Advertisement

ರಶ್ಯಕ್ಕೆ 4 ವರ್ಷ ಸಂಪೂರ್ಣ ಕ್ರೀಡಾ ನಿಷೇಧ

10:35 AM Dec 11, 2019 | sudhir |

ಮಾಸ್ಕೊ (ರಶ್ಯ): ರಶ್ಯಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರೀ ಮುಖಭಂಗ ಎದುರಾಗಿದೆ. ಮುಂದಿನ 4 ವರ್ಷಗಳ ಕಾಲ ಅದು ಯಾವುದೇ ಕ್ರೀಡಾಕೂಟಗಳಲ್ಲಿ ಭಾಗವಹಿಸುವಂತಿಲ್ಲ ಎಂದು ವಿಶ್ವ ಉದ್ದೀಪನ ನಿಗ್ರಹ ಸಂಸ್ಥೆ (ವಾಡಾ) ಆದೇಶಿಸಿದೆ. ಇದರಿಂದ 2020ರ ಟೋಕಿಯೊ ಒಲಿಂಪಿಕ್ಸ್‌, ಪ್ಯಾರಾಲಿಂಪಿಕ್ಸ್‌, 2022ರ ಕತಾರ್‌ ಫ‌ುಟ್‌ಬಾಲ್‌ ವಿಶ್ವಕಪ್‌ನಲ್ಲೂ ಭಾಗವಹಿಸಲು ಸಾಧ್ಯವಿಲ್ಲ. 2016ರ ಒಲಿಂಪಿಕ್ಸ್‌ನಲ್ಲಿ ರಶ್ಯಕ್ಕೆ ಆ್ಯತ್ಲೆಟಿಕ್ಸ್‌ ವಿಭಾಗದಲ್ಲಿ ಮಾತ್ರ ನಿಷೇಧ ಹೇರಲಾಗಿತ್ತು. ಈ ಬಾರಿ ಪೂರ್ಣವಾಗಿ ನಿಷೇಧಿಸಲಾಗಿದೆ.

Advertisement

ರಶ್ಯದ ಆಟಗಾರರು ಉದ್ದೀಪನ ಸೇವನೆ ಮಾಡುತ್ತಿದ್ದಾರೆ. ಅದನ್ನು ತಡೆಗಟ್ಟಲು ರಾಷ್ಟ್ರೀಯ ಉದ್ದೀಪನ ನಿಗ್ರಹ ಸಂಸ್ಥೆ (ರುಸಾಡ) ಸೂಕ್ತ ಕ್ರಮಕೈಗೊಂಡಿಲ್ಲ ಎಂಬ ಕಾರಣ ನೀಡಿ, 2015ರಲ್ಲಿ ರಶ್ಯದ ಆ್ಯತ್ಲೀಟ್‌ಗಳನ್ನು ನಿಷೇಧಿಸಲಾಗಿತ್ತು. ಆದರೆ ಆ ವೇಳೆ ಆ್ಯತ್ಲೆಟಿಕ್ಸ್‌ ಹೊರತುಪಡಿಸಿ ಇತರ ಕ್ರೀಡೆಗಳಲ್ಲಿ ರಶ್ಯ ಕ್ರೀಡಾಪಟುಗಳು ಭಾಗವಹಿಸಬಹುದಿತ್ತು. ಅಂದರೆ, ತಂಡ ವಿಭಾಗದಲ್ಲಿ, ಕುಸ್ತಿ, ಬಾಕ್ಸಿಂಗ್‌, ದೋಣಿ ಸ್ಪರ್ಧೆ, ಟೆನಿಸ್‌ನಂತಹ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಬಹುದಿತ್ತು. ಈ ಬಾರಿ ಸಂಪೂರ್ಣ ನಿಷೇಧ ಹೇರಿರುವುದು ಪರಿಸ್ಥಿತಿ ಬಿಗಡಾಯಿಸಲು ಕಾರಣವಾಗಿದೆ.

