ಬೆಂಗಳೂರು: ಇತ್ತೀಚೆಗೆ ರಾಜ್ಯ ರಾಜಕಾರಣದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದ್ದ 40% ಕಮಿಷನ್ ಆರೋಪ ಇದೀಗ ಮತ್ತೊಂದು ತಿರುವು ಪಡೆದಿದೆ. ಈ ಬಗ್ಗೆ ಸ್ವತಃ ಪ್ರಧಾನಿ ಕಾರ್ಯಾಲಯ ಮಾಹಿತಿ ಕೇಳಿದ್ದು, ಹಲವರಿಗೆ ನಡುಕ ಶುರುವಾಗಿದೆ.
40% ಕಮೀಷನ್ ಆರೋಪ ಮಾಡಿದ್ದ ಕಂಟ್ರಾಕ್ಟರ್ ಅಸೋಸಿಯೇಷನ್ ಅಧ್ಯಕ್ಷ ಕೆಂಪಣ್ಣಗೆ ಮಾಹಿತಿ ನೀಡಲು ಪ್ರಧಾನಿ ಕಚೇರಿಯಿಂದ ಸೂಚನೆ ಬಂದಿದೆ. ನಮ್ಮ ಅಧಿಕಾರಿಗಳು ಸಂಪರ್ಕಿಸುತ್ತಾರೆ. ಭ್ರಷ್ಟಾಚಾರದ ದಾಖಲೆ ನೀಡುವಂತೆ ಪ್ರಧಾನಿ ಕಚೇರಿಯಿಂದ ಕರೆ ಮಾಡಲಾಗಿದೆ ಎನ್ನಲಾಗಿದೆ.
ಮೋದಿ ಬೆಂಗಳೂರಿಗೆ ಬರುವ ಮುನ್ನ ನಡೆದ ಕಳಪೆ ರಸ್ತೆ ಕಾಮಗಾರಿಯ ಬಗ್ಗೆಯೂ ಪ್ರಧಾನಿ ಕಾರ್ಯಾಲಯ ವರದಿ ತರಿಸಿಕೊಂಡಿತ್ತು. ಈ ಬಗ್ಗೆನೂ ತನಿಖೆ ನಡೆಯುವ ಸಾಧ್ಯತೆಯಿದೆ. ಗುತ್ತಿಗೆದಾರರ ಸಂಘವೂ ಸರ್ಕಾರದ ವಿರುದ್ಧ ಸಾಕಷ್ಟು ಆರೋಪ ಮಾಡಿತ್ತು, ಈ ಬಗ್ಗೆ ದಾಖಲೆಯನ್ನು ಸಿದ್ದಪಡಿಸಿಕೊಳ್ಳಲು ಪ್ರಧಾನಿ ಕಾರ್ಯಾಲಯ ಸೂಚಿಸಿದೆ.
ಇದನ್ನೂ ಓದಿ:ದೆಹಲಿ: ಸೋನಿಯಾ ಗಾಂಧಿ ಆಪ್ತ ಕಾರ್ಯದರ್ಶಿ ವಿರುದ್ಧ ರೇಪ್ ಪ್ರಕರಣ ದಾಖಲು
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ, ನನಗೆ ಪ್ರಧಾನಿಯವರ ಕಚೇರಿಯಿಂದ ಕರೆ ಬಂದಿಲ್ಲ. ಯಾವುದೇ ನೊಟೀಸ್ ಕೂಡ ಬಂದಿಲ್ಲ. ನಾನು ಕೆಲಸ ಮೇಲೆ ಮೈಸೂರಿಗೆ ಬಂದಿದ್ದೆ. ನನ್ನ ಆಫೀಸಿಗೆ ಒಬ್ಬರು ಹೋಗಿದ್ದಾರೆ. ಕೆಲವು ದಾಖಲೆಗಳನ್ನ ಕೇಳಿದ್ದಾರೆ. ಅವರನ್ನು ಯಾರೆಂದು ವಿಚಾರಿಸಿದಾಗ, ಗೃಹ ಇಲಾಖೆಯಿಂದ ಬಂದಿದ್ದೇವೆ, ನಿಮ್ಮನ್ನು ಭೇಟಿಯಾಗಬೇಕು ಎಂದರು. ನಾನು ಇಂದು ಸಿಗುತ್ತೇನೆ, ಎಲ್ಲಿಗೆ ಬರಬೇಕೆಂದು ಕೇಳಿದ್ದೇನೆ. ಅವರು ಹೇಳಿದ ಜಾಗಕ್ಕೆ ನಮ್ಮ ಕಾರ್ಯದರ್ಶಿ ಕರೆದುಕೊಂಡು ಹೋಗುತ್ತೇನೆ ಎಂದರು.