Advertisement

ಮಸ್ಕಿಯಲ್ಲಿ 40 ಪರ್ಸಂಟೇಜ್‌ ಆಡಳಿತ

06:38 PM Feb 25, 2021 | Team Udayavani |

ಮಸ್ಕಿ: ರಾಜ್ಯದಲ್ಲಿ 30 ಪರ್ಸಂಟೇಜ್‌ ಸರಕಾರ ನಡೆಯುತ್ತಿದ್ದರೆ, ಮಸ್ಕಿಯಲ್ಲಿ 40 ಪರ್ಸಂಟೇಜ್‌ ಆಡಳಿತ ನಡೆಯುತ್ತಿದೆ ಎಂದು ಕುಷ್ಟಗಿ ಶಾಸಕ ಅಮರೇಗೌಡ ಬಯ್ನಾಪೂರ ಆರೋಪಿಸಿದರು. ಮೆದಕಿನಾಳ ಗ್ರಾಮದಲ್ಲಿ ಕಾಂಗ್ರೆಸ್‌ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ಮೆದಕಿನಾಳ, ಸಂತೆಕಲ್ಲೂರು ಜಿಪಂ ಮಟ್ಟದ ಕಾರ್ಯಕರ್ತರ ಸಭೆ ಹಾಗೂ ಶಕ್ತಿ ಪ್ರದರ್ಶನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಈ ಹಿಂದೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಿದ್ದರಾಮಯ್ಯ ಅವರ ಸರಕಾರ 10 ಪರ್ಸಂಟೇಜ್‌ ಸರಕಾರ ಎಂದು ಹೇಳಿದ್ದರು.

Advertisement

ಆದರೆ ಈಗ ರಾಜ್ಯದಲ್ಲಿ ಅವರದ್ದೇ ಪಕ್ಷದ ಯಡಿಯೂರಪ್ಪ ಅವರ ಸರಕಾರ 30 ಪರ್ಸಂಟೇಜ್‌ ಸರಕಾರವಾಗಿದೆ. 10 ಪರ್ಸಂಟೇಜ್‌ ಮೋದಿಯವರಿಗೆ, 10 ಪರ್ಸಂಟೇಜ್‌ ಅಮಿತ್‌ ಶಾ ಅವರಿಗೆ ಇನ್ನು 10 ಪರ್ಸಂಟೇಜ್‌ ಸಿಎಂ ಪುತ್ರ ಬಿ.ವೈ. ವಿಜಯೇಂದ್ರ ಅವರಿಗೆ ಸೇರುತ್ತಿದೆ. ಆದರೆ ಮಸ್ಕಿಯಲ್ಲಿ ಇದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿ 40 ಪರ್ಸಂಟೇಜ್‌ ಆಡಳಿತ ನಡೆಯುತ್ತಿದೆ.

ಶಾಸಕರು ಅವರ ಮಕ್ಕಳು ಎಲ್ಲ ಪರ್ಸಂಟೇಜ್‌ ಹೊಡೆಯುತ್ತಿದ್ದಾರೆ. ಶಾಸಕರಲ್ಲದಿದ್ದರೂ ಪ್ರತಾಪಗೌಡ ಪಾಟೀಲ್‌ ಅಡ್ವಾನ್ಸ್‌ ಕಮಿಷನ್‌ ಪಡೆದು ಕೆಲಸ
ಮಾಡಿಸುತ್ತಿದ್ದಾರೆ. ಇಂತವರಿಗೆ ಮತದಾರರು ಬುದ್ಧಿ ಕಲಿಸಬೇಕು ಎಂದರು.

