ಚಿಕ್ಕೋಡಿ: ಮಹಾರಾಷ್ಟ್ರದ ಕೊಂಕಣ ಭಾಗ ಹಾಗೂ ಗಡಿ ಭಾಗದಲ್ಲಿ 24 ಗಂಟೆಯಲ್ಲಿ ಭಾರಿ ಮಳೆ ಸುರಿಯುತ್ತಿರುವ ಪರಿಣಾಮ ಗಡಿ ಭಾಗದ ಕೃಷ್ಣಾ ನದಿ ನೀರಿನ ಮಟ್ಟದಲ್ಲಿ ನಾಲ್ಕು ಅಡಿಯಷ್ಟು ಹೆಚ್ಚಳವಾಗಿದೆ.
ಮಹಾರಾಷ್ಟ್ರದ ಸಾತಾರಾ ಜಿಲ್ಲೆಯ ಕೊಯ್ನಾ ಜಲಾಶಯ ಶೇ 90 ರಷ್ಟು ಭರ್ತಿಯಾಗಿದೆ. ಹೀಗಾಗಿ 40 ಸಾವಿರ ಕ್ಯೂಸೆಕ್ ನೀರನ್ನು ಹೊರ ಬಿಡುತ್ತಿದ್ದಾರೆ. ಬರುವ 24 ಗಂಟೆಯಲ್ಲಿ ಮತ್ತೆ ಡ್ಯಾಂನಿಂದ ಹೆಚ್ಚಿನ ನೀರು ಬಿಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಮಳೆಯ ಪ್ರಮಾಣವು ಕೊಯ್ನಾ-1182 ಮಿ.ಮೀ , ನವಜಾ-324 ಮಿ.ಮೀ, ಮಹಾಬಳೇಶ್ವರ-203ಮಿ.ಮೀ, ವಾರಣಾ-78ಮಿ.ಮೀ, ಕಾಳಮ್ಮವಾಡಿ-119 ಮಿ.ಮೀ ಮತ್ತು ರಾಧಾನಗರಿಯಲ್ಲಿ -104ಮಿ.ಮೀ ಮತ್ತು ಪಾಟಗಾಂವ 175 ಮಿಮೀ ಮಳೆಯಾಗಿದೆ.
ಪಶ್ಚಿಮ ಘಟಗಳಲ್ಲಿ ಸತತ ಮಳೆಯಿಂದಾಗಿ ಕೊಯ್ನಾ ಜಲಾಶಯವು ಈಗಾಗಲೇ 90 ಟಿಎಂಸಿ ಭರ್ತಿಯಾಗಿದೆ. 105 ಟಿಎಂಸಿ ಸಾಮರ್ಥ್ಯ ಇರುವ ಕೊಯ್ನಾ ಜಲಾಶಯ ಇದಾಗಿದ್ದು, ಶನಿವಾರ ಕೊಯ್ನಾ ಜಲಾಶಯದಿಂದ 10 ಸಾವಿರ ಕ್ಯುಸೆಕ್ ನೀರು ಹೊರಬಿಡಲಾಗಿತ್ತು. ರವಿವಾರ 40 ಸಾವಿರ ಕ್ಯೂಸೆಕ್ ಬಿಡುತ್ತಿದ್ದಾರೆ. ಇದರಿಂದ 24 ಗಂಟೆಯಲ್ಲಿ ಕೃಷ್ಣಾ ನದಿ ನೀರಿನ ಮಟ್ಟದಲ್ಲಿ ಭಾರಿ ಪ್ರಮಾಣದಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ.
ಸದ್ಯ ಕೃಷ್ಣಾ ನದಿಗೆ 1.5 ಲಕ್ಷ ಕ್ಯೂಸೆಕ್ ನೀರು ಹರಿದು ಬರಲಾರಂಬಿಸಿದೆ. ಆಲಮಟ್ಟಿ ಜಲಾಶಯದಿಂದ 1.50 ಲಕ್ಷ ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತದೆ ಎಂದು ಚಿಕ್ಕೋಡಿ ಉಪವಿಭಾಗಾಧಿಕಾರಿ ರವೀಂದ್ರ ಕರಲಿಂಗನ್ನವರ ತಿಳಿಸಿದರು.