Advertisement

ಜಾರ್ಜ್‌ ಬುಷ್‌ ನಿಧನ

06:00 AM Dec 02, 2018 | Team Udayavani |

ಹೂಸ್ಟನ್‌: ಅಮೆರಿಕದ 41ನೇ ಅಧ್ಯಕ್ಷರಾಗಿದ್ದ ಜಾರ್ಜ್‌ ಎಚ್‌. ಡಬ್ಲ್ಯೂ. ಬುಷ್‌ ಶುಕ್ರವಾರ ನಿಧನರಾಗಿದ್ದಾರೆ. ಅವರಿಗೆ 94 ವರ್ಷ ವಯಸ್ಸಾಗಿತ್ತು. ಕೆಲವೇ ತಿಂಗಳ ಹಿಂದೆ ಅವರ ಪತ್ನಿ ಬಾರ್ಬರಾ ಬುಶ್‌ ನಿಧನರಾಗಿದ್ದರು. ಈ ಬಗ್ಗೆ ಮಾಧ್ಯಮಗಳಿಗೆ ವಿವರ ನೀಡಿದ ಪುತ್ರ ಹಾಗೂ ಅಮೆರಿಕದ 43ನೇ ಅಧ್ಯಕ್ಷರಾಗಿದ್ದ ಜಾರ್ಜ್‌ ಬುಷ್‌ ಜ್ಯೂನಿಯರ್‌, ಇಡೀ ಬುಷ್‌ ಕುಟುಂಬ ದುಃಖತಪ್ತವಾಗಿದೆ ಎಂದಿದ್ದಾರೆ. ಪಾರ್ಕಿನ್ಸನ್‌ ರೋಗದಿಂದ ಬಳಲುತ್ತಿದ್ದ ಬುಷ್‌, ಕಳೆದ ಕೆಲವು ವರ್ಷಗಳಿಂದ ವೀಲ್‌ ಚೇರ್‌ಗೆ ಸೀಮಿತವಾಗಿದ್ದರು. ಅಷ್ಟೇ ಅಲ್ಲ ಅವರ ಆರೋಗ್ಯ ಆಗಾಗ್ಗೆಡಿ ಹದಗೆಡುತ್ತಿದ್ದುದರಿಂದ ಪದೇ ಪದೆ ಆಸ್ಪತ್ರೆಗೆ ದಾಖಲಾಗ ಬೇಕಾಗುತ್ತಿತ್ತು. ಪತ್ನಿ ನಿಧನವಾದ ದಿನವೇ ರಕ್ತ ಸೋಂಕಿನಿಂದಾಗಿ ಆಸ್ಪತ್ರೆಗೆ ದಾಖಲಾಗಿ, ಸುಮಾರು 13 ದಿನಗಳವರೆಗೆ ಚಿಕಿತ್ಸೆ ಪಡೆದಿದ್ದರು. ನಂತರ ಜೂನ್‌ 12 ರಂದು ಹುಟ್ಟುಹಬ್ಬ ಆಚರಿಸಿಕೊಂಡಿದ್ದ ಅವರು, ಅಮೆರಿಕ ಇತಿಹಾಸದಲ್ಲಿ 94ನೇ ಹುಟ್ಟುಹಬ್ಬ ಆಚರಿಸಿಕೊಂಡ ಏಕೈಕ ಮಾಜಿ ಅಧ್ಯಕ್ಷ ಎಂಬ ಹೆಗ್ಗಳಿಕೆಯನ್ನೂ ಪಡೆದಿದ್ದರು.

Advertisement

ಪೈಲಟ್‌ ಹಾಗೂ ಸಿಐಎ ಮಾಜಿ ಮುಖ್ಯಸ್ಥರಾಗಿದ್ದ ಬುಷ್‌ 1988 ನ.8 ರಂದು ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. 1989 ಜ.20 ರಂದು ಪ್ರಮಾಣ ವಚನ ಸ್ವೀಕರಿಸಿ, 1993 ಜ.20ರ ವರೆಗೆ ಅಧಿಕಾರ ದಲ್ಲಿದ್ದರು. ಇವರ ಅಧ್ಯಕ್ಷೀಯ ಅವಧಿ ಯಲ್ಲಿ ವಿಶ್ವದ ಹಲವು ದೇಶಗಳಲ್ಲಿ ಮಹತ್ವದ ಕ್ರಾಂತಿ ಹಾಗೂ ರೂಪಾಂತರಗಳಾಗಿವೆ. ಸೋವಿಯತ್‌ ಒಕ್ಕೂಟ ಕುಸಿದಿದ್ದು, ಶೀತಲ ಸಮರಕ್ಕೆ ಕೊನೆ ಹಾಡಿದ್ದು, ಬರ್ಲಿನ್‌ ಗೋಡೆ ಕೆಡವಿದ್ದು, ನ್ಯಾಟೋ ದಲ್ಲಿ ಜರ್ಮನಿ ಸೇರ್ಪಡೆ ಸೇರಿದಂತೆ ಮುಂದಿನ ಹಲವು ದಶಕಗಳವರೆಗೆ ಸ್ಮರಿಸಬಹುದಾದಂತಹ ಮಹತ್ವದ ಘಟನೆಗಳು ಘಟಿಸಿವೆ. 

