ಕಾರವಾರ: ರಾಜ್ಯ ಹಣಕಾಸು ಸಂಸ್ಥೆ ಕಳೆದ ಆರ್ಥಿಕ ವರ್ಷದಲ್ಲಿ 44.92 ಕೋಟಿ ರೂ. ಲಾಭಗಳಿಸಿದೆಯಾಗಿ ಕೆಎಸ್‌ಎಫ್‌ಸಿ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಡಾ| ಏಕರೂಪ ಕೌರ್ ತಿಳಿಸಿದ್ದಾರೆ.
ವಾರ್ತಾ ಇಲಾಖೆ ಜೊತೆ ಮಾತನಾಡಿರುವ ಅವರು, ಕಳೆದ ಆರ್ಥಿಕ ವರ್ಷದಲ್ಲಿ ವಿವಿಧ ಸಾಲ ಯೋಜನೆಗಳ ಮೂಲಕ 667.81 ಕೋಟಿ ರೂ. ಸಾಲ ಮಂಜೂರು ಮಾಡಿದ್ದು, 727.90 ಕೋಟಿ ರೂ. ವಿತರಣೆ ಮಾಡಿದೆ. ಹಾಗೇಯೇ 720.85 ರೂ. ಸಾಲ ವಸೂಲಾತಿ ಕೂಡ ಮಾಡಲಾಗಿದೆ ಎಂದರು.
ಶೇಕಡಾವಾರು ಅನುತ್ಪಾದಕ ನಿವ್ವಳ ಆಸ್ತಿಯು ಕಳೆದ ವರ್ಷದ ಶೇ.6.09 ರಿಂದ ಪ್ರಸುತ್ತ ವರ್ಷದಲ್ಲಿ ಶೇ.5.12ಕ್ಕೆ ಇಳಿದಿರುತ್ತದೆ. ಸಂಸ್ಥೆ 2020ರ ಮಾರ್ಚ್ 31ರ ಅಂತ್ಯಕ್ಕೆ ಸಂಚಿತ ಮುಂಜುರಾತಿ 1,74,217 ಕೈಗಾರಿಕಾ ಘಟಕಗಳಿಗೆ 17,884.72 ಕೋಟಿ ರೂ. ಎಂದಿದ್ದಾರೆ.
ಸಂಸ್ಥೆ ಈಗಾಗಲೇ 21,700 ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಉದ್ಯಮಿಗಳಿಗೆ 2000 ಕೋಟಿ ರೂ.ಗಳಿಗೂ ಅಧಿಕ ಸಾಲ ಮಂಜೂರಾತಿ ನೆರವು ನೀಡಿರುತ್ತದೆ. ಸಂಸ್ಥೆ ಈವರೆಗೆ 30,000 ಕ್ಕೂ ಹೆಚ್ಚು ಮಹಿಳಾ ಉದ್ಯಮಿಗಳಿಗೆ 4243.67 ರೂ. ಸಾಲ ಮಂಜೂರು ಮಾಡಿರುತ್ತದೆ. 41,000 ಹಿಂದುಳಿದ ಹಾಗೂ ಅಲ್ಪಸಂಖ್ಯಾತ ಉದ್ಯಮಿಗಳಿಗೆ ಇದುವರೆಗೂ 1748.40 ಕೋಟಿ ರೂ. ಸಾಲದ ನೆರವು ಒದಗಿಸಿದೆ. ಮೊದಲ ಪೀಳಿಗೆ ಉದ್ಯಮಿದಾರರಿಗೆ 164.70 ಕೋಟಿ ರೂ. ಸಾಲ ಮಂಜೂರು ಮಾಡಿದೆ. ಸಂಸ್ಥೆ ಕೈಗೊಂಡಿರುವ ಹಲವಾರು ಉಪಕ್ರಮಗಳು ಹಾಗೂ ಪ್ರಮುಖ ಯೋಜನೆಗಳಾದ ಪಜಾ, ಪಂಗಡಗಳ ಹಾಗೂ ಮಹಿಳಾ ಹಾಗೂ ಎಲ್ಲಾ ವರ್ಗದ ಉದ್ಯಮಿಗಳಿಗೆ ಲಭ್ಯವಿರುವ ಶೇ.4 ರ ನಿವ್ವಳ ಬಡ್ಡಿ ದರದಲ್ಲಿ ಆರ್ಥಿಕ ಸಹಾಯ ಯೋಜನೆಗಳ ಯಶಸ್ವಿ ಅನುಷ್ಠಾನದ ಪ್ರತಿಫಲವಾಗಿ ಸಂಸ್ಥೆಯು ಈ ಎಲ್ಲ ಸಾಧನೆಗಳಿಸಲು ಸಾಧ್ಯವಾಗಿದೆ. ರಾಜ್ಯ ಸರ್ಕಾರದ ವತಿಯಿಂದ ಉಳಿದ ಬಡ್ಡಿದರವೂ ಸಹಾಯಧನದ ರೂಪದಲ್ಲಿ ಪಾವತಿಯಾಗಿದೆ ಎಂದು ಕೌರ್ ಹೇಳಿದ್ದಾರೆ.
