Advertisement

44 ಕಿ.ಮೀ. ವ್ಯಾಪ್ತಿಗೆ ಸಿಬಿಡಿ ಪ್ರದೇಶ

10:01 AM Nov 09, 2019 | Suhan S |

ಬೆಂಗಳೂರು: ನಗರದ 12 ಹೈ-ಡೆನ್ಸಿಟಿ ಕಾರಿಡಾರ್‌ ಗಳನ್ನು ಗುರುತಿಸಿ ಅಧ್ಯಯನ ನಡೆಸುತ್ತಿರುವ ಬೆನ್ನಲ್ಲೇ ಸಂಚಾರ ಪೊಲೀಸ್‌ ವಿಭಾಗ ಇದೀಗ ಸರ್ಕಾರದ ಸೂಚನೆ ಮೇರೆಗೆ ಕೇಂದ್ರ ವಾಣಿಜ್ಯ ಪ್ರದೇಶ(ಸಿಬಿಡಿ) ವನ್ನು ವಿಸ್ತರಣೆ ಮಾಡಿ, ಅಲ್ಲಿ ಉಂಟಾಗುವ ಸಂಚಾರ ದಟ್ಟಣೆ ನಿರ್ವಹಣೆಗಾಗಿ ಪೂರಕ ಸಿದ್ಧತೆ ನಡೆಸಿದೆ.

Advertisement

ಈ ಮೊದಲು ಕೇಂದ್ರ ಪೊಲೀಸ್‌ ವಿಭಾಗ (ಅಂದಾಜು 8-10 ಕಿ.ಮೀ. ವ್ಯಾಪ್ತಿ)ದ ಸುತ್ತಳತೆಯನ್ನು ಮಾತ್ರ ಕೇಂದ್ರ ವಾಣಿಜ್ಯ ಪ್ರದೇಶ ಎಂದು ಪರಿಗಣಿಸಲಾಗಿತ್ತು. ಆದರೆ, ಇದೀಗ ಆ ಪ್ರದೇಶ ಒಳಗೊಂಡಂತೆ ನಗರದ ಹೃದಯ ಭಾಗದಿಂದ ಸುಮಾರು 44 ಕಿ.ಮೀ.ವರೆಗೆ ವಿಸ್ತರಿಸಲಾಗಿದೆ.

ವಾಹನ ವೇಗಕ್ಕೆ ಅಗತ್ಯ ಕ್ರಮ: ಸಿಬಿಡಿ ಸಂಚಾರ ತಜ್ಞರು, ಎಂಜಿನಿಯರ್‌ ವಿದ್ಯಾರ್ಥಿಗಳು, ಸಂಚಾರ ವಿಭಾಗದ ಹಿರಿಯ ಅಧಿಕಾರಿಗಳ ತಂಡ ಈ ಪ್ರದೇಶಗಳನ್ನು ತಾಂತ್ರಿಕ ಮತ್ತು ವೈಜ್ಞಾನಿಕವಾಗಿ ಅಧ್ಯಯನ ನಡೆಸಿದ್ದು, ವಾಹನ ನಿಲುಗಡೆ ನಿಷೇಧ,  ವಾಹನ ನಿಲುಗಡೆ ವ್ಯವಸ್ಥೆ, ಸೂಚನಾ ಫ‌ಲಕಗಳು, ಸ್ಕೈವಾಕ್‌, ಮೇಲು ಸೇತುವೆ, ರಸ್ತೆ ವಿಭಜಕ, ಎಷ್ಟು ಕಿ.ಮೀ.ಗೆ ಸಿಗ್ನಲ್‌ ದೀಪ ಅಳವಡಿಕೆ, ಪಾದಚಾರಿಮಾರ್ಗಗಳ ನಿರ್ಮಾಣ ಹಾಗೂ ಎಲ್ಲಿ ಬಸ್‌ ನಿಲ್ದಾಣ, ಬಸ್‌ ಬೇ, ಆಟೋ ನಿಲ್ದಾಣ ಮಾಡಬೇಕು. ರಸ್ತೆ ಉಬ್ಬು ನಿರ್ಮಿಸಬೇಕು, ಯೂಟರ್ನ್ ವ್ಯವಸ್ಥೆ, ಜಂಕ್ಷನ್‌ಗಳ ವಿಸ್ತೀರ್ಣ, ಅಭಿವೃದ್ಧಿ, ಚರಂಡಿ, ಪಾದಚಾರಿ ಮಾರ್ಗ ಸೇರಿದಂತೆ ಸುಗಮ ಸಂಚಾರ ಹಾಗೂ ಸುರಕ್ಷತೆ ದೃಷ್ಟಿಯಿಂದ ಕಡಿಮೆ ಅವಧಿ (ತತ್‌ಕ್ಷಣ), ಮಧ್ಯಮ ಅವಧಿ(ಮೂರು ತಿಂಗಳ ಅವಧಿ)ಯಲ್ಲಿ ಹಾಗೂ ದೀರ್ಘಾವಧಿ (ಒಂದು ವರ್ಷದೊಳಗೆ)ಯಲ್ಲಿ ನಡೆಯಬೇಕಾದ ಅಭಿವೃದ್ಧಿ ಕಾರ್ಯಗಳನ್ನು ಉಲ್ಲೇಖೀಸಿ ಕೆಲದಿನಗಳ ಹಿಂದಷ್ಟೇ ಸಂಪೂರ್ಣ ವರದಿ ಸಿದ್ಧಪಡಿಸಿ ಮೂಲಸೌಕರ್ಯ ಒದಗಿಸುವ ಬಿಬಿಎಂಪಿ, ಬಿಎಂಟಿಸಿ, ಬಿಎಂಆರ್‌ಸಿಎಲ್‌ ಹಾಗೂ ಸರ್ಕಾರಕ್ಕೂ ವರದಿ ಸಲ್ಲಿಸಲಾಗಿದೆ. ಒಟ್ಟಾರೆ ವಾಹನ ದಟ್ಟಣೆ ನಿವಾರಿಸಿ, ಸುಗಮ ಸಂಚಾರ ಹಾಗೂ ವಾಹನ ವೇಗಕ್ಕೆ ಅಗತ್ಯ ಕ್ರಮಕೈಗೊಳ್ಳುವಂತೆ ಕೋರಲಾಗಿದೆ ಎಂದು ಸಂಚಾರ ವಿಭಾಗದ ಮೂಲಗಳು ತಿಳಿಸಿವೆ.

