Advertisement

ಗುತ್ತಿಗೆಗೆ 40% ಕಮಿಷನ್‌: ಹೋರಾಟಕ್ಕೆ ನಿರ್ಧಾರ

12:28 AM Mar 28, 2022 | Team Udayavani |

ಬೆಂಗಳೂರು: ವಿವಿಧ ಕಾಮಗಾರಿಗಳಲ್ಲಿ 40 ಪರ್ಸೆಂಟ್‌ ಕಮಿಷನ್‌ ಪಡೆಯುವುದು ನಿಲ್ಲುತ್ತಿಲ್ಲ. ದೂರು ನೀಡಿದರೂ ಸರಕಾರದ ಸ್ಪಂದನೆ ಸಿಗುತ್ತಿಲ್ಲ. ಈ ಧೋರಣೆ ಖಂಡಿಸಿ ಎಪ್ರಿಲ್‌ ಕೊನೆಯ ವಾರದಲ್ಲಿ ಉಗ್ರ ಹೋರಾಟಕ್ಕೆ ತೀರ್ಮಾನಿಸಲಾಗಿದೆ ಎಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ. ಕೆಂಪಣ್ಣ ತಿಳಿಸಿದರು.

Advertisement

ನಗರದ ಕೃಷಿ ತಂತ್ರಜ್ಞಾನ ಸಂಸ್ಥೆಯಲ್ಲಿ ರವಿವಾರ ಜಾಗೃತ ಕರ್ನಾಟಕ ಹಮ್ಮಿಕೊಂಡಿದ್ದ “40 ಪರ್ಸೆಂಟ್‌ ಕಮಿಷನ್‌ ಯಾರಿಗೂ ಆಘಾತ ತರದ ಭಾರೀ ಹಗರಣ; ಕರ್ನಾಟಕಕ್ಕೇನು ಕಾದಿದೆ?’ ಕುರಿತು ಸಂವಾದದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಈ ಹಿಂದಿನ ಕರ್ನಾಟಕ ವಿಧಾನಸಭಾ ಚುನಾವಣೆ ವೇಳೆ ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರು ಇದು 10% ಸರಕಾರ ಎಂದು ಆರೋಪಿಸಿದ್ದರು. ಈಗ ಅದು 40%ಗೆ ಏರಿಕೆಯಾಗಿದೆ. ಶಾಸಕರಿಗೆ ಶೇ. 15ರಷ್ಟು ಕಮೀಷನ್‌ ನೀಡದಿದ್ದರೆ, ಆ ಗುತ್ತಿಗೆದಾರರಿಗೆ ಕೆಲಸವನ್ನೇ ಕೊಡುವುದಿಲ್ಲ. ಇದರ ಬಗ್ಗೆ ಸಮಗ್ರ ಮಾಹಿತಿಗಳೊಂದಿಗೆ ಪ್ರಧಾನಿಗಳಿಗೆ ದೂರು ನೀಡಲಾಗಿದೆ. ಅದೇ ರೀತಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೂ ದೂರು ಸಲ್ಲಿಸಲಾಗಿದೆ. ಆದರೆ, ಇದರ ಬಗ್ಗೆ ರಾಜ್ಯ ಸರಕಾರದಿಂದ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಸಂಪೂರ್ಣ ನಿರ್ಲಕ್ಷಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಎಪ್ರಿಲ್‌ ಕೊನೆಯ ವಾರದಲ್ಲಿ ಬೃಹತ್‌ ಪ್ರತಿಭಟನೆಗೆ ನಿರ್ಧರಿಸಲಾಗಿದ್ದು, ಸುಮಾರು 50 ಸಾವಿರ ಜನ ಇದರಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ:“ಗಂಗಾ ಕಲ್ಯಾಣ’ ಭಾರೀ ಭ್ರಷ್ಟಾಚಾರ: ಸಿದ್ದರಾಮಯ್ಯ