ಪ್ರಸುತ್ತ ಹಣಕಾಸು ವರ್ಷದಲ್ಲಿ ರಾಜ್ಯ ಸರ್ಕಾರವು ಸಂಸ್ಥೆಗೆ 100.00 ಕೋಟಿ ರೂಗಳ ಈಕ್ವತಿ ಬಂಡವಾಳ ಹಾಗೂ 71.50 ಕೋಟಿ ರೂ.ಗಳ ಬಡ್ಡಿ ಸಹಾಯಧನದ ನೆರವನ್ನು ಮೇಲಿನ ಯೋಜನೆಗಳಡಿ ಒದಗಿಸಿದೆ. ಪಜಾ ಹಾಗೂ ಪಂಗಡಗಳ ಉದ್ಯಮಿಗಳು ಸ್ಥಾಪಿಸುವ ಜವಳಿ ಮತ್ತು ಕೈಮಗ್ಗ ಘಟಕಗಳಿಗೆ ವಿಶೇಷ ಹಣಕಾಸಿನ ಯೋಜನೆಯಡಿ 20.12 ಕೋಟಿ ರೂ.ಗಳ ಅನುದಾನ ಬಿಡುಗಡೆ ಮಾಡಿದೆ. ಪಜಾ ಮತ್ತು ಪಂಗಡಗಳ ಉದ್ಯಮಿದಾರರಿಗೆ ಬಂಡವಾಳವಾಗಿ 21.02 ಕೋಟಿ ರೂ. ಸರಳ ಬೀಜಧನವನ್ನು ರಾಜ್ಯ ಸರ್ಕಾರ ನೀಡಿದೆ ಎಂದು ಕೌರ ವಿವರಿಸಿದರು.
ಪ್ರಸುತ್ತ ಗುರಿಗಳು : ಪ್ರಸಕ್ತ ಹಣಕಾಸು ವರ್ಷವನ್ನು ಕೋವಿಡ್-19 ಸವಾಲುಗಳ ವರ್ಷ ಎಂದು ಪರಿಗಣಿಸಲಾಗಿದೆ. ರಾಜ್ಯದ ಆರ್ಥಿಕತೆಯಲ್ಲಾದ ಚಂಚಲತೆಯಿಂದಾಗಿ ಪ್ರಸುತ್ತ ವರ್ಷದಲ್ಲಿ ಸಂಸ್ಥೆ ಸಹ ಮಿಶ್ರ ಬೆಳವಣಿಗೆ ನಿರಿಕ್ಷಿಸಲಿದೆ. ಕೊರೊನಾ ಏಟಿನಿಂದ ಮಧ್ಯಮ, ಸಣ್ಣ ಹಾಗೂ ಸೂಕ್ಷ್ಮ ಘಟಕಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅನೇಕ ಪರಿಹಾರ ಹಾಗೂ ರಿಯಾಯತಿ ನೀಡಲು ಮುಂದಾಗಿದೆ ಎಂದು ಕೆಎಸ್‌ಎಫ್‌ಸಿ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕರು ಹೇಳಿದ್ದಾರೆ.
ಪ್ರಸಕ್ತ ಆರ್ಥಿಕ ವರ್ಷದಲ್ಲಿ ಸಂಸ್ಥೆಯು ತಲಾ 600 ಕೋಟಿಗಳ ಮಂಜೂರಾತಿ ರಿಯಾಯತಿ ಹೊಂದಿದ್ದು, ರಾಜ್ಯ ಸರ್ಕಾರದ ಬಡ್ಡಿ ಸಹಾಯಧನ, ಯೋಜನೆಗಳ ಯಶಸ್ವಿ ಅನುಷ್ಠಾನದೊಂದಿಗೆ ಸಮಾಜದ ವಿವಿಧ ವರ್ಗಗಳಿಂದ ಸ್ಥಾಪಿಸಲ್ಪಡುವ ಎಂಎಸ್‌ಎಂಇ ಗಳಿಗೆ ನೆರವು ಕಡೆಗೆ ಹೆಚ್ಚಿನ ಗಮನವನ್ನು ಕೇಂದ್ರಿಕರಿಸಲಿದೆ. ಎಂಎಸ್‌ಎಂಇ ಪರಿಷ್ಕೃತ ನಿರೂಪಣೆಯು 2020ರ ಜು.1 ರಿಂದ ಜಾರಿಗೊಳ್ಳಲಿದ್ದು, ಉತ್ಪಾದಕ ಹಾಗೂ ಸೇವಾ ವಲಯಗಳಿಂದ ಸ್ಥಾಪಿಸಲ್ಪಡುವ ಘಟಕಗಳಿಗೆ ರಾಜ್ಯ ಸರ್ಕಾರ ಸಬ್‌ವೆನ್ಷನ್ ಯೋಜನೆಯನ್ನು 2020-21 ಸಂಸ್ಥೆಯಲ್ಲಿ ಪುನರ್ ಪರಿಚಯಿಸುತ್ತಿರುವುದು ಉದ್ಯಮಿಗಳಿಗೆ ವರದಾನವಾಗಲಿದೆ. ಅಲ್ಲದೇ ಅನುತ್ಪಾದಕ ಆಸ್ತಿಗಳನ್ನು ಮತ್ತಷ್ಟು ಕಡಿಮೆಗೊಳಿಸಲು ಸಂಸ್ಥೆ ಹೆಚ್ಚಿನ ಒತ್ತು ನೀಡಲಿದೆ ಎಂದು ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಡಾ| ಏಕರೂಪ್ ಕೌರ್ ಹೇಳಿದ್ದಾರೆ.