ಚಿಕ್ಕಬಳ್ಳಾಪುರ: ಕಳೆದ 55 ದಿನಗಳಿಂದ ಕೊರೊನಾ ಲಾಕ್‌ಡೌನ್ ಪರಿಣಾಮ ಕೆಎಸ್ಸಾರ್ಟಿಸಿ ಬಸ್ ಸಂಚಾರವಿಲ್ಲದ್ದರಿಂದ ಘಟಕಕ್ಕೆ ನಿತ್ಯ ಟಿಕೆಟ್ ಮಾರಾಟದಿಂದ ಹರಿದು ಬರುತ್ತಿದ್ದ ಬರೋಬ್ಬರಿ 40 ಕೋಟಿ ರೂ.ಗೂ ಅಧಿಕ ಹಣ ನಷ್ಟವಾಗಿದೆ. ಆಂಧ್ರದ ಗಡಿಯಲ್ಲಿರುವ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸಹಜವಾಗಿ ಕೆಎಸ್‌ಆರ್‌ಟಿಸಿ ಬಸ್ ಸಂಪರ್ಕ ಜಾಲ ದೊಡ್ಡದಾಗಿದ್ದು ಬರೋಬ್ಬರಿ ಸಾಮಾನ್ಯ ಬಸ್‌ಗಳಿಂದ ಹಿಡಿದು ವೇಗದೂತ, ರಾಜಹಂಸ ಸೇರಿ ಒಟ್ಟು 604 ಕೆಂಪು ಬಸ್ ಹೊಂದಿದೆ.
ಆದರೆ, ಕಳೆದ ಮಾ.22 ರಿಂದ ಕೇಂದ್ರ ಸರ್ಕಾರ ಕೊರೊನಾ ತಡೆಗೆ ಲಾಕ್‌ಡೌನ್ ಘೋಷಿಸಿದ್ದರಿಂದ ಸತತ 55 ದಿನ ಜಿಲ್ಲೆಯಲ್ಲಿ ಕೆಎಸ್‌ಆರ್‌ಟಿಸಿ ತನ್ನ ಸಂಚಾರ ಸ್ಥಗಿತಗೊಳಿಸಿತ್ತು. ಜಿಲ್ಲೆಯ ಕೆಎಸ್‌ಆರ್‌ಟಿಸಿ ಉಪ ವಿಭಾಗಕ್ಕೆ ಜಿಲ್ಲೆಯ ವಾಣಿಜ್ಯ ನಗರಿ ಚಿಂತಾಮಣಿ, ಬಾಗೇಪಲ್ಲಿ, ಗೌರಿಬಿದನೂರು, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಘಟಕಗಳು ಸೇರಿಕೊಂಡಿದ್ದು ನಿತ್ಯ ಜಿಲ್ಲೆಯ ಒಳಗಿನ ಗ್ರಾಮೀಣ ಸಾರಿಗೆ ಜೊತೆಗೆ ಅಂತರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಗೂ ಬಸ್ ಸೌಕರ್ಯ ಹೊಂದಿತ್ತು.
ಇದರಿಂದ ಜಿಲ್ಲಾ ಘಟಕಕ್ಕೆ ಕನಿಷ್ಠ ಪ್ರತಿ ದಿನ 60 ರಿಂದ 70 ಲಕ್ಷ ರೂ., ಸಂಗ್ರಹವಾಗುತ್ತಿತ್ತು. ಆದರೆ, ಮಹಾಮಾರಿ ಕೊರೊನಾ ದೇಶದಲ್ಲಿ ನಿಯಂತ್ರಿಸುವ ನಿಟ್ಟಿನಲ್ಲಿ ಕಳೆದ ಮಾ.22 ರಿಂದಲೇ ಇಡೀ ದೇಶದಲ್ಲಿ ಲಾಕ್‌ಡೌನ್ ಘೋಷಿಸಿದ್ದರಿಂದ ಖಾಸಗಿ ಹಾಗೂ ಸರ್ಕಾರಿ ಸಾರಿಗೆ ವ್ಯವಸ್ಥೆಯನ್ನು ಸಂಪೂರ್ಣ ಬಂದ್ ಮಾಡಲಾಗಿತ್ತು. ಇದರಿಂದ ಸ್ಥಳೀಯವಾಗಿ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ಹರಿದು ಬರುತ್ತಿದ್ದ ಕೋಟ್ಯಂತರ ರೂ, ಆರ್ಥಿಕ ಸಂಗ್ರಹಕ್ಕೆ ಕೊರೊನಾ ಲಾಕ್ ಮಾಡಿತು. ಇದರಿಂದ ಜಿಲ್ಲೆಯ ನಿಗಮಕ್ಕೆ ಒಟ್ಟು 40 ಕೋಟಿಗೂ ಅಧಿಕ ಆರ್ಥಿಕ ನಷ್ಟ ಉಂಟಾಗಿದೆಯೆಂದು ಅಂದಾಜು ಮಾಡಲಾಗಿದೆ.
ಜಿಲ್ಲೆಯಲ್ಲಿ ನಿರಸ ಪ್ರತಿಕ್ರಿಯೆ: 55 ದಿನಗಳ ಬಳಿಕ ರಾಜ್ಯ ಸರ್ಕಾರ ಜಿಲ್ಲೆಯಲ್ಲಿ ಕೆಎಸ್ ಆರ್‌ಟಿಸಿ, ಖಾಸಗಿ ಬಸ್ ಸಂಚಾರಕ್ಕೆ ಹಲವು ನಿಬಂಧನೆ ವಿಧಿಸಿ ಅವಕಾಶ ಮಾಡಿಕೊಡಲಾಗಿ ದೆ. ಆದರೂ ಜಿಲ್ಲೆಯಲ್ಲಿ ಕೆಎಸ್‌ಆರ್ ಟಿಸಿ ಬಸ್ ಸಂಚಾರಕ್ಕೆ ಪ್ರಯಾಣಿಕರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮಂಗಳವಾರ ದಿಂದ ಜಿಲ್ಲೆಯಲ್ಲಿ ಬಸ್ ಸಂಚಾರಕ್ಕೆ ಅವಕಾಶ ಕಲ್ಪಿಸಿದ್ದರೂ ಇದುವರೆಗೂ ಖಾಸಗಿ ಬಸ್‌ಗಳು ಜಿಲ್ಲೆಯಲ್ಲಿ ರಸ್ತೆಗೆ ಇಳಿದಿಲ್ಲ.
ಕೊರೊನಾ ಲಾಕ್‌ಡೌನ್ ಪರಿಣಾಮ ಜಿಲ್ಲೆಯಲ್ಲಿ ಕೆಎಸ್ ಆರ್‌ಟಿಸಿ ಬಸ್ ಸೌಕರ್ಯವನ್ನು ಸತತ 55 ದಿನಗಳಿಂದ ಸ್ಥಗಿತಗೊಳಿಸಿದ್ದರಿಂದ 40 ಕೋಟಿಯಷ್ಟು ಆರ್ಥಿಕ ನಷ್ಟ ಉಂಟಾಗಿದೆ. ಜಿಲ್ಲೆಯಲ್ಲಿ ಒಟ್ಟು 604 ಬಸ್ ಇದ್ದು ನಿತ್ಯ 527 ಮಾರ್ಗಗಳಲ್ಲಿ ಸಂಚರಿಸುತ್ತಿದ್ದವು.
-ವಿ.ಬಸವರಾಜ್, ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ
* ಕಾಗತಿ ನಾಗರಾಜಪ್ಪ