ಭಾರೀ ವಾಹನಗಳು ನಿಷೇಧ?:  ಸದ್ಯ ಗುರುತಿಸಿರುವ ಸಿಬಿಡಿ ಪ್ರದೇಶಗಳು ನಗರದ ಹೊರವಲಯಕ್ಕೆ ಸಂಪರ್ಕ ಹೊಂದುವ ಪ್ರದೇಶಗಳಾಗಿದ್ದು, ಇಲ್ಲಿ ಸಂಚಾರ ನಿರ್ವಹಣೆ ಹಾಗೂ ನಿಯಂತ್ರಣಕ್ಕೆ ಮುಂದಾಗಿರುವ ಸರ್ಕಾರ, ಸರ್ಕಾರಿ ಮತ್ತು ಖಾಸಗಿ ಬಸ್‌ ಹಾಗೂ ಭಾರೀ ವಾಹನಗಳಿಗೆ ಹೊರವಲಯದಲ್ಲೇ ನಿಲ್ದಾಣ ನಿರ್ಮಾಣ ಮಾಡಲು ಸಿದ್ದತೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ. ಇತ್ತೀಚೆಗೆ ಮುಖ್ಯಮಂತ್ರಿ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಈ ಪ್ರಸ್ತಾಪ ಮಾಡಿದ್ದು, ನಗರದ ನಾಲ್ಕು ದಿಕ್ಕುಗಳ ಹೊರವಲಯದಲ್ಲಿ ಸರ್ಕಾರಿ ಹಾಗೂ ಖಾಸಗಿ ಟರ್ಮಿನಲ್‌ ನಿರ್ಮಾಣ ಮಾಡಿ ಅಲ್ಲಿಯೇ ಬಸ್‌ ಹಾಗೂ ಇತರೆ ಭಾರಿ ವಾಹಗನಗಳ ನಿಲುಗಡೆಗೆ ವ್ಯವಸ್ಥೆ ಮಾಡಬೇಕು. ಇದರೊಂದಿಗೆ ಸಾರ್ವಜನಿಕ ಸಂಪರ್ಕಕ್ಕೆ ಮೆಟ್ರೋ, ಬಿಎಂಟಿಸಿ ವ್ಯವಸ್ಥೆ ಹೆಚ್ಚಳ ಮಾಡುವುದು ಹಾಗೂ ಖಾಸಗಿ ಬಸ್‌ ಮಾಲೀಕರು ತಮ್ಮ ಪ್ರಯಾಣಿಕರನ್ನು ನಗರದೊಳಗೆ ಕರೆದೊಯ್ಯಲು ಪ್ರತ್ಯೇಕ ವಾಹನ ವ್ಯವಸ್ಥೆ ಮಾಡಿಕೊಳ್ಳುವ ಕುರಿತು ಗಂಭೀರ ಚರ್ಚೆಆಗಿದೆ ಎಂದು ಮೂಲಗಳು ತಿಳಿಸಿವೆ.

