ಶಿರಸಿ: ರಾಜ್ಯದಲ್ಲಿ ಹೊಸದಾಗಿ 4 ಸಾವಿರ ಬಸ್ ಖರೀದಿಸಲಾಗುತ್ತಿದ್ದು, ಅದರಲ್ಲಿ 150 ಬಸ್ ಗಳನ್ನು ಉತ್ತರ ಕನ್ನಡ ಜಿಲ್ಲೆಗೆ ನೀಡಲಾಗುವುದು ಎಂದು ಸಾರಿಗೆ ಸಚಿವ ಬಿ ಶ್ರೀರಾಮುಲು ಹೇಳಿದರು.
ನಗರದ ಹಳೇ ಬಸ್ ನಿಲ್ದಾಣದ ನೂತನ ಕಟ್ಟಡ ಕಾಮಗಾರಿಗೆ ಬುಧವಾರ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಬೆಂಗಳೂರಿನ ಬಿಎಂಟಿಸಿ ವ್ಯಾಪ್ತಿಯಲ್ಲಿ ಇರುವ ಹೆಚ್ಚುವರಿ ಚಾಲಕ, ಕಂಡಕ್ಟರ್ ಗಳನ್ನು ಕೊರತೆ ಇರುವ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ವರ್ಗಾಯಿಸುವ ಬಗ್ಗೆ ಪರಿಶೀಲಿಸಲಾಗುವುದು ಎಂದರು. ಚಾಲಕ ವೃತ್ತಿಯಲ್ಲಿರುವವರು ಹಲವು ಒತ್ತಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರತಿ ತಿಂಗಳೂ ಅವರಿಗೆ ಸರಿಯಾದ ಸಮಯಕ್ಕೆ ಸಂಬಳ ನೀಡುವ ವ್ಯವಸ್ಥೆ ಮಾಡಲಾಗುವುದು. ಪ್ರತಿಭಟನೆ ವೇಳೆ ವರ್ಗಾವಣೆಗೊಂಡವರಿಗೆ ಅವರು ಮೊದಲು ಕಾರ್ಯನಿರ್ವಹಿಸುತ್ತಿದ್ದ ಡಿಪೋದಲ್ಲಿ ಕೆಲಸ ಮಾಡುವ ಅವಕಾಶ ಮಾಡಿಕೊಡಲಾಗುವುದು ಎಂದರು.
ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಶಿರಸಿಯ ಹಳೆ ಬಸ್ ನಿಲ್ದಾಣ 1968 ರಲ್ಲಿ ನಿರ್ಮಾಣವಾಗಿತ್ತು. ಕಟ್ಟಡ ಶಿಥಿಲಗೊಂಡ ಕಾರಣ ಹೊಸ ಬಸ್ ನಿಲ್ದಾಣ ನಿರ್ಮಾಣಕ್ಕೆ ಮುಂದಾದರೂ ಕೆಲ ತೊಂದರೆಗಳು ಎದುರಾಗಿದ್ದವು. ಈಗ 6.78 ಕೋಟಿ ರೂ. ವೆಚ್ಚದಲ್ಲಿ 12 ತಿಂಗಳಿನಲ್ಲಿ ಹೊಸ ಬಸ್ ನಿಲ್ದಾಣ ನಿರ್ಮಿಸಲಾಗುವುದು. ಪಂಡಿತ ಸಾರ್ವಜನಿಕ ಲೈಬ್ರರಿ ಕಟ್ಟಡದ ಸ್ಥಳವನ್ನೂ ಬಳಸಿಕೊಳ್ಳುವ ಬಗ್ಗೆ ಪ್ರಯತ್ನಿಸಲಾಗುವುದು ಎಂದರು.
ವಾಯವ್ಯ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ವಿ.ಎಸ್. ಪಾಟೀಲ, ಸರಕಾರದಿಂದ ಹೊಸ ಬಸ್ ಖರೀದಿಗೆ ಅನುದಾನ ಬೇಕಾಗಿದೆ. ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಕನಿಷ್ಠ 500 ಬಸ್ ಅಗತ್ಯವಿದೆ ಎಂದರು.
ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ, ವಿಭಾಗೀಯ ನಿಯಂತ್ರಣಾಧಿಕಾರಿ ರಾಜಕುಮಾರ ಇತರರಿದ್ದರು.
ಬಸ್ ನಿಲ್ದಾಣವೆಂದರೆ ವಾಣಿಜ್ಯ ಮಳಿಗೆಯಲ್ಲ. ಪ್ರಯಾಣಿಕರ ಬಳಕೆಗೆ ಸಿಗಬೇಕು. ಆ ನಿಟ್ಟಿನಲ್ಲಿ ನಿಲ್ದಾಣ ನಿರ್ಮಿಸಲಾಗುವುದು.
–ವಿಶ್ವೇಶ್ವರ ಹೆಗಡೆ ಕಾಗೇರಿ ಸ್ಪೀಕರ್
ಸಾರಿಗೆ ನೌಕರರ ವೇತನ ಪರಿಷ್ಕರಣೆ ಬಗ್ಗೆ ಅರಿವಿದ್ದು, ಈ ಬಗ್ಗೆ ಚರ್ಚೆ ನಡೆಸಿ ಶೀಘ್ರ ಕ್ರಮ ಕೈಗೊಳ್ಳಲಾಗುವುದು. –
ಬಿ. ಶ್ರೀರಾಮುಲು, ಸಚಿವ
ಗ್ರಾಮೀಣ ಪ್ರದೇಶಕ್ಕೆ ಕಂಡಕ್ಟರ್ ಡ್ರೈವರ್ ಕೊರತೆ ಉಂಟಾಗಿದ್ದು, ಇದನ್ನು ಸರಿಪಡಿಸಲು ಪ್ರಯತ್ನಿಸಲಾಗವುದು. –
ವಿ.ಎಸ್.ಪಾಟೀಲ, ವಾಯುವ್ಯ ಸಾರಿಗೆ ಅಧ್ಯಕ್ಷ