ಶಿರಸಿ: ಕಾಂಗ್ರೆಸ್ ತನ್ನ ಟೂಲ್ ಕಿಟ್ ಬಳಸಿ ಬಿಜೆಪಿ ಸರ್ಕಾರದ ವಿರುದ್ಧ 40 ಎಂಬ ಸುಳ್ಳು ಆರೋಪ ಮಾಡಿದ್ದರ ಹಿಂದೆ ಇದ್ದ ಸತ್ಯಾಂಶ ಈಗ ಸಂಪೂರ್ಣ ಬಯಲಾಗಿದೆ. ಪಂಚ ರಾಜ್ಯಗಳಲ್ಲಿ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಶಿಷ್ಯ ಗುತ್ತಿಗೆದಾರ ಅಂಬಿಕಾಪತಿ ಮನೆಯಲ್ಲಿ ಸಿಕ್ಕಿರುವ 42 ಕೋಟಿ ರೂ.ಗಳು ಕರ್ನಾಟಕ ಕಾಂಗ್ರೆಸ್ ಪಾಲಿನ ಎಟಿಎಂ ಆಗಿದೆ ಹಾಗೂ ಸರ್ಕಾರ ಕಮೀಷನ್ ದಂಧೆ ನಡೆಸುತ್ತಿದೆ ಎಂದು ನಗರ ಹಾಗೂ ಗ್ರಾಮೀಣ ಬಿಜೆಪಿ ನಗರದಲ್ಲಿ ಪ್ರತಿಭಟನೆ ವ್ಯಕ್ತಪಡಿಸಿ ರಾಜ್ಯಪಾಲರಿಗೆ ದೂರು ಸಲ್ಲಿಸಿದೆ.
ಸಹಾಯಕ ಆಯುಕ್ತರ ಕಚೇರಿ ಮುಂದೆ ಆಕ್ರೋಶ ವ್ಯಕ್ತಪಡಿಸಿದ ಬಿಜೆಪಿ ಪ್ರಮುಖರು, ರಾಜ್ಯ ಸರ್ಕಾರ ಕಮೀಷನ್ ದಂಧೆ ನಡೆಸುತ್ತಿದೆ ಎಂಬುದಕ್ಕೆ ಇದೇ ಪುರಾವೆ ಆಗಿದೆ. ಎಲ್ಲಾ ಇಲಾಖೆಯ ಮುಖ್ಯಸ್ಥರಿಗೂ ತಿಂಗಳ ಕಮೀಷನ ಟಾರ್ಗೆಟ್ ನೀಡಲಾಗಿದ್ದು ಕರ್ನಾಟಕ ರಾಜ್ಯ ಬರಗಾಲದಲ್ಲಿಯೂ ಬಂಗಾರದಂತೆ ಕಾಂಗ್ರೆಸ್‌ಗೆ ಹೊಳೆಯುತ್ತಿದೆ. ಒಬ್ಬ ಮಾಜಿ ಕಾರ್ಪೋರೇಟರ್ ಪತಿಯೇ ನಿತ್ಯವು ಕೋಟಿಗಟ್ಟಲೇ ದುಡ್ಡಿನ ಮೇಲೆ ಮಲಗುತ್ತಾನೆಂದಾದರೆ ಕಾಂಗ್ರೆಸ್ ಸರ್ಕಾರದ ಮಂತ್ರಿಗಳಾಗಿದ್ದವರು ಅದೆಷ್ಟು ದೋಚುತ್ತಿದ್ದಾರೆಂದು ರಾಜ್ಯದ ಜನತೆ ಊಹಿಸಿಕೊಳ್ಳ ಬೇಕಾಗಿದೆ ಎಂದು ಆಕ್ಷೇಪಿಸಿದ್ದಾರೆ.
ಜನರ ಶ್ರಮದ ದುಡಿಮೆಯ ಹಣವನ್ನು ಪಂಚ ರಾಜ್ಯಗಳ ಚುನಾವಣೆ ಖರ್ಚಿಗೆ ಕಾಂಗ್ರೆಸ್ ಸರ್ಕಾರ ನೀಡಲು ಮುಂದಾಗಿರುವುದು ನಾಡದ್ರೋಹದ ಕೆಲಸವಾಗಿದೆ. ರಾಜ್ಯದ ಜನತೆಗೆ ತೆರಿಗೆಯ ಹೊರೆ ಹೆಚ್ಚಿಸಿ ಜನರನ್ನು ಕಣ್ಣೀರಿನಲ್ಲಿ ಕೈತೊಳೆಯುವಂತೆ ಮಾಡಿ ಪಂಚ ರಾಜ್ಯಗಳ ಚುನಾವಣೆಗೆ ಫಂಡಿಂಗ್ ಮಾಡುತ್ತಿರುವುದು ಅತ್ತೆಯ ಆಸ್ತಿಯನ್ನು ಅಳಿಯ ದಾನ ಮಾಡಿದಂತಾಗಿದೆ. ಕಲೆಕ್ಷನ್ ದಂಧೆಯಲ್ಲಿ ಕಮಾಯಿ ಮಾಡುತ್ತ ಕರ್ನಾಟಕವನ್ನು ಎಟಿಎಂ ಮಾಡಿಕೊಂಡಿರುವ ಕಾಂಗ್ರೆಸ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ರಾಜ್ಯಪಾಲರು ಭ್ರಷ್ಟ ಕಾಂಗ್ರೆಸ್ ಸರ್ಕಾರದ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಪ್ರಮುಖರಾದ ಆರ್.ಡಿ.ಹೆಗಡೆ ಜಾನ್ಮನೆ, ನರಸಿಂಹ ಬಕ್ಕಳ, ರಾಜೇಶ ಶೆಟ್ಟಿ, ವೀಣಾ ಶೆಟ್ಟಿ, ನಂದನ ಸಾಗರ್, ಪಿ.ವಿ.ಹೆಗಡೆ, ಜಿ.ಆರ್.ಬೆಳ್ಳೇಕೇರಿ, ಅನೀಶ ತಹಸೀಲ್ದಾರ, ರಾಘವೇಂದ್ರ ಶೆಟ್ಟಿ, ಇತರರು ಇದ್ದರು.