Advertisement
ಗ್ರಾಮೀಣ ಪ್ರದೇಶದ ಜನರಿಗೆ ಶುದ್ಧ ನೀರು ಪೂರೈಕೆ ಮಾಡುವ ಉದ್ದೇಶದಿಂದ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ನಿರ್ಮಿಸುವ ಯೋಜನೆಯನ್ನು ಹಿಂದಿನ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿತು. ಸರ್ಕಾರದ ಉದ್ದೇಶಿತ ಆಶಯ ಇನ್ನೂ ಸಾಕಾರಗೊಂಡಿಲ್ಲ. ಜಿಲ್ಲೆಯ ಹಲವೆಡೆ ಈ ಘಟಕಗಳೇ ಇಲ್ಲ. ಇರುವ ಹಲವು ಕಡೆ ಘಟಕಗಳು ಕೆಟ್ಟು ನಿಂತಿವೆ. ಇನ್ನೂ ಕೆಲವು ಕಡೆ ಕುಂಟುತ್ತಾ ನಿರ್ಮಾಣ ಕಾಮಗಾರಿ ನಡೆದಿದೆ. ಹಲವೆಡೆ ಸಿದ್ಧಗೊಂಡು ಉದ್ಘಾಟನೆಯಾಗಿಲ್ಲ.
Related Articles
Advertisement
60 ಘಟಕ ನಿರ್ಮಿಸುವ ಗುರಿ: ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮ (ಕೆಆರ್‌ಐಡಿಎಲ್) 60 ಘಟಕಗಳನ್ನು ನಿರ್ಮಿಸುವ ಗುರಿ ಹೊಂದಿತ್ತು. ಇದರಲ್ಲಿ 56 ನ್ನು ನಿರ್ಮಿಸಿ ನಿರ್ವಹಣೆ ಮಾಡಿದೆ. ಇದರಲ್ಲಿ 27 ಕೆಲಸ ನಿರ್ವಹಿಸುತ್ತಿದ್ದು, 29 ಕೆಟ್ಟು ಹೋಗಿವೆ. ಗ್ರಾಮೀಣ ನೀರು ಸರಬರಾಜು ವ್ಯಾಪ್ತಿಗೆ 91 ಘಟಕಗಳನ್ನು ನೀಡಲಾಗಿದೆ.
ಇದರಲ್ಲಿ 14 ಘಟಕಗಳ ಕಾಮಗಾರಿ ಪ್ರಗತಿಯಲ್ಲಿದೆ. 23 ಉದ್ಘಾಟನೆಗೆ ಸಿದ್ಧವಾಗಿವೆ. 34 ಕಾರ್ಯಾರಂಭ ಮಾಡಿದ್ದು, 25 ಕೆಲಸ ನಿರ್ವಹಿಸುತ್ತಿವೆ. 09 ಕೆಟ್ಟು ಹೋಗಿವೆ. ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮ (ಕೆಆರ್‌ಐಡಿಎಲ್) ನಿರ್ವಹಿಸುತ್ತಿದ್ದ 56 ಘಟಕಗಳನ್ನು ಇದೀಗ ಗ್ರಾಮೀಣ ನೀರು ಸರಬರಾಜು ಯೋಜನೆಯ ವ್ಯಾಪ್ತಿಗೆ ವಹಿಸಲಾಗಿದೆ.
ಸಹಕಾರ ಸಂಘಗಳ ನಿರ್ವಹಣೆ: ವಿಶೇಷವೆಂದರೆ ಜಿಲ್ಲೆಯಲ್ಲಿ ಸಹಕಾರ ಸಂಘಗಳು 59 ಶುದ್ಧ ಕುಡಿಯುವ ನೀರಿನ ಘಟಕಗಳನ್ನು ನಿರ್ವಹಿಸುತ್ತಿವೆ. ಇವುಗಳಲ್ಲಿ 59 ಸಹ ಸುಸ್ಥಿತಿಯಲ್ಲಿ ಕೆಲಸ ನಿರ್ವಹಿಸುತ್ತಿವೆ! ಖಾಸಗಿ ಸಹಕಾರ ಸಂಘಗಳ ನಿರ್ವಹಣೆಯ ಎಲ್ಲ ಘಟಕಗಳು ಸುಸ್ಥಿತಿಯಲ್ಲಿವೆ. ಸರ್ಕಾರಿ ನಿರ್ವಹಣೆಯಲ್ಲಿ ಅನೇಕ ಘಟಕಗಳು ಕೆಟ್ಟು ನಿಂತಿವೆ.
