Advertisement

ಕೂಜಿಮಲೆಗೆ ಭೇಟಿ ನೀಡಿದ್ದು 4 ನಕ್ಸಲರು: ಸಶಸ್ತ್ರಧಾರಿ ತಲಾ ಇಬ್ಬರು ಮಹಿಳೆಯರು,ಪುರುಷರ ಸಂಚಾರ

01:22 AM Mar 19, 2024 | Team Udayavani |

ಸುಳ್ಯ: ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಗಡಿಭಾಗ ಪುಷ್ಪಗಿರಿ ತಪ್ಪಲಿನ ಸುಬ್ರಹ್ಮಣ್ಯ ಸಮೀಪದ ಮಡಿಕೇರಿ ಠಾಣೆ ವ್ಯಾಪ್ತಿಯ ಕೂಜಿಮಲೆ ಎಸ್ಟೇಟ್‌ಗೆ ಶನಿವಾರ ಸಂಜೆ ಭೇಟಿ ನೀಡಿದ್ದು ನಕ್ಸಲರು ಎಂಬುದು ಖಚಿತಗೊಂಡಿದೆ.

Advertisement

ಈ ಹಿನ್ನೆಲೆಯಲ್ಲಿ ಆ ಪ್ರದೇಶದ ಮೂರು ಕಡೆಗಳಲ್ಲಿ ಕಾರ್ಕಳದಿಂದ ಆಗಮಿಸಿದ ನಕ್ಸಲ್‌ ನಿಗ್ರಹದಳ (ಎಎನ್‌ಎಫ್‌) ಸೋಮವಾರ ಶೋಧ ಆರಂಭಿ ಸಿದೆ. ಜತೆಗೆ ಈ ಕುರಿತು ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊಡಗು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಭಾಗವಾಗಿರುವ ಸುಬ್ರಹ್ಮಣ್ಯ ಸಮೀಪದ ಮಡಿಕೇರಿ ತಾಲೂಕಿನ ಕೂಜಿಮಲೆ ಎಸ್ಟೇಟ್‌ (ಖಾಸಗಿ ಸಂಸ್ಥೆ) ಪ್ರದೇಶದ ರಾಮಲಿಂಗ ಅವರ ಅಂಗಡಿಗೆ ಶನಿವಾರ ಭೇಟಿ ನೀಡಿದ ಇಬ್ಬರು ಪುರುಷರು, ಇಬ್ಬರು ಮಹಿಳೆಯರಿದ್ದ ತಂಡ ಅಂಗಡಿಯಿಂದ 25 ಕೆ.ಜಿ. ಅಕ್ಕಿ, ಬಟಾಣಿ, ಸಕ್ಕರೆ, ಬೇಳೆ, ಕಡಲೆ, ಸಜ್ಜಿಗೆ, ಬೇಕರಿ ತಿಂಡಿ ಮತ್ತಿತರ ದಿನಸಿ ಖರೀದಿಸಿ ಅದರ ಮೊತ್ತ 3,500 ರೂ.ಗಳನ್ನು ಪಾವತಿಸಿ ತೆರಳಿತ್ತು.

ಅರಣ್ಯ ಇಲಾಖೆ ಸಿಬಂದಿ ಎಂದು ಪರಿಚಯಿಸಿ ಕೊಂಡಿದ್ದ ನಾಲ್ವರ ಬಳಿಯೂ ಬಂದೂಕು ಇದ್ದಿದ್ದು, ಅರಣ್ಯ ಇಲಾಖೆಯ ಸಿಬಂದಿ ಧರಿಸುವ ವಸ್ತ್ರಗಳನ್ನು ಧರಿಸಿದ್ದರು. ಸಾಮಗ್ರಿ ಖರೀದಿಸಿದ ತಂಡ ಅಲ್ಲಿಂದ ಅರಣ್ಯ ಇಲಾಖೆಯ ಕಚೇರಿಯ ಬಳಿ ತೆರಳಿತ್ತು.

