ಕೊರಟಗೆರೆ: ತಾಲೂಕಿನ ಕೋಳಾಲ ಹೋಬಳಿಯ ಎಲೆರಾಂಪುರದ ನರಸಿಂಹಗಿರಿ ಕ್ಷೇತ್ರದ ಕುಂಚಿಟಿಗ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಡಾ.ಹನುಮಂತ ಸ್ವಾಮೀಜಿಯವರ 40 ನೇ ವರ್ಧಂತಿ ಮಹೋತ್ಸವವನ್ನು ಸಾವಿರಾರು ಭಕ್ತರ ಸಮ್ಮಖದಲ್ಲಿ ಸಾಮಾಜಿಕ ಶೈಕ್ಷಣಿಕ ಧಾರ್ಮಿಕ ಕಾರ್ಯಕ್ರಮವನ್ನಾಗಿ ಆಚರಿಸಲಾಯಿತು.
ಜೂನ್ 10 ಶುಕ್ರವಾರ ನರಸಿಂಹಗಿರಿ ಕ್ಷೇತ್ರದ ಶ್ರೀ ಮಠದಲ್ಲಿ ಸ್ವಾಮೀಜಿಯವರ 40 ನೇ ಜನ್ಮ ದಿನದ ಅಂಗವಾಗಿ ರಕ್ತದಾನ ಶಿಬಿರವನ್ನು ಏರ್ಪಡಸಲಾಗಿತ್ತು, ಕಾರ್ಯಕ್ರಮದಲ್ಲಿ ಇತ್ತೀಚೆಗೆ ಐಎಎಸ್ ಪರೀಕ್ಷೆಯಲ್ಲಿ ಸಾಧನೆ ಮಾಡಿದ ಜನಾಂಗದ ಕಲ್ಪಶ್ರೀ ಅರುಣಾ ವಿಧ್ಯಾರ್ಥಿನಿಯರನ್ನು ಹಾಗೂ ತಾಲೂಕಿನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ದಾಸೋಹವನ್ನು ನಡೆಸಲಾಯಿತು.
ಸಮಾರಂಭದಲ್ಲಿ ಶ್ರೀ ಡಾ.ಹನುಮಂತನಾಥ ಸ್ವಾಮೀಜಿ ಮಾತನಾಡಿ ೧೦ವರ್ಷಗಳ ಹಿಂದೆ ಬೆಂಗಾಡಾಗಿದ್ದ ಈ ಪ್ರದೇಶದಲ್ಲಿ ಕುಂಚಿಟಿಗ ಮಹಾಸಂಸ್ಥಾನ ಮಠವನ್ನು ಧಾರ್ಮಿಕತೆಯಲ್ಲಿ ಮಹತ್ತರ ಎತ್ತರಕ್ಕೆ ಬೆಳೆಸಲು ಮಠದ ಭಕ್ತರುಗಳು ಕಾರಣರಾಗಿದ್ದಾರೆ, ಮಠದಲ್ಲಿ ಬರುವ ಭಕ್ತರಿಗೆ ಅನ್ನದಾಸೋಹ ನಡೆಯುತ್ತಿದೆ, ಜಾತ್ಯಾತೀತವಾಗಿ ದಿನವೂ 85 ವಿದ್ಯಾರ್ಥಿಗಳಿಗೆ ಬೆಳಗ್ಗೆ ಸಂಜೆ ಸಂಸ್ಕೃತ ವೇದ ಪಾಠದೊಂದಿಗೆ ಹತ್ತಿರ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡಿಸಿ ಊಟ ವಸತಿ ನೀಡುಲಾಗುತ್ತಿದೆ, ಮಠಕ್ಕೆ ಎಷ್ಟು ಬೇಕಾದರೂ ವಿದ್ಯಾರ್ಥಿಗಳು ಬರಲಿ ಅವರು ಎಲ್ಲಿಯವರೆಗೂ ಓದುತ್ತಾರೋ ಓದಿಸುವ ಹೊಣೆ ನನ್ನದು ಎಂದರು.
