ಶ್ರೀನಗರ: ಕಾರೊಂದು ಕಂದಕಕ್ಕೆ ಬಿದ್ದು 4 ವರ್ಷ ಬಾಲಕಿ ಸೇರಿದಂತೆ ಐವರು ಮೃತಪಟ್ಟಿರುವ ದಾರುಣ ಘಟನೆ ಶನಿವಾರ ಸಂಜೆ(ಏ.13 ರಂದು) ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯಲ್ಲಿ ನಡೆದಿದೆ.
ಕಾರು ಥಾತ್ರಿಯಿಂದ ಕಥಾವಾಕ್ಕೆ ತೆರಳುತ್ತಿದ್ದಾಗ ಖಾನ್ಪುರದಲ್ಲಿ ಸಂಜೆ 7 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ ಎಂದು ವರದಿಯಾಗಿದೆ.
ರಸ್ತೆಯಲ್ಲಿ ಕಾರು ಸ್ಕಿಡ್ ಆಗಿ ಆಳವಾದ ಕಂದಕಕ್ಕೆ ಬಿದ್ದಿದ್ದು, ಪರಿಣಾಮ 4 ವರ್ಷದ ಬಾಲಕಿ ಸೇರಿದಂತೆ ಐವರು ಸಾವನ್ನಪ್ಪಿದ್ದಾರೆ ಮತ್ತು ಇತರರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಪಘಾತದಲ್ಲಿ ಮಹಿಳೆ ಮತ್ತು ನಾಲ್ಕು ವರ್ಷದ ಬಾಲಕಿ ಸೇರಿದಂತೆ ಐವರು ಸಾವನ್ನಪ್ಪಿದ್ದು, ಐವರನ್ನು ಆಸ್ಪತ್ರೆಗೆ ದಾಖಲಾಗಿದ್ದು, ಚಿಂತಾಜನಕರಾಗಿದ್ದಾರೆ ಎಂದು ರಕ್ಷಣಾ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದ ಥಾತ್ರಿ ಪೊಲೀಸ್ ಠಾಣೆಯ ಠಾಣಾಧಿಕಾರಿ ಸುರೇಶ್ ಗೌತಮ್ ಹೇಳಿದ್ದಾರೆ.
ಮೃತ ನಾಲ್ವರನ್ನು ಮುಖ್ತಿಯಾರ್ ಅಹ್ಮದ್, ರಿಯಾಜ್ ಅಹ್ಮದ್, ಮೊಹಮ್ಮದ್ ರಫಿ, ಇರೀನಾ ಬೇಗಂ ಎಂದು ಪೊಲೀಸರು ಗುರುತಿಸಲಾಗಿದೆ. ನಾಲ್ಕು ವರ್ಷದ ಬಾಲಕಿ ಮೊಹಮ್ಮದ್ ಅಮೀರ್ ಮತ್ತು ಸೈಮಾ ದಂಪತಿಯ ಪುತ್ರಿಯಾಗಿದ್ದು, ಮೊಹಮ್ಮದ್ ಅಮೀರ್ ಮತ್ತು ಸೈಮಾ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಗಾಯಗೊಂಡ ಇತರರಲ್ಲಿ ಸೂಫಿಯಾನ್ ಶೇಖ್ ಮತ್ತು ಇಬ್ಬರು ಹುಡುಗಿಯರು ಸೇರಿದ್ದಾರೆ ಎಂದು ಅವರು ಹೇಳಿದರು.