ಬೆಳಕಿಗೆ ಬಂತು
ಶನಿವಾರ ಸಂಜೆ ಘಟನೆ ನಡೆದಿದ್ದರೂ ಅಂಗಡಿಗೆ ಬಂದವರು ಅರಣ್ಯ ಇಲಾಖೆಯ ಸಿಬಂದಿ ಎಂದೇ ನಂಬಲಾಗಿತ್ತು. ಸಾಮಾನ್ಯವಾಗಿ ಅಂಗಡಿ ಯಿಂದ ಅರಣ್ಯ ಇಲಾಖೆಯವರು ಸಾಮಗ್ರಿ ಖರೀ ದಿಸು ತ್ತಿದ್ದರು. ರವಿವಾರ ಸಂಜೆ ವೇಳೆ ಅರಣ್ಯ ಇಲಾಖೆಯ ಸಿಬಂದಿಯೊಬ್ಬರು ಅಂಗಡಿಗೆ ಬಂದ ವೇಳೆ ಅಂಗಡಿಯವರು ನಿನ್ನೆ ಸಂಜೆ ನಿಮ್ಮವರು ತುಂಬಾ ಸಾಮಗ್ರಿ ಖರೀದಿಸಿ ಒಯ್ದಿದ್ದಾರೆ ಎಂದು ತಿಳಿಸಿದರು. ಆಗ ಅನುಮಾನ ಮೂಡಿ ಅರಣ್ಯ ಸಿಬಂದಿ ಮೇಲಧಿ ಕಾರಿಗಳಿಗೆ ಮಾಹಿತಿ ನೀಡಿದ್ದರು. ತನಿಖೆ ವೇಳೆ ನಕ್ಸಲರೆಂಬುದು ಖಚಿತಗೊಂಡಿದೆ. ರವಿವಾರ ರಾತ್ರಿಯೇ ಕೂಜಿಮಲೆಗೆ ಪೊಲೀಸರು ಭೇಟಿ ನೀಡಿದ್ದಾರೆ.

Advertisement

8 ಜನರಿದ್ದೇವೆ ಎಂದಿದ್ದರು
ಅಂಗಡಿಗೆ ಬಂದವರು, “ನಮ್ಮ ಇನ್ನೂ ನಾಲ್ವರು ಸಹೋದ್ಯೋಗಿಗಳು ಫಾರೆಸ್ಟ್‌ ರೂಂನಲ್ಲಿದ್ದಾರೆ’ ಎಂದಿದ್ದರು. ಕನ್ನಡದಲ್ಲಿ ಮಾತನಾಡಿದ್ದ ಅವರು ಎಸ್ಟೇಟ್‌ನ ಸಿಬಂದಿ ಹಿಂದಿ ಭಾಷಿಕನೊಬ್ಬನಲ್ಲಿ ಮಲಯಾಳದಲ್ಲಿ ಮಾತನಾಡಿದ್ದರು ಎನ್ನಲಾಗಿದೆ. ಆದರೆ ಅಂಗಡಿಗೆ ಬಂದ ನಾಲ್ವರನ್ನು ಹೊರತು ಪಡಿಸಿ ಉಳಿದ ನಾಲ್ವರನ್ನು ಯಾರೂ ಕಂಡಿಲ್ಲ. ಹೀಗಾಗಿ ಅಲ್ಲಿಗೆ ಒಟ್ಟು 8 ಜನ ಬಂದಿದ್ದಾರೆಯೇ ಅಥವಾ ಸುಮ್ಮನೆ ಹೇಳಿದ್ದಾರೆಯೇ ಎಂಬುದು ಖಚಿತಗೊಂಡಿಲ್ಲ.

