ಬೆಂಗಳೂರು: ರಾಜ್ಯ ಬಿಜೆಪಿಯು ಮುಂಬರುವ ವಿಧಾನ ಸಭಾ ಚುನಾವಣೆಗೆ ಪೂರ್ವಭಾವಿಯಾಗಿ ನಡೆಸಿದ ಜನ ಸಂಕಲ್ಪ ಅಭಿಯಾನದಲ್ಲಿ 40.50 ಲಕ್ಷ ಮಂದಿ ಬಿಜೆಪಿ ಸದಸ್ಯತ್ವ ಪಡೆದುಕೊಂಡಿದ್ದಾರೆ ಎಂದು ಉನ್ನತ ಶಿಕ್ಷಣ ಸಚಿವ ಮತ್ತು ಅಭಿಯಾನದ ಸಂಚಾಲಕ ಡಾ| ಸಿ.ಎನ್.ಅಶ್ವತ್ಥನಾರಾಯಣ ಹೇಳಿದ್ದಾರೆ.
ರಾಜ್ಯ ಬಿಜೆಪಿಯ ಪ್ರಧಾನ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜ. 21ರಿಂದ ಫೆ. 5ರ ವರೆಗೆ ನಡೆದ ಅಭಿಯಾನದಲ್ಲಿ ಒಂದು ಕೋಟಿ ಮನೆ ಹಾಗೂ ಎರಡು ಕೋಟಿ ಜನರನ್ನು ಸಂಪರ್ಕಿಸುವ ಗುರಿ ಹೊಂದಲಾಗಿತ್ತು. ದಕ್ಷಿಣಕನ್ನಡ, ಉಡುಪಿ, ಕೊಡಗು, ಮೈಸೂರು, ಹುಬ್ಬಳ್ಳಿ, ಧಾರವಾಡ ಜಿಲ್ಲೆಗಳಲ್ಲಿ ಅಭಿಯಾನ ಯಶಸ್ವಿಯಾಗಿದ್ದು, ಎಲ್ಲ ಮನೆಗಳನ್ನು ಸಂಪರ್ಕಿಸಲಾಗಿದೆ. ಉಳಿದ ಜಿಲ್ಲೆಗಲ್ಲಿ ಶೇ. 80 ಯಶಸ್ಸು ಸಿಕ್ಕಿದೆ ಎಂದು ತಿಳಿಸಿದರು.
ಗೋಡೆಬರಹ, ಸದಸ್ಯತ್ವ ಮಿಸ್ಡ್ ಕಾಲ್, ಮನೆ-ಮನೆಗೆ ಕರಪತ್ರ ನೀಡುವ ಮೂಲಕ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ, ಕೇಂದ್ರದ ಗೃಹ ಸಚಿವ ಅಮಿತ್ ಶಾ, ಸಂಘಟನ ಪ್ರಧಾನ ಕಾರ್ಯದರ್ಶಿ ಬಿ. ಎಲ್. ಸಂತೋಷ್ ಮುಂತಾದವರು ಸಾಮಾನ್ಯ ಕಾರ್ಯಕರ್ತರಂತೆ ಈ ಅಭಿಯಾನದಲ್ಲಿ ಪಾಲ್ಗೊಂಡಿದ್ದರು ಎಂದು ತಿಳಿಸಿದರು.
ಮಹಿಳಾ ಮೋರ್ಚಾ, ಯುವ ಮೋರ್ಚಾ, ಎಸ್.ಸಿ. ಮೋರ್ಚಾ, ರೈತ ಮೋರ್ಚಾ, ಒಬಿಸಿ ಮೋರ್ಚಾ, ಅಲ್ಪಸಂಖ್ಯಾಕ ಮೋರ್ಚಾ ಸಹಿತ ಎಲ್ಲ ಪ್ರಕೋಷ್ಠಗಳು ಅಭಿಯಾನದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿವೆ ಎಂದು ಹೇಳಿದರು.
ಇಲ್ಲಿಯವರೆಗೆ 40.50 ಲಕ್ಷ ಸದಸ್ಯರನ್ನು ಪಕ್ಷಕ್ಕೆ ಸೇರ್ಪಡೆ ಮಾಡಲಾಗಿದೆ. ಒಟ್ಟು 58,186 ಬೂತ್ ಗಳಲ್ಲಿ 39,272 ಬೂತ್‌ಗಳನ್ನು ಸಂಪರ್ಕಿಸಲಾಗಿದೆ. 22.55 ಲಕ್ಷ ಮನೆಗಳಿಗೆ ಭೇಟಿ ನೀಡಿ 13.35 ಲಕ್ಷ ಸ್ಟಿಕ್ಕರ್ ಅಂಟಿಸಲಾಗಿದೆ. 4.91 ಲಕ್ಷ ವಾಹನಗಳಿಗೆ ಸ್ಟಿಕ್ಕರ್ ಅಂಟಿಸಲಾಗಿದೆ. 1.94 ಲಕ್ಷ ಗೋಡೆ ಬರಹ ಬರೆಯಲಾಗಿದೆ. 32,489 ಡಿಜಿಟಲ್ ವಾಲ್ ಪೇಟಿಂಗ್ ರಚಿಸಲಾಗಿದೆ ಎಂದು ಮಾಹಿತಿ ನೀಡಿದರು.