ಶೀತಲ ಸಮರಕ್ಕೆ ಕೊನೆ ಹಾಡಲು ಬುಷ್‌ ಸೋವಿಯತ್‌ ಯೂನಿಯನ್‌ನ ನಾಯಕ ಮಿಖೈಲ್‌ ಗೋರ್ಬಚೆವ್‌ ಜೊತೆ ಮಾತುಕತೆ ನಡೆಸಿದ್ದರು. ಇದು ಭೌಗೋಳಿಕ ಇತಿಹಾಸದಲ್ಲಿ ಅತ್ಯಂತ ಮಹತ್ವದ ರೂಪಾಂತರಕ್ಕೆ ಕಾರಣವಾಯಿತು. ಅಲ್ಲಿಯವರೆಗೂ ಆರ್ಥಿ ಕತೆಯು ದೇಶಕ್ಕೆ ಸೀಮಿತವಾಗಿತ್ತಾದರೂ, ಶೀತಲ ಸಮರದ ನಂತರ ಆರ್ಥಿಕತೆ ವಿಶ್ವಮಟ್ಟದಲ್ಲಿ ಅಭಿವೃದ್ಧಿಗೊಳ್ಳಲು ಕಾರಣ ವಾಯಿತು. ಇನ್ನೊಂದೆಡೆ 1990ರಲ್ಲಿ, ಸರ್ವಾಧಿಕಾರಿ ಸದ್ದಾಂ ಹುಸೇನ್‌ ನೇತೃತ್ವದಲ್ಲಿ ಕುವೈತ್‌ ಮೇಲೆ ದಾಳಿ ನಡೆಸಲು ಮುಂದಾದಾಗ 32 ದೇಶಗಳ ಸಹಕಾರದಿಂದ ತಡೆಯಲಾಯಿತು. ಇದರ ಹಿರಿಮೆಯೂ ಬುಷ್‌ಗೇ ಸಲ್ಲಬೇಕು. 1924 ಜೂ.12 ರಂದು ಮೆಸಾಚು ಸೆಟ್ಸ್‌ನ ಮಿಲ್ಟನ್‌ನಲ್ಲಿ ಶ್ರೀಮಂತ ಕುಟುಂಬದಲ್ಲಿ ಜನಿಸಿದ ಸೀನಿಯರ್‌ ಬುಷ್‌, 1945 ಜನವರಿಯಲ್ಲಿ ಬಾರ್ಬರಾರನ್ನು ವಿವಾಹವಾಗಿದ್ದರು. ದಂಪತಿ ಆರು ಮಕ್ಕಳನ್ನು ಹೊಂದಿದ್ದಾರೆ.

ಬಾಂಧವ್ಯ ವೃದ್ಧಿಸಿದ ಮುತ್ಸದ್ದಿ: ಮೋದಿ
ಬುಷ್‌ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿರುವ ಪ್ರಧಾನಿ ಮೋದಿ, “ಬುಷ್‌ ಅವರು ಭಾರತ ಮತ್ತು ಅಮೆರಿಕದ ನಡುವೆ ಉತ್ತಮ ಬಾಂಧವ್ಯ ಮೂಡಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದ ಮುತ್ಸದ್ದಿ’ ಎಂದು ಬಣ್ಣಿಸಿದ್ದಾರೆ. ಇನ್ನು ಬುಷ್‌ ನಿಧನಕ್ಕೆ ಹಾಲಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಮಾಜಿ ಅಧ್ಯಕ್ಷ ಒಬಾಮ ಸೇರಿದಂತೆ ವಿವಿಧ ದೇಶಗಳ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next