Advertisement

ಹಸಿರೀಕರಣಕ್ಕೆ 422 ಕೆಜಿ ಬೀಜ ಬಿತ್ತನೆ

04:22 PM Jun 23, 2022 | Team Udayavani |

ಕೊಪ್ಪಳ: ಆಧುನೀಕರಣ ಬೆಳೆದಂತೆ ಕಾಡು ನಾಶವಾಗಿ, ನಗರ ಪ್ರದೇಶ ವಿಸ್ತಾರವಾಗುತ್ತಿದೆ. ಇದರಿಂದ ದಿನೇ ದಿನೆ ಪ್ರಕೃತಿಯಲ್ಲಿ ಏರಿಳಿತ ಕಂಡು ಬರುತ್ತಿವೆ. ಮುಂದಿನ ಪೀಳಿಗೆಗೆ ಎದುರಾಗುವ ಆಪತ್ತು ತಪ್ಪಿಸಬೇಕೆಂಬ ಉದ್ದೇಶದಿಂದ ಅರಣ್ಯ ಇಲಾಖೆ ಕಾಡು ಬೆಳೆಸುವ, ಇರುವ ಕಾಡು ಉಳಿಸುವ ಕಾರ್ಯದಲ್ಲಿ ತೊಡಗಿದೆ.

Advertisement

ಇದಕ್ಕೆ ನಿದರ್ಶನವೆಂಬಂತೆ ಜಿಲ್ಲಾ ಅರಣ್ಯ ಇಲಾಖೆ ಪ್ರಸಕ್ತ ಸಾಲಿನಲ್ಲಿ 422 ಕೆ.ಜಿ. ಬೀಜಗಳನ್ನು ಬಿತ್ತನೆ ಮಾಡುವ ಮೂಲಕ ಬರದ ನಾಡನ್ನು ಹಸಿರೀಕರಣಕ್ಕೆ ಮುಂದಾಗಿದೆ. ಜಿಲ್ಲೆಯು ಮೊದಲೇ ಬರಪೀಡಿತ ಪ್ರದೇಶ ಎಂಬ ಹಣೆಪಟ್ಟಿ ಹೊತ್ತುಕೊಂಡಿದೆ. ಕೆಲವು ವರ್ಷಗಳ ಮಳೆಯ ಸರಾಸರಿ ಅಂಕಿ ಅಂಶಗಳನ್ನು ಅವಲೋಕಿಸಿದಾಗ, ಬರವೇ ಹೆಚ್ಚು ಬಾರಿ ಆವರಿಸಿ ಇಡೀ ಜಿಲ್ಲೆಯ ಜನರನ್ನು ಜೀವ ಹಿಂಡುವಂತೆ ಮಾಡಿದೆ.

ಅರಣ್ಯೀಕರಣ ಮಾಡಿದರೆ ಹೆಚ್ಚು ಮಳೆಯಾಗಿ ಸರ್ವ ವಲಯವೂ ಸಮೃದ್ಧಿಯಾಗಲಿದೆ ಎನ್ನುವ ಉದ್ದೇಶ ಅರಿತ ಸರ್ಕಾರವು ಅರಣ್ಯ ಇಲಾಖೆಯ ಮೂಲಕ ಈ ಬಾರಿ ಹಸಿರು ಕರ್ನಾಟಕ ಅಭಿಯಾನ ಆರಂಭಿಸಿದೆ. ಅದರ ಭಾಗವಾಗಿ ಬರಪೀಡಿತ ಪ್ರದೇಶವಾದ ಕೊಪ್ಪಳ ಜಿಲ್ಲೆಯಲ್ಲಿ ಅರಣ್ಯ ಇಲಾಖೆಯು 422 ಕೆ.ಜಿ. ವಿವಿಧ ತಳಿಯ ಗಿಡ-ಮರಗಳ ಬೀಜಗಳನ್ನು ನಾಟಿ ಮಾಡುವ ಅಭಿಯಾನ ಯಶಸ್ವಿಗೊಳಿಸಿದೆ. ಜಿಲ್ಲೆಯಲ್ಲಿನ ಸರ್ಕಾರಿ ಕಚೇರಿಗಳ ಆವರಣ, ಶಾಲೆ, ಕಾಲೇಜು, ಆಟದ ಮೈದಾನ, ಹಾಸ್ಟೆಲ್‌ ಗಳು ಸಾರ್ವಜನಿಕ ಸ್ಥಳಗಳಲ್ಲಿ, ಉದ್ಯಾನವನ ಸೇರಿದಂತೆ ವಿವಿಧ ತಾಣಗಳಲ್ಲಿ ಹಾಗೂ ಅರಣ್ಯ ಪ್ರದೇಶ ಆಯ್ಕೆ ಮಾಡಿಕೊಂಡು ಬೀಜಗಳನ್ನು ಯಶಸ್ವಿಯಾಗಿ ನೆಡಲಾಗಿದೆ.

