Advertisement

ಕೃಷ್ಣಾ ರೈತರಿಗೆ 4 ಪಟ್ಟು ಪರಿಹಾರ

06:20 AM Sep 28, 2017 | |

ಬೆಂಗಳೂರು: ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೇ ಹಂತದ ಕಾಮಗಾರಿ ಕೈಗೆತ್ತಿಕೊಳ್ಳಲು ಅಂದಾಜು 51,148.94 ಕೋಟಿ ರೂಪಾಯಿ  ಪರಿಷ್ಕೃತ ಅಂದಾಜಿಗೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದ್ದು, ಜಮೀನು ಕಳೆದುಕೊಳ್ಳುವ ರೈತರಿಗೆ ನೂತನ ಭೂ ಸ್ವಾಧೀನ ಕಾಯ್ದೆ ಪ್ರಕಾರ ಪರಿಹಾರ ನೀಡಲು ತೀರ್ಮಾನಿಸಲಾಗಿದೆ. ಇದರಿಂದ ರೈತರಿಗೆ ಸರ್ಕಾರಿ ಮಾರ್ಗಸೂಚಿ ದರದ ನಾಲ್ಕು ಪಟ್ಟು ಪರಿಹಾರ ದೊರೆಯಲಿದೆ.

Advertisement

ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಪರಿಷ್ಕೃತ ಅಂದಾಜಿಗೆ ಒಪ್ಪಿಗೆ ನೀಡಲಾಗಿದ್ದು. ಈ ಕುರಿತು ಸಂಪುಟ ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಲಸಂಪನ್ಮೂಲ ಸಚಿವ ಎಂ.ಬಿ ಪಟೀಲ್‌ ಅವರು, 2010 ರಲ್ಲಿ ಕೃಷ್ಣಾ ನ್ಯಾಯಾಧೀಕರಣದ ತೀರ್ಪು ಹೊರ ಬಿದ್ದ ನಂತರ 2012 ರಲ್ಲಿ ಕೃಷ್ಣ ಮೇಲ್ದಂಡೆ ಮೂರನೇ ಹಂತದ ಯೋಜನೆಗೆ 17,206 ಕೋಟಿ ರೂಪಾಯಿ ಅಂದಾಜು ವೆಚ್ಚಕ್ಕೆ ತಾತ್ವಿಕ ಒಪ್ಪಿಗೆ ನೀಡಲಾಗಿತ್ತು. 2013 ರ ನೂತನ ಭೂಸ್ವಾಧೀನ ಮಾರ್ಗಸೂಚಿಯನ್ವಯ ಭೂ ಸ್ವಾಧೀನಕ್ಕೆ ನೀಡುತ್ತಿದ್ದ ಪರಿಹಾರದ ಮೊತ್ತದ ಪ್ರಮಾಣವು ನಾಲ್ಕು ಪಟ್ಟು ಹೆಚ್ಚಾಗಿರವುದರಿಂದ ಪರಿಷ್ಕೃತ ಯೋಜನೆಗೆ ಸಂಪುಟ ಒಪ್ಪಿಗೆ ನೀಡಿದೆ ಎಂದು ತಿಳಿಸಿದರು.

ನೂತನ ಮಾರ್ಗಸೂಚಿ ಸಮಗ್ರ ಪರಿಷ್ಕೃತ ಯೋಜನೆಯ ಅನುಷ್ಠಾನಕ್ಕೆ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅಧ್ಯಕ್ಷತೆಯಲ್ಲಿ ಸಂಪುಟ ಉಪ ಸಮಿತಿ ರಚಿಸಲು ನಿರ್ಧರಿಸಲಾಗಿದ್ದು, ಗ್ರಾಮೀಣಾಭಿವೃದ್ಧಿ ಸಚಿವ ಎಚ್‌.ಕೆ. ಪಾಟೀಲ್‌, ಕಾನೂನು ಸಚಿವ ಟಿ.ಬಿ. ಜಯಚಂದ್ರ, ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ್‌ ಪಾಟೀಲ್‌, ಅವರನ್ನೊಳಗೊಂಡ ಉಪ ಸಮಿತಿ ಭೂ ಸ್ವಾಧೀನದ ಮೂಲ ದರ ಮತ್ತು ಪರಿಷ್ಕೃತ ದರ ನಿಗದಿ ಹಾಗೂ ಪುನರ್‌ ವಸತಿ ಮತ್ತು ಪುನರ್‌ ನಿರ್ಮಾಣ ಕುರಿತು ಪರಿಶೀಲನೆ ನಡೆಸಿ ಒಂದು ತಿಂಗಳಲ್ಲಿ ವರದಿ ನೀಡಲಿದೆ. ಆ ವರದಿ ಅನ್ವಯ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಉನ್ನತಾಧಿಕಾರ ಸಮಿತಿ ಅಂತಿಮ ತೀರ್ಮಾನ ಕೈಗೊಳ್ಳಲಿದೆ ಎಂದು ಹೇಳಿದರು.

