ನವದೆಹಲಿ: ಭಾರತ-ಚೀನಾ ನಡುವಿನ ಪೂರ್ವ ಲಡಾಖ್ ಗಡಿ ಸಂಘರ್ಷಕ್ಕೆ ಬರೋಬ್ಬರಿ 4 ವರ್ಷ 4 ತಿಂಗಳ ಬಳಿಕ ಪರಿಹಾರ ಸಿಕ್ಕಿದೆ.
ಗಡಿ ಗಸ್ತು ಸಂಬಂಧಿಸಿದಂತೆ ಉಭಯ ರಾಷ್ಟ್ರಗಳು ಒಪ್ಪಂದ ಮಾಡಿಕೊಂಡಿದ್ದು, ಇನ್ನು ಮುಂದೆ 2020ರಲ್ಲಿ ಇದ್ದಂತೆಯೇ ಭಾರತದ ಯೋಧರು ಪೂರ್ವ ಲಡಾಖ್ ಸೆಕ್ಟರ್‌ನ ವಾಸ್ತವ ಗಡಿ ನಿಯಂತ್ರಣ ರೇಖೆ (ಎಲ್‌ಎಸಿ)ಯಲ್ಲಿ ಗಸ್ತು ಮುಂದುವರಿಸಬಹುದಾಗಿದೆ.
ಬ್ರಿಕ್ಸ್ ಶೃಂಗಸಭೆ ಹಿನ್ನೆಲೆಯಲ್ಲಿ ಈ ಬೆಳವಣಿಗೆ ಮಹತ್ವ ಪಡೆದಿದೆ.ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಈ ಕುರಿತು ಮಾಹಿತಿ ನೀಡಿದ್ದು, 4 ವರ್ಷಗಳ ಸುದೀರ್ಘ ಸಂಘರ್ಷವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಹಲವು ದಿನಗಳಿಂದ ಉಭಯ ರಾಷ್ಟ್ರಗಳ ನಡುವೆ ಮಿಲಿಟರಿ ಮತ್ತು ರಾಜತಾಂತ್ರಿಕ ಮಾತುಕತೆಗಳನ್ನು ನಡೆಸಲಾಗುತ್ತಿತ್ತು. ಅದರಂತೆ ಇದೀಗ ಎರಡೂ ರಾಷ್ಟ್ರಗಳು ವಾಸ್ತವ ಗಡಿ ನಿಯಂತ್ರಣ ರೇಖೆಯಲ್ಲಿ ಮತ್ತೆ ಗಸ್ತು ಆರಂಭಿಸಲು ಒಪ್ಪಂದಕ್ಕೆ ಬಂದಿವೆ ಎಂದಿದ್ದಾರೆ.
ಪೂರ್ವ ಲಡಾಖ್‌ನ 6 ಗಸ್ತು ಪ್ರದೇಶಗಳಲ್ಲಿ ಘರ್ಷಣೆ ಏರ್ಪಟ್ಟಿತ್ತು. ಈ ಪೈಕಿ 4 ಬಿಂದುಗಳಲ್ಲಿ ಉಭಯ ಪಡೆಗಳು ನಿಯೋಜನೆ ವಾಪಸ್ ಪಡೆದಿದ್ದವು. ಇದೀಗ ಪ್ರಮುಖ ಸಂಘರ್ಷ ಕೇಂದ್ರವಾಗಿದ್ದ ಡೆಪ್ಸಾಂಗ್ ಮತ್ತು ಡೆಮೊcàಕ್ ಪ್ರದೇಶಗಳಲ್ಲಿ ಮತ್ತೆ ಗಸ್ತು ಆರಂಭಿಸಲು ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದೂ ಹೇಳಿದ್ದಾರೆ. 2020ರ ಜೂನ್‌ನಲ್ಲಿ ಗ್ಯಾಲ್ವಾನ್ ಗಡಿ ಸಂಘರ್ಷವು ಎರಡೂ ರಾಷ್ಟ್ರಗಳ ವ್ಯಾಪಾರ ಮತ್ತು ರಾಜಕೀಯ ಸಂಬಂಧಗಳ ಮೇಲೆ ಪರಿಣಾಮ ಬೀರಿತ್ತು. ಭಾರತದ ಚೀನಾ ಮೂಲದ ಸಂಸ್ಥೆಗಳ ಹೂಡಿಕೆ ಮೇಲೂ ನಿರ್ಬಂಧ ವಿಧಿಸಲಾಗಿತ್ತು.
ಮೋದಿ ಕ್ಸಿ ಸಭೆ ಸಾಧ್ಯತೆ : ರಷ್ಯಾದಲ್ಲಿ ಅಕ್ಟೋಬರ್ 22 ಮತ್ತು 23ರಂದು ನಡೆಯಲಿರುವ ಬ್ರಿಕ್ಸ್ ಶೃಂಗಸಭೆ ಬಳಿಕ ಪ್ರಧಾನಿ ನರೇಂದ್ರ ಮೋದಿ ಹಾಗೂ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ನಡುವೆ ದ್ವಿಪಕ್ಷೀಯ ಸಭೆ ನಡೆಯುವ ಸಾಧ್ಯತೆಗಳಿದೆ ಎಂದು ಮಿಸ್ರಿ ಹೇಳಿದ್ದಾರೆ. ಗಡಿ ಗಸ್ತು ಒಪ್ಪಂದದ ಹಿನ್ನೆಲೆಯಲ್ಲಿ ಉಭಯ ರಾಷ್ಟ್ರಗಳ ನಾಯಕರೂ ಸಭೆ ನಡೆಸುವ ಸಾಧ್ಯತೆಗಳಿದೆ. ಇದಲ್ಲದೇ, ಬ್ರಿಕ್ಸ್ ಸದಸ್ಯರಾಷ್ಟ್ರಗಳ ಪೈಕಿ ಹಲವು ರಾಷ್ಟ್ರಗಳು ಈಗಾಗಲೇ ದ್ವಿಪಕ್ಷೀಯ ಸಭೆಗೆ ಬೇಡಿಕೆಯನ್ನಿಟ್ಟಿವೆ ಹೀಗಾಗಿ ಈ ಬಗ್ಗೆ ಖಾತರಿ ನೀಡಲಾಗದೂ ಎಂದೂ ಹೇಳಿದ್ದಾರೆ.
ಎರಡು ದೊಡ್ಡ ರಾಷ್ಟ್ರಗಳ ನಡುವೆ ದೊಡ್ಡ ಘರ್ಷಣೆ ನಡೆದಿತ್ತು. ಇದೀಗ ಅದನ್ನು ಪರಿಹರಿಸಲು ಪ್ರಮುಖ ಪ್ರಗತಿ ನಡೆದಿದೆ.
– ಎಸ್.ಶಂಕರ್, ವಿದೇಶಾಂಗ ಸಚಿವ