Advertisement

ಮೂರು ವಾರಗಳಲ್ಲಿ 4,343 ಪ್ರಕರಣ; 26 ಲಕ್ಷ ರೂ. ಸಂಗ್ರಹ !

09:03 PM Sep 27, 2019 | Team Udayavani |

ಮಹಾನಗರ: ಮೋಟಾರ್‌ ವಾಹನ ಕಾಯ್ದೆ ತಿದ್ದುಪಡಿ ಜಾರಿಗೆ ಬಂದ ಬಳಿಕ ಮಂಗಳೂರು ನಗರ ವ್ಯಾಪ್ತಿಯಲ್ಲಿ ಮೂರು ವಾರಗಳಲ್ಲಿ ಒಟ್ಟು 4,343 ಪ್ರಕರಣ ದಾಖಲಿಸಿ 26.24 ಲಕ್ಷ ರೂ. ದಂಡ ವಿಧಿಸಲಾಗಿದೆ.

Advertisement

ಮೋಟಾರ್‌ ವಾಹನ ಕಾಯ್ದೆ ತಿದ್ದುಪಡಿ ಮಾಡಿ, ಕೇಂದ್ರ ಸರಕಾರ ದುಬಾರಿ ದಂಡ ವಿಧಿಸಿತ್ತು. ಆದರೆ ಸಾರ್ವಜನಿಕರಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ದುಬಾರಿ ದಂಡಕ್ಕೆ ಬ್ರೇಕ್‌ ಹಾಕಿ, ದಂಡದ ಮೊತ್ತವನ್ನ ಇಳಿಸಿತ್ತು. ಇದರಂತೆ ನಗರದಲ್ಲಿ ನಿಯಮ ಉಲ್ಲಂಘಿಸಿದವರ ವಿರುದ್ಧ ಕಾನನು ಕ್ರಮ ಜರಗಿಸಲಾಗಿದೆ. ಬೆಂಗಳೂರಿಗೆ ಹೋಲಿಸಿದರೆ ನಗರದಲ್ಲಿ ದಾಖಲಾದ ಕೇಸುಗಳ ಸಂಖ್ಯೆ ಬಹಳಷ್ಟು ಕಡಿಮೆ.

ನೋ ಪಾರ್ಕಿಂಗ್‌, ಹೆಲ್ಮೆಟ್‌ ಧರಿಸದ ಕೇಸುಗಳು ಹೆಚ್ಚು
ನಗರದಲ್ಲಿ ವಾಹನ ಪಾರ್ಕಿಂಗ್‌ಗೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿಲ್ಲ ಎಂಬುದಾಗಿ ಸಾರ್ವಜನಿಕರು ದೂರುತ್ತಿರುವ ಬೆನ್ನಲ್ಲೇ ದುಬಾರಿ ದಂಡದ ಬಿಸಿ ತಟ್ಟಲಾರಂಭಿಸಿದೆ. ಅದಕ್ಕೆ ಪೂರಕವಾಗಿಯೇ ಇತ್ತೀಚೆಗೆ ದಾಖಲಾದ ದುಬಾರಿ ದಂಡಗಳಲ್ಲಿ ನೋ ಪಾರ್ಕಿಂಗ್‌ ಸ್ಥಳಗಳಲ್ಲಿ ಗಾಡಿ ನಿಲುಗಡೆ ಮಾಡಿರುವ ಪ್ರಕರಣಗಳು ಹೆಚ್ಚಾಗಿವೆ. ಸದ್ಯ ದಾಖಲಾದ ದೂರುಗಳಲ್ಲಿ ನೋ ಪಾರ್ಕಿಂಗ್‌ನಲ್ಲಿ ವಾಹನ ನಿಲುಗಡೆ ಮಾಡಿರುವುದು, ಹೆಲ್ಮೆಟ್‌ ಧರಿಸದೆ ಪ್ರಯಾಣಿಸಿರುವ ಪ್ರಕರಣಗಳೇ ಹೆಚ್ಚು. ಸೆ. 7ರಿಂದ ದುಬಾರಿ ದಂಡ ಹಾಕಲು ಆರಂಭಿಸಲಾಗಿದ್ದು, ಸೆ. 26ರ ವರೆಗೆ ಸುಮಾರು 26,24,000 ರೂ. ದಂಡ ವಿವಿಧ ಪ್ರಕರಣಗಳಲ್ಲಿ ಸಂಗ್ರಹವಾಗಿದೆ.

