ಶಿವಸೇನಾ ಶಾಸಕರ ಬಂಡಾಯದಿಂದಾಗಿ ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟು ಮುಂದುವರಿದಿದ್ದು, ಸಿಎಂ ಉದ್ಧವ್ ಠಾಕ್ರೆ ಜತೆಗಿನ ಮುನಿಸಿನಿಂದಾಗಿ ಸಚಿವ ಏಕನಾಥ್ ಶಿಂಧೆ 37 ಶಿವಸೇನಾ ಶಾಸಕರನ್ನು ಮಹಾರಾಷ್ಟ್ರದಿಂದ ಗುಜರಾತ್ ಗೆ ಕರೆದೊಯ್ದಿದ್ದು, ನಂತರ ಚಾರ್ಟರ್ಡ್ ವಿಮಾನದಲ್ಲಿ ಗುವಾಹಟಿಗೆ ತೆರಳಿ ಐಶಾರಾಮಿ ಹೋಟೆಲ್ ನಲ್ಲಿ ವಾಸ್ತವ್ಯ ಹೂಡಿದ್ದಾರೆ.
37 ಬಂಡಾಯ ಶಾಸಕರು ಏಕನಾಥ ಶಿಂಧೆಯೇ ನಮ್ಮ ನಾಯಕ ಎಂದು ನಿರ್ಣಯ ಅಂಗೀಕರಿಸಿದ್ದಾರೆ. ಮತ್ತೊಂದೆಡೆ ಬಂಡಾಯ ಶಾಸಕರನ್ನು ಮಹಾರಾಷ್ಟ್ರದಿಂದ ಹೊರ ಕರೆತರಲು ದುಬಾರಿ ವೆಚ್ಚವಾಗಿರುವುದಾಗಿ ವರದಿ ತಿಳಿಸಿದೆ.
ಗುವಾಹಟಿ ಐಶಾರಾಮಿ ಹೋಟೆಲ್ ನಲ್ಲಿ 70 ರೂಂ ಬುಕ್- ಕೋಟ್ಯಂತರ ರೂ. ವ್ಯಯ:
ಏಕನಾಥ ಶಿಂಧೆ ಹಾಗೂ ಬಂಡಾಯ ಶಾಸಕರು ಅಸ್ಸಾಂ ನಗರದ ಹೊರವಲಯದಲ್ಲಿನ ರಾಷ್ಟ್ರೀಯ ಹೆದ್ದಾರಿ ಸಮೀಪದ ಐಶಾರಾಮಿ ರಾಡಿಸ್ಸನ್ ಬ್ಲೂ ಹೋಟೆಲ್ ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಐಎಎನ್ ಎಸ್ ವರದಿ ಪ್ರಕಾರ, 70 ರೂಂಗಳನ್ನು ಎಲ್ಲಾ ಖರ್ಚು, ವೆಚ್ಚ ಸೇರಿ 56 ಲಕ್ಷ ರೂಪಾಯಿಗೆ ಬುಕ್ ಮಾಡಲಾಗಿದೆ. ಇಲ್ಲಿ ಕಾರ್ಯಕ್ರಮ ಆಯೋಜಿಸಲು ವಿಶಾಲ ಹಾಲ್, ಔಟ್ ಡೋರ್ ಪೂಲ್ , ಸ್ಪಾ ಮತ್ತು ಐದು ರೆಸ್ಟೋರೆಂಟ್ ಗಳಿವೆ.
ಪ್ರತಿದಿನದ ಊಟೋಪಚಾರ ಮತ್ತು ಇತರ ಖರ್ಚುಗಳು ಸೇರಿ 8 ಲಕ್ಷ ರೂಪಾಯಿ, ಈವರೆಗೆ ಏಳು ದಿನಕ್ಕೆ 1.12 ಕೋಟಿ ರೂಪಾಯಿ ವ್ಯಯಿಸಲಾಗಿದೆ ಎಂದು ವರದಿ ವಿವರಿಸಿದೆ. ರಾಡಿಸ್ಸನ್ ಬ್ಲೂ ಹೋಟೆಲ್ ನಲ್ಲಿ ಒಟ್ಟು 196 ಕೋಣೆಗಳಿದ್ದು, ಇದರಲ್ಲಿ ಬಂಡಾಯ ಶಾಸಕರು ಮತ್ತು ಲಗೇಜ್ ಗಾಗಿ 70 ರೂಮ್ಸ್ ಗಳನ್ನು ಬುಕ್ ಮಾಡಲಾಗಿದೆ. ಹೋಟೆಲ್ ಆಡಳಿತ ಮಂಡಳಿ ಹೊಸ ರೂಂ ಬುಕ್ಕಿಂಗ್ ರದ್ದುಪಡಿಸಿದೆ ಎಂದು ಎನ್ ಡಿಟಿವಿ ವರದಿ ಮಾಡಿದೆ.
