Advertisement

ಸಂಘದ ಮುಖಂಡರ ವಿರುದ್ಧ ಚಿನ್ನದ ಗಣಿ ಕಾರ್ಮಿಕರ ಆಕ್ರೋಶ

10:35 AM Feb 10, 2019 | Team Udayavani |

ಹಟ್ಟಿ ಚಿನ್ನದ ಗಣಿ: ಹೊಸ ವೇತನ ಒಪ್ಪಂದ ಜಾರಿ ಮತ್ತು ಇತರೆ ಬೇಡಿಕೆ ಈಡೇರಿಕೆ ವಿಳಂಬವಾಗಿದ್ದಕ್ಕೆ ಇಲ್ಲಿಯ ಚಿನ್ನದಗಣಿ ಕಂಪನಿ ಕಾರ್ಮಿಕರು ಕ್ಯಾಂಪ್‌ ಬಸ್‌ ನಿಲ್ದಾಣದಲ್ಲಿ ಸೇರಿ ಕಾರ್ಮಿಕ ಸಂಘದ ಅಧ್ಯಕ್ಷ ಹಾಗೂ ಪ್ರಧಾನ ಕಾರ್ಯದರ್ಶಿ ಸ್ಥಳಕ್ಕೆ ಬಂದು ಉತ್ತರ ನೀಡಬೇಕು ಎಂದು ಶುಕ್ರವಾರ ಒತ್ತಾಯಿಸಿದರು.

Advertisement

ಕ್ಯಾಂಪ್‌ ಬಸ್‌ ನಿಲ್ದಾಣದಿಂದ ಪ್ರಧಾನ ಕಾರ್ಯದರ್ಶಿ ಕಚೇರಿಗೆ ಆಗಮಿಸಿ, ಕಾರ್ಮಿಕ ಸಂಘದ ಮುಖಂಡರು ಸ್ಥಳಕ್ಕೆ ಆಗಮಿಸಬೇಕು ಎಂದು ಪಟ್ಟು ಹಿಡಿದರು. ಮೊಬೈಲ್‌ ಮೂಲಕ ಇಬ್ಬರನ್ನು ಸಂಪರ್ಕಿಸಿದರೆ, ಪೈ ಭವನಕ್ಕೆ ಬನ್ನಿ. ಅಲ್ಲಿ ಉತ್ತರ ನೀಡುತ್ತೇನೆ ಎಂದು ಪ್ರಧಾನ ಕಾರ್ಯದರ್ಶಿ ಎಂ.ಡಿ. ಅಮೀರಅಲಿ ಪ್ರತಿಕ್ರಿಯಿಸಿದರೆ, ಅಧ್ಯಕ್ಷ ವಾಲೇಬಾಬು ಎಲ್ಲಿಗಾದರೂ ಬರಲೂ ಸಿದ್ದ ಎಂದು ಪ್ರಧಾನ ಕಾರ್ಯದರ್ಶಿ ಕಚೇರಿಗೆ ಆಗಮಿಸಿದರು. ಪ್ರಧಾನ ಕಾರ್ಯದರ್ಶಿಆಗಮನಕ್ಕಾಗಿ ಕಾದರೂ ಅವರು ಬರಲಿಲ್ಲ.

ಕಾರ್ಮಿಕ ಸಂಘದ ಅಧ್ಯಕ್ಷ ವಾಲೇಬಾಬು ಮಾತನಾಡಿ, 2017ರ ಅಕ್ಟೋಬರ್‌ 14ರ ಚುನಾವಣೆ ಯಲ್ಲಿ ಟಿಯುಸಿಐ ಸಂಘಟನೆ ಕಾರ್ಮಿಕ ಸಂಘ ಗೆದ್ದ ನಂತರ ಹೊಸ ವೇತನ ಒಪ್ಪಂದ ಸಂಬಂಧವಾಗಿ 10 ಸುತ್ತಿನ ಮಾತುಕತೆ ನಡೆಸಲಾಯಿತು. ಕಂಪನಿ ನಿರ್ದೇಶಕ ಮಂಡಳಿ ಅನುಮೋದನೆಗಾಗಿ ವಿಳಂಬ ಮಾಡಿದ್ದರಿಂದ ಸಂಘ ಹೋರಾಟದ ಹಾದಿ ಹಿಡಿಯಿತು. ಹೋರಾಟ ನಡೆಸಿದ ಹಿನ್ನೆಲೆಯಲ್ಲಿ ಕೇವಲ ಬೇಸಿಕ್‌ ಸಂಬಳ ಹೆಚ್ಚಳ ಮಾಡಿ ಈ ಹಿಂದೆ ಇದ್ದ ಐದು ಭತ್ಯೆಗಳನ್ನು ಕಡಿತಗೊಳಿಸಿ ನಿರ್ದೇಶಕ ಮಂಡಳಿ ನಡಾವಳಿ ಸ್ವೀಕರಿಸಿದೆ. ಹೋರಾಟ ಕಾರ್ಮಿಕರ ಹಕ್ಕು. ಆದರೆ ಸಮಯ ಸಂದರ್ಭ ನೋಡಿ ಹೋರಾಟಕ್ಕಿಳಿಯಬೇಕಾಗಿತ್ತು.