ಯಾವ ಯಾವ ಬೀಜ ನೆಟ್ಟಿದೆ? ಜಿಲ್ಲೆಯಲ್ಲಿ ಅರಣ್ಯ ಇಲಾಖೆಯಿಂದ ಹೊಂಗೆ, ಕರಿಜಾಲಿ, ಬಿದಿರು, ನೇರಳೆ, ಅಂಟವಾಳ, ಸೀತಾಫಲ, ನುಗ್ಗೆ, ಶಿವಾನಿ, ಮಟ್ಟಿ, ಕಕ್ಕೆ, ತಾರೇ ಸೇರಿದಂತೆ ವಿವಿಧ ಬಗೆಯ ಬೀಜಗಳನ್ನು ನಾಟಿ ಮಾಡಲಾಗಿದೆ. ಪ್ರಸ್ತುತ ಮುಂಗಾರು ಆರಂಭವಾಗಿದ್ದು, ಈಗ ಬೀಜ ನೆಡುವ ಸಮಯವಾಗಿದ್ದರಿಂದ ಇದೇ ಮಳೆಗೆ ನೆಟ್ಟ ಬೀಜಗಳು ಮೊಳಕೆಯೊಡೆಯಲಿವೆ. ಈ ಸಸಿಮಡಿ ಮಾಡಿ ಅವುಗಳನ್ನು ರಸ್ತೆ ಬದಿಗಳಲ್ಲಿ ಸಸಿಗಳನ್ನು ನೆಟ್ಟು ಬೆಳೆಸಲಾಗುತ್ತಿತ್ತು. ಆದರೆ ಅವುಗಳಿಗೆ ಸಮಯ ಬೇಕಾಗಿದ್ದರಿಂದ ನೈಸರ್ಗಿಕವಾಗಿಯೇ ಕಾಡನ್ನು, ಗಿಡಗಳನ್ನು ಬೆಳೆಸಬೇಕೆಂಬ ಉದ್ದೇಶದಿಂದ ರಾಜ್ಯ ಸರ್ಕಾರವು ಮೊಟ್ಟ ಮೊದಲ ಬಾರಿಗೆ ಈ ಬೀಜ ಬಿತ್ತನೆ ಅಭಿಯಾನ ಆರಂಭಿಸಿದೆ.

ವಿದ್ಯಾರ್ಥಿಗಳ, ಸಂಘ-ಸಂಸ್ಥೆಗಳ ಸಹಯೋಗ: ಜಿಲ್ಲೆಯಲ್ಲಿ ಕೇವಲ ಅರಣ್ಯ ಇಲಾಖೆಯೊಂದೇ ಈ ಕಾರ್ಯದಲ್ಲಿ ತೊಡಗದೇ ಶಾಲೆ, ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಈ ಅಭಿಯಾನ ಯಶಸ್ವಿ ಆಗಿದೆ. ಕೊಪ್ಪಳ ತಾಲೂಕಿನಲ್ಲಿ 102 ಕೆಜಿ ಬೀಜ ನಾಟಿ ಮಾಡಿದ್ದರೆ, ಗಂಗಾವತಿ ತಾಲೂಕಿನಲ್ಲಿ 105 ಕೆಜಿ, ಕುಷ್ಟಗಿ ತಾಲೂಕಿನಲ್ಲಿ 215 ಕೆಜಿ ಸೇರಿದಂತೆ ಒಟ್ಟು 422 ಕೆಜಿ ಬೀಜಗಳ ನಾಟಿಯ ಕಾರ್ಯ ಮುಗಿದಿದೆ. ಕೆಲವೊಂದು ಪ್ರದೇಶದಲ್ಲಿ ನೆಟ್ಟ ಸ್ಥಳಗಳ ನಿರ್ವಹಣೆ ಆಯಾ ಸಂಸ್ಥೆಗಳಿಗೆ ನೀಡಲಾಗಿದ್ದು, ಸಾರ್ವಜನಿಕ ಪ್ರದೇಶದಲ್ಲಿನ ಕೆಲವೊಂದು ಪ್ರದೇಶಗಳನ್ನು ಅರಣ್ಯ ಇಲಾಖೆ ನಿರ್ವಹಿಸುತ್ತಿದೆ.