ಸೌಲಭ್ಯ ಇದ್ದರೂ ಜನರಿಗೆ ಪ್ರಯೋಜನವಾಗಿಲ್ಲ: ಜನ ಸಾಮಾನ್ಯರಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ಆರಂಭಿಸಿರುವ ಅನೇಕ ಘಟಕಗಳು ಕೆಟ್ಟು ನಿಂತಿರುವುದರಿಂದ ಸೌಲಭ್ಯ ಇದ್ದರೂ ಜನರು ಅದರ ಪ್ರಯೋಜನ ಪಡೆಯಲು ಸಾಧ್ಯವಾಗದಂತಾಗಿದೆ. ಇದರಿಂದ ಗ್ರಾಮೀಣ ಜನರಿಗೆ ಶುದ್ಧ ನೀರು ಇನ್ನೂ ಮರೀಚಿಕೆಯಾಗಿದೆ. ಯಳಂದೂರು ತಾಲೂಕಿನ ಹೊನ್ನೂರು, ಯರಿಯೂರು, ಮದ್ದೂರು, ಮಾಂಬಳ್ಳಿ, ಯರಗಂಬಳ್ಳಿ, ಅಂಬಳೆ-2 ಗ್ರಾಮಗಳಲ್ಲಿ ಗ್ರಾಮೀಣ ಪ್ರದೇಶದ ಜನರಿಗೆ ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ಮಾಣದ ಕಾಮಗಾರಿಯು 2018ರ ನವೆಂಬರ್ ತಿಂಗಳಲ್ಲಿ ಪ್ರಾರಂಭವಾಗಿತ್ತು.
ಇದರಲ್ಲಿ ಹೊನ್ನೂರಿನಲ್ಲಿ 3 ಮಾಂಬಳ್ಳಿ 1 ಕೆಸ್ತೂರು 1, ಮದ್ದೂರಿನಲ್ಲಿ 2, ಅಗರ ಗ್ರಾಮದಲ್ಲಿ ಒಂದು ಘಟಕಗಳ ಉದ್ಘಾಟನೆಯೂ ಆಗಿದೆ. ಯರಿಯೂರು ಗ್ರಾಮದಲ್ಲೂ 2 ಘಟಕಗಳು ನಿರ್ಮಾಣವಾಗಿವೆ ಆದರೆ ಕೆಲವೇ ದಿನಗಳಲ್ಲಿ ಇದು ಕೆಟ್ಟು ನಿಂತಿವೆ. ಇದನ್ನು ದುರಸ್ತಿ ಪಡಿಸಿದ್ದರೂ, ಮತ್ತೆ ಇದು ಕೆಟ್ಟು ಹೋಗುತ್ತಿದ್ದು ಸಾರ್ವಜನಿಕರು ಪರಿಪಾಟಲು ಪಡುವ ಸ್ಥಿತಿ ಇದೆ.
ಹನೂರು ಪಟ್ಟಣದಲ್ಲಿ 2 ಶುದ್ಧ ನೀರಿನ ಘಟಕಗಳಿವೆ. ಇದರಲ್ಲಿ ಪಟ್ಟಣ ಪಂಚಾಯ್ತಿ ನಿರ್ವಹಣೆಯ ಒಂದು ಕೆಟ್ಟು ನಿಂತಿದ್ದರೆ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನಿರ್ವಹಣೆ ಮಾಡುತ್ತಿರುವ ಇನ್ನೊಂದು ಘಟಕ ಸುಸ್ಥಿತಿಯಲ್ಲಿದೆ. ರಾಮಾಪುರ ಸಮೀಪ ಗೆಜ್ಜಲನತ್ತದಲ್ಲಿ ಕೆಆರ್‌ಐಡಿಲ್‌ನಿಂದ ಆರಂಭಗೊಂಡ ಘಟಕ 2 ತಿಂಗಳಾದ ನಂತರ ಕೆಟ್ಟುನಿಂತಿದೆ.