ಕಾಲು ಹಿಡಿಯುತ್ತಿದ್ದಾರೆ: ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್‌ ಜನರಿಗೆ ದ್ರೋಹ ಬಗೆದು, ಹಣದ ಆಸೆಗೆ ಪಕ್ಷಾಂತರ ಮಾಡಿದ್ದಾರೆ. ಸೋಲಿನ ಭೀತಿ ಕಾಡುತ್ತಿದೆ. ಹೀಗಾಗಿ ಮುಖ್ಯಮಂತ್ರಿ ಕಾಲು ಹಿಡಿದುಕೊಂಡು ಚುನಾವಣೆ ಉಸ್ತುವಾರಿ ವಹಿಸಿಕೊಳ್ಳುವಂತೆ ಕೇಳಿಕೊಂಡಿದ್ದಾರೆ. ಇದಕ್ಕಾಗಿಯೇ ಸಿಎಂ ಪುತ್ರರನ್ನ
ಮಸ್ಕಿ ಉಸ್ತುವಾರಿ ಹಾಕಲಾಗಿದೆ. ಆದರೆ ಇಲ್ಲಿನ ಜನ ಸ್ವಾಭಿಮಾನಿಗಳು. ಹಣಕ್ಕೆ ಮಾರಿಕೊಳ್ಳುತ್ತುವುದಿಲ್ಲ. ಪ್ರತಾಪಗೌಡ ಪಾಟೀಲ್‌ ಉಪಚುನಾವಣೆ ಕಾರಣಕ್ಕೆ
ಈಗ ಎಲ್ಲ ಸಮುದಾಯ ನೆನಪಾಗುತ್ತಿವೆ. ರೆಡ್ಡಿ ಸಮಾಜಕ್ಕೆ 1 ಕೋಟಿ, ಕುರುಬ ಸಮಾಜಕ್ಕೆ 1.50 ಕೋಟಿ, ನಾಯಕ ಸಮಾಜಕ್ಕೆ 1 ಕೋಟಿ ಸೇರಿ ಹೀಗೆ
ಜಾತಿವಾರು ಅನುದಾನ ಘೋಷಿಸುತ್ತಿದ್ದಾರೆ ಎಂದು ಆರೋಪಿಸಿದರು.

ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಮಾತನಾಡಿ, ಬಿಜೆಪಿ ಭಾವನಾತ್ಮಕ ವಿಷಯಗಳ ಮೂಲಕ ಚುನಾವಣೆ ಎದುರಿಸುತ್ತಿದೆ. ಜಾತಿ-ಜಾತಿಗಳ ನಡುವೆ,
ಧರ್ಮ-ಧರ್ಮಗಳ ನಡುವೆ ವಿಷ ಬೀಜ ಬಿತ್ತುವ ಕೆಲಸ ಮಾಡುತ್ತಿದೆ. ಡೀಸೆಲ್‌, ಪೆಟ್ರೋಲ್‌ ಬೆಲೆಗಳ ಮೇಲೆ ನಿಯಂತ್ರಣ ಸಾ ಧಿಸಲು ಸಾಧ್ಯವಾಗದ ಸರಕಾರಕ್ಕೆ
ಜನರು ಬುದ್ಧಿ ಕಲಿಸಲೇಬೇಕು. ಈ ದೇಶವನ್ನು ಖಾಸಗಿ ಕಂಪನಿಗಳ ಕೈಗೆ ನೀಡಲು ಹೊರಟಿದ್ದಾರೆ. ಮಸ್ಕಿಯಲ್ಲಿ ಸ್ವಾರ್ಥ, ಹಣಕ್ಕಾಗಿ ರಾಜಕಾರಣ ಮಾಡುವ
ಪ್ರತಾಪಗೌಡರನ್ನು ಸೋಲಿಸಿದರೆ ರಾಜ್ಯ, ಕೇಂದ್ರ ಬಿಜೆಪಿ ಸರಕಾರಕ್ಕೂ ಒಂದು ಸಂದೇಶ ಹೋಗಲಿದೆ. ಈ ಕೆಲಸವನ್ನು ಎಲ್ಲರೂ ಮಾಡಬೇಕು ಎಂದರು.

Advertisement

ಯೂತ್‌ ಕಾಂಗ್ರೆಸ್‌ನ ರಾಜ್ಯ ಘಟಕ ಮಾಜಿ ಅಧ್ಯಕ್ಷ ಬಸನಗೌಡ ಬಾದರ್ಲಿ ಮಾತನಾಡಿ, ಕ್ಷೇತ್ರದಲ್ಲಿ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್
ಮತ್ತು ಅವರ ಮಕ್ಕಳ ದೌರ್ಜನ್ಯ ಮೀತಿ ಮೀರಿದೆ. ಕ್ಷೇತ್ರದಲ್ಲಿ ಭಾರಿ ಭ್ರಷ್ಟಾಚಾರ ನಡೆಸಿದ್ದಾರೆ. ಪಕ್ಷದ ಮುಖಂಡರು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೆ
ಆದಲ್ಲಿ 10 ಸಾವಿರ ಮತಗಳಿಂದ ಗೆಲ್ಲಿಸಬೇಕು ಎಂದರು.