ಎಎನ್‌ಎಫ್‌ ಶೋಧ
ಕೂಜಿಮಲೆಗೆ ನಕ್ಸಲರು ಭೇಟಿ ನೀಡಿದ್ದಾರೆ ಎಂಬ ಮಾಹಿತಿಯ ಹಿನ್ನೆಲೆಯಲ್ಲಿ ಕಾರ್ಕಳದ ನಕ್ಸಲ್‌ ನಿಗ್ರಹ ದಳದ 60 ಸಿಬಂದಿ ಕೂಜಿಮಲೆಗೆ ಆಗಮಿಸಿದ್ದಾರೆ. ಕೂಜಿಮಲೆ ಎಸ್ಟೇಟ್‌ ಭಾಗದಿಂದ ನಕ್ಸಲರು ತೆರಳಿದ ಭಾಗದತ್ತ ಎಎನ್‌ಎಫ್‌ ತಂಡ ಶೋಧ ಆರಂಭಿಸಿದೆ. ತಂಡದಲ್ಲಿ ಶ್ವಾನ ದಳವೂ ಸೇರಿಕೊಂಡಿತ್ತು. ಎಎನ್‌ಎಫ್‌ ಸಿಬಂದಿ ಕೂಜಿಮಲೆ, ಕಡಮಕಲ್ಲು, ಬಾಳು ಗೋಡಿನ ಉಪ್ಪುಕಳ ಪ್ರದೇಶಗಳಲ್ಲಿ ಶೋಧ ನಡೆಸಿ ದರು. ಡ್ರೋನ್‌ ಕೆಮರಾ ಬಳಸಿ ಅರಣ್ಯ ಪ್ರದೇಶ  ದಲ್ಲಿ ಹುಡುಕುವ ಪ್ರಯತ್ನವನ್ನೂ ನಡೆಸಿದ್ದಾರೆ.

ಹಿಂದೆಯೂ ಸಂಚಾರ
ಕುಕ್ಕೆ ಸುಬ್ರಹ್ಮಣ್ಯ ಸಮೀಪದಲ್ಲಿ ನಕ್ಸಲರ ಸಂಚಾರ ಈ ಹಿಂದೆಯೂ ಪತ್ತೆಯಾಗಿತ್ತು. 2012 ರಲ್ಲಿ ಸುಬ್ರಹ್ಮಣ್ಯ ಸಮೀಪದ ಚೇರು, ಭಾಗ್ಯ, ಎರ್ಮಾಯಿಲ್‌, ನಡುತೋಟ, ಪಳ್ಳಿಗದ್ದೆ ಭಾಗಕ್ಕೆ ನಕ್ಸಲರು ಭೇಟಿ ನೀಡಿದ್ದರು. ಬಳಿಕ ಪಳ್ಳಿಗದ್ದೆ ಕಾಡಿನಲ್ಲಿ ನಕ್ಸಲರು ಮತ್ತು ಎಎನ್‌ಎಫ್‌ ತಂಡದ ನಡುವೆ ಗುಂಡಿನ ಚಕಮಕಿ ನಡೆದಿತ್ತು. ಕೆಲವೇ ದಿನಗಳ ಅಂತರದಲ್ಲಿ ಬಿಸಿಲೆ ಸಮೀಪದ ಭಾಗಿಮಲೆ ಕಾಡಿನಲ್ಲಿ ಎನ್‌ಕೌಂಟರ್‌ನಲ್ಲಿ ನಕ್ಸಲ್‌ ತಂಡದ ಸದಸ್ಯನೊಬ್ಬ ಸಾವನ್ನಪ್ಪಿದ್ದ. 2012ರಲ್ಲಿ ಮಡಿಕೇರಿ ವ್ಯಾಪ್ತಿಯ ಕಾಲೂರು ಗ್ರಾಮದಲ್ಲಿ ಹಾಗೂ 2019ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಸಂಪಾಜೆಗುಡ್ಡೆ ಗದ್ದೆಯಲ್ಲಿ ನಕ್ಸಲರು ಕಾಣಿಸಿಕೊಂಡಿದ್ದರು. ಮಡಪ್ಪಾಡಿ ಸಮೀಪದ ಹಾಡಿಕಲ್ಲು, ಕಲ್ಮಕಾರಿನ ಬಾಳೆಬೈಲು, ಕಡಮಕಲ್ಲು, ಗಾಳಿಬೀಡು ಪ್ರದೇಶದಲ್ಲೂ ನಕ್ಸಲರು ಕಾಣಿಸಿಕೊಂಡಿದ್ದರು ಎನ್ನಲಾಗಿತ್ತು.