ಈ ಮಠದಲ್ಲಿ ಸಾಧನೆ ಮಾಡಿದ ವ್ಯಕ್ತಿಗೆ ಕುಂಚಶ್ರೀ ಪ್ರಶಸ್ತಿ ಪ್ರಾರಂಭಿಸಲಾಗಿದೆ, ಮಠವನ್ನು ಕಂಚಿಟಿಗ ಜನಾಂಗದ ಏಳಿಗೆಗೆ ಮತ್ತು ಸಮಾಜಿಕವಾಗಿ ಎಲ್ಲರ ಆಭ್ಯುದಯಕ್ಕೆ ಬೆಳೆಸಲಾಗುವುದು, ಇದಕ್ಕೆ ಮೂಲ ಕಾರಣ ಮಠಕ್ಕೆ ಭೂಮಿ ದಾನ ನೀಡಿದ ದೇವರಾಜಯ್ಯ ಮತ್ತು ಕುಟುಂಬದವರು ಎಂದರು.
ಸಿದ್ದರಬೆಟ್ಟದ ಶ್ರೀ ವೀರಭದ್ರಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಡಾ.ಹನುಮಂತ ಸ್ವಾಮಿಗಳು ಸಾಧಕ ಪುರುಷರಾಗಿದ್ದಾರೆ, ರಾಜ್ಯದಲ್ಲಿ ಮತ್ತು ಉತ್ತರಖಂಡದಲ್ಲಿ ಅತಿವೃಷ್ಟಿ ಅನಾವೃಷ್ಟಿ ಸಮಯದಲ್ಲಿ ನಾವಿಬ್ಬರೂ ಭಕ್ತರ ಜತೆಗೂಡಿ ಪರಿಹಾರ ಒದಗಿಸಿದ್ದೇವೆ ಇವರ ೪೦ ನೇ ಹುಬ್ಬವನ್ನು ಅರ್ಥಪೂರ್ಣವಾಗಿ, ಸಾಮಾಜಿವಾಗಿ ಆಚರಿಸಿಕೊಳ್ಳುತ್ತಿದ್ದಾರೆ ಎಂದರು.
ಶಾಸಕ ಡಾ.ಜಿ.ಪರಮೇಶ್ವರ್ ಮಾತನಾಡಿ, ಡಾ.ಹನುಮಂತಸ್ವಾಮೀಜಿಗಳು ಎಲ್ಲರನ್ನು ಒಟ್ಟಾಗಿ ತೆಗೆದುಕೊಂಡು ಹೊಗುತ್ತಿದ್ದು ಶ್ರೀ ಬಾಲಗಂಗಾಧರನಾಥ ಮಹಾಗುರುಗಳ ಶಿಷ್ಯರಾದ ಇವರು ಅವರ ದಾರಿಯಲ್ಲೇ ನಡೆಯತ್ತಿದ್ದು, ಈ ಮಠವು ಎಲ್ಲರಿಗೂ ನೆರಳಾಗಿ ನಿಂತು ಬೆಳೆಯುತ್ತಿದೆ ಎಂದರು.
ಸಮಾರಂಭದಲ್ಲಿ ಮಾಜಿ ಸಚಿವ ಟಿ.ಬಿ.ಜಯಚಂದ್ರ, ವಿಧಾನಪರಿಷತ್ ಸದಸ್ಯ ಚಿದಾನಂದ, ಜಿಲ್ಲಾ ಕುಂಚಿಟಿಗ ಸಂಘದ ಅಧ್ಯಕ್ಷ ಆರ್.ಕಾಮರಾಜು, ತಾಲೂಕು ಅಧ್ಯಕ್ಷ, ಮಾಜಿ ಜಿ.ಪಂ ಸದಸ್ಯ ಶಿವರಾಮಯ್ಯ, ಕೆಪಿಸಿಸಿ ವಕ್ತಾರ ಮುರಳೀಧರ ಹಾಲಪ್ಪ, ತುಮುಲ್ ನಿರ್ದೇಶಕ ಚಂದ್ರಶೇಖರ್, ಮಾಜಿ ಜಿಪಂ ಸದಸ್ಯರಾದ ಸುನಂದ, ಪ್ರಸನ್ನಕುಮಾರ್, ರುದ್ರೇಶ್, ಭೋಗಣ್ಣ ಸೇರಿದಂತೆ ಇತರರು ಹಾಜರಿದ್ದರು.