ಕುಂದಾಪುರ: ಸದಸ್ಯರ ವಿವಿಧ ಕ್ಷೇತ್ರಗಳಿಗೆ ಮೀಸಲಿಟ್ಟ ಅನುದಾನದಲ್ಲಿ ಕಾಮಗಾರಿ ಮಾಡದ ಕಾರಣ ವರ್ಷವೊಂದರಲ್ಲಿ 40 ಲಕ್ಷ ರೂ. ಸರಕಾರಕ್ಕೆ ಮರಳಿ ಹೋಗಿದ್ದು ಈ ಬಾರಿಯ ಅನುದಾನದಲ್ಲಿ ಕಡಿತವಾಗಲಿದೆ. ಆದರೆ ಯಾವ ಸದಸ್ಯರ ಕ್ಷೇತ್ರದಲ್ಲಿ ಕಾಮಗಾರಿಯಾಗಿದೆಯೋ ಅಲ್ಲಿಗೆ ಅನುದಾನ ಕಡಿತ ಮಾಡುವಂತಿಲ್ಲ ಎಂದು ತಾ.ಪಂ. ಸದಸ್ಯರು ಪಟ್ಟು ಹಿಡಿದರು.
ಸೋಮವಾರ ಇಲ್ಲಿನ ತಾ.ಪಂ. ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಕೆಲವು ದಿನಗಳ ಹಿಂದೆ ನಡೆದ ವಿಶೇಷ ಸಭೆಯ ನಿರ್ಣಯಗಳ ಕುರಿತಾಗಿ ಚರ್ಚೆ ನಡೆಯಿತು.
ಹಿಂದಿನ ಅಧ್ಯಕ್ಷ, ಉಪಾಧ್ಯಕ್ಷರಿಂದಾಗಿ ಅನುದಾನ ಹೋಗಿದೆ ಎಂದು ಈಗಿನ ಅಧ್ಯಕ್ಷೆ ವಿಶೇಷ ಸಭೆಗೆ ತಪ್ಪು ಮಾಹಿತಿ ನೀಡಿದ್ದಾರೆ. ರಾಜೀನಾಮೆ ಕೊಟ್ಟ ಬಳಿಕ ಯಾವುದೇ ಅನುಮೋದನೆ ಮಾಡುವಂತಿಲ್ಲ. ಆದ್ದರಿಂದ ಈಗಿನ ಅಧ್ಯಕ್ಷೆ, ಕಾರ್ಯ ನಿರ್ವಹಣಾಧಿಕಾರಿ ಜವಾಬ್ದಾರಿ. 37 ಜನರ ಪರವಾಗಿ ನೀವು ಅಧ್ಯಕ್ಷರಾಗಿದ್ದು ಅನುದಾನ ಸದ್ಬಳಕೆ ಮಾಡದಿದ್ದುದು ನಿಮ್ಮ ವೈಫಲ್ಯ. ಚುನಾವಣಾ ನೀತಿಸಂಹಿತೆಯ ನೆಪ ಸರಿಯಲ್ಲ. ಅದಕ್ಕೂ ಮುನ್ನ ಅಧಿಕಾರಿಗಳು ಕಾರ್ಯತತ್ಪರರಾಗಬೇಕಿತ್ತು ಎಂದು ಪ್ರವೀಣ್ ಕುಮಾರ್ ಶೆಟ್ಟಿ ಕಡ್ಕೆ ಹೇಳಿದರು. ಎಲ್ಲ ಸದಸ್ಯರ ಅನುದಾನದಲ್ಲಿ ಕಡಿತ ಮಾಡಲು ವಿರೋಧವಿದೆ ಎಂದು ವಾಸುದೇವ ಪೈ, ಜಗದೀಶ್ ದೇವಾಡಿಗ ಹೇಳಿದರು. ಆಡಳಿತ ಸರಿಯಿಲ್ಲದ ಕಾರಣ ಬರುವ 2-3 ಲಕ್ಷ ರೂ.ಅನುದಾನ ಕೂಡಾ ಮರಳಿ ಹೋಗುವಂತಾಗಿದೆ ಎಂದು ಜಗದೀಶ್ ಹೇಳಿದರು.
