುರಿ

06:15 AM May 31, 2018 | Team Udayavani |

ಉಡುಪಿ: ಜಿಲ್ಲೆಯಲ್ಲಿ ಬಹುತೇಕ ಕೃಷಿಕರು ಭತ್ತದ ಬೆಳೆಯನ್ನೇ ನೆಚ್ಚಿಕೊಂಡಿದ್ದು, ಪೂರಕವಾಗಿ ಆವಶ್ಯಕ ಬೀಜ, ಕೃಷಿ ಸಲಕರಣೆ/ಉಪಕರಣಗಳನ್ನು ಕೃಷಿ ಇಲಾಖೆ ಒದಗಿಸುತ್ತಿದೆ. ಈ ವರ್ಷ ಜಿಲ್ಲೆಯಲ್ಲಿರುವ ಒಟ್ಟು 44,000 ಹೆ. ಭತ್ತದ ಕೃಷಿ ಭೂಮಿಯಲ್ಲಿ ಭತ್ತ ಬೆಳೆಸುವ ಮತ್ತು ಸುಮಾರು 2,500 ಕ್ವಿ. ಬೀಜ ಒದಗಿಸುವ ಗುರಿಯನ್ನು ಇಲಾಖೆ ಹೊಂದಿದೆ. 

Advertisement

1 ಹೆ. ಭೂಮಿಗೆ 62.5 ಕೆಜಿಯಂತೆ ಬೀಜ ವಿತರಿಸುತ್ತಿದೆ. ಈ ಸಾಲಿನಲ್ಲಿ ಜಿಲ್ಲೆಯಲ್ಲಿ ಒಟ್ಟು 680 ಕ್ವಿ. ಎಂಒ4 ತಳಿಯ ಭತ್ತದ ಬೀಜ ವಿತರಿಸಿದೆ. ಈ ವರ್ಷ ಎಂಒ16, ಜ್ಯೋತಿ ತಳಿಯ ಬೀಜವನ್ನೂ ವಿತರಿಸಿದ್ದು, ರೈತರು ಎಂಒ4 ತಳಿಯನ್ನೇ ಹೆಚ್ಚು ಇಷ್ಟಪಡುತ್ತಾರೆ. ರೈತ ಸಂಪರ್ಕ ಕೇಂದ್ರಕ್ಕೆ ಬರುವ ಕೃಷಿಕರು ಎಂಒ4 ತಳಿಗೆ ಹೆಚ್ಚು ಬೇಡಿಕೆ ಸಲ್ಲಿಸುತ್ತಾರೆ. ಇವೆರಡೂ ತಳಿಗಳಲ್ಲದೆ ವಿವಿಧ ತಳಿಗಳೂ ಕೇಂದ್ರಗಳಲ್ಲಿ ಸಂಗ್ರಹವಿದ್ದು, ಕೃಷಿಕರು ಬೇಡಿಕೆ ಸಲ್ಲಿಸಿದಲ್ಲಿ ಅವುಗಳ ವಿತರಣೆಯೂ ನಡೆಯಲಿದೆ. 

ಅಕ್ಟೋಬರ್‌ನಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿ ಕಟಾವಿಗೆ ಅನುಕೂಲವಾಗ ಬೇಕೆನ್ನುವ ಉದ್ಧೇಶದಿಂದ ಜ್ಯೋತಿ ಮತ್ತು ಎಂಒ4 ತಳಿಗಳನ್ನೇ ಹೆಚ್ಚಾಗಿ ಇಲಾಖೆ ವಿತರಿಸಿದೆ. ಜ್ಯೋತಿ ಭತ್ತದ ತಳಿ 105 – 100 ದಿನಕ್ಕೆ, ಎಂಒ4 135 ದಿನಕ್ಕೆ ಕಟಾವಿಗೆ ಬರುತ್ತದೆ. ಇದ‌ರಿಂದ ಕೃಷಿಕರು ಬೆಳೆದ ಫ‌ಸಲಿನ ಕಟಾವಿಗೆ ಯಾವುದೇ ತೊಂದರೆಯಾಗುವುದಿಲ್ಲ. 

ಕೇಂದ್ರದಿಂದ ಒಮ್ಮೆ ಬಿತ್ತನೆ ಬೀಜ ತೆಗೆದುಕೊಂಡ ಹೋದ ಕೃಷಿಕರು ಮುಂದಿನೆರಡು ವರ್ಷದ ವರೆಗೂ ಅದೇ ಬೀಜದಿಂದ ತಮಗೆ ಬೇಕಾದಷ್ಟು ಬಿತ್ತನೆ ಬೀಜವನ್ನು ತಯಾರಿಸಿಕೊಳ್ಳುತ್ತಾರೆ. ಹೀಗೆ ಒಮ್ಮೆ ಕೊಂಡು ಹೋದ ಬೀಜವನ್ನು ಸುಮಾರು 3 ವರ್ಷಗಳ ಕಾಲ ಬಳಸಬಹುದು.