ಸವಾಲುಗಳಿವು : ಹೊಸ ಸಿಬಿಡಿ ಪ್ರದೇಶಗಳ ಅಭಿವೃದ್ಧಿಯಾದ ಬಳಿಕ ಅವುಗಳ ನಿರ್ವಹಣೆಯೇ ಸಂಚಾರ ಪೊಲೀಸರು ಮತ್ತು ಬಿಬಿಎಂಪಿಗೆ ದೊಡ್ಡ ಸವಾಲಾಗಿ ಪರಿಣಮಿಸಲಿದೆ. ಪ್ರಮುಖವಾಗಿ ಪಾರ್ಕಿಂಗ್‌ ಸಮಸ್ಯೆ, ಈ ವ್ಯಾಪ್ತಿಯಲ್ಲಿರುವ ಶಾಲಾ- ಕಾಲೇಜುಗಳ ಪೈಕಿ ಕೆಲವು ಇದುವರೆಗೂ ಪ್ರತ್ಯೇಕ ಪಾರ್ಕಿಂಗ್‌ ವ್ಯವಸ್ಥೆ ಮಾಡಿಕೊಂಡಿಲ್ಲ. ಮತ್ತೂಂದೆಡೆ ಈ ಪ್ರದೇಶಗಳ ರಸ್ತೆಗಳು ಕಿರಿದಾಗಿದ್ದು, ಪಾರ್ಕಿಂಗ್‌ ಸಮಸ್ಯೆ ತಲೆದೋರಲಿದೆ ಎಂದು ಮೂಲಗಳು ತಿಳಿಸಿವೆ.

Advertisement

ಸಿಬಿಡಿ ವ್ಯಾಪ್ತಿಗೆ ಸೇರ್ಪಡೆ :  ಅತ್ಯಧಿಕ ವಾಹನ ಸಂಚಾರದಟ್ಟಣೆ, ವ್ಯಾಪಾರ ವಹಿವಾಟು, ಜನಸಂದಣಿ, ಆಸ್ಪತ್ರೆ, ಶಾಲಾ-ಕಾಲೇಜುಗಳ ಕಾರ್ಯನಿರ್ವಹಣೆ ಹಾಗೂ ನಗರದಿಂದ ಹೊರವಲಯಕ್ಕೆ ಹಾದುಹೋಗವ ಮಾರ್ಗಗಳ ಪ್ರದೇಶಗಳು ಸೇರಿ ಇತರೆ ಎಲ್ಲ ಮಾನದಂಡಗಳ ಆಧರಿಸಿ ಮಲ್ಲೇಶ್ವರ, ರಾಜಾಜಿನಗರ, ಕೆ.ಆರ್‌. ಮಾರುಕಟ್ಟೆ, ಸಿರ್ಸಿ ವೃತ್ತ, ಮಿನರ್ವ ವೃತ್ತ, ಮರೀಗೌಡ ರಸ್ತೆ, ಡೇರಿ  ವೃತ್ತ, ಮೇಖ ವೃತ್ತ, ಕೋಲ್ಸ್‌ ಪಾರ್ಕ್‌, ಸಿಎಂಎಚ್‌ ರಸ್ತೆ, ಎಚ್‌ಎಎಲ್‌ ರಸ್ತೆ, ದೊಮ್ಮಲೂರು ಮತ್ತು ಈಜಿಪುರವನ್ನು ಸಿಬಿಡಿ ವ್ಯಾಪ್ತಿಗೆ ತರಲಾಗಿದೆ.

ಅನುಕೂಲಗಳೇನು?:  ಅಂದುಕೊಂಡಂತೆ ಸಂಚಾರ ಪೊಲೀಸ್‌ ವಿಭಾಗದ ವರದಿಯನ್ನು ಪುರಸ್ಕರಿಸಿದರೆ ಈ ಪ್ರದೇಶಗಳಲ್ಲಿ ಅತ್ಯಾಧುನಿಕ ಸಿ.ಸಿ. ಕ್ಯಾಮೆರಾ, ಸ್ವಯಂ ಚಾಲಿತ ಸಿಗ್ನಲ್‌, ಪಾದಚಾರಿ ಮಾರ್ಗಗಳು ಅಳವಡಿಕೆ ಮಾಡಲಾಗುತ್ತದೆ. ಹೀಗಾಗಿ ಈ ಪ್ರದೇಶದ ಸಂಪೂರ್ಣ ವಿದ್ಯಮಾನ ನಿಯಂತ್ರಣ ಕೊಠಡಿಯ ಪರದೆ ಮೇಲೆ ಪ್ರದರ್ಶನವಾಗಲಿದೆ. ಅನುಮಾನಾಸ್ಪದ ವ್ಯಕ್ತಿಗಳ ಮೇಲೆ ನಿಗಾ ಇಡಲು ಹಾಗೂ ಅಪರಾಧ ಪ್ರಕರಣ ನಡೆದಾಗ ಆರೋಪಿಗಳ ಪತ್ತೆಗೆ ಈ ಕ್ಯಾಮೆರಾಗಳು ನೆರವಿಗೆ ಬರಲಿವೆ ಎಂದು ಸಂಚಾರ ವಿಭಾಗದ ಹಿರಿಯ ಪೊಲೀಸರು ಹೇಳಿದರು.

 

-ಮೋಹನ್‌ ಭದ್ರಾವತಿ

Advertisement

Udayavani is now on Telegram. Click here to join our channel and stay updated with the latest news.

Next