ಕಾಂಗ್ರೆಸ್‌ ನಿಯೋಜಿತ ಅಭ್ಯರ್ಥಿ ಆರ್‌. ಬಸನಗೌಡ ತುರುವಿಹಾಳ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್‌ ಯದ್ದಲದಿನ್ನಿ ಮಾತನಾಡಿದರು. ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಮಾತನಾಡಿದರು. ಮುಖಂಡರಾದ ಕೆ.ಕರಿಯಪ್ಪ, ಎಚ್‌.ಬಿ. ಮುರಾರಿ, ಗ್ರಾಮೀಣ ಬ್ಲಾಕ್‌ ಅಧ್ಯಕ್ಷ ಹನುಮಂತಪ್ಪ ಮುದ್ದಾಪೂರ, ಮುಖಂಡ ಸಿದ್ದಣ್ಣ ಹೂವಿನಭಾವಿ, ತಾಪಂ ಅಧ್ಯಕ್ಷ ಶಿವಣ್ಣ ನಾಯಕ, ಶರಣಪ್ಪ ಮೇಟಿ, ಎಚ್‌.ಬಿ. ಮುರಾರಿ, ಪಾಮಯ್ಯ ಮುರಾರಿ, ಶ್ರೀಶೈಲಪ್ಪ ಬ್ಯಾಳಿ ಇದ್ದರು.

ಪೋಕ್ಸೋ ಕಾಯಿದೆಯೂ ದುರ್ಬಳಕೆ

ಮಸ್ಕಿಯಲ್ಲಿ ಬಿಜೆಪಿ ಬೆಂಬಲಿಸಲು ನಿರಾಕರಿಸಿದವರ ಮೇಲೆ ಪ್ರತಾಪಗೌಡ ಪಾಟೀಲ್‌ ದೌರ್ಜನ್ಯ ಎಸಗುತ್ತಿದ್ದಾರೆ.
ತಲೆಖಾನ್‌, ಮೆದಕಿನಾಳ ಭಾಗದಲ್ಲಿ ಬಿಜೆಪಿ ಸೇರದೇ ಇರುವುದಕ್ಕೆ ಕೆಲವರ ಮೇಲೆ ಕೇಸ್‌ ಹಾಕಿಸಲಾಗಿದೆ. ಇನ್ನು ಈ ಭಾಗದ ಮುಖಂಡರೊಬ್ಬರು ಬಿಜೆಪಿ ಸೇರದ್ದಕ್ಕೆ ಪೋಕ್ಸೋ ಕಾಯಿದೆಯಡಿ ಕೇಸ್‌ ಹಾಕಿಸುವ ಧಮಕಿ ಹಾಕಿದ್ದರು. ಆದರೆ ನಾನೇ ನೇರವಾಗಿ ಪೊಲೀಸ್‌ ಅಧಿಕಾರಿ ಜತೆ ಮಾತನಾಡಿ, ಅನಗತ್ಯ ಕೇಸ್‌ ಮಾಡಿದರೆ ಠಾಣೆಯಲ್ಲೇ ಕೂಡುತ್ತೇನೆ ಎಂದಿದ್ದಕ್ಕೆ ಇದನ್ನು ಅಲ್ಲಿಗೆ ಬಿಟ್ಟಿದ್ದಾರೆ ಎಂದು ಶಾಸಕ ಅಮರೇಗೌಡ ಬಯ್ನಾಪೂರ ಹೇಳಿದರು.

ವಾರದಲ್ಲೇ ಕಾಂಗ್ರೆಸ್‌ಗೆ
ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್‌ ಹಿಂದೆ ಯಾರ್ಯಾರು ಇದ್ದಾರೋ ಅವರೆಲ್ಲರೂ ನನ್ನ ಜತೆ ಸಂಪರ್ಕದಲ್ಲಿದ್ದಾರೆ. ಅಲ್ಲಿನ ಗುತ್ತಿಗೆ ಕೆಲಸಕ್ಕಾಗಿ ಅವರ
ಜತೆಗೆ ಉಳಿದುಕೊಂಡಿದ್ದಾರೆ. ಇನ್ನು ಒಂದು ವಾರದಲ್ಲೇ ಅವರು ಕಾಂಗ್ರೆಸ್‌ ಗೆ ಬರಲಿದ್ದಾರೆ. ಈ ಬಾರಿ ಪ್ರತಾಪಗೌಡ ಪಾಟೀಲ್‌ರನ್ನ ಸೋಲಿಸದೇ ನನ್ನ ಮೊದಲ ಗುರಿ ಎಂದು ಶಾಸಕ ಅಮರೇಗೌಡ ಪಾಟೀಲ್‌ ಬಯ್ನಾಪೂರ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next