ಸೂರತ್ ವಾಸ್ತವ್ಯಕ್ಕೆ ವ್ಯಯಿಸಿದ ಹಣ ಎಷ್ಟು?
ಮಂಗಳವಾರ ಶಿವಸೇನಾ ಹಿರಿಯ ಮುಖಂಡ ಏಕನಾಥ ಶಿಂಧೆ ಬಂಡಾಯ ಎದ್ದು ಶಾಸಕರ ಜೊತೆ ಮಹಾರಾಷ್ಟ್ರದಿಂದ ಗುಜರಾತ್ ನ ಸೂರತ್ ನಲ್ಲಿ ವಾಸ್ತವ್ಯ ಹೂಡಿದ ನಂತರ ರಾಜಕೀಯ ಬಿಕ್ಕಟ್ಟು ಆರಂಭಗೊಂಡಿತ್ತು. ಮಹಾರಾಷ್ಟ್ರದಿಂದ ಸೂರತ್ ಗೆ ಖಾಸಗಿ ಸ್ಪೈಸ್ ಜೆಟ್ ವಿಮಾನದಲ್ಲಿ ಬಂಡಾಯ ಶಾಸಕರನ್ನು ಕರೆ ತರಲಾಗಿತ್ತು.
ಸೂರತ್ ನ ಲೀ ಮೆರಿಡಿಯನ್ ಹೋಟೆಲ್ ನಲ್ಲಿ ಬಂಡಾಯ ಶಾಸಕರು ವಾಸ್ತವ್ಯ ಹೂಡಿದ್ದು, ಇಲ್ಲಿ ರೂಂ ಬೆಲೆ ದಿನಕ್ಕೆ 2,300 ರೂ.ನಿಂದ ಪ್ರಾರಂಭ.
ಫಸ್ಟ್ ಫೋಸ್ಟ್ ವರದಿ ಪ್ರಕಾರ, ಸೂರತ್ ನಿಂದ ಗುವಾಹಟಿಗೆ ಇಆರ್ ಜೆ-135 ಎಲ್ ಆರ್ ವಿಮಾನದಲ್ಲಿ ಬಂಡಾಯ ಶಾಸಕರು ಪ್ರಯಾಣಿಸಿದ್ದರು. ಈ ವಿಮಾನದಲ್ಲಿ 30 ಜನರು ಪ್ರಯಾಣಿಸಬಹುದಾಗಿದೆ. ಸೂರತ್ ನಿಂದ ಗುವಾಹಟಿಗೆ ಒಂದು ಟ್ರಿಪ್ ಗೆ 50 ಲಕ್ಷ ರೂಪಾಯಿ ಅಧಿಕ ಪಾವತಿಸಬೇಕಾಗಿದೆ.
ಶಿಂಧೆ ನೇತೃತ್ವದ ಬಂಡಾಯ ಶಾಸಕರಿಗಾಗಿ ಎರಡು ಹೆಚ್ಚುವರಿ ಜೆಟ್ಸ್ ನೀಡಲಾಗಿತ್ತು. ಈ ಲಘು ವಿಮಾನದ ಪ್ರತಿ ಪ್ರಯಾಣಕ್ಕೆ 35 ಲಕ್ಷ ರೂಪಾಯಿ ಪಾವತಿಸಬೇಕಾಗಿದೆ ಎಂದು ವರದಿ ವಿವರಿಸಿದೆ. ರಾಜಕೀಯ ಬಿಕ್ಕಟ್ಟಿನಲ್ಲಿ ಶಿಂಧೆ ಗುಂಪಿಗೆ ವ್ಯಯಿಸಿದ ಹಣಕಾಸಿನ ಲೆಕ್ಕಾಚಾರದ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ ಎಂದು ವರದಿ ಹೇಳಿದ್ದು, ಇದೊಂದು ದುಬಾರಿ ವ್ಯವಹಾರ ಎಂಬುದರಲ್ಲಿ ಅತಿಶಯೋಕ್ತಿ ಇಲ್ಲ ಎಂದು ತಿಳಿಸಿದೆ.