ನ್ಯಾಯಾಧಿಕರಣ ನೀಡಿರುವ ಅಂತಿಮ ತೀರ್ಪಿನ ಅನ್ವಯ 169 ಟಿಎಂಸಿ ನೀರನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡು 6.19 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ನೀರಾವರಿ ಸೌಲಭ್ಯ ಕಲ್ಪಿಸುವ ಉದ್ದೇಶ ಹೊಂದಲಾಗಿದ್ದು, ಆಲಮಟ್ಟಿ ಜಲಾಶಯದ ಎತ್ತರವನ್ನು 519.60 ಮೀಟರ್‌ನಿಂದ 524.256 ಮೀಟರ್‌ಗೆ ಹೆಚ್ಚಿಸಲು ಪರಿಷ್ಕೃತ ಅಂದಾಜಿಗೆ ಸಂಪುಟ ಒಪ್ಪಿಗೆ ನೀಡಿದೆ. ಆಣೆಕಟ್ಟು ಎತ್ತರ ಹೆಚ್ಚಿಸುವುದಕ್ಕೆ ಸಂಬಂಧಿಸಿದಂತೆ ಶೇಕಡಾ 90 ರಷ್ಟು ಸಿವಿಲ್‌ ಕಾಮಗಾರಿಗೆ ಪೂರ್ಣಗೊಂಡಿದೆ. ಭೂಮಿ ನೀಡಿದ ರೈತರಿಗೂ ಹೊಸ ಕಾಯ್ದೆಯನ್ವಯ ಪರಿಹಾರ ನೀಡಲಾಗುವುದು, ಕಡಿಮೆ ಮೊತ್ತ ದೊರೆಯುವ ರೈತರಿಗೆ ಕನಿಷ್ಠ ದರ ನಿಗದಿ ಮಾಡಲು ತೀರ್ಮಾನಿಸಲಾಗಿದೆ ಎಂದು ಪಾಟೀಲ್‌ ಹೇಳಿದರು.

ಕಾವೇರಿ ನೀರು ನಿರ್ವಹಣಾ ಮಂಡಳಿಗೆ ವಿರೋಧ
ಕಾವೇರಿ ಜಲ ವಿವಾದ ಕುರಿತಂತೆ ಈಗಾಗಲೇ ಸುಪ್ರೀಂ ಕೋರ್ಟ್‌ನಲ್ಲಿ ವಾದ ವಿವಾದ ಪೂರ್ಣಗೊಂಡಿದ್ದು, 15 ದಿನದಲ್ಲಿ ಲಿಖೀತ ಪತ್ರ ಸಲ್ಲಿಸುವಂತೆ ಸುಪ್ರೀಂ ಕೋರ್ಟ್‌ ಸೂಚನೆ ನೀಡಿದೆ. ಈ ಕುರಿತು ಒಂಭತ್ತು ಅಂಶಗಳನ್ನು ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಸಲು ರಾಜ್ಯದ ಪರ ವಾದ ಮಂಡಿಸುತ್ತಿರುವ ವಕೀಲರ ತಂಡದ ಜೊತೆಗೆ ಚರ್ಚೆ ನಡೆಸಲಾಗಿದೆ.

Advertisement

ಸುಪ್ರೀಂ ಕೊರ್ಟ್‌ ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆ ಮಾಡುವ ಕುರಿತು ಈ ಹಿಂದೆ ಪ್ರಸ್ತಾಪಿಸಿದಾಗ ಅಂದಿನ ಅಟಾರ್ನಿ ಜನರಲ್‌ ಮುಕುಲ್‌ ರೊಹಟಗಿ, ನೀರು ನಿರ್ವಹಣಾ ಮಂಡಳಿ ರಚಿಸುವುದು ಸಂಸತ್ತಿನ ಪರಮಾಧಿಕಾರ ಅದನ್ನು ನ್ಯಾಯಪೀಠ ಸೂಚಿಸಲು ಅವಕಾಶವಿಲ್ಲ ಎಂದು ಪ್ರತಿಪಾದಿಸಿದ್ದರು.

ಈಗಲೂ ಕೂಡ ಕೇಂದ್ರ ಸರ್ಕಾರ ನೀರು ನಿರ್ವಹಣಾ ಮಂಡಳಿ ರಚಿಸಲು ಸಂಸತ್ತಿಗೆ ಅಧಿಕಾರ ಇದೆ ಎಂದು ಹೇಳಿದೆ. ಸುಪ್ರೀಂ ಕೋರ್ಟ್‌ ನೀರು ನಿರ್ವಹಣಾ ಮಂಡಳಿ ರಚನೆಗೆ ನಮ್ಮ ವಿರೋಧ ಇದೆ. ನ್ಯಾಯಪೀಠವು ಮೇಲ್ವಿಚಾರಣಾ ಸಮಿತಿಯ ರೂಪುರೇಷೆಗಳನ್ನು ಬದಲಾವಣೆ ಮಾಡುವ ಬಗ್ಗೆ ಅಭ್ಯಂತರ ಇಲ್ಲ ಎಂದು ಪಾಟೀಲ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next