Advertisement

ನಾಗಲದಿನ್ನಿ ಸರ್ಕಾರಿ ಶಾಲೆಯಲ್ಲಿ 4 ವಿದ್ಯಾರ್ಥಿಗಳು!

12:35 PM Jul 23, 2019 | Suhan S |

ಮಸ್ಕಿ: ಪ್ರತಿಯೊಬ್ಬ ಮಗು ಶಿಕ್ಷಣದಿಂದ ವಂಚಿತರಾಗಬಾರದೆಂಬ ಉದ್ದೇಶದಿಂದ ಸರ್ಕಾರ ಉಚಿತ ಪಠ್ಯಪುಸ್ತಕ, ಮಧ್ಯಾಹ್ನದ ಬಿಸಿಯೂಟ, ವಿದ್ಯಾರ್ಥಿ ವೇತನ, ಸಮವಸ್ತ್ರ, ಶೂ ಹಲವು ಸೌಲಭ್ಯ ಒದಗಿಸುತ್ತಿದ್ದರೂ ಸರ್ಕಾರಿ ಶಾಲೆಗಳಲ್ಲಿ ವರ್ಷದಿಂದ ವರ್ಷಕ್ಕೆ ಮಕ್ಕಳ ದಾಖಲಾತಿ ಕುಸಿಯುತ್ತಿದೆ. ವಿದ್ಯಾರ್ಥಿಗಳ ದಾಖಲಾತಿ ಕುಸಿತದಿಂದ ಸರ್ಕಾರಿ ಶಾಲೆಗಳು ಬಾಗಿಲು ಮುಚ್ಚುವ ಹಂತಕ್ಕೆ ಬಂದು ನಂತಿವೆ.

Advertisement

ಇದಕ್ಕೆ ಉದಾಹರಣೆ ಮಸ್ಕಿ ತಾಲೂಕಿನ ಹಾಲಾಪುರ ಗ್ರಾಪಂ ವ್ಯಾಪ್ತಿಯ ನಾಗಲದಿನ್ನಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ. ಈ ಶಾಲೆಯಲ್ಲಿ ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ 1ರಿಂದ 5ನೇ ತರಗತಿವರೆಗೆ ಕೇವಲ 4 ವಿದ್ಯಾರ್ಥಿಗಳಿದ್ದಾರೆ. ಒಬ್ಬ ಶಿಕ್ಷಕರು, ಒಬ್ಬರು ಬಿಸಿಯೂಟ ಅಡುಗೆ ಸಿಬ್ಬಂದಿ ಇದ್ದಾರೆ.

ನಾಗಲದಿನ್ನಿ ಗ್ರಾಮದಲ್ಲಿ ಸುಮಾರು 30 ಕುಟುಂಬಗಳು ವಾಸಿಸುತ್ತಿವೆ. ಗ್ರಾಮದ ಮುಖ್ಯ ರಸ್ತೆ ಹತ್ತಿರ 2009ನೇ ಸಾಲಿನಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಪ್ರಾರಂಭಿಸಲಾಗಿತ್ತು. ಆಗ ಶಾಲೆಯಲ್ಲಿ ಸುಮಾರು 25 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದರು. ನಂತರ ವರ್ಷದಿಂದ ವರ್ಷಕ್ಕೆ ಮಕ್ಕಳ ದಾಖಲಾತಿ ಇಳಿಮುಖವಾಗುತ್ತ ಬಂದಿದ್ದು, ಪ್ರಸಕ್ತ ವರ್ಷ ಕೇವಲ ನಾಲ್ಕೇ ಮಕ್ಕಳು ಇದ್ದಾರೆ. ಇದರಿಂದಾಗಿ ಶಾಲೆ ಎಲ್ಲಿ ಮುಚ್ಚುವುದೋ ಎಂಬ ಆತಂಕ ಗ್ರಾಮಸ್ಥರನ್ನು ಕಾಡುತ್ತಿದೆ. ಶಿಕ್ಷಣ ಇಲಾಖೆ ಅಧಿಕಾರಿಗಳು ಮಕ್ಕಳ ದಾಖಲಾತಿ ಹೆಚ್ಚಿಸಲು ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕಿದೆ ಎನ್ನುತ್ತಾರೆ ಗ್ರಾಮಸ್ಥರು.