ಕೇಸ್‌ಗಳ ಸಂಖ್ಯೆ ಇಳಿಮುಖ
ನಗರದಲ್ಲಿ ಮೋಟಾರ್‌ ವಾಹನ ಕಾಯ್ದೆ ತಿದ್ದುಪಡಿಯಡಿ ಜಾರಿಗೆ ಬಂದ ಬಳಿಕ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿವೆ. ಆದರೆ ದಂಡದ ಮೊತ್ತ ಹೆಚ್ಚಿರುವ ಕಾರಣ ಒಟ್ಟಾರೆ ಮೊತ್ತ ದೊಡ್ಡದಾಗಿ ಕಾಣುತ್ತಿದೆ. ಸೆ. 7ಕ್ಕಿಂತ ಮೊದಲು ದಿನಕ್ಕೆ 500ರಿಂದ 988ರ ವರೆಗೆ ಹಲವು ವಿಭಾಗಗಳಲ್ಲಿ ದೂರುಗಳು ದಾಖಲಾಗುತ್ತಿದ್ದವು.

ಆದರೆ ಈಗ ದಿನಕ್ಕೆ 500ಕ್ಕಿಂತ ಕಡಿಮೆ ದೂರುಗಳೇ ದಾಖಲಾಗುತ್ತಿವೆ. ಹೆಚ್ಚಿನ ವಾಹನ ಸವಾರರು ಎಲ್ಲ ದಾಖಲೆ ಗಳೊಂದಿಗೆ ಸಂಚಾರ ನಿಯಮಗಳನ್ನು ಪಾಲಿಸುತ್ತಿದ್ದಾರೆ ಎಂಬುದಾಗಿ ಪೊಲೀಸರು ತಿಳಿಸಿದ್ದಾರೆ.

Advertisement

ಸೆ. 7ರ ಹಿಂದಿನ ಕೇಸುಗಳ ದಂಡವೂ ಕೆಲವರು ಈಗ ಪಾವತಿಸುತ್ತಿದ್ದಾರೆ. ಈ ಹಿಂದೆ ದಾಖಲಾದ ದೂರುಗಳಿಗೆ ಹಿಂದಿನ ದಂಡವೇ ಮುಂದುವರಿಯಲಿದೆ. ಆದರೆ ವಾಹನ ತಪಾಸಣೆಗೆ ನಿಲುಗಡೆ ಮಾಡಿದಾಗ ಹಿಂದೆ ನಿಯಮ ಉಲ್ಲಂಘಿಸಿ ದಂಡ ಪಾವತಿಸದ ವಾಹನ ಸವಾರರ ಮಾಹಿತಿ ಲಭಿಸುತ್ತಿದ್ದು, ಅವರಿಂದ ಅದನ್ನು ಪಾವತಿಸುವ ಕೆಲಸವಾಗುತ್ತಿದೆ.

ಸಂಚಾರ ನಿಯಮ ಪಾಲಿಸಿ
ಸಂಚಾರ ನಿಯಮಗಳನ್ನು ಸರಿ ಯಾಗಿ ಪಾಲಿಸಿದರೆ ದಂಡ ಕಟ್ಟುವ ಪ್ರಮೇಯವೇ ಬರುವುದಿಲ್ಲ. ಹಾಗಾಗಿ ವಾಹನ ಸವಾರರು ಕಟ್ಟು ನಿಟ್ಟಾಗಿ ನಿಯಮಗಳನ್ನು ಪಾಲಿಸಿ. ದುಬಾರಿ ದಂಡ ಬಿದ್ದ ಬಳಿಕ ದಾಖಲಾಗುತ್ತಿರುವ ಕೇಸುಗಳ ಸಂಖ್ಯೆ ಬಹಳಷ್ಟು ಕಡಿಮೆಯಾಗಿದೆ.
ಮಂಜುನಾಥ ಶೆಟ್ಟಿ, ಟ್ರಾಫಿಕ್‌ ಎಸಿಪಿ

Advertisement

Udayavani is now on Telegram. Click here to join our channel and stay updated with the latest news.

Next