Advertisement

ಮಂಗಳೂರಿಗೆ 400 ಕೆವಿ ಸ್ಟೇಶನ್‌ ಮಂಜೂರು: ಸಚಿವ ಸುನಿಲ್‌ ಕುಮಾರ್‌

12:32 AM May 19, 2022 | Team Udayavani |

ಕಾರ್ಕಳ: ಚಿಕ್ಕಮಗಳೂರು, ಶಿವಮೊಗ್ಗ, ಉಡುಪಿ, ಮಂಗಳೂರು ಜಿಲ್ಲೆಗಳನ್ನೊಳಗೊಂಡ ಮೆಸ್ಕಾಂ ವ್ಯಾಪ್ತಿಯಲ್ಲಿ ತೀವ್ರ ವಿದ್ಯುತ್‌ ಒತ್ತಡಗಳಿದ್ದು, ಹೆಚ್ಚು ಕೈಗಾರಿಕೆ ಹೊಂದಿರುವ ಮಂಗಳೂರಿಗೆ 400 ಕೆ.ವಿ. ಸ್ಟೇಶನ್‌ ಮಂಜೂರುಗೊಳಿಸಲಾಗಿದೆ. ಇದಕ್ಕಾಗಿ ಮೂಡುಬಿದಿರೆ ಬಳಿ 37 ಎಕರೆ ಜಾಗ ಗುರುತಿಸಿದ್ದು, ಕೆಪಿಟಿಸಿಎಲ್‌ ಚಟುವಟಿಕೆ ಆರಂಭಿಸಿದೆ ಎಂದು ಇಂಧನ, ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್‌ ಕುಮಾರ್‌ ಹೇಳಿದರು.

Advertisement

ಕಾರ್ಕಳ ವಿಧಾನ ಸಭಾ ಕ್ಷೇತ್ರದ ಹೆಬ್ರಿ, ಕಾರ್ಕಳ ತಾಲೂಕುಗಳನ್ನೊಳಗೊಂಡ ಕಾರ್ಕಳ ನೂತನ ವಿಭಾಗೀಯ ಕಚೇರಿಯನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು. ದ.ಕ., ಉಡುಪಿ ಜಿಲ್ಲೆಗಳ ವಿದ್ಯುತ್‌ ಸಂಬಂಧಿತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ನಡೆಸಲಾಗಿದೆ ಎಂದರು.

ಕಾರ್ಕಳಕ್ಕೆ 110 ಕೋ.ರೂ.
ವಿದ್ಯುತ್‌ ಸರಬರಾಜಿನಲ್ಲಿ ಗುಣ ಮಟ್ಟ ಕಾಯ್ದುಕೊಳ್ಳಲು ಕಾರ್ಕಳದ ಸಾಲ್ಮರದಿಂದ ಅನಂತಶಯನ, ಮೂರು ಮಾರ್ಗದಿಂದ ಆನೆಕರೆ, ಮಾರುಕಟ್ಟೆ ರಸ್ತೆಯಲ್ಲಿ ಯುಜಿ ಕೇಬಲ್‌ ಮತ್ತು ಹೊಸ ತಂತಿ ಅಳವಡಿಕೆಗೆ 110 ಕೋ.ರೂ. ನೀಡಲಾಗುವುದು ಎಂದರು.

1.5 ಲಕ್ಷ ಟಿಸಿ ನಿರ್ವಹಣೆ
ರಾಜ್ಯಾದ್ಯಂತ 15 ದಿನಗಳಿಂದ ಟ್ರಾನ್ಸ್‌ಫಾರ್ಮರ್‌ (ಟಿಸಿ) ನಿರ್ವಹಣ ಅಭಿಯಾನ ನಡೆಯುತ್ತಿದ್ದು, 1.5 ಲಕ್ಷ ಟಿಸಿಗಳ ನಿರ್ವಹಣೆ ಪೂರ್ಣಗೊಂಡಿದೆ. ಮೇ 22ಕ್ಕೆ ಅಭಿಯಾನ ಮುಕ್ತಾಯ ಕಂಡರೂ ಪ್ರಕ್ರಿಯೆಗಳು ನಿರಂತರವಾಗಿರುತ್ತದೆ ಎಂದರು.