Advertisement

ಬರದ ನಾಡು ಹಸಿರಾಗಿಸಲು ಪಣ: ಬರದ ನಾಡನ್ನು ಹಸಿರೀಕರಣ ಮಾಡಲು ಅರಣ್ಯ ಇಲಾಖೆ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು ಮುಂದಾಗಿರುವುದು ಉತ್ತಮ ಬೆಳವಣಿಗೆಯಾಗಿದೆ. ಆದರೂ ಜನರಲ್ಲಿ ಇನ್ನೂ ಪರಿಸರದ ಬಗ್ಗೆ ಹೆಚ್ಚೆಚ್ಚು ಕಾಳಜಿ ಬರಬೇಕಿದೆ. ನೆಟ್ಟ ಸಸಿಗಳನ್ನು ಪೋಷಣೆ ಮಾಡುವ ಹೊಣೆಗಾರಿಕೆ ಪ್ರತಿ ವ್ಯಕ್ತಿಯ ಜವಾಬ್ದಾರಿಯಾಗಿದೆ. ಎಲ್ಲವನ್ನೂ ಸರ್ಕಾರವೇ, ಆಡಳಿತ ವರ್ಗವೇ ಮಾಡಲು ಸಾಧ್ಯವಿಲ್ಲ.

ಜನರ ಸಹಯೋಗವಿದ್ದರೆ ಮಾತ್ರ ಹಸಿರೀಕರಣ ಸಾಧ್ಯವಿದೆ. ನಮ್ಮ ಇಲಾಖೆಯಿಂದ ಜಿಲ್ಲೆಯಲ್ಲಿ ಮೊದಲ ಬಾರಿಗೆ ಹಸೀರು ಕರ್ನಾಟಕ ಅಭಿಯಾನದಡಿ ಜಿಲ್ಲೆಯಲ್ಲಿ ಈ ಬಾರಿ 422 ಕೆಜಿ ವಿವಿಧ ಬಗೆಯ ಗಿಡಗಳ ಬೀಜಗಳನ್ನು ಶಾಲೆ, ಕಾಲೇಜು ಸೇರಿದಂತೆ ವಿವಿಧ ಸರ್ಕಾರಿ ಕಟ್ಟಡಗಳ ಆವರಣದಲ್ಲಿ ನೆಡಲಾಗಿದೆ. ಕೆಲ ಅರಣ್ಯ ಪ್ರದೇಶದಲ್ಲಿ ನೆಟ್ಟಿದ್ದೇವೆ. ಕೊಪ್ಪಳವನ್ನು ಹಸಿರೀಕರಣ ಮಾಡುವುದು ನಮ್ಮ ಗುರಿಯಾಗಿದೆ. ಇದರಲ್ಲಿ ಜನರ ಸಹಕಾರವೂ ಅಗತ್ಯವಿದೆ. ಜನರೂ ಪರಿಸರದ ಬಗ್ಗೆ ಜಾಗೃತಿ ವಹಿಸಬೇಕಿದೆ. –ಹರ್ಷಕುಮಾರ, ಡಿಎಫ್‌ಒ, ಕೊಪ್ಪಳ

-ದತ್ತು ಕಮ್ಮಾರ

Advertisement

Udayavani is now on Telegram. Click here to join our channel and stay updated with the latest news.

Next