ಎಷ್ಟು ವಿದ್ಯಾರ್ಥಿಗಳು: ನಾಗಲದಿನ್ನಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳೆದ ವರ್ಷ ಐವರು ವಿದ್ಯಾರ್ಥಿಗಳು ಇದ್ದರು. ಓರ್ವ ಶಿಕ್ಷಕ, ಒಬ್ಬರು ಶಿಕ್ಷಕಿ, ಬಿಸಿಯೂಟ ಮಾಡಲು ಇಬ್ಬರು ಸಿಬ್ಬಂದಿ ಇದ್ದರು. ಆದರೆ ಪ್ರಸಕ್ತ ವರ್ಷ ಶಾಲೆಯಲ್ಲಿ ನಾಲ್ಕೇ ವಿದ್ಯಾರ್ಥಿಗಳು ಇರುವುದರಿಂದ ಕಳೆದ ವರ್ಷ ನಿಯೋಜನೆ ಮೇರೆಗೆ ಬಂದ ಓರ್ವ ಶಿಕ್ಷಕಿಯನ್ನು ಹಿಂಪಡೆಯಲಾಗಿದೆ. ಹಾಗೂ ಓರ್ವ ಅಡುಗೆ ಸಹಾಯಕಿಯನ್ನು ಪಕ್ಕದ ಹಾಲಾಪುರು ಪ್ರೌಢಶಾಲೆಗೆ ಕಳುಹಿಸಲಾಗಿದೆ. ಒಬ್ಬರೇ ಶಿಕ್ಷಕರು ಇದ್ದಾರೆ.

ಒತ್ತಾಯ: ಗ್ರಾಮದ ಸರ್ಕಾರಿ ಶಾಲೆಗೆ ಕೇವಲ ನಿಯೋಜನೆ ಮೇರೆಗೆ ಶಿಕ್ಷಕರನ್ನು ಒದಗಿಸುತ್ತಿರುವುದರಿಂದ ಮಕ್ಕಳ ದಾಖಲಾತಿ ಇಳಿಮುಖವಾಗುತ್ತಿದೆ. ಕೂಡಲೇ ಶಿಕ್ಷಣ ಇಲಾಖೆ ನಾಗಲದಿನ್ನಿ ಶಾಲೆಗೆ ಕಾಯಂ ಶಿಕ್ಷಕರನ್ನು ನೇಮಕ ಮಾಡಬೇಕು. ಪಾಲಕರ ಮನವೊಲಿಸಿ ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲಿಸಬೇಕು. ಶಾಲೆ ಮುಚ್ಚದಂತೆ ನೋಡಿಕೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

Advertisement

ಶಾಲೆಯಲ್ಲಿ ಮಕ್ಕಳ ದಾಖಲಾತಿ ಯಾವ ಕಾರಣಕ್ಕೆ ಇಳಿಮುಖವಾಗುತ್ತಿದೆ ಎಂಬುದನ್ನು ಶಿಕ್ಷಣ ಇಲಾಖೆ ಅಧಿಕಾರಿಗಳು ಅರಿಯಬೇಕು. ಮಕ್ಕಳ ಸಂಖ್ಯೆ ಹೆಚ್ಚಿಸಲು ಬೇಕಾದ ಅಗತ್ಯ ಕ್ರಮ ಕೈಗೊಳ್ಳಬೇಕು. ಗ್ರಾಮಸ್ಥರೊಂದಿಗೆ ಸಭೆ ನಡೆಸಿ ಮಕ್ಕಳನ್ನು ಶಾಲೆಗೆ ದಾಖಲಿಸಲು ಮನವೊಲಿಸಬೇಕು. ಸರ್ಕಾರಿ ಶಾಲೆಗಳನ್ನು ಮುಚ್ಚದಂತೆ ನೋಡಿಕೊಳ್ಳಬೇಕು.•ಮಲ್ಲಯ್ಯ,ಕರವೇ ಮುಖಂಡ ಹಾಲಾಪುರ

ಸರ್ಕಾರ ಬೇಕಾದ ಎಲ್ಲ ಸೌಲಭ್ಯಗಳನ್ನು ಕೊಟ್ಟಿದೆ. ಆದರೂ ಸಹ ಶಾಲೆಯಲ್ಲಿ ಮಕ್ಕಳ ದಾಖಲಾತಿ ಕಡಿಮೆ ಇದೆ. ಮಕ್ಕಳ ದಾಖಲಾತಿ ಹೆಚ್ಚಿಸಲು ಎಲ್ಲ ರೀತಿಯಲ್ಲೂ ಪ್ರಯತ್ನಿಸಲಾಗಿದೆ. ಆದರೂ ಗ್ರಾಮಸ್ಥರು ಮಕ್ಕಳನ್ನು ದಾಖಲಿಸಲು ಮುಂದಾಗುತ್ತಿಲ್ಲ.•ಶ್ರೀನಿವಾಸ,ಶಿಕ್ಷಕ ಸ.ಕಿ.ಪ್ರಾ. ಶಾಲೆ ನಾಗಲದಿನ್ನಿ.

 

•ಉಮೇಶ್ವರಯ್ಯ ಬಿದನೂರಮಠ

Advertisement

Udayavani is now on Telegram. Click here to join our channel and stay updated with the latest news.

Next