ಅಲೆದಾಟಕ್ಕೆ ಮುಕ್ತಿ
ಕಾರ್ಕಳ, ಹೆಬ್ರಿ ತಾಲೂಕಿನ ಜನತೆ ಮೆಸ್ಕಾಂ ಕೆಲಸಗಳಿಗೆ ಸಂಬಂಧಿಸಿ ಉಡುಪಿಯನ್ನು ಅವಲಂಬಿಸಬೇಕಿತ್ತು. ಜಿಲ್ಲಾ ಕೇಂದ್ರಕ್ಕೆ ಹೋಗುವುದು ಕಷ್ಟ ಸಾಧ್ಯ ಎನ್ನುವ ಕಾರಣಕ್ಕೆ ಉಡುಪಿಯಿಂದ ಪ್ರತ್ಯೇಕಿಸಿ ವಿಭಾಗೀಯ ಕಚೇರಿ ಮಾಡಿದ್ದೇವೆ. ಅಧಿಕಾರಿಗಳು, ಅಗತ್ಯ ಸಿಬಂದಿ ಇಲ್ಲೇ ಲಭ್ಯರಿರುತ್ತಾರೆ. ಕಾರ್ಕಳ, ನಿಟ್ಟೆ, ಹೆಬ್ರಿ ಈ ಮೂರು ಸಬ್‌ಸ್ಟೇಶನ್‌ಗಳು ಇದಕ್ಕೆ ಹೊಂದಿಕೊಂಡು ಕಾರ್ಯವೆಸಗಲಿದೆ ಎಂದರು.

Advertisement

ವಿಭಾಗೀಯ ಕಟ್ಟಡಕ್ಕೆ
3.5 ಕೋ.ರೂ.
ನೂತನ ಕಟ್ಟಡ ಕಾಮಗಾರಿಗೆ 3.5 ಕೋ.ರೂ. ನೀಡಲಾಗುವುದು. ಫೆಬ್ರವರಿಯೊಳಗೆ ಮುಗಿಸುವ ಯೋಚನೆಯಿದೆ. ಬೈಲೂರು, ಅಜೆಕಾರು, ಬಜಗೋಳಿ ಈ ಮೂರುಕಡೆ 33 ಕೆ.ವಿ. ಸಬ್‌ಸ್ಟೇಶನ್‌ ಕಾರ್ಯ ರಂಭಗೊಂಡಿದೆ.

ಕೊಲ್ಲೂರಿನಲ್ಲಿ 33 ಕೆ.ವಿ. ಸಬ್‌ಸ್ಟೇಶನ್‌ಗೆ ಅನುಮತಿ ನೀಡಲಾಗಿದೆ. ಜಿಲ್ಲೆಯ ಎಲ್ಲ ಸ್ಟೇಶನ್‌ಗಳನ್ನು ಮೇಲ್ದರ್ಜೆಗೇರಿಸಲಾಗುವುದು. ಬೆಳಪು ಮತ್ತು ಬೈಂದೂರು ಗಳಲ್ಲಿ 110 ಕೆ.ವಿ. ಸ್ಟೇಶನ್‌ಗೆ ಮಂಜೂ ರಾತಿ ನೀಡಲಾಗಿದೆ ಎಂದರು.

ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ್‌ ಕುಮಾರ್‌ ಮಿಶ್ರಾ ಪ್ರಸ್ತಾವನೆಗೈದರು. ಗೇರು ಅಭಿವೃದ್ಧಿ ನಿಗಮದ ಮಣಿರಾಜ್‌ ಶೆಟ್ಟಿ, ಪುರಸಭೆ ಅಧ್ಯಕ್ಷೆ ಸುಮಾ ಕೇಶವ್‌, ಜಿ.ಪಂ. ಸಿಇಒ ಎಚ್‌.ಕೆ. ಪ್ರಸನ್ನ, ಮೆಸ್ಕಾಂ ತಾಂತ್ರಿಕ ನಿರ್ದೇಶಕಿ ಡಿ. ಪದ್ಮಾವತಿ. ಆರ್ಥಿಕ ಅಧಿಕಾರಿ ಬಿ. ಜಗದೀಶ, ಮೆಸ್ಕಾಂ ನಿರ್ದೇಶಕ ಎಂ. ದಿನೇಶ್‌ ಪೈ, ಲೆಕ್ಕಾಧಿಕಾರಿ ಸಂಘದ ಮಂಜಪ್ಪ, ಹರಿಶ್ಚಂದ್ರ, ನೌಕರರ ಸಂಘದ ಟಿ.ಆರ್‌. ರಾಮಕೃಷ್ಣಯ್ಯ, ಕೆಇವಿಇಎ ಅಧ್ಯಕ್ಷ ಶಿವಪ್ರಕಾಶ್‌, ತಹಶೀಲ್ದಾರ್‌ ಪ್ರದೀಪ್‌ ಕುರ್ಡೆಕರ್‌, ಇಒ ಗುರುದತ್ತ್, ಉಡುಪಿ ಅಧೀಕ್ಷಕ ಎಂಜಿನಿಯರ್‌ ನರಸಿಂಹ ಪಂಡಿತ್‌, ಕಾರ್ಕಳ ಕಾರ್ಯನಿರ್ವಾಹಕ ಎಂಜಿನಿಯರ್‌ ನರಸಿಂಹ, ರಾಜೇಂದ್ರ ನಾಯಕ್‌, ರಾಮಚಂದ್ರ ನಾಯಕ್‌ ಉಪಸ್ಥಿತರಿದ್ದರು. ವಿನಯ ಕಾಮತ್‌, ಗಿರೀಶ್‌ ರಾವ್‌ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next