ಕೊಪ್ಪಳ: ಯಲಬುರ್ಗಾ ತಾಲೂಕಿನ ಸಂಕನೂರು ಗ್ರಾಮದ ಹಳ್ಳದಲ್ಲಿ ನಾಲ್ವರು ಮಹಿಳೆಯರು ಕೊಚ್ಚಿ ಹೋಗಿದ್ದಾರೆ ಎನ್ನುವ ಶಂಕೆ ವ್ಯಕ್ತವಾಗಿದೆ. ಹಳ್ಳದಲ್ಲಿ ಕೊಚ್ಚಿ ಹೋದವರನ್ನು ಸಂಕನೂರು ಗ್ರಾಮದ ಗಿರಿಜಾ ಕಲ್ಲನಗೌಡ ಮಾಲಿ ಪಾಟೀಲ್ (32), ಭುವನೇಶ್ವರಿ ಶಾಂತವೀರಯ್ಯ ಪೊಲೀಸ್ ಪಾಟೀಲ್ (40) ಪವಿತ್ರಾ ಸಿದ್ದಯ್ಯ ಪೊಲೀಸ್ ಪಾಟೀಲ್(45) ವೀಣಾ ಬಸವರಾಜ ಮಾಲಿ ಪಾಟೀಲ್(19) ಕೊಚ್ಚಿ ಹೋಗಿದ್ದಾರೆ ಎಂದು ಸ್ಥಳೀಯ ಗ್ರಾಮಸ್ಥರು ಹೇಳುತ್ತಿದ್ದಾರೆ.
ಈ ಮಹಿಳೆಯರು ಗ್ರಾಮ ಸಮೀಪದಲ್ಲಿನ ಸೀಡ್ಸ್ ಕಂಪನಿಯಲ್ಲಿ ಹತ್ತಿ ಬೀಜ ಆಯಲು ಹೋಗಿ ಮನೆಗೆ ಸಂಜೆ ವಾಪಾಸ್ಸಾಗುವ ವೇಳೆ ಈ ಘಟನೆ ನಡೆದಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಸೀಡ್ಸ್ ಕಂಪನಿಗೆ ನಿತ್ಯವೂ ಹತ್ತಾರು ಜನರು ಕೆಲಸಕ್ಕೆ ತೆರಳುತ್ತಾರೆ. ಎಂದಿನಂತೆ ಇವರೂ ತೆರಳಿದ್ದಾರೆ. ಆದರೆ ಸಂಜೆ ಎರಡು ಗಂಟೆಗೂ ಹೆಚ್ಚು ಕಾಲ ಮಳೆ ಸುರಿದ ಪರಿಣಾಮ ಗ್ರಾಮದ ಸಂಕನೂರು ಹಳ್ಳ ಭರ್ತಿಯಾಗಿ ಹರಿದಿದೆ. ಈ ಹಳ್ಳದಲ್ಲಿ ನೀರಿನ ಪ್ರಮಾಣ ಕಡಿಮೆ ಇದೆ ಎಂದು ಮಹಿಳೆಯರು ನೀರಿಗೆ ಇಳಿದಿದ್ದಾರೆ. ನೀರಿನ ರಭಸಕ್ಕೆ ಇಬ್ಬರು ಕೊಚ್ಚಿ ಹೋಗಿದ್ದು, ಅವರನ್ನು ರಕ್ಷಣೆ ಮಾಡಲು ಮತ್ತೆ ಇಬ್ಬರು ಹಳ್ಳದಲ್ಲಿ ಇಳಿದಿದ್ದಾರೆ. ಅವರೂ ಸಹ ನೀರಿನ ಸೆಳೆತಕ್ಕೆ ಸಿಲುಕಿದ್ದಾರೆ. ಒಂದು ಗಂಟೆ ಕಾಲ ಗಿರಿಜಾ ಹಾಗೂ ಭುವನೇಶ್ವರಿ ಎನ್ನುವ ಇಬ್ಬರು ಮಹಿಳೆಯರು ಹಳ್ಳದ ಮಧ್ಯೆ ಗಿಡದ ಟೊಂಗೆ ಹಿಡಿದುಕೊಂಡಿದ್ದರು. ಇದನ್ನು ಗಮನಿಸಿದ ಗ್ರಾಮಸ್ಥರು ಅವರನ್ನು ರಕ್ಷಣೆ ಮಾಡಲು ಹಗ್ಗ, ಏಣಿ ಸೇರಿದಂತೆ ಇತರೆ ಪ್ರಯತ್ನ ಮಾಡಿದ್ದಾರೆ. ಆದರೆ ನೀರಿನ ಹರಿವು ಹೆಚ್ಚಾದ ಹಿನ್ನೆಲೆಯಲ್ಲಿ ಗಿಡದ ಟೊಂಗೆ ಹಿಡಿದು ನಿಂತಿದ್ದ ಅವರೂ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಸ್ಥಳಕ್ಕೆ ಯಲಬುರ್ಗಾ ಠಾಣೆ ಪಿಎಸ್ಐ ತೆರಳಿದ್ದಾರೆ ಎಂದು ಕೊಪ್ಪಳ ಎಸ್ಪಿ ಅರುಣಾಂಗ್ಷು ಗಿರಿ ಅವರು ಉದಯವಾಣಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಸವದತ್ತಿ: ತಾಯಿ-ಮಗು ಸಾವು
ಬೆಳಗಾವಿ ಜಿಲ್ಲೆ ಯರಗಟ್ಟಿ ತಾಲೂಕಿನ ಮಾಡಮಗೇರಿ ಗ್ರಾಮದಲ್ಲಿ ಮನೆ ಕುಸಿದು ಯಲ್ಲವ್ವ ಮಹಾದೇವ ಬಾಗಿಲದ (40) ಹಾಗೂ ಪುತ್ರ ಪ್ರಜ್ವಲ ಮಹಾದೇವ ಬಾಗಿಲದ (5) ಮೃತಪಟ್ಟಿದ್ದಾರೆ. ಉದ್ದವ್ವ ಬಾಗಿಲದ ಹಾಗೂ ರೂಪಾ ಬಾಗಿಲದ ಎಂಬವರು ಗಾಯಗೊಂಡಿದ್ದಾರೆ. ಅವರನ್ನು ಯರಗಟ್ಟಿ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.