ಪಣಜಿ: ಓಲ್ಡ್ ಗೋವಾದ ಬೆಸಿಲಿಕಾ ಆಫ್ ಜೀಸಸ್ ಕ್ರೈಸ್ಟ್ ಮತ್ತು ಇತರ ಕೆಲವು ಚರ್ಚ್‍ಗಳ ಜೀರ್ಣೋದ್ಧಾರಕ್ಕಾಗಿ ತೀರ್ಥಯಾತ್ರೆ ಮತ್ತು ಆಧ್ಯಾತ್ಮಿಕ ಮಿಷನ್ ಯೋಜನೆಯಡಿ ಕೇಂದ್ರದಿಂದ 41.49 ಕೋಟಿ ರೂ.ಗಳ ನಿಧಿಯನ್ನು ಮಂಜೂರು ಮಾಡಲಾಗಿದೆ.
ದೇಶದಲ್ಲಿ ಮಾತ್ರವಲ್ಲದೆ ವಿಶ್ವದಲ್ಲಿಯೇ ಪ್ರಸಿದ್ಧವಾಗಿರುವ ಓಲ್ಡ್ ಗೋವಾ ಚರ್ಚ್‍ಗೆ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಭೇಟಿ ನೀಡುತ್ತಾರೆ. 2024ರಲ್ಲಿ ಓಲ್ಡ್ ಗೋವಾದಲ್ಲಿ ಸೇಂಟ್ ಫ್ರಾನ್ಸಿಸ್ ಕ್ಸೇವಿಯರ್ ಅವರ ದೇಹವನ್ನು ಪ್ರದರ್ಶಿಸಲಾಗುವುದು ಮತ್ತು ಅದಕ್ಕೂ ಮೊದಲು ಸಂಬಂಧಿತ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಪ್ರವಾಸೋದ್ಯಮ ಸಚಿವ ರೋಹನ್ ಖಂವಟೆ ಮಾಹಿತಿ ನೀಡಿದರು.
ಪಣಜಿಯಲ್ಲಿ ನಡೆದ ಗೋವಾ ರಾಜ್ಯ ಪ್ರವಾಸೋದ್ಯಮ ನಿಗಮ ಸಭೆಯ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಈ ಸಂದರ್ಭದಲ್ಲಿ ಪ್ರವಾಸೋದ್ಯಮ ಇಲಾಖೆ ನಿರ್ದೇಶಕ ನಿಖಿಲ್ ದೇಸಾಯಿ, ಪೊಲೀಸ್ ವರಿಷ್ಠಾಧಿಕಾರಿ ಬೋಸ್ಕೋ ಜಾರ್ಜ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಗೋವಾ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ಜಿಟಿಡಿಸಿ) ಶೀಘ್ರದಲ್ಲೇ ಮುಗಾರ್ಂವ್ ಬಂದರಿನಲ್ಲಿ ಕೌಂಟರ್ ತೆರೆಯಲಿದೆ. ಕೌಂಟರ್ ತೆರೆದ ನಂತರ ಇಲ್ಲಿ ಸರದಿ ವ್ಯವಸ್ಥೆ ಅನುಸರಿಸಲಾಗುವುದು ಎಂದು ಸಚಿವ ರೋಹನ್ ಖಂವಟೆ ಮಾಹಿತಿ ನೀಡಿದರು.
ಕಳೆದ ಎರಡು ದಿನಗಳ ಹಿಂದೆ ವಿದೇಶಿ ಪ್ರವಾಸಿಗರ ಬಳಿ ಟ್ಯಾಕ್ಸಿ ಚಾಲಕರ ಅನುಚಿತ ವರ್ತನೆ ಸ್ವೀಕಾರಾರ್ಹವಲ್ಲ. ಟ್ಯಾಕ್ಸಿ ಚಾಲಕರ ವರ್ತನೆಗೆ ಸಚಿವ ರೋಹನ್ ಖಂವಟೆ ವಿಷಾದ ವ್ಯಕ್ತಪಡಿಸಿದರು. ಮೊನ್ನೆ ಬಂದ ಕ್ರೂಸ್ ಹಡಗಿನಲ್ಲಿ ಉನ್ನತ ದರ್ಜೆಯ ಪ್ರವಾಸಿಗರು ಇದ್ದರು. ಇಂತಹ ಪ್ರವಾಸಿಗರು ಗೋವಾಕ್ಕೆ ಬೇಕು. ಈ ಘಟನೆಯ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ ಎಂದು ಸಚಿವ ರೋಹನ್ ಖಂವಟೆ ಮಾಹಿತಿ ನೀಡಿದ್ದಾರೆ.
ಗೋವಾದ ಪ್ರವಾಸೋದ್ಯಮದಲ್ಲಿನ ಅವ್ಯವಹಾರಗಳ ವಿರುದ್ಧ ಕ್ರಮ ಕೈಗೊಳ್ಳುವ ಉದ್ದೇಶದಿಂದ ಸರ್ಕಾರವು ಪ್ರಸ್ತುತ ಪೂರ್ಣಾವಧಿಯ ಪ್ರವಾಸಿ ಪೊಲೀಸ್ ಇಲಾಖೆಯನ್ನು ಸ್ಥಾಪಿಸಲು ಪರಿಗಣಿಸುತ್ತಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಬೋಸ್ಕೋ ಜಾರ್ಜ್ ಮಾಹಿತಿ ನೀಡಿದರು. ನಡೆಯುತ್ತಿರುವ ಪ್ರವಾಸಿ ಋತುವಿಗಾಗಿ ಪ್ರವಾಸಿ ತಾಣಗಳಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ನಿಭಾಯಿಸಲು ಆಂತರಿಕ ಪೊಲೀಸ್ ಮತ್ತು ಮೀಸಲು ಪೊಲೀಸರು ಸಿದ್ಧರಾಗಿದ್ದಾರೆ. ಪ್ರವಾಸಿ ಕಾಲದಲ್ಲಿ ಯಾವುದೇ ತೊಂದರೆಯಾಗದಂತೆ ಈ ವ್ಯವಸ್ಥೆ ಮಾಡಲಾಗಿದೆ ಎಂದರು.