Advertisement

ಚಿನ್ನದ ಗಣಿ ಕಾರ್ಮಿಕರಿಗೆ 400 ಹೊಸ ಮನೆ: ಡಿಸೋಜಾ

01:25 PM Aug 16, 2018 | Team Udayavani |

ಹಟ್ಟಿ ಚಿನ್ನದ ಗಣಿ: ಚಿನ್ನದ ಗಣಿ ಕಂಪನಿಯ ಹಳೆ ಮನೆಗಳಲ್ಲಿ ವಾಸಿಸುತ್ತಿರುವ ನೌಕರರ ಕುಟುಂಬಗಳಿಗೆ 400 ಹೊಸ ವಸತಿ ಗೃಹಗಳನ್ನು ನಿರ್ಮಿಸಲು ಆಡಳಿತ ಮಂಡಲಿ ಅನುಮೋದನೆ ನೀಡಿದ್ದು, ಶೀಘ್ರ ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು ಎಂದು ಹಟ್ಟಿ ಚಿನ್ನದ ಗಣಿ ಕಂಪನಿ ವ್ಯವಸ್ಥಾಪಕ ನಿರ್ದೇಶಕ ರಿಚರ್ಡ್‌ ವಿನ್ಸೆಂಟ್‌ ಡಿಸೋಜಾ ಹೇಳಿದರು.

Advertisement

ಹಟ್ಟಿ ಚಿನ್ನದ ಗಣಿ ಕಂಪನಿ ವತಿಯಿಂದ ಕಂಪನಿ ಕ್ರೀಡಾಂಗಣದಲ್ಲಿ ನಡೆದ 72ನೇ ಸ್ವಾತಂತ್ರ್ಯಾತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನೌಕರರು, ಕಾರ್ಮಿಕರ ಹಿತದೃಷ್ಟಿಯಿಂದ ಕಂಪನಿಯಿಂದ ಹಲವು ಸೌಕರ್ಯಗಳನ್ನು ಒದಗಿಸಲಾಗಿದೆ. ಗಾಂಧಿ ಮೈದಾನದಲ್ಲಿರುವ ಹಳೆ ಮನೆಗಳಲ್ಲಿ ವಾಸಿಸುತ್ತಿರುವ ಕುಟುಂಬಗಳಿಗೆ ಹೊಸ ಮನೆ ನಿರ್ಮಿಸಲಾಗುವುದು ಎಂದರು.

ಹಟ್ಟಿ ಚಿನ್ನದ ಗಣಿ ಕಂಪನಿ 2017-18ನೇ ಸಾಲಿನಲ್ಲಿ 5,68,692 ಟನ್‌ ಅದಿರು ಸಂಸ್ಕರಿಸಿ 1,630 ಕೆಜಿ ಚಿನ್ನ ಉತ್ಪಾದಿಸಿದ್ದು, ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ.4 ಹೆಚ್ಚಳವಾಗಿದೆ. 437 ಕೋಟಿ ರೂ. ವಹಿವಾಟು ನಡೆಸಿದೆ. 2018-19ನೇ ಸಾಲಿನಲ್ಲಿ ಮೊದಲ ನಾಲ್ಕು ತಿಂಗಳಲ್ಲಿ 486 ಕೆಜಿ ಚಿನ್ನ ಉತ್ಪಾದಿಸುವ ಗುರಿ ಹೊಂದಿದ್ದು, 437 ಕೆಜಿ ಉತ್ಪಾದಿಸಲಾಗುತ್ತಿದೆ. ಚಿನ್ನ ಉತ್ಪಾದನೆಯಲ್ಲಿ ಇಳಿಮುಖವಾಗಿದ್ದು, ಮುಂದಿನ ದಿನಗಳಲ್ಲಿ ಇದನ್ನು ಹೆಚ್ಚಿಸಲಾಗುವುದು ಎಂದರು.

ಕಂಪನಿಯ ಹಿರಿಯ ನೌಕರ ಹನುಮಂತ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ಕಂಪನಿಯಲ್ಲಿ 25 ವರ್ಷ ಸೇವೆ ಸಲ್ಲಿಸಿದ ಕಾರ್ಮಿಕರಿಗೆ 5 ಗ್ರಾಂ ಚಿನ್ನದ ಪದಕ ನೀಡಿ ಗೌರವಿಸಲಾಯಿತು. ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ನೌಕರರ ಮಕ್ಕಳನ್ನು ಗೌರವಿಸಲಾಯಿತು.

ಸ್ಥಳೀಯ ಶಾಲಾ ಮಕ್ಕಳಿಂದ ಪಥಸಂಚಲನ, ಸ್ತಬ್ದಚಿತ್ರಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ಪಥ ಸಂಚಲನದಲ್ಲಿ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಹಟ್ಟಿ ಕ್ಯಾಂಪ್‌ ಪ್ರಥಮ, ಲಿಟಲ್‌ ಏಂಜಲ್ಸ್‌ ಪ್ರಾಥಮಿಕ ಶಾಲೆ ದ್ವಿತೀಯ ಡಾ| ಇ.ಎ. ಸೀಮೆಂಡ್ಸ್‌ ಶಾಲೆ ತೃತೀಯ ಬಹುಮಾನ ಪಡೆದವು. ಸ್ತಬ್ಧಚಿತ್ರ ಪ್ರದರ್ಶನದಲ್ಲಿ ಮಸ್ಕಿಯ ಅಬ್ದುಲ್ಲಾ ಮೆಮೋರಿಯಲ್‌ ಪ್ರಾಥಮಿಕ ಶಾಲೆ ಪ್ರಥಮ, ಸಂತ ಅನ್ನಮ್ಮ ಶಾಲೆ ದ್ವಿತೀಯ, ಡಾ| ಇ.ಎ. ಸಿಮೆಂಡ್ಸ್‌ ಪ್ರೌಢಶಾಲೆ ತೃತೀಯ ಬಹುಮಾನ ಪಡೆದವು.

Advertisement

ಪ್ರಧಾನ ವ್ಯವಸ್ಥಾಪಕರಾದ ಡಾ| ಪ್ರಭಾಕರ ಸಂಗೂರುಮಠ, ಸಿಇಒ ಜಗದೀಶ ನಾಯಕ್‌,ಉಪ ವ್ಯವಸ್ಥಾಪಕ (ಆಡಳಿತ) ಪ್ರಕಾಶ, ವಿವಿಧ ವಿಭಾಗದ ಅಧಿಕಾರಿಗಳು, ಕಾರ್ಮಿಕರ ಸಂಘದ ಅಧ್ಯಕ್ಷ ವಾಲೇಬಾಬು, ಪ್ರಧಾನ ಕಾರ್ಯದರ್ಶಿ ಅಮೀರಅಲಿ ಸೇರಿ ಕಾರ್ಮಿಕರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next