ಚುನಾವಣೆ ವೇಳೆ ಆತಂಕ
ಚುನಾವಣೆ ಘೋಷಣೆಯಾಗಿದ್ದು, ಇದೇ ವೇಳೆ ನಕ್ಸಲರು ಕಾಣಿಸಿಕೊಂಡಿರುವುದು ಸ್ಥಳೀಯರಲ್ಲಿ ಆತಂಕ ವನ್ನುಂಟು ಮಾಡಿದೆ. ತಮ್ಮ ಇರುವಿಕೆಯನ್ನು ತೋರ್ಪಡಿ ಸಲು ಭೇಟಿ ನೀಡಿದ್ದಾರೆ ಎಂಬ ಸಂಶಯವೂ ವ್ಯಕ್ತ ವಾಗ ತೊಡಗಿದೆ. ಘಟನೆ ಹಿನ್ನೆಲೆ ಯಿಂದ ಸ್ಥಳೀಯ ಪ್ರದೇಶದ ಜನರು ಆತಂಕಗೊಂಡಿದ್ದಾರೆ.

ಕೊಡಗು ಎಸ್‌ಪಿ, ಎಎನ್‌ಎಫ್‌ ಡಿವೈಎಸ್‌ಪಿ ಭೇಟಿ
ಕೂಜಿಮಲೆಗೆ ಸೋಮವಾರ ಕಾರ್ಕಳ ನಕ್ಸಲ್‌ ನಿಗ್ರಹ ದಳದ ಡಿವೈಎಸ್ಪಿ ರಾಘವೇಂದ್ರ, ಕೊಡಗು ಎಸ್‌ಪಿ ರಾಮರಾಜನ್‌, ಮಡಿಕೇರಿ ವೃತ್ತ ನಿರೀಕ್ಷಕ ಉಮೇಶ್‌ ಉಪ್ಪಳಿಕೆ, ಸುಬ್ರಹ್ಮಣ್ಯ ಎಸ್‌ಐ ಕಾರ್ತಿಕ್‌, ಎಎನ್‌ಎಫ್‌ ಅಧಿಕಾರಿಗಳು, ಸಿಬಂದಿ, ಪೊಲೀಸ್‌ ಇಲಾಖೆ ಸಿಬಂದಿ, ಗುಪ್ತದಳ ಅಧಿಕಾರಿಗಳು, ಸಿಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾಹಿತಿ ಪಡೆದುಕೊಂಡರು.

ವಿಕ್ರಂ ಗೌಡ ತಂಡ ಆಗಿರುವ ಶಂಕೆ
ಕೂಜಿಮಲೆಗೆ ಆಗಮಿಸಿದ್ದು ನಕ್ಸಲರೆಂಬುದು ಖಚಿತಗೊಂಡಿದೆ ಎಂದು ಪೊಲೀಸ್‌ ಅಧಿಕಾರಿ ಗಳು ತಿಳಿಸಿದ್ದಾರೆ. ಎಎನ್‌ಎಫ್‌ ಹಾಗೂ ಪೊಲೀಸರು ಅಂಗಡಿಯವರ ಸಹಿತ ಅಲ್ಲಿದ್ದವ ರಲ್ಲಿ ಮಾಹಿತಿ ಪಡೆದುಕೊಂಡರು. ಕೂಜಿಮಲೆಗೆ ಆಗಮಿಸಿದ್ದು ವಿಕ್ರಂ ಗೌಡ ನೇತೃತ್ವದ ನಕ್ಸಲ್‌ ತಂಡ ಇರಬಹುದು ಎಂದು ಶಂಕೆಯ ಹಿನ್ನೆಲೆಯಲ್ಲಿ ತನಿಖೆ ನಡೆಸಲಾಗುತ್ತಿದೆ. ಬಂದಿದ್ದ ನಕ್ಸಲರಲ್ಲಿ ಜಿಷಾ, ಲತಾ ಮುಂಡುಗಾರು ಇದ್ದದ್ದು ಖಚಿತವಾಗಿದ್ದು, ಇಬ್ಬರು ಪುರುಷರು ಯಾರು ಎಂಬುದು ಖಚಿತಗೊಂಡಿಲ್ಲ ಎಂದು ಮೂಲಗಳು ತಿಳಿಸಿವೆ. ಸಂತೋಷ್‌, ವಿಕ್ರಂ ಗೌಡ ಆಗಿರಬಹುದು ಎಂದು ಶಂಕಿಸಲಾಗಿದೆ.

-ದಯಾನಂದ ಕಲ್ನಾರ್‌

Advertisement

Udayavani is now on Telegram. Click here to join our channel and stay updated with the latest news.

Next