ದೊಡ್ಡಬಳ್ಳಾಪುರ: ಕರ್ಣಾಟಕ ಬ್ಯಾಂಕ್ ಲಾಭ ಗಳಿಸುವುದಷ್ಟೇ ಸೀಮಿತವಾಗದೇ ಗ್ರಾಹಕ ಸ್ನೇಹಿಸಯಾಗಿದ್ದು, ಆದ್ಯತಾ ಕ್ಷೇತ್ರಕ್ಕೆ ಶೇ.43ರಷ್ಟು ಸಾಲ ನೀಡುವ ಮೂಲಕ ದೇಶದ ಆರ್ಥಿಕ ಪ್ರಗತಿಗೆ ಶ್ರಮಿಸುತ್ತಿದೆ ಎಂದು ಕರ್ಣಾಟಕ ಬ್ಯಾಂಕ್ ಮಹಾ ಪ್ರಬಂಧಕ ಚಂದ್ರಶೇಖರರಾವ್ ಹೇಳಿದರು.
ತಾಲೂಕಿನ ಕಾಡನೂರು ಗ್ರಾಮದಲ್ಲಿ ನೂತನ ಕಟ್ಟಡದಲ್ಲಿ ಪ್ರಾರಂಭವಾದ ಕರ್ಣಾಟಕ ಬ್ಯಾಂಕ್ ಶಾಖೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ರಾಜ್ಯದಲ್ಲಿ 186 ಶಾಖೆ: ಕರ್ಣಾಟಕ ಬ್ಯಾಂಕ್ ಷೇರುದಾರರ ಹಣದಲ್ಲಿ ನಡೆಯುತ್ತಿರುವ ಬ್ಯಾಂಕ್ ಆಗಿದೆ. ಇದು ಲಾಭ ಮಾಡುವ ದೃಷ್ಟಿಯಿಂದ ಮಾತ್ರ ಕೆಲಸ ಮಾಡುತ್ತಿರುವ ಬ್ಯಾಂಕ್ ಅಲ್ಲ. ರಾಜ್ಯದಲ್ಲಿ 186 ಶಾಖೆಗಳನ್ನು ಗ್ರಾಮಾಂತರ ಪ್ರದೇಶದ ಹಳ್ಳಿಗಳಲ್ಲಿಯೇ ತೆರೆಯಲಾಗಿದೆ. ರೈತರು, ದುಡಿಯುವ ವರ್ಗದವರಿಗೆ ಸಾಲ ಸೌಲಭ್ಯಗಳನ್ನು ನೀಡುವ ಮೂಲಕ ಅವರ ಪ್ರಗತಿಯಲ್ಲಿ ಭಾಗಿಯಾಗಬೇಕು ಎನ್ನುವುದೇ ನಮ್ಮ ಮುಖ್ಯ ಉದ್ದೇಶವಾಗಿದೆ ಎಂದರು.
ವಿಮಾ ಪರಿಹಾಕ್ಕೆ ಅವಕಾಶ: ರೈತರು ಬ್ಯಾಂಕಿನಲ್ಲಿ ಪಡೆಯುವ ಸಾಲ ಸೌಲಭ್ಯಗಳನ್ನು ನಿಗದಿತ ಉದ್ದೇಶಕ್ಕೆ ಬಳಸುವ ಮೂಲಕ ಸಕಾಲದಲ್ಲಿ ಸಾಲವನ್ನು ಮರುಪಾವತಿ ಮಾಡಿದರೆ ಇತರರು ಸಾಲ ಪಡೆಯಲು ಸಹಕಾರಿಯಾಗಲಿದೆ. ಬ್ಯಾಂಕಿನಲ್ಲಿ ಖಾತೆಯನ್ನು ಹೊಂದಿರುವ ಗ್ರಾಹಕರು 125 ರೂಪಾಯಿ ವಿಮಾ ಹಣ ಪಾವತಿ ಮಾಡಿದರೆ ಅಪಘಾತ ಸಂದರ್ಭದಲ್ಲಿ ಕುಟುಂಬದವರಿಗೆ 10 ಲಕ್ಷ ರೂಪಾಯಿಗಳವರೆಗೆ ವಿಮಾ ಪರಿಹಾರ ಪಡೆಯಲು ಅವಕಾಶವಿದೆ ಎಂದರು.
ಕೆರೆ ಅಭಿವೃದ್ಧಿಪಡಿಸುವ ಭರವಸೆ: ಬ್ಯಾಂಕಿನ ನೂತನ ಕಟ್ಟಡವನ್ನು ಜಿಲ್ಲಾಧಿಕಾರಿ ಸಿ.ಎಸ್.ಕರೀಗೌಡ ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಭಾಗದ ರೈತರು ಖಾಸಗಿಯವರಿಂದ ಸಾಲ ಪಡೆದು ಅಧಿಕ ಬಡ್ಡಿ ಪಾವತಿ ಮಾಡಿ ಸಂಕಷ್ಟಕ್ಕೆ ಸಿಲುಕುವುದನ್ನು ನಿಲ್ಲಿಸಬೇಕು. ಬ್ಯಾಂಕುಗಳಲ್ಲಿ ಬೆಳೆ ಸಾಲ ಮಾತ್ರವಲ್ಲದೆ ಕಡಿಮೆ ಬಡ್ಡಿದರದಲ್ಲಿ ಹಲವಾರು ರೀತಿಯ ಸಾಲ ಸೌಲಭ್ಯಗಳು ದೊರೆಯುತ್ತಿವೆ. ಇವುಗಳನ್ನು ರೈತರು ಸೂಕ್ತ ರೀತಿಯಲ್ಲಿ ಬಳಸಿಕೊಳ್ಳಬೇಕು. ಕರ್ಣಾಟಕ ಬ್ಯಾಂಕ್ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಕೆರೆ ಅಭಿವೃದ್ದಿ ಕೆಲಸಕ್ಕೆ 10 ಲಕ್ಷ ರೂಪಾಯಿ ದೇಣಿಗೆ ನೀಡುತ್ತಿದೆ ಎಂದರು.