ರಾಜಕೀಯ ಬೆಂಬಲ ಹಾಗೂ ಅಧಿಕಾರಿಗಳ ಮನವೊಲಿಸದಿದ್ದರೆ ಬೇಡಿಕೆ ಈಡೇರಿಕೆ ಸಾಧ್ಯವಿಲ್ಲ ಎಂದು ಹಲವು ಸಾರಿ ಸಂಘದ ಸಭೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರೂ ಕೆಲವರು ನೀಡಲಿಲ್ಲ ಎಂದರು. ಇದಕ್ಕೂ ಮೊದಲು ಎಐಟಿಯುಸಿ ಮುಖಂಡರಾದ ಚಂದ್ರಶೇಖರ ಹಟ್ಟಿ, ಶಾಂತಪ್ಪ ಅನ್ವರಿ, ಯಂಕೋಬ ಮಿಯ್ನಾಪುರ, ಜೆ.ಎಸ್‌. ಹನುಮಂತ, ನಾಗರೆಡ್ಡಿ ಜೇರಬಂಡಿ, ಮಹಾದೇವಪ್ಪ, ದುರುಗಪ್ಪ ನಗನೂರು, ಶಿವಪುತ್ರಪ್ಪ ಮಾತನಾಡಿ, ಕಾರ್ಮಿಕರು ಸ್ವಯಂಪ್ರೇರಿತರಾಗಿ ಬಸ್‌ ನಿಲ್ದಾಣದಲ್ಲಿ ನಿಂತು ಪ್ರಶ್ನೆ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಒಪ್ಪಂದ ಸೇರಿದಂತೆ ಇತರ ಸೌಲಭ್ಯಗಳ ಬಗ್ಗೆ ಏನೇನು ಮಾತುಕತೆ ನಡೆದಿದೆ ಎಂಬುದನ್ನು ತಿಳಿಸಬೇಕು ಎಂದು ಅಧ್ಯಕ್ಷರಿಗೆ ಒತ್ತಾಯಿಸಿದರು. ನಡೆಯಿತು. ಉಪಾಧ್ಯಕ್ಷ ಸೋಮಣ್ಣ ಪಾಟೀಲ, ಕಾರ್ಯದರ್ಶಿ ಎಚ್.ಎ. ಲಿಂಗಪ್ಪ, ಖಜಾಂಚಿ ತುಳುಜಾರಾಂಸಿಂಗ್‌ ಇತರರು ಇದ್ದರು.

ಫೆ.18ರಂದು ನಡೆಯುವ ನಿರ್ದೇಶಕ ಮಂಡಳಿ ಸಭೆ ನೋಡಿಕೊಂಡು ಅಧ್ಯಕ್ಷನಾಗಿ ನಾನೇ ಒಂದು ನಿರ್ಣಯಕ್ಕೆ ಬರಲಿದ್ದೇನೆ. ಮೂರು ಶಾಫ್ಟ್‌ಗಳಿಗೆ ಭೇಟಿ ನೀಡಿ ಕಾರ್ಮಿಕರ ಅಭಿಪ್ರಾಯ ಸಂಗ್ರಹಿಸಿ ಜತೆಗೆ ಎಐಟಿಯುಸಿ ಮುಖಂಡರ ಸಹಕಾರದೊಂದಿಗೆ ಕಾರ್ಮಿಕರ ಬೇಡಿಕೆಗಳನ್ನು ವಿಧಾನಸಭೆ ಮಟ್ಟದಲ್ಲಿ ತೆಗೆದುಕೊಂಡು ಹೋಗಿ ಪರಿಹರಿಸಲು ಪ್ರಯತ್ನಿಸುವೆ. ಅಲ್ಲಿವರೆಗೆ ಸಹಕಾರ ನೀಡಬೇಕು.
•ವಾಲೇಬಾಬು, ಚಿನ್ನದ ಗಣಿ ಕಾರ್ಮಿಕ ಸಂಘದ ಅಧ್ಯಕ್ಷ

Advertisement
Advertisement

Udayavani is now on Telegram. Click here to join our channel and stay updated with the latest news.

Next