ಲಂಚಕ್ಕೆ ದಾಖಲೆ ಕೇಳುತ್ತಿದ್ದಾರೆ ಸಿಎಂ
40 ಪರ್ಸಂಟೇಜ್‌ ಕಮೀಷನ್‌ಗೆ ದಾಖಲೆಗಳನ್ನು ಮುಖ್ಯಮಂತ್ರಿಗಳು ಕೇಳುತ್ತಿದ್ದಾರೆ. ಯಾರಾದರೂ ಲಂಚ ನೀಡುವಾಗ ಮತ್ತು ತೆಗೆದುಕೊಳ್ಳುವಾಗ ದಾಖಲೆಗಳನ್ನು ಇಟ್ಟುಕೊಂಡಿರುತ್ತಾರಾ? ಆದಾಗ್ಯೂ ಸ್ವತಂತ್ರ ತನಿಖೆ ನಡೆಸುವುದಾದರೆ, ಎಲ್ಲ ಮಾಹಿತಿಗಳನ್ನು ಒದಗಿಸಲು ನಾವು ಸಿದ್ಧವಾಗಿದ್ದೇವೆ ಎಂದು ಹೇಳಿದ ಅವರು, ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮ (ಕೆಆರ್‌ಐಡಿಎಲ್‌) ನಗರದಲ್ಲಿ 25 ಸಾವಿರ ಕೋಟಿ ರೂ. ಕಾಮಗಾರಿಗಳನ್ನು ಮಾಡಿದೆ. ಇದರಲ್ಲಿ ಶೇ. 20ರಷ್ಟು ಕೆಲಸ ಆಗಿದೆಯೇ ಎಂಬುದನ್ನು ತೋರಿಸಿಕೊಡಿ. ನೀವು ಹೇಳಿದಂತೆ ನಾವು ಕೇಳುತ್ತೇವೆ ಎಂದು ಸವಾಲು ಹಾಕಿದರು.

Advertisement

ವಿಕೇಂದ್ರೀಕರಣದಿಂದ ಭ್ರಷ್ಟಾಚಾರ ಕಡಿಮೆ
ನಿವೃತ್ತ ಐಎಎಸ್‌ ಅಧಿಕಾರಿ ಹಾಗೂ ಭ್ರಷ್ಟಾಚಾರ ನಿರ್ಮೂಲನ ಕ್ರಮಗಳ ಸಲಹೆಗಾರ ಟಿ.ಆರ್‌. ರಘುನಂದನ್‌ ಮಾತನಾಡಿ, ಆಡಳಿತದಲ್ಲಿ ತಂತ್ರಜ್ಞಾನದ ಅಳವಡಿಕೆಯಿಂದ ಭ್ರಷ್ಟಾಚಾರ ನಿರ್ಮೂಲನೆ ಆಗುತ್ತದೆ ಎಂಬುದು ತಪ್ಪು. ಇದರಿಂದ ಹಲವಾರು ಅಂಶಗಳನ್ನು ಸಾರ್ವಜನಿಕರಿಂದ ಗೌಪ್ಯವಾಗಿಡಬಹುದು. ಇನ್ನು ಆಡಳಿತ ವಿಕೇಂದ್ರೀಕರಣದಿಂದ ಭ್ರಷ್ಟಾಚಾರ ಹೆಚ್ಚಾಗುವುದಿಲ್ಲ. ಬದಲಿಗೆ ಬೇಗ ಹೊರಬರುತ್ತದೆ. ಅದರಿಂದ ಕಡಿಮೆ ಆಗುತ್ತದೆ ಎಂದು ಅಭಿಪ್ರಾಯಪಟ್ಟರು.

ಶೇ. 85ರಷ್ಟು ಜನ ಕೊಟ್ಟಿದ್ದಾರೆ ಲಂಚ
ಈ ಹಿಂದೆ ಜನಾಗ್ರಹ ಸಂಸ್ಥೆಯು “ಐ ಪೇಯ್ಡ ಬ್ರೈಬ್‌’ ವೆಬ್‌ಸೈಟ್‌ನಲ್ಲಿ ಶೇ. 85ರಷ್ಟು ಜನ ತಾವು ತಮ್ಮ ಕೆಲಸಗಳಿಗಾಗಿ ಲಂಚ ಕೊಟ್ಟಿರುವುದಾಗಿ ಹೇಳಿಕೊಂಡಿದ್ದಾರೆ. ಉಳಿದ ಶೇ. 12ರಷ್ಟು ಜನ ತಾವು ಲಂಚ ನೀಡಲು ನಿರಾಕರಿಸಿರುವುದಾಗಿ ಹೇಳಿದ್ದರೆ, ಶೇ. 3ರಷ್ಟು ಜನ ಪ್ರಾಮಾಣಿಕ ಅಧಿಕಾರಿಗಳಿಂದ ಲಂಚ ಕೊಡುವುದು ತಪ್ಪಿದೆ ಎಂದು ತಿಳಿಸಿದ್ದಾರೆ. ಇದು ನಮ್ಮ ವ್ಯವಸ್ಥೆಗೆ ಹಿಡಿದ ಕನ್ನಡಿ ಎಂದರು. ಕಾರ್ಯನೀತಿ ವಿಶ್ಲೇಷಕ ಕೆ.ಸಿ. ರಘು, ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆರ್‌. ಆಂಜನೇಯ ರೆಡ್ಡಿ ಮಾತನಾಡಿದರು.

 

Advertisement

Udayavani is now on Telegram. Click here to join our channel and stay updated with the latest news.

Next