ಆಸ್ಪತ್ರೆಯಲ್ಲಿ ದೇವಾಲಯ
ಇಲ್ಲಿನ ಸರಕಾರಿ ಆಸ್ಪತ್ರೆಯಲ್ಲಿ ದೇವಾಲಯವಿದ್ದು ಇದಕ್ಕೆ ಅನ್ಯಮತೀಯರು ಸಮಿತಿ ಅಧ್ಯಕ್ಷರಾಗಿದ್ದಾರೆ ಎಂದು ಹಿಂದಿನ ಸಭೆಯ ಚರ್ಚೆ ಬಳಿಕ ಅಧ್ಯಕ್ಷರಾಗಿದ್ದ ವೈದ್ಯಾಧಿಕಾರಿ ಡಾ| ರಾಬರ್ಟ್ ರಾಜೀನಾಮೆ ನೀಡಿ ಡಾ| ಶಿವಶಂಕರ್ ಅವರಿಗೆ ಅಧಿಕಾರ ಹಸ್ತಾಂತರಿಸಿದ್ದಾರೆ ಎಂದು ಮಾಹಿತಿ ನೀಡಲಾಯಿತು. ಅಲ್ಲಿನ ಹಣಕಾಸು ವ್ಯವಹಾರದ ಕುರಿತು ಎಸಿಬಿ ಅಥವಾ ಲೋಕಾಯುಕ್ತರಿಂದ ತನಿಖೆಯಾಗಬೇಕು, ವೈದ್ಯಾಧಿಕಾರಿ ದೇವಾಲಯದ ಆಡಳಿತ ನಡೆಸುವ ಪರಿಪಾಠ ಏಕೆ ಎಂದು ಪ್ರವೀಣ್ ಕುಮಾರ್ ಒತ್ತಾಯದಂತೆ ನಿರ್ಣಯವಾಯಿತು. ಸ್ಕಾನಿಂಗ್ ವೈದ್ಯರ ನೇಮಕಕ್ಕೆ ಮಹೇಂದ್ರ ಅವರು ಒತ್ತಾಯಿಸಿದರು. ಪ್ರಸ್ತುತ ಖಾಸಗಿಯವರ ಜತೆಗೆ ಒಪ್ಪಂದವಾಗಿದ್ದು ಖಾಸಗಿಯಲ್ಲಿ ಸ್ಕಾನಿಂಗ್ ಮಾಡಿಸಿ ಸರಕಾರವೇ ಪಾವತಿ ಮಾಡುವ ವ್ಯವಸ್ಥೆಯಿದೆ ಎಂದು ವೈದ್ಯಾಧಿಕಾರಿ ಉತ್ತರಿಸಿದರು.
ವೈದ್ಯರಿಲ್ಲ
ಶಂಕರನಾರಾಯಣ ಆಸ್ಪತ್ರೆಯಲ್ಲಿ ವೈದ್ಯರಿಲ್ಲ ಎಂದು ಉಮೇಶ್ ಶೆಟ್ಟಿ ಕಲ್ಗದ್ದೆ ಹೇಳಿದಾಗ ವೈದ್ಯರನ್ನು ನಿಯೋಜನೆ ಮೇರೆಗೆ ಕಳುಹಿಸಲಾಗುತ್ತಿದೆ ಎಂದು ತಾಲೂಕು ಆರೋಗ್ಯ ಇಲಾಖೆ ಅಧಿಕಾರಿ ಹೇಳಿದರು.
94 ಸಿಗೆ ಹಣ
ಕಂದಾಯ ಇಲಾಖೆ ಅಧಿಕಾರಿಗಳು ಸಭೆಗೆ ಬರುತ್ತಿಲ್ಲ ಎಂದು ಕರಣ್ ಪೂಜಾರಿ, ಜ್ಯೋತಿ ವಿ. ಪುತ್ರನ್, ಜಗದೀಶ್ ದೇವಾಡಿಗ, ವಾಸುದೇವ ಪೈ ಮೊದಲಾದವರು ಆಕ್ಷೇಪಿಸಿದರು. 94ಸಿ ಹಕ್ಕುಪತ್ರ ಮಾಡಿಸಲು ಕಂದಾಯ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ, ಗ್ರಾಮಕರಣಿಕರು ಲಂಚ ಕೇಳುತ್ತಾರೆ ಎಂದು ಪ್ರವೀಣ್ ಆರೋಪಿಸಿದರು. ಬೈಂದೂರಿನಲ್ಲಿ 3.4 ಲಕ್ಷ ಕಾರ್ಡುಗಳಿಗೆ ತಹಶೀಲ್ದಾರ್, 2.19 ಲಕ್ಷ ಕಾರ್ಡುಗಳಿಗೆ ಉಪತಹಶೀಲ್ದಾರ್ ಗುರುತು ನೀಡಬೇಕಿದೆ. 15 ದಿನಗಳಲ್ಲಿ ಪೂರ್ಣವಾಗಲಿದೆ ಎಂದು ಬೈಂದೂರು ತಹಶೀಲ್ದಾರ್ ಬಸಪ್ಪ ಪೂಜಾರ್ ಹೇಳಿದರು. ಜಾತಿ, ಆದಾಯ ಪ್ರಮಾಣಪತ್ರಕ್ಕೆ ಪ್ರತ್ಯೇಕ ಕೌಂಟರ್ ತೆರೆಯಲು ಪುಷ್ಪರಾಜ ಶೆಟ್ಟಿ ಒತ್ತಾಯಿಸಿದರು.
ಅಧ್ಯಕ್ಷೆ ಶ್ಯಾಮಲಾ ಕುಂದರ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ರಾಮ್‌ಕಿಶನ್ ಹೆಗ್ಡೆ, ಸ್ಥಾಯಿ ಸಮಿತಿ ಅಧ್ಯಕ್ಷ ನಾರಾಯಣ ಗುಜ್ಜಾಡಿ, ಕಾರ್ಯನಿರ್ವಹಣಾಧಿಕಾರಿ ಕಿರಣ್ ಪೆಡ್ನೇಕರ್, ಬೈಂದೂರು ತಹಶೀಲ್ದಾರ್ ಬಸಪ್ಪ ಪೂಜಾರ್, ಡಿವೈಎಸ್‌ಪಿ ಬಿ.ಪಿ. ದಿನೇಶ್ ಕುಮಾರ್ ಉಪಸ್ಥಿತರಿದ್ದರು.