ದೇವದುರ್ಗ: ತಾಲೂಕಿನ ಸುಂಕೇಶ್ವರಹಾಳ ಗ್ರಾಮದ ಆಲ್ದರ್ತಿ ಸಮೀಪ ನಾರಾಯಣಪುರ ಬಲದಂಡೆ ನಾಲೆಯ 17ನೇ ವಿತರಣೆ ಕಾಲುವೆ ಒಡೆದು ಅಪಾರ ಪ್ರಮಾಣದ ನೀರು ಪೋಲಾಗಿ ಸುಮಾರು 40ಕ್ಕೂ ಹೆಚ್ಚು ಎಕರೆ ಹೊಲಕ್ಕೆ ನೀರು ನುಗ್ಗಿದ್ದರಿಂದ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಘಟನೆಗೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾರಾಯಣಪುರ ಬಲದಂಡೆ ನಾಲೆಯ 17ನೇ ವಿತರಣೆ ಕಾಲುವೆ ಎಲ್ಲೆಂದರಲ್ಲಿ ಬಿರುಕು ಬಿಟ್ಟು ಒಡೆಯುವ ಹಂತಕ್ಕೆ ಬಂದಿತ್ತು. ಕಾಲುವೆ ದುರಸ್ತಿ ಮಾಡುವಂತೆ ಸುತ್ತಲಿನ ಗ್ರಾಮಸ್ಥರು ಹಲವಾರು ಬಾರಿ ಸಂಬಂಧಿಸಿದ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದರು. ಆದರೆ ಅಧಿಕಾರಿಗಳು
ಬರೀ ಭರವಸೆಯಲ್ಲೇ ಕಾಲಹರಣ ಮಾಡಿದ್ದರಿಂದ ಇದೀಗ ಕಾಲುವೆ ಒಡೆದು ಅಪಾರ ಪ್ರಮಾಣದ ನೀರು ಪೋಲು ಜೊತೆಗೆ ಲಕ್ಷಾಂತರ ಮೌಲ್ಯದ ಭತ್ತದ ಬೆಳೆ ಹಾನಿಯಾಗಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಡಿ.8ರಂದು ನಾರಾಯಣಪುರು ಬಲದಂಡೆ ಕಾಲುವೆಗೆ ನೀರು ಬಿಡಲಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬಂದ ಕಾರಣ 17ನೇ ವಿತರಣೆ ಕಾಲುವೆ ಒಡೆದಿದೆ ಎಂದು ರೈತರು ದೂರಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ನೀರಾವರಿ ಅಧಿಕಾರಿಗಳ ತಂಡ ಕಾಲುವೆ ಸ್ಥಿತಿಗತಿ ಮತ್ತು ಹೊಲಕ್ಕೆ ನೀರು ನುಗ್ಗಿದ್ದನ್ನು ಪರಿಶೀಲಿಸಿದರು. ಈ ವೇಳೆ ರೈತರು ಅಧಿಕಾರಿಗಳ ವಿರುದ್ಧ ಹರಿಹಾಯ್ದರು.
ರೈತರ ಆಗ್ರಹ ಏನು?: ಸರ್ಕಾರ ಪ್ರತಿ ವರ್ಷ ಬೇಸಿಗೆ ಅವಧಿಯಲ್ಲಿ ಕಾಲುವೆ ದುರಸ್ತಿ, ಜಂಗಲ್ ಕಟ್ಟಿಂಗ್ ಗೆ, ಕಾಲುವೆಯಲ್ಲಿನ ಹೂಳು ಎತ್ತಲು ಕೋಟ್ಯಂತರ ರೂ. ಅನುದಾನ ವ್ಯಯಿಸುತ್ತಿದೆ. ಆದರೆ ಅಧಿಕಾರಿಗಳು ಟೆಂಡರ್ ಕರೆಯಲು ವಿಳಂಬ ಮಾಡುವುದರಿಂದ ಮತ್ತು ಗುತ್ತಿಗೆದಾರರ ಜತೆ ಶಾಮೀಲಾಗಿ ಮಳೆಗಾಲ ಆರಂಭವಾಗುವ ವೇಳೆ ಜೂನ್‌ನಲ್ಲಿ ಕಾಲುವೆ ದುರಸ್ತಿ ಕೈಗೊಂಡು ಅರರೆಬರೆ ಕಾಮಗಾರಿ ಮಾಡುವುದರಿಂದ ಕಾಲುವೆಗಳು ಒಡೆಯುತ್ತಿವೆ.
ಇದೀಗ ಕಾಲುವೆ ಒಡೆದು ಅಪಾರ ಪ್ರಮಾಣದ ನೀರು ಪೋಲಾಗಲು ಮತ್ತು ಬೆಳೆ ಹಾನಿಗೆ ಕಾರಣರಾದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು. ಬೆಳೆ ಹಾನಿಗೀಡಾದ ರೈತರಿಗೆ ಕೂಡಲೇ ಪರಿಹಾರ ವಿತರಿಸಬೇಕು ಎಂದು ರೈತ ಸಂಘಟನೆ ಮುಖಂಡರು ಆಗ್ರಹಿಸಿದ್ದಾರೆ. ಅಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ಬಾರಕೋಲು ಚಳವಳಿ ನಡೆಸಬೇಕಾಗುತ್ತದೆ ಎಂದು ಕರ್ನಾಟಕ ರೈತ ಸಂಘ ಹಾಗೂ ಹಸಿರುಸೇನೆ ಜಿಲ್ಲಾ ಕಾರ್ಯದರ್ಶಿ ಶಿವನಗೌಡ ಹೂವಿನಹೆಡ್ಗಿ ಎಚ್ಚರಿಸಿದ್ದಾರೆ.
ನಾರಾಯಣಪುರ ಬಲದಂಡೆ ನಾಲೆಯ 17ನೇ ವಿತರಣೆ ಕಾಲುವೆ ಅಲ್ಲಲ್ಲಿ ಬಿರುಕು ಬಿಟ್ಟಿತ್ತು. ಇಲ್ಲಿನ ಸಮಸ್ಯೆ ಬಗ್ಗೆ ಅಧಿಕಾರಿಗಳ ಗಮನಕ್ಕೆ ತರಲಾಗಿತ್ತು. ಆದರೆ ಅವರು ದುರಸ್ತಿಗೆ ಕ್ರಮ ಕೈಗೊಳ್ಳದೇ ನಿರ್ಲಕ್ಷಿಸಿದ್ದರಿಂದ ಕಾಲುವೆ ಒಡೆದಿದೆ. ಬೆಳೆ ಹಾನಿಗೀಡಾದ ರೈರಿಗೆ ಪರಿಹಾರ ಕೊಡಬೇಕು.
ಸಿದ್ಧಲಿಂಗಪ್ಪ ನಾಯಕ, ರೈತ