ಏಕೆ ಈ ನಿಷೇಧ?
2016ರ ಒಲಿಂಪಿಕ್ಸ್‌ಗೆ ಒಂದು ವರ್ಷ ಮೊದಲು ರಶ್ಯಕ್ಕೆ ನಿಷೇಧ ಹೇರಲಾಗಿತ್ತು. ಅಲ್ಲಿಂದ ಮುಂದಿನ 3 ವರ್ಷಗಳ ಕಾಲ ಸತತವಾಗಿ ತನಿಖೆ ನಡೆದಿತ್ತು, ಜತೆಗೆ ನಿಷೇಧವೂ ಇತ್ತು. 2018ರಲ್ಲಿ ಅದರ ನಿಷೇಧ ತೆರವುಗೊಳಿಸಲಾಗಿತ್ತು. ಆದರೆ 2019 ಜನವರಿಯಲ್ಲಿ ರುಸಾಡ, ವಾಡಾಕ್ಕೆ ನೀಡಿದ ಮಾಹಿತಿಯನ್ನು ತಿರುಚಲಾಗಿದೆ, ಅದು ತನಿಖೆಗೆ ಬೆಂಬಲ ನೀಡುತ್ತಿಲ್ಲ ಎಂದು ಸೋಮವಾರ ನಡೆದ ವಾಡಾ ಸಭೆಯಲ್ಲಿ ಒಮ್ಮತದಿಂದ ತೀರ್ಮಾನಿ ಸಲಾಯಿತು. ಪರಿಣಾಮ ಮತ್ತೆ 4 ವರ್ಷಗಳ ಕಾಲ ನಿಷೇಧ ಹೇರಲಾಗಿದೆ.

ನಿರ್ದೋಷಿ ಆ್ಯತ್ಲೀಟ್‌ಗಳಿಗೆ ಪ್ರವೇಶ
ರಶ್ಯ ಮೇಲೆ ನಿಷೇಧ ಹೇರಲಾಗಿದ್ದರೂ ಆ ದೇಶದ ನಿರ್ದೋಷಿ ಆ್ಯತ್ಲೀಟ್‌ಗಳು ಚಿಂತಿಸುವ ಅಗತ್ಯವಿಲ್ಲ. ಅವರು ಕಳಂಕಿತರಲ್ಲ ಎಂದು ಖಚಿತ ವಾದರೆ ಅವರಿಗೆ ಮುಂದಿನ ಒಲಿಂಪಿಕ್ಸ್‌ ನಲ್ಲಿ ಸ್ಪರ್ಧಿಸುವ ಅವಕಾಶ ಸಿಗಲಿದೆ. ಆದರೆ ಅದು ತಟಸ್ಥ ಧ್ವಜದಡಿಯಲ್ಲಿ. ಇಲ್ಲಿ ರಶ್ಯ ಧ್ವಜವನ್ನು
ಬಳಸುವಂತಿಲ್ಲ.

ರಶ್ಯ ವಿರುದ್ಧ ದ್ವೇಷವೇ ಕಾರಣ
ನಿಷೇಧದ ಕುರಿತು ಪ್ರತಿಕ್ರಿಯಿಸಿದ ರಶ್ಯದ ಪ್ರಧಾನಮಂತ್ರಿ ಡಿಮಿಟ್ರಿ ಮೆಡ್ವಡೇವ್‌, “ನಮ್ಮ ಕ್ರೀಡಾವ್ಯವಸ್ಥೆಯಲ್ಲಿ ದೋಷವಿರಬಹುದು. ಆದರೆ ಈ ಮಟ್ಟದ ನಿಷೇಧಕ್ಕೆ ರಶ್ಯ ವಿರುದ್ಧದ ದ್ವೇಷವೇ ಕಾರಣ. ಈಗಾಗಲೇ ಶಿಕ್ಷೆ ಅನುಭವಿಸಿರುವ ಆ್ಯತ್ಲೀಟ್‌ಗಳಿಗೆ ಮತ್ತೆ ಬೇರೆ ರೀತಿಯಲ್ಲಿ ತೊಂದರೆ ನೀಡಲಾಗುತ್ತಿದೆ’ ಎಂದು ಆರೋಪಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next