ವಿವಿಧ ಸೌಲಭ್ಯಗಳು
ರೈತರಿಗೆ ಅನುಕೂಲವಾಗುವಂತೆ ಸೆಣಬಿನ ಬೀಜ (ಹಸಿರೆಲೆ ಬೀಜ) ಒದಗಿಸಲಾಗುತ್ತಿದೆ. ಸೆಣಬಿನ ಬೀಜವು 45 ದಿನಕ್ಕೆ ಗಿಡವಾಗಿ ಬೆಳೆದು ಕಟಾವಿಗೆ ಬರುತ್ತದೆ. ಇದನ್ನು ಮಣ್ಣಿನೊಂದಿಗೆ ಸೇರಿಸಿದರೆ ಉತ್ತಮ ಗೊಬ್ಬರ ತಯಾರಾಗುತ್ತದೆ. ಸಾವಯವ ಗೊಬ್ಬರ, ಲಘು ಪೋಷಕಾಂಶಗಳು, ಸುಣ್ಣ, ಉತ್ತಮ ಶೇಂಗಾ ಫ‌ಸಲಿಗೆ ಬಳಸುವ ಡಿಪ್ಸಮ್‌, ಪವರ್‌ ಟಿಲ್ಲರ್‌, ಟ್ರಾಕ್ಟರ್‌, ಸ್ಪ್ರಿಂಕ್ಲರ್‌, ಕಳೆ ತೆಗೆಯುವ ಯಂತ್ರ, ಡಿಸೇಲ್‌ ಪಂಪ್‌ಸೆಟ್‌ಗಳು, ಕಟಾವು ಯಂತ್ರ ಇತ್ಯಾದಿ ಅಗತ್ಯ ಸಕಲರಣೆಗಳನ್ನು ಕೇಂದ್ರದಿಂದ ಕಾಲಕಾಲಕ್ಕೆ ವಿತರಿಸಲಾಗುತ್ತದೆ.

Advertisement

ಸಲಕರಣೆ/ಪರಿಕರಗಳ ವಿತರಣೆ 
ಜಿಲ್ಲೆಯಲ್ಲಿ ಒಟ್ಟು 9 ಹೋಬಳಿಗಳಾದ ಉಡುಪಿ, ಬ್ರಹ್ಮಾವರ, ಕೋಟ, ಕಾಪು, ಕುಂದಾಪುರ, ವಂಡ್ಸೆ, ಬೈಂದೂರು, ಕಾರ್ಕಳ, ಅಜೆಕಾರುಗಳಲ್ಲಿ ರೈತ ಸಂಪರ್ಕ ಕೇಂದ್ರಗಳು ಕಾರ್ಯಾಚರಿಸುತ್ತಿವೆ. ಇದರ ಮೂಲಕ ಕೃಷಿಗೆ ಸಂಬಂಧಿಸಿದ ಎಲ್ಲ ಅವಶ್ಯ ಸಲಕರಣೆ/ಪರಿಕರಗಳು ಸೇರಿದಂತೆ ವಿವಿಧ ಯೋಜನೆಯಡಿ ಸಿಗುವ ಧನಸಹಾಯವನ್ನು ಕೃಷಿಕರಿಗೆ ಒದಗಿಸಲಾಗುತ್ತಿದೆ. ಜಿಲ್ಲೆಯ ಕೃಷಿಕರು ಮುಂಗಾರಿನಲ್ಲಿ ಹೆಚ್ಚು  ಭತ್ತದ ಕೃಷಿ ಮಾಡುವುದರಿಂದ ವಿವಿಧ ತಳಿಯ ಭತ್ತದ ಬೀಜ ಮತ್ತು ಹಿಂಗಾರಿನಲ್ಲಿ ಶೇಂಗಾ, ಅಲಸಂಡೆ, ಹೆಸರು ಬೆಳೆಯುವುದಕ್ಕೆ ಪೂರಕವಾದ ಅವಶ್ಯ ಸಲಕರಣೆ/ಪರಿಕರಗಳನ್ನು ಕೇಂದ್ರಗಳಿಂದ ವಿತರಿಸಲಾಗುತ್ತಿದೆ.
– ಚಂದ್ರಶೇಖರ್‌ ನಾಯಕ್‌,
ಉಪ ಕೃಷಿ ನಿರ್ದೇಶಕರು, ಕೃಷಿ ಇಲಾಖೆ ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next