ಮಂಗಳೂರು: ಮಂಗಳೂರು ನಗರ ದಕ್ಷಿಣ ಕ್ಷೇತ್ರ ವ್ಯಾಪ್ತಿಯಲ್ಲಿ ದಲಿತ ಸಮಾಜಕ್ಕೆ ಶಾಸಕ ವೇದವ್ಯಾಸ ಕಾಮತ್ ಅವರ ಕೊಡುಗೆ ಅಪಾರವಾಗಿದ್ದು ಅವರನ್ನು ಮತ್ತೂಮ್ಮೆ ಜನಸೇವೆಗೆ ಅನುವು ಮಾಡಿಕೊಡಬೇಕಿದೆ ಎಂದು ಬಿಜೆಪಿಯ ಮಂಗಳೂರು ದಕ್ಷಿಣ ಮಂಡಲ ಎಸ್‌ಸಿ ಮೋರ್ಚಾದ ಮಾಜಿ ಅಧ್ಯಕ್ಷ ಉಮಾನಾಥ ಅಮೀನ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವೇದವ್ಯಾಸ ಕಾಮತ್ ಅವರ ಅವಧಿಯಲ್ಲಿ ನಗರ ವ್ಯಾಪ್ತಿಯ ದಲಿತ ಕಾಲೋನಿ, ಅಂಬೇಡ್ಕರ್ ಭವನ, ಕುದ್ಮುಲ್ ರಂಗರಾವ್ ಭವನ, ಪೌರ ಕಾರ್ಮಿಕರ ಕಟ್ಟಡ ಹಾಗೂ ದೈವಸ್ಥಾನಗಳಿಗೆ ಹರಿದು ಬಂದಿರುವ ಸುಮಾರು 40 ಕೋಟಿ ರೂ. ದೊಡ್ಡ ಮೊತ್ತದ ಅನುದಾನಗಳ ಬಗ್ಗೆ ವಿವರಿಸಿದರು.
ಅತ್ತಾವರದಲ್ಲಿ ಸಮುದಾಯ ಭವನದ ಮುಂದುವರಿದ ಕಾಮಗಾರಿಗೆ 2.50 ಕೋಟಿ ರೂ., ದೇರೆಬೈಲ್‌ನ ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಬಳಿ ಮೇಲ್ಛಾವಣಿ ಹಾಗೂ ಇತರ ಅಭಿವೃದ್ಧಿ ಕಾಮಗಾರಿಗೆ 40 ಲಕ್ಷ ರೂ., ಅತ್ತಾವರ ಬಾಬುಗುಡ್ಡೆಯ ಕುದ್ಮುಲ್ ರಂಗರಾವ್ ಅವರ ಸಮಾಧಿ ಬಳಿ ಪ್ರವಾಸಿತಾಣ ಹಾಗೂ ಅಭಿವೃದ್ಧಿಗೆ 3 ಕೋಟಿರೂ., ಮಹಾಕಾಳಿ ಪಡ್ಪುವಿನ ಪೌರ ಕಾರ್ಮಿಕರ ಕಟ್ಟಡ ಕಾಮಗಾರಿಗೆ 3.10 ಕೋಟಿ ರೂ. ಸೇರಿದಂತೆ ಕ್ಷೇತ್ರದ ಹಲವು ದೈವಸ್ಥಾನಗಳು, ಅಂಬೇಡ್ಕರ್ ಭವನ ಹಾಗೂ ಕುದ್ಮುಲ್ ರಂಗರಾವ್ ಭವನಗಳ ಅಭಿವೃದ್ಧಿಗೆ ವೇದವ್ಯಾಸ ಕಾಮತ್ ಅನುದಾನ ಒದಗಿಸಿದ್ದಾರೆ ಎಂದು ಅವರು ಹೇಳಿದರು.
ವೇದವ್ಯಾಸ ಕಾಮತ್ ಅವರ ಮುತುವರ್ಜಿಯಿಂದ ಕಳೆದ ಬಾರಿ ರಾಜ್ಯ ಸರಕಾರ ಹಾಗೂ ಮಹಾನಗರ ಪಾಲಿಕೆಯಿಂದ 25ಕ್ಕೂ ಅಧಿಕ ದಲಿತ ಕಾಲನಿಗಳ ಅಭಿವೃದ್ದಿಗೆ 40 ಕೋಟಿ ರೂ.ಗಳ ಅನುದಾನ ದೊರಕಿದೆ. ಕಳೆದ ಬಾರಿಯಂತೆ ಈ ಬಾರಿಯೂ ವೇದವ್ಯಾಸ ಕಾಮತ್ ಅವರು, ನಾಮಪತ್ರ ಸಲ್ಲಿಕೆಗೂ ಮುನ್ನ ದಲಿತೋದ್ಧಾರಕ, ಸಾಮಾಜಿಕ ಕ್ರಾಂತಿಕಾರಿ, ಕುದ್ಮುಲ್ ರಂಗರಾಯರ ಸಮಾಧಿಗೆ ತೆರಳಿ ಗೌರವ ಸಲ್ಲಿಸಿ ಆದರ್ಶ ಮೆರೆದಿದ್ದಾರೆ ಎಂದರು.
ಗೋಷ್ಠಿಯಲ್ಲಿ ಮಾಜಿ ಮೇಯರ್ ಪ್ರವೀಣ್ ಅಂಚನ್, ಮೋರ್ಚಾದ ಪ್ರಮುಖರಾದ ಪ್ರಸನ್ನ ದಡ್ಡಲಕಾಡು, ಗೀತಾ ಭವಾನಿಶಂಕರ್, ಪ್ರಜ್ವಲ್ ಚಿಲಿಂಬಿ ಉಪಸ್ಥಿತರಿದ್ದರು.