ಮುಂಬಯಿ: ಕಳೆದ 3 ದಿನದಲ್ಲಿ 40 ಗ್ರಾಹಕರು ತಮ್ಮ ಖಾತೆಯಿಂದ ಹಣ ಕಳೆದುಕೊಂಡು ವಂಚನೆಗೆ ಒಳಗಾದ ಪ್ರಕರಣ ಬೆಳಕಿಗೆ ಬಂದಿದೆ.
ಮುಂಬಯಿಯ ಖಾಸಗಿ ಬ್ಯಾಂಕಿನ ಕನಿಷ್ಠ 40 ಗ್ರಾಹಕರು ತಮ್ಮ ಮೊಬೈಲ್ ಗೆ ಬಂದ ನಕಲಿ ಸಂದೇಶದಲ್ಲಿನ ಲಿಂಕ್ ಒತ್ತಿ ಅದರಲ್ಲಿ ತಮ್ಮ ಪಾನ್, ಕೆವೈಸಿ ವಿವರವನ್ನು ಹಾಕಿ ಲಕ್ಷಾಂತರ ರೂಪಾಯಿಯನ್ನು ಕಳೆದುಕೊಂಡು ವಂಚನೆಗೆ ಒಳಗಾಗಿದ್ದಾರೆ.
ಪಾನ್ ಕಾರ್ಡ್, ಕೆವೈಸಿ ವಿವರವನ್ನು ಅಪ್ಡೇಡ್ ಮಾಡದೇ ಇದ್ದರೆ ನಿಮ್ಮ ಬ್ಯಾಂಕ್ ಖಾತೆ ಬ್ಲಾಕ್ ಆಗುತ್ತದೆ ಎನ್ನುವ ಸಂದೇಶವನ್ನು ವಂಚಕರು ಮೊಬೈಲ್ ಗೆ ಕಳುಹಿಸುತ್ತಾರೆ. ಇದನ್ನು ನಂಬುವ ಕೆಲ ಗ್ರಾಹಕರು ಪಾನ್, ಕೆವೈಸಿ ವಿವರವನ್ನು ವಂಚಕರು ಕಳುಹಿಸಿದ ಲಿಂಕ್ ನಲ್ಲಿ ಅಪ್ಡೇಡ್ ಮಾಡುತ್ತಾರೆ. ಈ ಕಾರಣದಿಂದ ಗ್ರಾಹಕರ ಖಾತೆಯಲ್ಲಿದ್ದ ಹಣ ವಂಚಕರ ಪಾಲಾಗುತ್ತದೆ.
ಈ ರೀತಿ ವಂಚನೆಗೆ ಒಳಗಾದವರಲ್ಲಿ ಟಿವಿ ನಟಿ ಶ್ವೇತಾ ಮೆಮನ್ ಕೂಡ ಒಬ್ಬರಾಗಿದ್ದಾರೆ. ಇತ್ತೀಚೆಗೆ ಶ್ವೇತಾ ಅವರ ಮೊಬೈಲ್ ಗೆ ವಂಚಕರಿಂದ ಕೆವೈಸಿ ಅಪ್ಡೇಟ್ ಹಾಗೂ ಇತರ ಮಾಹಿತಿ ಅಪ್ಡೇಟ್ ಮಾಡುವ ಸಂದೇಶವೊಂದು ಬಂದಿದೆ. ಇದನ್ನು ನಂಬಿದ ಶ್ವೇತಾ ಲಿಂಕ್ ಒಪನ್ ಮಾಡಿ ಗ್ರಾಹಕರ ಐಡಿ, ಪಾಸ್ ವರ್ಡ್ ಹಾಗೂ ಓಟಿಪಿಯನ್ನು ಹಾಕಿದ್ದಾರೆ. ಇದಾದ ಬಳಿಕ ಬ್ಯಾಂಕಿನ ಸಿಬ್ಬಂದಿ ಎಂದು ಮಹಿಳೆಯೊಬ್ಬರು ಕರೆ ಮಾಡಿ ಮತ್ತೊಂದು ಓಟಿಪಿಯನ್ನು ಕೇಳಿದ್ದಾರೆ. ನಂತರ ಶ್ವೇತಾ ಅವರ ಖಾತೆಯಿಂದ 57,636 ರೂ. ಡೆಬಿಟ್ ಆಗಿದೆ.
ತಾನು ಮೋಸ ಹೋಗಿದ್ದೇನೆ ಎಂದು ಶ್ವೇತಾ ಅವರಿಗೆ ತಿಳಿದ ಬಳಿಕ ದೂರು ನೀಡಿದ್ದಾರೆ. ಹೀಗೆ ಕಳೆದ 3 ದಿನದಲ್ಲಿ 40 ಗ್ರಾಹಕರಿಗೆ ಆಗಿದ್ದು, ಇಂತಹ ಸುಳ್ಳಿನ ಲಿಂಕ್ ನ ಮೇಲೆ ಕ್ಲಿಕ್ ಮಾಡಬೇಡಿ ಜಾಗ್ರತೆಯಿಂದ ಇರಿ ಎಂದು ಪೊಲೀಸರು ನಾಗರಿಕರಿಗೆ ಹೇಳಿದೆ.