ಘಟಕ ಪೂರ್ಣ ಪ್ರಮಾಣದಲ್ಲಿ ಸಿದ್ಧವಾಗಿಲ್ಲ: ವಿವಿಧೆಡೆ ಹಲವು ತಿಂಗಳ ಹಿಂದೆಯೇ ಕಾಮಗಾರಿಯು ಪ್ರಾರಂಭವಾಗಿದ್ದರೂ. ಇನ್ನೂ ಕೆಲವೆಡೆ ಯಾವ ಘಟಕವು ಕೂಡ ಸಮಪರ್ಕವಾಗಿ ಪೂರ್ಣ ಪ್ರಮಾಣದಲ್ಲಿ ಸಿದ್ದವಾಗಿಲ್ಲ. ಕಾಮಗಾರಿಯು ಅರೆಬರೆಯಾಗಿದೆ. ಇದಕ್ಕೆ ಸಂಬಂಧಪಟ್ಟ ಗುತ್ತಿಗೆದಾರ ಹಾಗೂ ಇಲಾಖೆಯ ನಿರ್ಲಕ್ಷ್ಯವೇ ಕಾರಣವಾಗಿದೆ. ಆದಷ್ಟು ಬೇಗ ಕುಡಿಯುವ ನೀರಿನ ಘಟಕಗಳನ್ನು ಪ್ರಾರಂಭ ಮಾಡಬೇಕೆಂದು ಸಾರ್ವಜನಿಕರ ಆಗ್ರಹವಾಗಿದೆ.
ಜಿಲ್ಲೆಯ ಬಹುತೇಕ ಗ್ರಾಮಗಳಲ್ಲಿ ಪೂರೈಕೆಯಾಗುವ ನೀರು ಶುದ್ಧವಾಗಿಲ್ಲ. ಇದರಲ್ಲಿ ಪ್ಲೋರೈಡ್ ಅಂಶ ಹೆಚ್ಚಾಗಿದೆ. ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ ಹಂತದಲ್ಲೇ ಇದೆ. ಕೆಲವೆಡೆ ಇದರ ನಿರ್ವಹಣೆ ಸರಿಯಾಗಿಲ್ಲದೆ ಕೆಟ್ಟು ನಿಂತಿದೆ. ಸಂಬಂಧಪಟ್ಟ ಇಲಾಖೆ, ಜನಪ್ರತಿನಿಧಿಗಳು ಈ ಬಗ್ಗೆ ಕ್ರಮ ವಹಿಸಬೇಕು.-ಸಿದ್ಧರಾಜು, ಹೊನ್ನೂರು ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಾಪನೆ, ನಿರ್ವಹಣೆಯನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಈ ವಿಷಯದ ಬಗ್ಗೆ ಗ್ರಾಮೀಣಾಭಿವೃದ್ಧಿ ಸಚಿವರು, ಅಧಿಕಾರಿಗಳ ಸಭೆ ನಡೆಸಿದ್ದಾರೆ. ಇನ್ನೊಂದು ತಿಂಗಳೊಳಗೆ ಎಲ್ಲ ಘಟಕಗಳೂ ದುರಸ್ತಿಯಾಗಿ ಸಮರ್ಪಕವಾಗಿ ಕೆಲಸ ನಿರ್ವಹಿಸಬೇಕು ಎಂದು ಸೂಚಿಸಿದ್ದಾರೆ. ನಾವು ಸಹ ಅದಕ್ಕಾಗಿ ಬೇಕಾದ ಬಜೆಟ್ ಸಿದ್ಧಪಡಿಸಿ ಕಳುಹಿಸಿಕೊಡುತ್ತಿದ್ದೇವೆ.
-ಬಿ.ಎಚ್. ನಾರಾಯಣರಾವ್, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ * ಕೆ.ಎಸ್. ಬನಶಂಕರ ಆರಾಧ್ಯ